ಐಪಿಎಲ್ ಫಿಕ್ಸಿಂಗ್‌ನಲ್ಲಿ ಪಾಕ್ ನಂಟು: 7 ಬುಕ್ಕಿಗಳ ವಿರುದ್ಧ ಸಿಬಿಐ ಎಫ್‌ಐಆರ್

ನವದೆಹಲಿ: 2019ರ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ಮ್ಯಾಚ್ ಫಿಕ್ಸಿಂಗ್, ಬೆಟ್ಟಿಂಗ್ ನಡೆಸಿರುವ ಅನುಮಾನದ ಮೇಲೆ ಸಿಬಿಐ, 7 ಶಂಕಿತ ಬುಕ್ಕಿಗಳ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಈ ಬುಕ್ಕಿಗಳಿಗೆ ಪಾಕಿಸ್ತಾನದ ನಂಟಿರುವುದನ್ನು ಪತ್ತೆ ಮಾಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಈ ಸಂಬಂಧ ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ತನಿಖೆ ಆರಂಭಿಸಿದ್ದು, ದೆಹಲಿ, ಜೋಧಪುರ, ಹೈದರಾಬಾದ್, ಜೈಪುರಗಳಲ್ಲಿ ಶೋಧ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿರುವ ವ್ಯಕ್ತಿಗಳ ಜಾಲವು, ಪಾಕಿಸ್ತಾನದಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಐಪಿಎಲ್ ಪಂದ್ಯಗಳ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತಿದೆ ಎಂದು ಸಿಬಿಐಗೆ ಮಾಹಿತಿ ಸಿಕ್ಕಿದೆ ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.
ಸಿಬಿಐ ದಾಖಲಿಸಿರುವ ಎಫ್‌ಐಆರ್‌ನಲ್ಲಿ ದೆಹಲಿಯ ರೋಹಿಣಿ ಪ್ರದೇಶದ ದಿಲೀಪ್ ಕುಮಾರ್ ಮತ್ತು ಹೈದರಾಬಾದ್‌ನ ಗುರಂ ವಾಸು ಮತ್ತು ಗುರಂ ಸತೀಶ್ ಅವರನ್ನು ಆರೋಪಿಗಳೆಂದು ಪಟ್ಟಿ ಮಾಡಿದೆ. 2013 ರಿಂದ ಕಾರ್ಯನಿರ್ವಹಿಸುತ್ತಿರುವ ಈ ಜಾಲ ಸಾರ್ವಜನಿಕರನ್ನು ಬೆಟ್ಟಿಂಗ್‌ಗೆ ಪ್ರೇರೇಪಿಸುವ ಮೂಲಕ ವಂಚಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಟ್ಟಿಂಗ್ ದಂಧೆಕೋರರು ಬ್ಯಾಂಕ್ ಅಧಿಕಾರಿಗಳನ್ನು ಬಳಸಿಕೊಂಡು ನಕಲಿ ಗುರುತಿನ ಚೀಟಿ ಮೂಲಕ ಬ್ಯಾಂಕ್ ಖಾತೆಗಳನ್ನು ತೆರೆದು ಮ್ಯಾಚ್ ಫಿಕ್ಸಿಂಗ್, ಬೆಟ್ಟಿಂಗ್‌ಗೆ ಬಳಸಿಕೊಳ್ಳುತ್ತಿದ್ದಾರೆ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ.
‘ಇಂತಹ ಬೆಟ್ಟಿಂಗ್ ಚಟುವಟಿಕೆಗಳ ಮೂಲಕ ಈ ನಕಲಿ ಖಾತೆಗಳಿಗೆ ಭಾರತದಲ್ಲಿ ಹರಿದು ಬಂದ ಹಣದ ಒಂದು ಭಾಗವನ್ನು ಹವಾಲಾ ವಹಿವಾಟುಗಳನ್ನು ಬಳಸಿಕೊಂಡು ವಿದೇಶದಲ್ಲಿರುವ ಅವರ ಸಹಚರರೊಂದಿಗೆ ಹಂಚಿಕೊಳ್ಳಲಾಗುತ್ತಿದೆ’ ಎಂದು ಎಫ್ಐಆರ್‌ನಲ್ಲಿ ತಿಳಿಸಲಾಗಿದೆ.
ಆರೋಪಿಗಳ ಪೈಕಿ ದಿಲೀಪ್ ಹಲವು ಬ್ಯಾಂಕ್ ಖಾತೆಗಳನ್ನು ನಿರ್ವಹಿಸುತ್ತಿದ್ದು, ಅವುಗಳಿಗೆ 2013ರಿಂದ ₹43 ಲಕ್ಷ ಜಮೆ ಮಾಡಲಾಗಿದೆ.
ಗುರಂ ಸತೀಶ್ ನಿರ್ವಹಿಸುತ್ತಿದ್ದ 6 ಬ್ಯಾಂಕ್ ಖಾತೆಗಳಿಗೆ 2012–20ರವರೆಗೆ ₹ 4.55 ಕೋಟಿ(ಪ್ರಾದೇಶಿಕವಾಗಿ), ವಿದೇಶದಿಂದ 3.05 ಲಕ್ಷ ಜಮೆಯಾಗಿರುವುದು ಪತ್ತೆಯಾಗಿದೆ. ಇದೇ ಅವಧಿಯಲ್ಲಿ ಗುರಂ ವಾಸು ನಿರ್ವಹಿಸುತ್ತಿದ್ದ ಖಾತೆಗಳಿಗೆ ₹ 5,37 ಕೋಟಿ ಜಮೆಯಾಗಿರುವುದನ್ನು ಸಿಬಿಐ ಪತ್ತೆ ಮಾಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.