ಶನಿವಾರ, ಅಕ್ಟೋಬರ್ 16, 2021
22 °C

IPL 2021: ನಾಲ್ಕನೇ ಪ್ರಶಸ್ತಿಯತ್ತ ಮಹೇಂದ್ರ ಸಿಂಗ್ ಧೋನಿ ಚಿತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದುಬೈ: ಒಂಬತ್ತನೇ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಈಗ ನಾಲ್ಕನೇ ಬಾರಿ ಪ್ರಶಸ್ತಿ ಜಯಿಸುವ ಛಲ.

ಹೋದ ವರ್ಷ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಟೂರ್ನಿ ನಡೆದ ಸಂದರ್ಭದಲ್ಲಿ ಚೆನ್ನೈ ತಂಡವು ಲೀಗ್ ಹಂತದಲ್ಲಿ ಸೋತು ಹೊರಬಿದ್ದ ಮೊದಲ ತಂಡವಾಗಿತ್ತು. ಈ ಬಾರಿ ಫೈನಲ್ ಪ್ರವೇಶಿಸಿದ ಮೊದಲ ತಂಡವಾಗಿದೆ. ಅಷ್ಟರ ಮಟ್ಟಿಗೆ ನಾಯಕ ಮಹೇಂದ್ರಸಿಂಗ್ ಧೋನಿ ತಮ್ಮ ಫ್ರ್ಯಾಂಚೈಸ್‌ಗೆ ನೀಡಿದ್ದ ಮಾತು ಈಡೇರಿಸಿದ್ದಾರೆ. ಇನ್ನೇನು ಪ್ರಶಸ್ತಿ ಜಯಕ್ಕೆ ಒಂದು ಸವಾಲನ್ನು ಮೆಟ್ಟಿನಿಲ್ಲಬೇಕಷ್ಟೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರವೂ ‘ಕ್ಯಾಪ್ಟನ್‌ ಕೂಲ್’ ಧೋನಿಯ ವರ್ಚಸ್ಸು ಒಂದಿಷ್ಟು ಕುಂದಿಲ್ಲ ಎನ್ನುವುದನ್ನು ಈ ಟೂರ್ನಿ ತೋರಿಸಿಕೊಟ್ಟಿದೆ. ಅವರ ತಂತ್ರಗಾರಿಕೆಗಳೂ ಮಾಡಿರುವ ಪ್ರಭಾವವನ್ನೂ ಈ ಟೂರ್ನಿ ಎತ್ತಿ ತೋರಿಸಿದೆ. ತಮ್ಮ ತಂಡದಲ್ಲಿರುವ ಯುವ ಮತ್ತು ಅನುಭವಿಗಳನ್ನು ಸಮಪ್ರಮಾಣದಲ್ಲಿ ದುಡಿಸಿಕೊಂಡು ಯಶಸ್ವಿಯಾಗಿದ್ದಾರೆ.

ಇನ್ನೂ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಅವಕಾಶಕ್ಕಾಗಿ ಕಾದಿರುವ ಋತುರಾಜ್ ಗಾಯಕವಾಡ್  ಒಟ್ಟು 602 ರನ್‌ಗಳನ್ನು ಗಳಿಸಿದ್ದಾರೆ. ಫಫ್ ಡುಪ್ಲೆಸಿ ಜೊತೆಗೆ ಚೆನ್ನೈ ತಂಡದ ಇನಿಂಗ್ಸ್ ಆರಂಭಿಸುವ ಹೊಣೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಫಫ್ ಕೂಡ ಐದನೂರಕ್ಕೂ ಹೆಚ್ಚು ರನ್‌ಗಳನ್ನು ಪೇರಿಸಿದ್ದಾರೆ. ಅಂಬಟಿ ರಾಯುಡು, ಮೋಯಿನ್ ಅಲಿ ಕೂಡ ಉಪಯುಕ್ತ ಕಾಣಿಕೆ ನೀಡಿದ್ದಾರೆ. ಮೂರು ಪಂದ್ಯಗಳಲ್ಲಿ ಮಾತ್ರ ಆಡಿರುವ ಕನ್ನಡಿಗ ರಾಬಿನ್ ಉತ್ತಪ್ಪ ಕೂಡ ಮಿಂಚಿದ್ದಾರೆ. ಆಲ್‌ರೌಂಡರ್ ರವೀಂದ್ರ ಜಡೇಜ, ಶಾರ್ದೂಲ್ ಠಾಕೂರ್ ಮತ್ತು ವಿಂಡೀಸ್ ಆಟಗಾರ ಡ್ವೆನ್ ಬ್ರಾವೊ ಅವರೂ ‘ಪಂದ್ಯವಿಜಯೀ’ ಗಳಾಗಿದ್ದಾರೆ.

ಮೊದಲ ಕ್ವಾಲಿಫೈಯರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಜೋಶ್ ಹ್ಯಾಜಲ್‌ವುಡ್ ಬೌಲಿಂಗ್‌ನಲ್ಲಿ ಮಾಡಿದ ಮೋಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಬ್ಯಾಟಿಂಗ್‌ನಲ್ಲಿ ಕ್ರಮಾಂಕಗಳನ್ನು ದಿಢೀರ್ ಬದಲಾವಣೆ ಮಾಡಿದ ಧೋನಿ ಎದುರಾಳಿಗಳಿಗೆ ಬಿಸಿ ಮುಟ್ಟಿಸಿದ್ದರು. ನಾಲ್ಕನೇ ಕ್ರಮಾಂಕಕ್ಕೆ ಠಾಕೂರ್ ಬಡ್ತಿ ಪಡೆದಿದ್ದರು. ಅದರಿಂದಾಗಿ ಜಡೇಜ ಅವರನ್ನು ಎಂಟನೇ ಸ್ಥಾನಕ್ಕೆ ಹಾಕಿ, ತಾವೇ ಏಳನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಧೋನಿ ‘ಫಿನಿಷರ್’ ಆಗಿ ಹೊರಹೊಮ್ಮಿದ್ದರು.

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಲಿರುವ ಧೋನಿ, ಐಪಿಎಲ್ ಚಾಂಪಿಯನ್ ನಾಯಕನಾಗುವ ಚಿತ್ತ ನೆಟ್ಟಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು