ಗುರುವಾರ , ನವೆಂಬರ್ 26, 2020
19 °C

PV Web Exclusive: ಧೋನಿ ಮಿಂಚಲಿಲ್ಲ, ಹಳದಿ ಪಡೆ ’ಮೇಲೇಳಲಿಲ್ಲ’

ನಾಗೇಶ್ ಶೆಣೈ Updated:

ಅಕ್ಷರ ಗಾತ್ರ : | |

Prajavani

ಈ ವರ್ಷದ ಸ್ವಾತಂತ್ರ್ಯ ದಿನದಂದು ಮಹೇಂದ್ರ ಸಿಂಗ್‌ ಧೋನಿ ಏಕದಿನ ಮತ್ತು ಟ್ವೆಂಟಿ– 20 ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್‌ಗೂ ವಿದಾಯ ಹೇಳಿದ್ದರು. ನಿರಾಳರಾದ ಅವರು ಐಪಿಎಲ್‌ನಲ್ಲಿ ಯಾವ ರೀತಿಯ ಪ್ರದರ್ಶನ ನೀಡಬಹುದು? ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ತಂಡವನ್ನು ಪ್ರಶಸ್ತಿಯತ್ತ ಮುನ್ನಡೆಸಬಹುದೇ? ಎಂಬೆಲ್ಲಾ ಕುತೂಹಲ ಕ್ರಿಕೆಟ್‌ ಪ್ರೇಮಿಗಳಲ್ಲಿ ಮನೆಮಾಡಿತ್ತು.

ಐಪಿಎಲ್‌ನ ಲೀಗ್‌ ಹಂತದ ಪಂದ್ಯಗಳು ಈಗ ಮುಕ್ತಾಯದತ್ತ ಕಾಲಿಟ್ಟಿದೆ. ಸೂಪರ್‌ ಕಿಂಗ್ಸ್‌ ತಂಡ  ನಿರಾಶಾದಾಯಕವಾಗಿ ಆಡಿ ಪ್ಲೇಆಫ್‌ನಿಂದ ಹೊರಬಿದ್ದ ಮೊದಲ ತಂಡವೆನಿಸಬೇಕಾಯಿತು. ಇದೇ ಮೊದಲ ಬಾರಿ ಧೋನಿ ನೇತೃತ್ವದ ತಂಡ ಪ್ಲೇಆಫ್‌ ಹಂತಕ್ಕೆ ಏರಲು ವಿಫಲವಾಯಿತು. ಈ ಹಿಂದೆ ಎಂಟು ಬಾರಿ ಫೈನಲ್‌, ಮೂರು ಬಾರಿ (2010, 2011 ಮತ್ತು 2018) ಚಾಂಪಿಯನ್‌ ಪಟ್ಟಕ್ಕೇರಿದ್ದು ಚುಟುಕು ಕ್ರಿಕೆಟ್‌ನಲ್ಲಿ ಅದು ಹೊಂದಿದ್ದ ಪಾರಮ್ಯಕ್ಕೆ ಕನ್ನಡಿಯಾಗಿತ್ತು.

ಬಿಸಿಲುಗಾಡು ಯುಎಇಯ ಕ್ರೀಡಾಂಗಣಗಳಲ್ಲಿ ‘ಕ್ಯಾಪ್ಟನ್‌ ಕೂಲ್‌’ ಬ್ಯಾಟ್‌ನಿಂದಲೂ ಸದ್ದು ಮಾಡಲಿಲ್ಲ. ಭಾರತ ತಂಡಕ್ಕೆ ಆಟಗಾರ, ನಂತರ ನಾಯಕನಾಗಿ ಅವರ ಕೊಡುಗೆ ಬಹಳ ದೊಡ್ಡದು ಎಂಬುದು ನಿರ್ವಿವಾದ. 39 ವರ್ಷ ವಯಸ್ಸಿನ ಧೋನಿ ಈ ಹಂತದಲ್ಲಿ ಸಾಧಿಸಬೇಕಾಗಿರುವುದು ಏನೂ ಇರಲಿಲ್ಲ. ಸಾಧ್ಯವಾದಷ್ಟು ಕಾಲ ಆಡೋಣ ಎಂಬುದಷ್ಟೇ ಅವರ ಮನಸ್ಸಿನಲ್ಲಿ ಇರಬಹುದು. ವಿಕೆಟ್‌ ಕೀಪಿಂಗ್‌ನಲ್ಲಿ ಚುರುಕುತನ ಉಳಿಸಿಕೊಂಡರೂ ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಳ್ಳಲೇ ಇಲ್ಲ.

ಲೀಗ್‌ನ 14 ಪಂದ್ಯಗಳಲ್ಲಿ, ಗುರುವಾರದವರೆಗೆ ನಡೆದ 13 ಪಂದ್ಯಗಳ ಬಳಿಕ 10 ಪಾಯಿಂಟ್‌ಗಳೊಡನೆ ಚೆನ್ನೈ ಪಾಯಿಂಟ್‌ ಪಟ್ಟಿಯ ಬುಡದಲ್ಲೇ ಮುಂದುರಿದಿತ್ತು. ಐದು ಪಂದ್ಯಗಳನ್ನು ಗೆದ್ದರೂ, ಇವುಗಳಲ್ಲಿ  ಅಧಿಕಾರಯುತ ಜಯ ಕಂಡಿದ್ದು ಎರಡು ಪಂದ್ಯಗಳನ್ನು ಮಾತ್ರ.

ಆರಂಭದಿಂದಲೇ ಹಿನ್ನಡೆ:

ಈ ಬಾರಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ, ಒಂದರ ಮೇಲೊಂದರಂತೆ ಹಿನ್ನಡೆಯನ್ನು ಕಾಣುತ್ತ ಹೋಯಿತು. ಆಗಸ್ಟ್‌ 21ರಂದು ಯುಎಇಗೆ ಬಂದಿಳಿದು ಕ್ವಾರಂಟೈನ್‌ ಅವಧಿ ಮುಗಿಸಿತು. ಇನ್ನೇನು  ತರಬೇತಿ ಆರಂಭಿಸಬೇಕು ಎನ್ನುವಷ್ಟರಲ್ಲಿ ಕೆಲವು ಆಟಗಾರರು ಮತ್ತು ನೆರವು ಸಿಬ್ಬಂದಿಗೆ ಕೊರೊನಾ ಸೋಂಕು ತಗಲಾಕಿಕೊಂಡಿತು. ಇದು ಅಭ್ಯಾಸಕ್ಕೆ ತೊಡಕು ಉಂಟು ಮಾಡಿತು.

ಪ್ರಮುಖ ಆಟಗಾರ ಸುರೇಶ್‌ ರೈನಾ ಲೀಗ್‌ ಆರಂಭಕ್ಕೆ 20 ದಿನಗಳಿರುವಾಗ ತಂಡದಿಂದ ನಿರ್ಗಮಿಸಬೇಕಾಯಿತು. ಅವರ ಸೋದರ ಮಾವ, ಪಂಜಾಬ್‌ನ ಪಠಾಣಕೋಟ್‌ ಬಳಿ ದರೋಡೆಕೋರರ ಹಲ್ಲೆಯಿಂದ ಸಾವಿಗೀಡಾಗಿದ್ದರು. ಆದರೆ ಅವರ ನಿರ್ಗಮನಕ್ಕೆ ಇದೊಂದೇ ಕಾರಣವಲ್ಲ, ಅವರಿಗೆ ಹೋಟೆಲ್‌ನಲ್ಲಿ ಧೋನಿ ಅವರಿಗೆ ಕೊಟ್ಟಂಥ ಕೊಠಡಿ ಕೊಡದಿರುವುದು ಅವರ ಅಸಮಾಧಾನಕ್ಕೆ ಮೂಲ ಎಂಬ ಮಾತುಗಳೂ ಜಾಲತಾಣಗಳಲ್ಲಿ ಕೇಳಿಬಂದವು. ನಿಜ ಕೊನೆಗೂ ಗೊತ್ತಾಗಲಿಲ್ಲ.

ಧೋನಿ, ರೈನಾ ಆಪ್ತಮಿತ್ರರೇ. ಆಗಸ್ಟ್‌ 15ರಂದು ಒಂದೇ ದಿನ, ಅದೂ ಅರ್ಧ ಗಂಟೆ ಅಂತರದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದವರು. ಸಿಎಸ್‌ಕೆ ತಂಡದಲ್ಲಿ ಇಬ್ಬರೂ ಹಲವು ವರ್ಷಗಳಿಂದ ಜೊತೆಗೂಡಿ ಆಡಿದವರು. ರೈನಾ ತಂಡದ ಬ್ಯಾಟಿಂಗ್‌ ಬೆನ್ನೆಲುಬಾಗಿದ್ದರು. 33ಕ್ಕೂ ಹೆಚ್ಚು ಸರಾಸರಿಯಲ್ಲಿ 5,368 ರನ್‌ ಪೇರಿಸಿದ ಅನುಭವಿ.

ಇನ್ನೊಬ್ಬ ಅಂತರರಾಷ್ಟ್ರೀಯ ಆಟಗಾರ, ಆಫ್‌ ಸ್ಪಿನ್ನರ್‌ ಹರಭಜನ್‌ ಸಿಂಗ್‌ ಕೂಡ ವೈಯಕ್ತಿಕ ಕಾರಣ ನೀಡಿ ತಂಡವನ್ನು ಸೇರಿಕೊಳ್ಳಲಿಲ್ಲ. ಅವರ ಅಲಭ್ಯವೂ ತಂಡದ ಮೇಲೆ ಒತ್ತಡ ಹೆಚ್ಚಿಸಿತು.

ಮೊದಲ ಪಂದ್ಯದಲ್ಲಿ 71 ರನ್‌ ಚಚ್ಚಿ ಮುಂಬೈ ವಿರುದ್ಧ ಗೆಲುವಿಗೆ ಕಾರಣರಾಗಿದ್ದ ಅಂಬಟಿ ರಾಯುಡು ಗಾಯಾಳಾಗಿ ನಂತರದ ಕೆಲವು ಪಂದ್ಯಗಳಲ್ಲಿ ಆಡಲಿಲ್ಲ. ಭಾರತ ತಂಡದಲ್ಲೂ ಆಡಿದ್ದ ಕೇದಾರ್ ಜಾಧವ್‌ ರನ್ನುಗಳಿಗೆ ತಿಣುಕಾಡಿದರು. ಅವರನ್ನು ಆಡುವ ತಂಡದಿಂದ ಕೈಬಿಡಬೇಕಾಯಿತು. ಪಿಯೂಷ್‌ ಚಾವ್ಲಾ ಪರಿಣಾಮ ಬೀರಲಿಲ್ಲ. ಇನ್ನೊಬ್ಬ ಹಳೆಹುಲಿ ರವೀಂದ್ರ ಜಡೇಜ ಕೆಲವು ಪಂದ್ಯಗಳಲ್ಲಿ ‘ಫಿನಿಷರ್‌’ ಪಾತ್ರ ವಹಿಸಿದರು.

ವಿದೇಶಿ ಆಟಗಾರರು ಸ್ಥಿರ ಪ್ರದರ್ಶನ ನೀಡಲಿಲ್ಲ. ಬಲತೊಡೆಯ ಸ್ನಾಯುಸೆಳೆತದಿಂದ ಬ್ರಾವೊ ಎರಡು ವಾರ ಹೊರಗುಳಿಯಬೇಕಾಯಿತು.ಕೆರಿಬಿಯನ್‌ ಲೀಗ್‌ ವೇಳೆ ಅವರು ಮೊಣಕಾಲಿನ ನೋವು ಅನುಭವಿಸಿದ್ದು, ಐಪಿಎಲ್‌ನಲ್ಲಿ ತಮ್ಮ ತಂಡದ ಮೊದಲ ಮೂರು ಪಂದ್ಯಗಳಿಗೆ ಅಲಭ್ಯರಾಗಿದ್ದರು. ಆಲ್‌ರೌಂಡರ್‌ ಶೇನ್‌ ವ್ಯಾಟ್ಸನ್‌ ಕೂಡ

ಆರಂಭ ಆಟಗಾರ, ದಕ್ಷಿಣ ಆಫ್ರಿಕಾದ ಫಾಫ್‌ ಡುಪ್ಲೆಸಿ ಮಾತ್ರ ಫ್ಲಾಪ್‌ ಆಗದೇ ಸ್ಥಿರ ಪ್ರದರ್ಶನ ನೀಡಿದರು. ಅವರು 12 ಪಂದ್ಯಗಳಿಂದ 40ರ ಸರಾಸರಿಯಲ್ಲಿ 401 ರನ್‌ ಗಳಿಸಿದ್ದರಿಂದ ಚೆನ್ನೈ ಕೆಲವು ಪಂದ್ಯಗಳಲ್ಲಿ ಹೋರಾಡಲು ಸಾಧ್ಯವಾಯಿತು. ಇಂಗ್ಲೆಂಡ್‌ನ ಆಟಗಾರ ಸ್ಯಾಮ್‌ ಕರನ್‌ ಕೆಲ ಪಂದ್ಯಗಳಲ್ಲಿ ಆಲ್‌ರೌಂಡ್‌ ಆಟವಾಡಿದರು.

ದೀಪಕ್‌ ಚಾಹರ್‌ ಬೌಲಿಂಗ್‌ನಲ್ಲಿ (13 ಪಂದ್ಯಗಳಲ್ಲಿ 12 ವಿಕೆಟ್‌) ತಕ್ಕಮಟ್ಟಿಗೆ ಗಮನಸೆಳೆದರು. ಐದು ಪಂದ್ಯ ಮಾತ್ರ ಆಡಿದ 22 ವರ್ಷದ ಬ್ಯಾಟ್ಸ್‌ಮನ್‌ ಋತುರಾಜ್‌ ಗಾಯಕವಾಡ್‌ ನಿರಾಸೆ ಮೂಡಿಸದೇ ಎರಡು ಅರ್ಧ ಶತಕ ಬಾರಿಸಿದರು.

ಧೋನಿ ಅವರಿಂದ ಬ್ಯಾಟಿಂಗ್‌ನಲ್ಲಿ ಒಳ್ಳೆಯ ಆಟ ಬಯಸಿದ್ದ ಕ್ರಿಕೆಟ್‌ ಅಭಿಮಾನಿಗಳಿಗೂ ಬಹುತೇಕ ನಿರಾಸೆಯೇ ಕಾದಿತ್ತು. 13 ಪಂದ್ಯಗಳಿಂದ ಅವರು ಗಳಿಸಿದ್ದು 200 ರನ್‌ಗಳನ್ನು (25ರ ಸರಾಸರಿ)  ಮಾತ್ರ. ಅಜೇಯ 47 ರನ್‌ ಇದರಲ್ಲಿ ಅತ್ಯಧಿಕ.  ಇದು ಐಪಿಎಲ್‌ನಲ್ಲಿ ಅವರ ಅತಿ ಕಡಿಮೆ ಸರಾಸರಿ. ಹಿಂದೆ ಪಂದ್ಯಗಳನ್ನು ಗೆಲ್ಲಿಸಿಕೊಡುವ ‘ಫಿನಿಷರ್‌ ಪಾತ್ರ’ ವಹಿಸುತ್ತಿದ್ದ ಧೋನಿ ಅವರಲ್ಲಿ ಅಂಥ ಆತ್ಮವಿಶ್ವಾಸ ಈ ಆವೃತ್ತಿಯಲ್ಲಿ ಕಾಣಲಿಲ್ಲ.

ಇದೇ ಆಟಗಾರ 2018ರಲ್ಲಿ 16 ಪಂದ್ಯಗಳಿಂದ 455 ರನ್‌ ಬಾಚಿಕೊಂಡಿದ್ದರು. ಹೋದ ವರ್ಷ ಅವರು 15 ಪಂದ್ಯಗಳಿಂದ 416 ರನ್‌ ಗಳಿಸಿದ್ದರು ಎಂದರೆ ತಂಡ ಅವರನ್ನು ಎಷ್ಟರ ಮಟ್ಟಿಗೆ ಅವಲಂಬಿಸಿತ್ತು ಎನ್ನುವುದನ್ನು ಸೂಚಿಸುತ್ತದೆ.

ಧೋನಿ ಮಾಡಿದ ಪ್ರಯೋಗಗಳೂ ಕೈಗೂಡಲಿಲ್ಲ. ಯುವ ಆಟಗಾರರ ಮೇಲೆ ಹೆಚ್ಚು ಭರವಸೆ ಇಡಲಿಲ್ಲ. ‘ಯುವ ಆಟಗಾರರಲ್ಲಿ ಹೋರಾಟದ ಕಿಚ್ಚು ಕಾಣುತ್ತಿಲ್ಲ. ತಂಡದಲ್ಲಿ ಹಿರಿಯ ಆಟಗಾರರನ್ನು ಪರ್ಯಾಯವಾಗುವ ರೀತಿ ಆಟ ಬರುತ್ತಿಲ್ಲ’ ಎಂಬರ್ಥದ ಮಾತುಗಳು ಟೀಕೆಗೆ ಗುರಿಯಾದವು. ಚೆನ್ನೈನವರೇ ಆದ ಕೃಷ್ಣಮಾಚಾರಿ ಶ್ರೀಕಾಂತ್‌ ತಿರುಗೇಟು ನೀಡಿ, ‘ಜಾಧವ್‌ ಮತ್ತು ಪಿಯೂಷ್‌ ಚಾವ್ಲಾ ಅವರಲ್ಲಿ ಧೋನಿ ಎಂಥ ಕಿಡಿ ಕಂಡಿದ್ದಾರೆ’ ಎಂದು ಪ್ರಶ್ನಿಸಿದ್ದರು.

ಧೋನಿ ಅವರ ಮೇಲೆ ತಂಡದ ಆಡಳಿತ ಮಂಡಳಿ ಇಟ್ಟಿರುವ ವಿಶ್ವಾಸ ಎಷ್ಟೆಂದರೆ ಮುಂದಿನ ಐಪಿಎಲ್‌ಗೂ ಅವರನ್ನೇ ನಾಯಕನಾಗಿ ಮುಂದುವರಿಸಿದರೆ ಅಚ್ಚರಿಯೇನಿಲ್ಲ ಎಂದು ಗೌತಮ್‌ ಗಂಭೀರ್‌ ಹೇಳಿದ್ದಾರೆ. ಇದನ್ನು ಯಾವ ರೀತಿ ಅರ್ಥೈಸಬೇಕೊ ತಿಳಿಯದು. ಆದರೆ ಇನ್ನು ಆಟಗಾರನ ಪಾತ್ರ ಸಾಕು ಎಂದು ಅವರಿಗೆ ಅನಿಸಿದರೆ ಅಚ್ಚರಿಯೇನೂ ಇಲ್ಲ. ಯಾವಾಗ, ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು