ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೋನಿಯೊಂದಿಗೆ ಹೋಲಿಕೆಯಿಂದ ಒತ್ತಡಕ್ಕೊಳಗಾಗಿದ್ದೆ: ರಿಷಭ್ ಪಂತ್

Published 2 ಫೆಬ್ರುವರಿ 2024, 13:22 IST
Last Updated 2 ಫೆಬ್ರುವರಿ 2024, 13:22 IST
ಅಕ್ಷರ ಗಾತ್ರ

ನವದೆಹಲಿ : ‘ನಾನು ಭಾರತ ತಂಡದಲ್ಲಿ ಆಡಲು ಆರಂಭಿಸಿದಾಗ, ಮಹೇಂದ್ರಸಿಂಗ್ ಧೋನಿ ಅವರೊಂದಿಗೆ ತುಲನೆ ಮಾಡಿ ಸಾಮರ್ಥ್ಯ ಅಳೆಯುತ್ತಿದ್ದರು. ಆಗೆಲ್ಲ ನಾನು ಬಹಳ ಒತ್ತಡಕ್ಕೊಳಗಾಗುತ್ತಿದೆ. ಕೋಣೆಯಲ್ಲಿ ಒಬ್ಬನೇ ಕುಳಿತು ಅಳುತ್ತಿದ್ದೆ. ಉಸಿರಾಡಲೂ ಕಷ್ಟವಾಗುತ್ತಿತ್ತು’ ಎಂದು ವಿಕೆಟ್‌ಕೀಪರ್ –ಬ್ಯಾಟರ್ ರಿಷಭ್ ಪಂತ್ ಹೇಳಿದ್ದಾರೆ.

‘ಮೊಹಾಲಿಯಲ್ಲಿ ನಡೆದಿದ್ದ ಪಂದ್ಯವೊಂದರಲ್ಲಿ ನಾನು ಸ್ಟಂಪಿಂಗ್ ಮಾಡುವಾಗ ವಿಫಲನಾದೆ. ಆಗ ಪ್ರೇಕ್ಷಕರು ಧೋನಿ..ಧೋನಿ ಎಂದು ಕೂಗಿದರು. ಇದರಿಂದಾಗಿ ಒತ್ತಡ ಹೆಚ್ಚುತ್ತಿತ್ತು. ಅವರ ಎತ್ತರದ ಸಾಧನೆಯನ್ನು 20–21 ವರ್ಷ ವಯಸ್ಸಿನವನಾಗಿದ್ದ ನನ್ನಿಂದ  ನಿರೀಕ್ಷಿಸಲಾಗುತ್ತಿತ್ತು. ಆದ್ದರಿಂದ ತೀವ್ರ ಒತ್ತಡಕ್ಕೆ ಒಳಗಾಗುತ್ತಿದ್ದೆ’ ಎಂದು ಸ್ಟಾರ್‌ ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ರಿಷಭ್ ಹೇಳಿದ್ದಾರೆ.

2022ರಲ್ಲಿ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಿಷಭ್, ಈಗ ಬಹುತೇಕ ಚೇತರಿಸಿಕೊಂಡಿದ್ದಾರೆ. ಕ್ರಿಕೆಟ್‌ ಕಣಕ್ಕೆ ಮರಳುವ ಸಿದ್ಧತೆ ನಡೆಸಿದ್ದಾರೆ.  

‘ಧೋನಿ ಅವರು ನನ್ನ ಮಾರ್ಗದರ್ಶಕರು. ಅವರಿಂದ ನಾನು ಬಹಳಷ್ಟು ಕಲಿತಿದ್ದೇನೆ. ಯಾವುದೇ ಸಮಯದಲ್ಲಿಯೂ ಅವರೊಂದಿಗೆ ಮಾತನಾಡುವ ಆಪ್ತತೆ ನನಗೆ ಇದೆ. ಅವರ ಮತ್ತು ನನ್ನ ಸಂಬಂಧವು ಪದಗಳನ್ನು ಮೀರಿದ್ದು. ಅವರೊಂದಿಗೆ ಮನಬಿಚ್ಚಿ ಎಲ್ಲವನ್ನೂ ಮಾತನಾಡಬಹುದು. ನಾನು ಬೇರೆ ಯಾರೊಂದಿಗೂ ಚರ್ಚಿಸದ ವಿಷಯಗಳನ್ನು ಅವರೊಂದಿಗೆ ಮಾತನಾಡುತ್ತೇನೆ’ ಎಂದು ಪಂತ್ ಹೇಳಿದರು.

'ಧೋನಿಯವರ ಸ್ಥಾನವನ್ನು ತುಂಬುವ ವ್ಯಕ್ತಿಯನ್ನು ನನ್ನಲ್ಲಿ ಅಥವಾ ಇನ್ನೊಬ್ಬರಲ್ಲಿ ಜನರು ಯಾಕೆ ಹುಡುಕಾಡುತ್ತಾರೆಂಬುದೇ ಅರ್ಥವಾಗುತ್ತಿಲ್ಲ. ನನಗೆ ತಂಡದಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಚೆನ್ನಾಗಿ ಆಡುವ ಪ್ರಯತ್ನ ಮಾಡಿದೆ. ಕೆಲವರು ಐದು ಪಂದ್ಯ, ಇನ್ನೂ ಕೆಲವರು 500 ಪಂದ್ಯಗಳನ್ನು ಆಡಿರಬಹುದು. ಅದೆಲ್ಲವೂ ಅವರವರ ಪ್ರಯಾಣ. ಎಲ್ಲರೂ ಏರಿಳಿತಗಳನ್ನು ನೋಡಿರುತ್ತಾರೆ. ಒಬ್ಬರನ್ನು ಇನ್ನೊಬ್ಬರೊಂದಿಗೆ ಹೋಲಿಕೆ ಮಾಡುವುದು ಸರಿಯಲ್ಲ’ ಎಂದರು.

‘ನನ್ನ ಆರಂಭಿಕ ದಿನಗಳಲ್ಲಿ ಯುವರಾಜ್ ಸಿಂಗ್ ಮತ್ತು ಧೋನಿ ಇನ್ನೂ ಆಡುತ್ತಿದ್ದರು. ಅವರು ನನಗೆ ನೀಡಿದ ಬೆಂಬಲಕ್ಕೆ ಋಣಿಯಾಗಿದ್ದೇನೆ. ಯಾವತ್ತೂ ತಾವು ಬಹಳ ಹಿರಿಯರು ಮತ್ತು ಅನುಭವಿಗಳು ಎಂಬುದನ್ನು ಬಿಂಬಿಸಲಿಲ್ಲ. ವಯಸ್ಸು ಮತ್ತು ಅನುಭವಲ್ಲಿ ತುಂಬಾ ಚಿಕ್ಕವನಾದ ನನ್ನನ್ನು ತಮ್ಮ ಜತೆಜತೆಯಲ್ಲಿಯೇ ಕೈಹಿಡಿದು ನಡೆಸಿದರು’ ಎಂದು ಪಂತ್ ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT