ಶುಕ್ರವಾರ, ಮೇ 20, 2022
24 °C

ಯುಡಿಆರ್‌ಎಸ್: ವಿವಾದಕ್ಕೀಡಾದ ಮೂರನೇ ಅಂಪೈರ್ ತೀರ್ಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ (ಪಿಟಿಐ): ಭಾರತ ಮತ್ತು ಇಂಗ್ಲೆಂಡ್ ನಡುವಣ ಇಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದ ಮೊದಲ ದಿನದಾಟದಲ್ಲಿ ಮೂರನೇ ಅಂಪೈರ್ ಮಾಡಿದ ಲೋಪದಿಂದಾಗಿ ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ (ಯುಡಿಆರ್‌ಎಸ್‌) ಮನವಿಯು ವಿವಾದದ ರೂಪ ಪಡೆಯಿತು. 

ಇನಿಂಗ್ಸ್‌ನ 75ನೇ ಓವರ್‌ನಲ್ಲಿ ಅಜಿಂಕ್ಯ ರಹಾನೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ಸ್ಪಿನ್ನರ್ ಜ್ಯಾಕ್ ಲೀಚ್ ಎಸೆತದಲ್ಲಿ ಚೆಂಡು ರಹಾನೆಯ ಗ್ಲೌಸ್‌ಗೆ ಸವರಿ ಶಾರ್ಟ್‌ ಲೆಗ್ ಫೀಲ್ಡರ್‌ ಒಲಿ ಪೊಪ್ ಕೈಸೇರಿತ್ತು. ಇಂಗ್ಲೆಂಡ್ ಆಟಗಾರರು ಅಪೀಲ್ ಮಾಡಿದರು. ಆದರೆ ಆನ್‌ಲೀಲ್ಡ್‌ ಅಂಪೈರ್ ಔಟ್ ನೀಡಲಿಲ್ಲ. ಆದ್ದರಿಂದ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಡಿಆರ್‌ಎಸ್ ಮೊರೆ ಹೋದರು.

ಪರಿಶೀಲನೆ ನಡೆಸಿದ ಮೂರನೇ ಅಂಪೈರ್ ಅನಿಲ್ ಚೌಧರಿ ಅವರು, ಚೆಂಡು ಲೆಗ್‌ಸ್ಟಂಪ್‌ನಿಂದ ಹೊರಗೆ ಪುಟಿದು ಚಲಿಸಿದೆ. ಆದ್ದರಿಂದ ಎಲ್‌ಬಿಡಬ್ಲ್ಯು ಆಗಿಲ್ಲವೆಂದು ತೀರ್ಪು ಕೊಟ್ಟರು. ಇದರಿಂದ ಅಸಮಾಧಾನಗೊಂಡ ಜೋ ರೂಟ್ ಆನ್‌ಫೀಲ್ಡ್ ಅಂಪೈರ್ ಬಳಿ ಸಾಗಿ ತಾವು ಕ್ಯಾಚ್ ಪರಿಶೀಲನೆಗೆ ಮನವಿ ಸಲ್ಲಿಸಿದ್ದು, ಎಲ್‌ಬಿ ಡಬ್ಲ್ಯುಗೆ ಅಲ್ಲ ಎಂದು ಸ್ಪಷ್ಟಪಡಿಸಿದರು.  ಆಗಲೂ ಅನಿಲ್ ಚೌಧರಿ ನಾಟ್‌ಔಟ್ ಎಂದೇ ತೀರ್ಪಿತ್ತರು. ಆದರೆ ದೊಡ್ಡ ಪರದೆಯಲ್ಲಿ ಚೆಂಡು ಕೈಗವಸಿಗೆ ತಾಗಿದ್ದು ಸ್ಪಷ್ಟವಾಗಿತ್ತು. ಇದರಿಂದಾಗಿ ಇಂಗ್ಲೆಂಡ್‌ ಒಂದು ರಿವೀವ್‌ ಅವಕಾಶವನ್ನೂ ಕಳೆದುಕೊಂಡಿತು.

ಆದರೆ ನಂತರ ಐಸಿಸಿ ನಿಯಮ 3.6.8ರ ಪ್ರಕಾರ ಪಂದ್ಯ ರೆಫರಿಯು ಮಧ್ಯಪ್ರವೇಶಿಸಿ ತಾಂತ್ರಿಕ ಸಮಿತಿಯ ಅಭಿಪ್ರಾಯ ಪಡೆದು ಇಂಗ್ಲೆಂಡ್‌ ಖಾತೆಗೆ ರಿವೀವ್ ಅವಕಾಶವನ್ನು ಮರಳಿ ನೀಡಿದರು. ಈ ಪಂದ್ಯಕ್ಕೆ ಜಾವಗಲ್ ಶ್ರೀನಾಥ್ ರೆಫರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದಾಗಿ ಆರು ಎಸೆತಗಳ ನಂತರ ಅಜಿಂಕ್ಯ ರಹಾನೆ ಕ್ಲೀನ್‌ ಬೌಲ್ಡ್‌ ಆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು