ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೀರಜ್‌ ಅಮೋಘ ಶತಕ; ಸಮಿತ್‌ ದ್ರಾವಿಡ್‌ ಉತ್ತಮ ಬೌಲಿಂಗ್

ಕೂಚ್ ಬಿಹಾರ್‌ ಟ್ರೋಫಿ; ಕರ್ನಾಟಕ ಬಿಗಿ ಹಿಡಿತ
Published 31 ಡಿಸೆಂಬರ್ 2023, 23:31 IST
Last Updated 31 ಡಿಸೆಂಬರ್ 2023, 23:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅಮೋಘ ಶತಕ ಗಳಿಸಿದ ಧೀರಜ್ ಗೌಡ ಮತ್ತು ಶಿಸ್ತಿನ ದಾಳಿ ನಡೆಸಿದ ಸಮಿತ್‌ ದ್ರಾವಿಡ್ ನೆರವಿನಿಂದ ಕರ್ನಾಟಕ ತಂಡವು ಇಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ಕೂಚ್ ಬಿಹಾರ್ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಮಧ್ಯಪ್ರದೇಶದ ವಿರುದ್ಧ ಬಿಗಿ ಹಿಡಿತ ಸಾಧಿಸಿತು.

ಇಲ್ಲಿನ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕರ್ನಾಟಕ ತಂಡವು ಮೊದಲ ಇನಿಂಗ್ಸ್‌ನಲ್ಲಿ 147 ರನ್‌ಗಳ ಮುನ್ನಡೆ ಸಾಧಿಸಿತ್ತು.  ಅದಕ್ಕುತ್ತರವಾಗಿ ಎರಡನೇ ಇನಿಂಗ್ಸ್ ಆರಂಭಿಸಿದ ಮಧ್ಯಪ್ರದೇಶ ತಂಡವು ಮೂರನೇ ದಿನದಾಟದ ಅಂತ್ಯಕ್ಕೆ  38 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 113 ರನ್ ಗಳಿಸಿದೆ.  ಆತಿಥೇಯರ ಮುನ್ನಡೆಯ ಬಾಕಿ ಚುಕ್ತಾ ಮಾಡಲು ಮಧ್ಯಪ್ರದೇಶಕ್ಕೆ ಇನ್ನೂ 34 ರನ್‌ಗಳ ಅಗತ್ಯವಿದೆ. ಸೋಮವಾರ ಬೆಳಿಗ್ಗೆ ಮಧ್ಯಪ್ರದೇಶದ ಮೂರು ವಿಕೆಟ್‌ಗಳನ್ನು ಬೇಗನೆ ಕಬಳಿಸಿದರೆ ಕರ್ನಾಟಕ ತಂಡಕ್ಕೆ ಇನಿಂಗ್ಸ್‌ ಗೆಲುವಿನ ಅವಕಾಶವಿದೆ.  

ಎರಡನೇ ಇನಿಂಗ್ಸ್ ಆರಂಭಿಸಿದ ಮಧ್ಯಪ್ರದೇಶ ತಂಡಕ್ಕೆ ಸಮಿತ್ ದ್ರಾವಿಡ್‌ ಆರಂಭದಲ್ಲಿಯೇ ಪೆಟ್ಟು ಕೊಟ್ಟರು. ಸಮಿತ್‌ ಎಸೆದ ಮೊದಲ ಓವರ್‌ನ ಎರಡನೇ ಎಸೆತದಲ್ಲಿ ಆರಂಭಿಕ ಆಟಗಾರ ವಿಕಾಸ್ ಶರ್ಮಾ ಧ್ರುವ್ ಪ್ರಭಾಕರ್‌ಗೆ ಕ್ಯಾಚಿತ್ತರು. ಮರು ಎಸೆತದಲ್ಲಿ ಅಭಿ ಅಗ್ನಿ ಕ್ಲೀನ್ ಬೌಲ್ಡ್‌ ಆದರು. ನಂತರ ಆಯುಷ್ ಆನಂದ್‌ ಅವರ ವಿಕೆಟ್ ಕಿತ್ತ ಸಮಿತ್‌ ಪಾರಮ್ಯ ಮೆರೆದರು.

ತಾಳ್ಮೆಯಿಂದ ಆಡುತ್ತಿದ್ದ ಸಾರಾಂಶ್ ಸುರಾನಾ  (45, 86ಎ, 4X4) ಅವರಿಗೆ ಹಾರ್ದಿಕ್ ರಾಜ್ ಪೆವಿಲಿಯನ್‌ ದಾರಿ ತೋರಿಸಿದರು. ದಿನದಾಟದ ಅಂತ್ಯಕ್ಕೆ ಧನಂಜಯ್ ದೀಕ್ಷಿತ್‌ (26), ಅನಂತ್ ದುಬೆ (1) ಕ್ರೀಸ್‌ನಲ್ಲಿದ್ದರು.

ಧೀರಜ್ ಶತಕ: ಶನಿವಾರ ದಿನದಾಟದ ಅಂತ್ಯಕ್ಕೆ 80 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 227 ರನ್‌ ಗಳಿಸಿದ್ದ ಕರ್ನಾಟಕ ತಂಡಕ್ಕೆ ಭಾನುವಾರ ಬೆಳಿಗ್ಗೆ ಧ್ರುವ್ ಪ್ರಭಾಕರ್‌ ಮತ್ತು ತಂಡದ ನಾಯಕ ಧೀರಜ್‌ ಗೌಡ ಬಲ ತುಂಬಿದರು. ಇವರಿಬ್ಬರೂ ಏಳನೇ ವಿಕೆಟ್‌ ಜೊತೆಯಾಟದಲ್ಲಿ 86 ರನ್‌ ಸೇರಿಸಿದರು.

ಧ್ರುವ್‌ ಪ್ರಭಾಕರ್‌ ಅರ್ಧಶತಕ (54) ಗಳಿಸಿ ನಿರ್ಗಮಿಸಿದರು. ನಂತರ ವೇಗವಾಗಿ ರನ್‌ ಕಲೆಹಾಕಿದ ಧೀರಜ್ ಗೌಡ ಶತಕ (157; 182ಎ, 4X22, 6X1) ಸಿಡಿಸಿದರು. ಧೀರಜ್ ಮತ್ತು  ಎನ್‌. ಸಮರ್ಥ್‌ (18 ರನ್) ಅವರು ಒಂಬತ್ತನೇ ವಿಕೆಟ್ ಜೊತೆಯಾಟದಲ್ಲಿ 118 ರನ್ ಸೇರಿಸಿದರು. ಇದರಿಂದಾಗಿ ತಂಡದ ಮೊತ್ತವು  400ರ ಗಡಿ ದಾಟಿತು. ಮಧ್ಯಪ್ರದೇಶದ ಸ್ಪಿನ್ನರ್ ವಿಷ್ಣು ಭಾರದ್ವಾಜ್ 116 ರನ್ ನೀಡಿ 7 ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರು: ಮಧ್ಯಪ್ರದೇಶ ಮೊದಲ ಇನಿಂಗ್ಸ್‌: 101.1 ಓವರ್‌ಗಳಲ್ಲಿ 269. ಕರ್ನಾಟಕ ಮೊದಲ ಇನಿಂಗ್ಸ್‌ 129.3 ಓವರ್‌ಗಳಲ್ಲಿ 416 (ಧೀರಜ್‌ಗೌಡ 157, ಧ್ರುವ್‌ ಪ್ರಭಾಕರ್ 54, ಎನ್‌.ಸಮರ್ಥ್‌ 18, ವಿಷ್ಣು ಭಾರದ್ವಾಜ್ 116ಕ್ಕೆ 7). ಮಧ್ಯಪ್ರದೇಶ ಎರಡನೇ ಇನಿಂಗ್ಸ್‌ 38 ಓವರ್‌ಗಳಲ್ಲಿ 7 ವಿಕೆಟ್‌ಗೆ 113 (ಸಾರಾಂಶ್ ಸುರಾನ 45, ಧನಂಜಯ್‌ ದೀಕ್ಷಿತ್‌ 26, ಅನ್ವೇಶ್ ಚಾವ್ಲಾ 24, ಸಮಿತ್ ದ್ರಾವಿಡ್‌ 16ಕ್ಕೆ 3, ಹಾರ್ದಿಕ್ ರಾಜ್‌ 24ಕ್ಕೆ 2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT