ಸೋಮವಾರ, ಜೂನ್ 1, 2020
27 °C
ಮುಂದಿನ ಆರು ತಿಂಗಳು ವಿದೇಶಿ ಗಡಿಗಳ ಬಂದ್‌ಗೆ ಆಸ್ಟ್ರೇಲಿಯಾ ಆದೇಶ

ಟಿ20 ವಿಶ್ವಕಪ್ ಮೇಲೂ ಕೊರೊನಾ ತೂಗುಗತ್ತಿ?

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೊರೊನಾ ವೈರಸ್‌ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಆಸ್ಟ್ರೇಲಿಯಾ ದೇಶವು ಮುಂದಿನ ಆರು ತಿಂಗಳವರೆಗೆ ವಿದೇಶಿ ವಿಮಾನಗಳ ಹಾರಾಟಕ್ಕೆ ನಿರ್ಬಂಧ ಹಾಕಿದೆ. ವಿದೇಶಿ ಗಡಿಗಳನ್ನು ಬಂದ್ ಮಾಡಲಿದೆ.

ಇದರಿಂದಾಗಿ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಮತ್ತು ಅದರ ನಂತರ ಭಾರತ–ಆಸ್ಟ್ರೇಲಿಯಾ ಎದುರಿನ ಸರಣಿಗಳು ನಡೆಯುವುದು ಅನಿಶ್ಚಿತವಾಗಿವೆ.

ಅಕ್ಟೋಬರ್‌ 18 ರಿಂದ ಟಿ20 ವಿಶ್ವಕಪ್ ನಡೆಯಲಿದೆ. ನವೆಂಬರ್ ಆರಂಭದಲ್ಲಿ ಟಿ20 ತ್ರಿಕೋನ ಸರಣಿಯಲ್ಲಿ ಭಾರತ ಆಡಲಿದೆ.  ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ತಂಡಗಳು ಇರಲಿವೆ. 

ಡಿಸೆಂಬರ್‌ನಲ್ಲಿ  ಟೆಸ್ಟ್ ಸರಣಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ.  ಆದರೆ ಇದೀಗ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಇರುವುದರಿಂದ ಈ ವೇಳಾಪಟ್ಟಿಯಲ್ಲಿ ಏರುಪೇರಾಗುವುದು ಖಚಿತವಾಗಿದೆ.

ಆಸ್ಟ್ರೇಲಿಯಾದಲ್ಲಿ ಇದುವರೆಗೆ ಎರಡು ಸಾವಿರ ಜನರಿಗೆ ಕೊರೊನಾ ಸೋಂಕು ತಗುಲಿದೆ. 16 ಜನ ಸಾವನ್ನಪ್ಪಿದ್ದಾರೆ. ಇದರಿಂದಾಗಿ ಆಸ್ಟ್ರೇಲಿಯಾ ಸರ್ಕಾರವು ಕಠಿಣ ಕ್ರಮಕ್ಕೆ ಮುಂದಾಗಿದೆ. ಟಿ20 ವಿಶ್ವಕಪ್ ಟೂರ್ನಿಯ  ಆಯೋಜನೆಯ ಕುರಿತು ಐಸಿಸಿ ನಿರ್ಧಾರ ಕೈಗೊಳ್ಳಲಿದೆ. ಆದರೆ ದ್ವಿಪಕ್ಷೀಯ ಸರಣಿಗಳ ಕುರಿತು ಉಭಯ ದೇಶಗಳ ಆಡಳಿತ ಮಂಡಳಿಗಳು ನಿರ್ಧರಿಸಬೇಕಿದೆ.

‘ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ಆರು ತಿಂಗಳ ಪ್ರವಾಸ ನಿರ್ಬಂಧವು ಸೂಕ್ತ ನಡೆಯಾಗಿದೆ. ಆದರೆ, ಬೇಗನೆ ಪರಿಸ್ಥಿತಿ ಸುಧಾರಣೆಯಾದರೆ, ನಿರ್ಬಂಧ ಸಡಿಲವಾಗುವ ಸಾಧ್ಯತೆಯೂ ಇರುತ್ತದೆ. ಕಾದು ನೋಡಬೇಕು’ ಎಂದು ಬಿಸಿಸಿಐ ಮೂಲಗಳು ಹೇಳುತ್ತವೆ.

‘ಒಂದೊಮ್ಮೆ ಆರು ತಿಂಗಳೂ ಸಂಪೂರ್ಣ ನಿರ್ಬಂಧ ಜಾರಿಯಾದರೆ, ನಂತರ ಪರಿಸ್ಥಿತಿಯಲ್ಲಿ ಪ್ರವಾಸ ಸುಲಭವಲ್ಲ. ತಂಡಗಳು, ಸರಂಜಾಮುಗಳ ಸಾಗಣೆಯು ಕಷ್ಟವಾಗುತ್ತದೆ. ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್ ತಂಡವು ಭಾರತ ಪ್ರವಾಸ ಕೈಗೊಳ್ಳಲಿದೆ. ಆ ಟೂರ್ನಿಯ ಆಯೋಜನೆಯೂ ಕೂಡ ಕಷ್ಟವಾಗುತ್ತದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದರಿಂದಾಗಿಟಿ20 ವಿಶ್ವಕಪ್ ಟೂರ್ನಿಯನ್ನು ಮುಂದೂಡಿದರೆ, ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ನಾಲ್ಕು ಟೆಸ್ಟ್‌ಗಳ ಸರಣಿಯನ್ನೂ ಮುಂದೂಡಬೇಕು ಅಥವಾ ರದ್ದುಗೊಳಿಸಬೇಕಾಗುತ್ತದೆ. 

‘ಈ ಹಂತದಲ್ಲಿ ಯಾವುದೂ ನಿಯಂತ್ರಣದಲ್ಲಿಲ್ಲ. ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದಷ್ಟು ಅಸಹಾಯಕರಾಗಿದ್ದೇವೆ’ ಎಂದು ಬಿಸಿಸಿಐ ಮೂಲಗಳು ಬೇಸರ ವ್ಯಕ್ತಪಡಿಸಿವೆ.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು