ಬುಧವಾರ, ಜನವರಿ 27, 2021
16 °C

ಬ್ರಿಸ್ಬೇನ್‌ನಲ್ಲಿ ಆಡಲು ಭಾರತ ಹಿಂದೇಟು: ವರದಿ ತಳ್ಳಿಹಾಕಿದ ಆಸಿಸ್‌ ಅಧಿಕಾರಿ

ಪಿಟಿಐ Updated:

ಅಕ್ಷರ ಗಾತ್ರ : | |

ಸಿಡ್ನಿ: ಕಟ್ಟುನಿಟ್ಟಿನ ಕ್ವಾರಂಟೈನ್‌ ನಿರ್ಬಂಧಗಳು ಜಾರಿಯಲ್ಲಿರುವುದರಿಂದ ಭಾರತ ತಂಡ ಬ್ರಿಸ್ಬೇನ್‌ನಲ್ಲಿಆಡಲು ಹಿಂಜರಿಕೆ ತೋರಿದೆ ಎಂಬ ವರದಿಗಳನ್ನು ಕ್ರಿಕೆಟ್‌ ಆಸ್ಟ್ರೇಲಿಯಾ ಚೀಫ್‌ ಎಕ್ಸಿಕ್ಯುಟಿವ್‌ ನಿಕ್‌ ಹಾಕ್ಲಿ ಸೋಮವಾರ ತಳ್ಳಿಹಾಕಿದ್ದಾರೆ.

ಕ್ವೀನ್ಸ್‌ಲ್ಯಾಂಡ್‌ನ ಕ್ವಾರಂಟೈನ್‌ ಅಗತ್ಯಗಳ ಬಗ್ಗೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಸಹಮತ ಮತ್ತು ಬೆಂಬಲವಿದೆ ಎಂದು ಅವರು ಹೇಳಿದ್ದಾರೆ.

‘ಈ ವಿಷಯದಲ್ಲಿ ನಾವು ಬಿಸಿಸಿಐನ ನಮ್ಮ ಸಹವರ್ತಿಗಳ ಜೊತೆ ನಿತ್ಯ ಸಂಪರ್ಕದಲ್ಲಿದ್ದೇವೆ’ ಎಂದು ಅವರು ವರದಿಗಾರರಿಗೆ ತಿಳಿಸಿದರು,

‘ಬೆಂಬಲ ಸೂಚಿಸಿರುವುದೊಂದನ್ನು ಬಿಟ್ಟರೆ ಬಿಸಿಸಿಐ ನಮ್ಮ ಜೊತೆ ಔಪಚಾರಿಕವಾಗಿ ಬೇರೇನೂ  ಮಾತನಾಡಿಲ್ಲ. ನಿಗದಿಪಡಿಸಿದ ವೇಳಾಪಟ್ಟಿಯ ಪ್ರಕಾರ ಎರಡೂ ತಂಡಗಳು ಆಡಲು ಬಯಸಿವೆ’ ಎಂದು ಹಾಕ್ಲಿ ತಿಳಿಸಿದ್ದಾರೆ.

ನಾಲ್ಕು ಟೆಸ್ಟ್‌ಗಳ ಬಾರ್ಡರ್‌– ಗಾವಸ್ಕರ್‌ ಟ್ರೋಫಿ ಸರಣಿಯ ಮೂರನೇ ಟೆಸ್ಟ್‌ ಸಿಡ್ನಿಯಲ್ಲಿ ಗುರುವಾರ ಆರಂಭವಾಗಲಿದೆ. ಸರಣಿ ಈಗ 1–1ರಲ್ಲಿ ಸಮನಾಗಿದೆ. ಸರಣಿಯ ಅಂತಿಮ ಟೆಸ್ಟ್‌ ಪಂದ್ಯ ಗಾಬಾದಲ್ಲಿ ಜನವರಿ 15ರಂದು ಆರಂಭವಾಗಲಿದೆ.

ಈಗಾಗಲೇ ಪ್ರವಾಸಿ ತಂಡವು ನವೆಂಬರ್‌ನಲ್ಲಿ ಆಸ್ಟ್ರೇಲಿಯಾಕ್ಕೆ ಬಂದಿಳಿದ ಮೇಲೆ ಕ್ವಾರಂಟೈನ್‌ ಅವಧಿ ಪೂರೈಸಿದೆ. ಈಗ ಕ್ವೀನ್ಸ್‌ಲ್ಯಾಂಡ್‌ನ ಕಠಿಣ ಕ್ವಾರಂಟೈನ್‌ ನಿಯಮಗಳಿಂದಾಗಿ ಅಲ್ಲಿ  ಆಡಲು ಹಿಂದೇಟು ಹಾಕುತ್ತಿರುವುದರಿಂದ ಅಂತಿಮ ಟೆಸ್ಟ್ ಭವಿಷ್ಯ ಡೋಲಾಯಮಾನವಾಗಿದೆ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿದ್ದವು. ಬ್ರಿಸ್ಬೆನ್‌, ಕ್ವೀನ್ಸ್‌ಲ್ಯಾಂಡ್‌ ಪ್ರಾಂತ್ಯಕ್ಕೆ ಸೇರುತ್ತದೆ.

ಭಾರತ ನಾಲ್ಕನೇ ಟೆಸ್ಟ್‌ ಪಂದ್ಯವನ್ನೂ ಸಿಡ್ನಿಯಲ್ಲೇ ಆಡಲು ಬಯಸಿದೆ ಎಂದು ಮೂಲಗಳನ್ನು ಹೆಸರಿಸದೇ ಮಾಡಿದ ಈ ವರದಿಯಲ್ಲಿ ತಿಳಿಸಲಾಗಿತ್ತು.

ಸಿಡ್ನಿ ನಗರವು ನ್ಯೂಸೌತ್‌ ವೇಲ್ಸ್‌ ರಾಜಧಾನಿಯಾಗಿದೆ. ಈ ಪ್ರಾಂತ್ಯದಲ್ಲಿ ಕೋವಿಡ್‌ –19 ಪ್ರಕರಣಗಳು ಹೆಚ್ಚು ಇರುವ ಕಾರಣ ನ್ಯೂಸೌತ್‌ ವೇಲ್ಸ್‌ ಜನರಿಗೆ, ಕ್ವೀನ್ಸ್‌ಲ್ಯಾಂಡ್‌ ತನ್ನ ಗಡಿ ಮುಚ್ಚಿದೆ.

ಎಲ್ಲ ಆಟಗಾರರು ಮತ್ತು ನೆರವು ಸಿಬ್ಬಂದಿಗೆ ಕೋವಿಡ್‌–19 ಪರೀಕ್ಷೆಯ ವರದಿ ನೆಗೆಟಿವ್‌ ಎಂದು ಬಂದ ನಂತರ, ಇತ್ತಂಡಗಳು ಸೋಮವಾರ ಬೆಳಿಗ್ಗೆ ಮೆಲ್ಬರ್ನ್‌ನಿಂದ ಸಿಡ್ನಿಗೆ ಪ್ರಯಾಣಿಸಿದವು.

ಭಾರತದ ಐವರು ಆಟಗಾರರಿಗೆ ಜೈವಿಕ ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸಿದ್ದಾರೆಂಬ ಆರೋಪದ ಮೇರೆಗೆ ಏಕಾಂತವಾಸ ವಿಧಿಸಿದ ಎರಡು ದಿನಗಳ ನಂತರ ಹಾಕ್ಲಿ ಹೇಳಿಕೆ ನೀಡಿದ್ದಾರೆ. ಉಪನಾಯಕ ರೋಹಿತ್‌ ಶರ್ಮಾ, ಆರಂಭ ಆಟಗಾರ ಶುಭಮನ್‌ ಗಿಲ್‌, ವಿಕೆಟ್‌ ಕೀಪರ್‌ ರಿಷಭ್‌ ಪಂತ್‌, ವೇಗಿ ನವದೀಪ್‌ ಸೈನಿ ಮತ್ತು ಬ್ಯಾಟ್ಸ್‌ಮನ್‌ ಪೃಥ್ವಿ ಶಾ ಈ ಐವರು.

ಆಟಗಾರರು ರೆಸ್ಟೊರಂಟ್‌ ಒಂದರ ಒಳಾಂಗಣದಲ್ಲಿ ಊಟ ಮಾಡುತ್ತಿದ್ದ ವಿಡಿಯೊವೊಂದನ್ನು ಅಭಿಮಾನಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ನಂತರ ಇದು ಬೆಳಕಿಗೆ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಬಿಸಿಸಿಐ ಜೊತೆ ಜಂಟಿಯಾಗಿ ತನಿಖೆ ನಡೆಸುವುದಾಗಿ ಕ್ರಿಕೆಟ್‌ ಆಸ್ಟ್ರೇಲಿಯಾ ತಿಳಿಸಿತ್ತು.

‘ನಮ್ಮ ಕೈಯ್ಯಲ್ಲಿ ಇಲ್ಲದ ವಿಷಯಗಳಿಗೆ ತಲೆಕೆಡಿಸುವುದನ್ನು ಬಿಟ್ಟು ಮೈದಾನಕ್ಕೆ ಹೋಗಿ ಆಟವಾಡಬೇಕು’ ಎಂದು ಆಸ್ಟ್ರೇಲಿಯಾದ ಹಿರಿಯ ಸ್ಪಿನ್ನರ್‌ ನೇಥನ್‌ ಲಯನ್‌ ಉಭಯ ತಂಡಗಳ ಆಟಗಾರರಿಗೆ ಬೆಳಿಗ್ಗೆ ಕರೆ ನೀಡಿದ್ದರು.

‘ಸಿಡ್ನಿ ಟೆಸ್ಟ್‌ಗೆ ಸಜ್ಜಾಗಿದ್ದೇವೆ ಎಂಬುದನ್ನು ನಾವು ಖಚಿತಪಡಿಸಿಕೊಳ್ಳೋಣ. ಎಲ್ಲರೂ ಈಗ ಗಾಬಾ ಟೆಸ್ಟ್‌ ಬಗ್ಗೆ ಮಾತನಾಡಲು ತೊಡಗಿದ್ದಾರೆ. ಆದರೆ ಇನ್ನು ಎರಡು ದಿನಗಳಲ್ಲಿ ಸಿಡ್ನಿಯಲ್ಲಿ ಮಹತ್ವದ ಟೆಸ್ಟ್‌ ಪಂದ್ಯ ನಡೆಯಲಿದೆ. ನಮ್ಮ ಸಂಪೂರ್ಣ ಗಮನ ಅದರತ್ತ ಇರಬೇಕು’ ಎಂದಿದ್ದಾರೆ ಲಯನ್‌.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು