ಜಯ್ ಶಾ ವಿರುದ್ಧ ಪಿಸಿಬಿ ಮುಖ್ಯಸ್ಥ ಸೇಥಿ ಮಾಡಿರುವ ಆರೋಪ ತಳ್ಳಿ ಹಾಕಿದ ಎಸಿಸಿ

ಕ್ವಾಲಾಲಂಪುರ: ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಖ್ಯಸ್ಥ ಹಾಗೂ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ನಜಮ್ ಸೇಥಿ ಮಾಡಿರುವ ಆರೋಪಗಳನ್ನು ಎಸಿಸಿ ತಳ್ಳಿಹಾಕಿದೆ.
‘ಜಯ್ ಶಾ ಅವರು ಪ್ರಕಟಿಸಿರುವ ಎಸಿಸಿಯ ಎರಡು ವರ್ಷದ ಕ್ರಿಕೆಟ್ ವೇಳಾಪಟ್ಟಿಯು ಏಕಪಕ್ಷೀಯವಾಗಿದೆ’ ಎಂದು ಸೇಥಿ ಗುರುವಾರ ಆರೋಪಿಸಿದ್ದರು.
‘ಪಿಸಿಬಿ ಸೇರಿದಂತೆ ಎಸಿಸಿಯ ಎಲ್ಲ ಸದಸ್ಯ ರಾಷ್ಟ್ರಗಳಿಗೆ ಎರಡು ವರ್ಷಗಳ ವೇಳಾಪಟ್ಟಿಯನ್ನು ಡಿಸೆಂಬರ್ 22 ರಂದೇ ಕಳುಹಿಸಲಾಗಿತ್ತು. ಪಿಸಿಬಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ’ ಎಂದು ಎಸಿಸಿ ಶುಕ್ರವಾರ ಹೊರಡಿಸಿದ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
‘ಪಿಸಿಬಿ ಮುಖ್ಯಸ್ಥರು ಎಸಿಸಿ ಅಧ್ಯಕ್ಷರ ವಿರುದ್ಧ ಮಾಡಿರುವ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಕ್ರಿಕೆಟ್ ವೇಳಾಪಟ್ಟಿ ಸಿದ್ಧಪಡಿಸುವ ವೇಳೆ ಎಸಿಸಿಯು ಸರಿಯಾದ ಪ್ರಕ್ರಿಯೆ ಅನುಸರಿಸಿದೆ’ ಎಂದಿದೆ.
ಜಯ್ ಶಾ ಅವರು 2023 ಮತ್ತು 2024ರಲ್ಲಿ ಆಯೋಜಿಸಲಾಗಿರುವ ಕ್ರಿಕೆಟ್ ಟೂರ್ನಿಗಳ ಕ್ಯಾಲೆಂಡರ್ಅನ್ನು ಗುರುವಾರ ಪ್ರಕಟಿಸಿದ್ದರು. ಇದೇ ವರ್ಷದ ಸೆಪ್ಟೆಂಬರ್ನಲ್ಲಿ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಆಯೋಜಿಸಲು ಎಸಿಸಿ ನಿರ್ಧರಿಸಿದೆ.
ಈ ಬಾರಿ ಪಾಕಿಸ್ತಾನವು ಟೂರ್ನಿಯ ಆತಿಥ್ಯವಹಿಸಲಿದೆ. ಆದರೆ, ವೇಳಾಪಟ್ಟಿಯಲ್ಲಿ ಆತಿಥೇಯ ರಾಷ್ಟ್ರ ಯಾವುದು ಎಂಬುದನ್ನು ಹೇಳಿಲ್ಲ. ಇದು ಪಿಸಿಬಿಯ ಕೋಪಕ್ಕೆ ಕಾರಣ.
ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಲ್ಲಿ ನಡೆದರೆ ಭಾರತ ತಂಡವನ್ನು ಅಲ್ಲಿಗೆ ಕಳುಹಿಸುವುದಿಲ್ಲ ಎಂದು ಶಾ ಅವರು ಈ ಹಿಂದೆಯೇ ಹೇಳಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.