ಬುಧವಾರ, ಮೇ 19, 2021
22 °C

ಕ್ರಿಕೆಟಿಗರ ಕುಕ್ಕಿಂಗ್‌ ಡೈರಿ

ಪ್ರಮೋದ‌ Updated:

ಅಕ್ಷರ ಗಾತ್ರ : | |

ಲಾಕ್‌ಡೌನ್‌ ಕರ್ನಾಟಕದ ಕ್ರಿಕೆಟಿಗರ ದಿನಚರಿಯನ್ನೇ ಬದಲಿಸಿದೆ. ಒಂದೂ ದಿನ ಅಡುಗೆ ಮನೆಯತ್ತ ಸುಳಿಯದವರು ಲಾಕ್‌ಡೌನ್‌ ಅವಧಿಯಲ್ಲಿ ದಕ್ಷಿಣ ಹಾಗೂ ಉತ್ತರ ಭಾರತದ ತರಹೇವಾರಿ ತಿನಿಸುಗಳನ್ನು ತಯಾರಿಸಿ ಮನೆ ಮಂದಿಗೆಲ್ಲ ಉಣಬಡಿಸಿದ್ದಾರೆ. ಕೆಲ ಕ್ರಿಕೆಟಿಗರು ಅಂತರ್ಜಾಲದ ನೆರವಿನಿಂದ ಅಡುಗೆ ಮಾಡುವುದನ್ನು ಕಲಿತರೆ, ಇನ್ನೂ ಕೆಲವರಿಗೆ ಅವರ ಪತ್ನಿಯರೇ ‘ಕುಕ್ಕಿಂಗ್‌ ಪಾಠ’ ಹೇಳಿಕೊಟ್ಟಿದ್ದಾರೆ.

42 ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯಗಳನ್ನಾಡಿರುವ ಆಫ್‌ ಸ್ಪಿನ್ನರ್‌ ಬೆಂಗಳೂರಿನ ಕೃಷ್ಣಪ್ಪ ಗೌತಮ್‌ ಲಾಕ್‌ಡೌನ್‌ ಅವಧಿಯಲ್ಲಿ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ) ನಡೆಸಿದ್ದ ಆನ್‌ಲೈನ್‌ ತರಬೇತಿಗಳಲ್ಲಿ ಪಾಲ್ಗೊಂಡಿದ್ದರು. ಟ್ರೈನರ್‌ನಿಂದ ಸಲಹೆಗಳನ್ನು ಪಡೆದು ಫಿಟ್‌ನೆಸ್‌ಗಾಗಿ ಮನೆಯಲ್ಲಿ ವ್ಯಾಯಾಮ ಮಾಡುತ್ತಿದ್ದರು. ಮಟನ್‌ ಕರಿ ಮತ್ತು ಉತ್ತರ ಭಾರತದ ತಿನಿಸುಗಳನ್ನು ಮಾಡುವುದನ್ನು ಕಲಿತುಕೊಂಡಿದ್ದಾರೆ.

‘ಅಡುಗೆ ಮಾಡಲು ಮೊದಲಿನಿಂದಲೂ ಆಸಕ್ತಿಯಿತ್ತು. ಆದರೆ ಕ್ರಿಕೆಟ್‌ ಟೂರ್ನಿಗಳ ಓಡಾಟದಲ್ಲಿ ಅಡುಗೆ ಮನೆಯತ್ತ ಹೋಗಲು ಆಗುತ್ತಿರಲಿಲ್ಲ. ಲಾಕ್‌ಡೌನ್‌ನಿಂದಾಗಿ ಹೊಸ ಅಡುಗೆ ಕಲಿತೆ. ಮನೆಯವರ ಜೊತೆ ಸಮಯ ಕಳೆಯಲು ಬಹಳ ವರ್ಷಗಳ ಬಳಿಕ ಅವಕಾಶ ಸಿಕ್ಕಿತು’ ಎನ್ನುತ್ತಾರೆ ಗೌತಮ್‌.

ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದಲ್ಲಿದ್ದ ಹಾಗೂ ರಾಜ್ಯದ ಪರ ಎಂಟು ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿರುವ ಹುಬ್ಬಳ್ಳಿಯ ಪವನ್‌ ದೇಶಪಾಂಡೆ ಲಾಕ್‌ಡೌನ್‌ ಕಾರಣಕ್ಕೆ ಇಷ್ಟು ದಿನ ಬೆಂಗಳೂರಿನಲ್ಲಿದ್ದರು. ಈಗ ಹುಬ್ಬಳ್ಳಿಗೆ ಬಂದಿದ್ದಾರೆ. ಮನೆಯಲ್ಲಿಯೇ ಜಿಮ್‌ ಮಾಡುತ್ತಿದ್ದರು. ಅಪಾರ್ಟ್‌ಮೆಂಟ್‌ನ ಮೆಟ್ಟಿಲುಗಳನ್ನು ಹತ್ತಿ, ಇಳಿಯುವ ಮೂಲಕ ಫಿಟ್‌ನೆಸ್‌ಗಾಗಿ ಬೆವರು ಸುರಿಸುತ್ತಿದ್ದಾರೆ.

ಮನೆಯಲ್ಲಿದ್ದ ಕಾರಣ ಕಡಾಯಿ ಪನ್ನೀರ್‌, ತಂದೂರಿ, ಪನ್ನೀರ್‌ ಟಿಕ್ಕಾ, ವೆಜಿಟೇಬಲ್‌ ಬಿರಿಯಾನಿ ಹೀಗೆ ಅನೇಕ ತಿನಿಸುಗಳನ್ನು ಮಾಡುವುದನ್ನು ಕಲಿತೆ. ಉತ್ತರ ಭಾರತದ ತಿನಿಸು ತಯಾರಿಸಲು ಬರುತ್ತಿರಲಿಲ್ಲ. ಪತ್ನಿ ಶ್ರೀದೇವಿ ಪಾಟೀಲ ಎಲ್ಲವನ್ನೂ ಹೇಳಿಕೊಟ್ಟರು ಎಂದರು ಪವನ್‌.

ದೇಶಿ ಟೂರ್ನಿಗಳಲ್ಲಿ ವಿದರ್ಭ ತಂಡದ ಪರ ಆಡುವ ದಾವಣಗೆರೆಯ ಗಣೇಶ್‌ ಸತೀಶ್‌ ಅವರಿಗೆ ಮದುವೆಯಾದ ಬಳಿಕ ಪತ್ನಿ ಕೀರ್ತನಾ ಜೊತೆ ಸಮಯ ಕಳೆಯಲು ಇಷ್ಟೊಂದು ಅವಕಾಶ ಸಿಕ್ಕಿದ್ದು ಇದೇ ಮೊದಲ ಸಲವಂತೆ. ಟ್ರೈನರ್‌ ಅಭಿಷೇಕ್‌ ಜಗನ್‌ ಜೊತೆ ಸಲಹೆಗಳನ್ನು ಪಡೆದು ಫಿಟ್‌ನೆಸ್‌ಗಾಗಿ ಮನೆಯಲ್ಲೇ ವ್ಯಾಯಾಮ ಮಾಡಿದ್ದಾರೆ.

‘ಕ್ರಿಕೆಟ್‌ ಆಡುವ ಸಲುವಾಗಿ ಮೇಲಿಂದ ಮೇಲೆ ಪ್ರವಾಸ ಮಾಡುತ್ತಿದ್ದ ಕಾರಣ ಕುಟುಂಬದವರ ಜೊತೆ ಸಮಯ ಕಳೆಯಲು ಅವಕಾಶವೇ ಸಿಕ್ಕಿರಲಿಲ್ಲ. ಲಾಕ್‌ಡೌನ್‌ ಕಾಲದಲ್ಲಿ ಪಾಸ್ಕಾ ಮಾಡುವುದನ್ನು ಕಲಿತೆ. ಕೆಲ ತಿನಿಸುಗಳನ್ನು ಪತ್ನಿ ಹೇಳಿಕೊಟ್ಟರೆ, ಇನ್ನೂ ಕೆಲವನ್ನು ಇಂಟರ್ನೆಂಟ್‌ ಮೂಲಕ ತಿಳಿದುಕೊಂಡೆ’ ಎಂದರು ಗಣೇಶ್. ಬಲಗೈ ಬ್ಯಾಟ್ಸ್‌ಮನ್‌ ಆಗಿರುವ ಅವರು ಕರ್ನಾಟಕ ಹಾಗೂ ವಿದರ್ಭ ಸೇರಿ 98 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ.

ನಾಲ್ಕು ಅಂತರರಾಷ್ಟ್ರೀಯ ಟೆಸ್ಟ್‌, ಮೂರು ಏಕದಿನ ಮತ್ತು 103 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಬೆಂಗಳೂರಿನ ಅಭಿಮನ್ಯು ಮಿಥುನ್‌ ಲಾಕ್‌ಡೌನ್‌ನಿಂದ ಚೆನ್ನೈನಲ್ಲಿ ಬಂದಿಯಾಗಿದ್ದಾರೆ. ಈ ಅವಧಿಯಲ್ಲೂ ಬೆಳಿಗ್ಗೆ ಐದು ಗಂಟೆಗೆ ಎದ್ದು ಮನೆಯಲ್ಲಿ ಫಿಟ್‌ನೆಸ್‌, ಬೌಲಿಂಗ್‌ ಡ್ರಿಲ್‌ ಮಾಡಿದ್ದಾರೆ.

‘ಕೊರೊನಾ ಬೇಗನೆ ಹೋಗುವುದಿಲ್ಲ ಎನ್ನುವುದು ಗೊತ್ತಿತ್ತು. ಆದ್ದರಿಂದ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ನಿಯಮಿತವಾಗಿ ವ್ಯಾಯಾಮ ಮಾಡುತ್ತಿದ್ದೆ. ಮೊದಲು ದೀರ್ಘ ಅವಧಿಯಲ್ಲಿ ಮಾಡುತ್ತಿದ್ದ ವ್ಯಾಯಾಮವನ್ನು ಈಗ ಪರಿಣಾಮಕಾರಿಯಾಗಿ ಕಡಿಮೆ ಸಮಯದಲ್ಲಿ ಮಾಡುವುದನ್ನು ರೂಢಿಸಿಕೊಂಡಿದ್ದೇನೆ. ಮೆಂಟಲ್‌ ಟಫ್‌ನೆಸ್‌ ತರಬೇತಿಗೆ ಹೆಸರು ನೋಂದಾಯಿಸಿದ್ದೇನೆ. ಜೂನ್‌ 1ರಿಂದ ತರಗತಿ ಆರಂಭವಾಗುತ್ತವೆ’ ಎನ್ನುತ್ತಾರೆ ಬೆಂಗಳೂರಿನ ಮಿಥುನ್‌

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು