ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಟೈಯಲ್ಲಿ ಅಂತ್ಯಗೊಂಡ ಪಂದ್ಯ

Last Updated 17 ಜನವರಿ 2021, 0:45 IST
ಅಕ್ಷರ ಗಾತ್ರ

ದಾವಣಗೆರೆ: ಸಂಕ್ರಾಂತಿ ಪ್ರಯುಕ್ತ ಮಯೂರ ಕ್ರಿಕೆಟ್ ಕ್ಲಬ್ ಆಯೋಜಿಸಿರುವ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ಬಾಪೂಜಿ ಎಂಬಿಎ ಕಾಲೇಜು ಮೈದಾನದ ಟರ್ಫ್ ಅಂಗಳದಲ್ಲಿ ನಡೆದ ಮೂರನೇ ದಿನದ ಪಂದ್ಯದಲ್ಲಿ ಚಿತ್ರದುರ್ಗದ ಮದಕರಿ ಅಕಾಡೆಮಿ ಮತ್ತು ಬಳ್ಳಾರಿಯ ಡಾ.ಮಸ್ತಿಕರ್ ತಂಡಗಳ ನಡುವಿನ ಪಂದ್ಯ ಟೈನಲ್ಲಿ ಅಂತ್ಯಗೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ ಬಳ್ಳಾರಿಯ ‘ಡಾ.ಮಸ್ತಿಕರ್ ಬಾಯ್ಸ್’ ನಿಗದಿತ 25 ಓವರುಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 142 ರನ್ ಪೇರಿಸಿತು. ಮಹೇಂದರ್ ಮತ್ತು ಶುಭಂ ಸಿಂಗ್ ತಲಾ 31 ರನ್ ದಾಖಲಿಸಿದರು.

ಈ ಮೊತ್ತ ಬೆನ್ನತ್ತಿದ ಚಿತ್ರದುರ್ಗ ‘ಮದಕರಿ ಕ್ರಿಕೆಟ್ ಕ್ಲಬ್ ಬಾಯ್ಸ್’ ಕೂಡ ನಿಗದಿತ 25 ಓವರ್‌ಗಳಲ್ಲಿ 142 ರನ್‌ಗಳಿಸಿತು. ಗೆಲುವಿಗಾಗಿ ಅಂತಿಮ ಆರು ಎಸೆತಗಳಲ್ಲಿ 9 ರನ್ನುಗಳು ಬೇಕಿದ್ದವು. ಆದರೆ, 8 ರನ್ನುಗಳು ಮಾತ್ರ ಬಂದ ಹಿನ್ನೆಲೆಯಲ್ಲಿ ಪಂದ್ಯ ಟೈ ಆಯಿತು. ಉಭಯ ತಂಡಗಳು ತಲಾ 1 ಅಂಕ ಪಡೆದವು. ಮದಕರಿ ಕ್ರಿಕೆಟ್ ಅಕಾಡೆಮಿಯ ಪ್ರೀತಂ 66 ಬಾಲುಗಳಲ್ಲಿ 71 ರನ್ ಚಚ್ಚಿದರು. ಇದರಲ್ಲಿ 8 ಆಕರ್ಷಕ ಬೌಂಡರಿಗಳು ಸೇರಿವೆ.

ಬೆಳಗಿನ ಪಂದ್ಯದಲ್ಲಿ ದಾವಣಗೆರೆಯ ಯುನೈಟಡ್ ಕ್ರಿಕೆಟ್ ಅಕಾಡೆಮಿ ಮತ್ತು ದಾವಣಗೆರೆಯ ಕ್ರಿಕೆಟ್ ಅಕಾಡೆಮಿ ನಡುವೆ ಪಂದ್ಯದಲ್ಲಿ ಯುನೈಟೆಡ್ ಹುಡುಗರು 126 ರನ್ ಪೇರಿಸಿದರು. ಅಂಬರಿಷ್ 29 ಬಾಲ್‌ಗಳಲ್ಲಿ 35, ಅಕ್ಷಯ್ 24 ರನ್‌ಗಳಿಸಿದರು. ದಾವಣಗೆರೆ ಕ್ರಿಕೆಟ್ ಅಕಾಡೆಮಿ 9 ವಿಕೆಟ್‌ಗಳ ನಷ್ಕಕ್ಕೆ 111 ರನ್ ಗಳಿಸಿ 15 ರನ್ನುಗಳ ಅಂತರದಲ್ಲಿ ಸೋಲು ಕಂಡಿತು. ಆದರ್ಶ ಪಾಟೀಲ್ 5 ಓವರುಗಳಲ್ಲಿ 20 ರನ್ ನೀಡಿ 2 ವಿಕೆಟ್ ಕಿತ್ತರು.

ಎರಡನೇ ಪಂದ್ಯದಲ್ಲಿ ತುಮಕೂರಿನ ಕ್ರಿಕೆಟ್ ಅಕಾಡೆಮಿ ಮತ್ತು ದಾವಣಗೆರೆಯ ವೀನಸ್ ಕ್ರಿಕೆಟ್ ಅಕಾಡೆಮಿ ಮಧ್ಯೆ ನಡೆದ ಹಣಾಹಣಿಯಲ್ಲಿ ತುಮಕೂರು ತಂಡ 25 ಓವರ್‌ಗಳಲ್ಲಿ 205 ರನ್ನುಗಳ ಉತ್ತಮ ಮೊತ್ತ ಕಲೆ ಹಾಕಿತು. ಇದಕ್ಕೆ ಪ್ರತಿಯಾಗಿ ದಾವಣಗೆರೆ ವೀನಸ್ ತಂಡ 6 ವಿಕೆಟ್‌ಗಳ ನಷ್ಟಕ್ಕೆ 150 ರನ್‌ಗಳಿಸಿ ಸೋಲು ಕಂಡಿತು. ವೀನಸ್ ಪರವಾಗಿ ಅಮೋಘ 52 ಗಳಿಸಿದರೆ ಬೌಲಿಂಗ್ ವಿಭಾಗದಲ್ಲಿ ತುಮಕೂರಿನ ಋಷಿ ಅರ್ಜುನ್ 5 ಓವರ್‌ಗಳಲ್ಲಿ 3 ವಿಕೆಟ್‌ ಗಳಿಸಿದರು ಎಂದು ಟೂರ್ನಿಯ ಆಯೋಜಕರಾದ ದಿನೇಶ್ ಕೆ.ಶೆಟ್ಟಿ, ಹುಚ್ಚವ್ವನಹಳ್ಳಿ ಮಂಜುನಾಥ್,ಎಲ್.ಪ್ರಕಾಶ್, ಬಸವರಾಜ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT