ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಪೈರ್‌ಗಳೂ ಮನುಷ್ಯರೇ : ಕಿವೀಸ್‌ ಕೋಚ್‌ ಸ್ಟೀಡ್‌

ನಿಯಮಗಳ ಚರ್ಚೆ ಸಂದರ್ಭದಲ್ಲೇ ಹೇಳಿಕೆ
Last Updated 16 ಜುಲೈ 2019, 18:37 IST
ಅಕ್ಷರ ಗಾತ್ರ

ವೆಲಿಂಗ್ಟನ್: ಅಂಪೈರ್‌ಗಳ ತಪ್ಪಿನಿಂದಾಗಿ ವಿಶ್ವಕಪ್‌ ನ್ಯೂಜಿಲೆಂಡ್‌ ಕೈಜಾರಲು ಕಾರಣವಾಯಿತೆಂಬ ಚರ್ಚೆಗೆ ಕೊನೆಹಾಡುವ ರೀತಿ ಮಾತನಾಡಿರುವ ಕಿವೀಸ್‌ ಕೋಚ್‌ ಗ್ಯಾರಿ ಸ್ಟೀಡ್‌ ಅವರು, ‘ಅಂಪೈರ್‌ಗಳೂ ಮನುಷ್ಯರೇ. ಫಲಿತಾಂಶವನ್ನು ಹೇಗೂ ಬದಲಾಯಿಸುವಂತಿರಲಿಲ್ಲ’ ಎಂದು ಹೇಳಿದ್ದಾರೆ.

ಲಾರ್ಡ್ಸ್‌ನಲ್ಲಿ ಭಾನುವಾರ ನಡೆದ ಫೈನಲ್‌ ಪಂದ್ಯ ಟೈ ಆಗಿತ್ತು. ಮೊದಲ ಬಾರಿ ಟೈಬ್ರೇಕರ್‌ ರೀತಿಯ ‘ಸೂಪರ್‌ ಓವರ್‌’ ಕೂಡ ನಾಟಕೀಯ ರೀತಿ ಟೈ ಕಂಡಿದ್ದ ಕಾರಣ ಬೌಂಡರಿಗಳ ನಿಯಮ ಅನ್ವಯಿಸಿ ಇಂಗ್ಲೆಂಡ್‌ ತಂಡ ವಿಜೇತ ಎಂದು ಘೋಷಿಸಲಾಗಿತ್ತು.

ಇಂಗ್ಲೆಂಡ್‌ ಇನಿಂಗ್ಸ್‌ನ ಕೊನೆಯ ಓವರ್‌ ವೇಳೆ ಬೆನ್‌ ಸ್ಟೋಕ್ಸ್‌ ಅವರು ಎರಡನೇ ರನ್‌ ಗಳಿಸುವ ವೇಳೆ ಗುಪ್ಟಿಲ್‌ ಎಸೆದ ಥ್ರೋ, ಡೈವ್‌ ಮಾಡಿದ ಅವರ ಬ್ಯಾಟಿಗೆ ತಗುಲಿ ಬೌಂಡರಿಗೆ ನುಗ್ಗಿತ್ತು. ‌ಇದಕ್ಕೆ ಆರು ರನ್‌ ನೀಡಲಾಗಿತ್ತು. ಆದರೆ ಅಂಪೈರ್‌ಗಳು ತಪ್ಪಾಗಿ ಒಂದು ಹೆಚ್ಚುವರಿ ರನ್‌ ನೀಡಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಜಿ ಅಂಪೈರ್‌ ಸೈಮನ್‌ ಟೌಫೆಲ್‌ ಅವರು ಅಭಿಪ್ರಾಯಪಟ್ಟಿದ್ದರು.

‘ಇದು ಅಂಪೈರ್‌ಗಳ ತೀರ್ಪಿನಲ್ಲಾದ ಪ್ರಮಾದ’ ಎಂದು ಹೇಳಿರುವ ಟೌಫೆಲ್‌, ಹೆಚ್ಚುವರಿ ರನ್‌ ಪಂದ್ಯದ ಭವಿಷ್ಯವನ್ನು ಬದಲಾಯಿಸುತಿತ್ತು ಎಂದು ಹೇಳುವುದು ಸರಿಯಲ್ಲ ಎಂದರು.

ಅಂಪೈರ್‌ಗಳ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿರುವ ಸ್ಟೀಡ್‌, ತಂಡದ ಸೋಲನ್ನು ತಾವು ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ.

ಬೌಂಡರಿ ಲೆಕ್ಕದ ನಿಯಮಗಳ ಬಲದಿಂದ ಇಂಗ್ಲೆಂಡ್‌ ಗೆದ್ದ ರೀತಿ, ನ್ಯೂಜಿಲೆಂಡ್‌ ಮತ್ತು ಇತರೆಡೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಆಸ್ಪದ ನೀಡಿತ್ತು. ಈ ಮಾಧ್ಯಮಗಳ ಮೂಲಕ ಕ್ರಿಕೆಟ್‌ಪ್ರಿಯರು ತಮ್ಮ ಆಕ್ರೋಶವನ್ನು ಹೊರಹಾಕಿದ್ದರು.

‘ಭವಿಷ್ಯದ ಫೈನಲ್‌ಗಳನ್ನು ಹೇಗೆ ನಿರ್ಧರಿಸಬೇಕು ಎಂಬ ಬಗ್ಗೆ ಐಸಿಸಿ ಪರಾಮರ್ಶೆ ನಡೆಸಲಿದೆ ಎಂದು ತಾವು ನಿರೀಕ್ಷಿಸುವುದಾಗಿ ಸ್ಟೀಡ್‌ ಹೇಳಿದರು. ನ್ಯೂಜಿಲೆಂಡ್‌ ಈಗೇನೂ ಮಾಡುವಂತಿಲ್ಲ ಎಂಬ ಮಾತನ್ನೂ ಅವರು ಸೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT