ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್ ಪ್ರೀಮಿಯರ್ ಲೀಗ್..!

Last Updated 24 ಮೇ 2020, 19:30 IST
ಅಕ್ಷರ ಗಾತ್ರ
ADVERTISEMENT
""
""
""
""

ಏಪ್ರಿಲ್, ಮೇ ಅವಧಿಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಸುಗ್ಗಿ ಇರುತ್ತಿತ್ತು. ಆದರೆ ಕೊರೊನಾ ಕಂಟಕದಿಂದಾಗಿ ಐಪಿಎಲ್‌ ನಡೆದಿಲ್ಲ. ಲಾಕ್‌ಡೌನ್‌ನಿಂದಾಗಿ ಕ್ರಿಕೆಟ್‌ ತಾರೆಗಳು ಮನೆಯೊಳಗೆ ಬಂಧಿಯಾಗಿದ್ದಾರೆ. ಆದರೂ ಅವರು ತಮ್ಮ ಆಭಿಮಾನಿಗಳನ್ನು ಮನರಂಜಿಸುವಲ್ಲಿ ಹಿಂದುಳಿದಿಲ್ಲ. ಇಲ್ಲಿವೆ ಒಂದಿಷ್ಟು ಝಲಕ್‌ಗಳು...

ವಿರಾಟ್ ಕೊಹ್ಲಿ

ಡೈನೋಸಾರ್ ವಿರಾಟ್ ಮತ್ತು ಚಾಹಲ್

ಕೊರೊನಾ ಕಾರಣದಿಂದ ಲಾಕ್‌ಡೌನ್ ಆರಂಭದಿಂದಲೂ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಚಟುವಟಿಕೆಯಿಂದ ಇದ್ದಾರೆ. ಇತ್ತೀಚೆಗೆ ಅವರು ಡೈನೋಸಾರ್ ನಡಿಗೆಯ ಮಾದರಿಯಲ್ಲಿ ನೃತ್ಯದ ಹೆಜ್ಜೆ ಹಾಕುವ ವಿಡಿಯೋ ವೈರಲ್ ಆಗಿದೆ. ಅದರಲ್ಲಿ ಕಾಮೆಂಟ್ ಮಾಡಿದವರಲ್ಲಿ ಯಜುವೇಂದ್ರ ಚಾಹಲ್ ಪ್ರಮುಖರು. ‘ಈ ತರಹ ನಾನು ಮಾಡಿದರೆ ಎಲ್ಲರಿಗೂ ಕಿರಿಕಿರಿ. ದೊಡ್ಡವರು ಮಾಡಿದರೆ ಚೆಂದ ಅಂತ ಲೈಕ್ ಮಾಡ್ತಾರೆ. ಇದು ನ್ಯಾಯವೇ?’ ಎಂದಿದ್ದ ಚಾಹಲ್ ಗಮನ ಸೆಳೆದಿದ್ದರು. ಆ ಮೂಲಕ ಈಚೆಗೆ ಅವರ ಟಿಕ್‌ಟಾಕ್ ವಿಡಿಯೊಗಳಿಂದ ಸಿಕ್ಕಾಪಟ್ಟೆ ಕಿರಿಕಿರಿಯಾಗುತ್ತದೆ ಎಂದು ಕ್ರಿಸ್ ಗೇಲ್, ರೋಹಿತ್ ಶರ್ಮಾ ಮತ್ತು ವಿರಾಟ್ ಕಾಲೆಳೆದಿದ್ದಕ್ಕೆ ತಿರುಗೇಟು ನೀಡಿದ್ದರು ಚಾಹಲ್.

ಬಾಹುಬಲಿ ಡೇವಿಡ್ ವಾರ್ನರ್

ಹೈದರಾಬಾದ್ ಸನ್‌ರೈಸರ್ಸ್‌ ತಂಡದಲ್ಲಿ ರನ್‌ಗಳ ಹೊಳೆ ಹರಿಸುವ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್. ಈಗ ಸಾಮಾಜಿಕ ಜಾಲತಾಣಗಳಲ್ಲಿ ದೂಳೆಬ್ಬಿಸುತ್ತಿದ್ದಾರೆ. ಅದರಲ್ಲೂ ಅವರು ಬಾಲಿವುಡ್‌ ಚಿತ್ರಗಳ ಹಾಡುಗಳಿಗೆ ತಮ್ಮ ಕುಟುಂಬದೊಂದಿಗೆ ಅದ್ಭುತವಾಗಿ ನೃತ್ಯ ಮಾಡುವ ವಿಡಿಯೊಗಳು ಸಿಕ್ಕಾಪಟ್ಟೆ ಮೆಚ್ಚುಗೆ ಗಳಿಸುತ್ತಿವೆ. ಅಕ್ಷಯ್‌ ಕುಮಾರ್ ನಟನೆಯ ಬಾಲಾ, ಸೂಪರ್ ಹಿಟ್ ಬಾಹುಬಲಿ ಚಿತ್ರಗಳ ಹಾಡುಗಳಿಗೆ ಅದೇ ರೀತಿಯ ವೇಷಭೂಷಣಗಳೊಂದಿಗೆ ವಾರ್ನರ್‌ ವಿಜೃಂಭಿಸಿದ್ದಾರೆ. ಮನೆಯಲ್ಲಿದ್ದ ಪಾತ್ರೆಗಳನ್ನೂ ಬಿಟ್ಟಿಲ್ಲ ಅವರು! ಗ್ರಾಫಿಕ್ ಡಿಜಿಟಲ್ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡಿರುವ ವಾರ್ನರ್ ಸಾಮಾಜಿಕ ಜಾಲತಾಣದ ‘ಸೂಪರ್ ಹೀರೊ’ ಆಗಿಬಿಟ್ಟಿದ್ದಾರೆ.

ಕೆವಿನ್ ಪೀಟರ್ಸನ್ ತಲೆ ತುಂಡು!

‘ಸ್ವಿಚ್ ಹಿಟ್’ ಪರಿಣತ ಇಂಗ್ಲೆಂಡ್‌ ಕ್ರಿಕೆಟಿಗ ಕೆವಿನ್ ಪೀಟರ್ಸನ್ ತಮ್ಮ ಜಾದೂ ಕಲೆಯ ಮೂಲಕ ಬೆರಗುಗೊಳಿಸಿದ್ದಾರೆ. ಟಿಕ್‌ಟಾಕ್‌ನಲ್ಲಿ ಅವರು ಮಾಡಿರುವ ವಿಡಿಯೊ ಈಗ ಸದ್ದು ಮಾಡುತ್ತಿದೆ. ತಮ್ಮ ಮನೆಯ ಮೆಟ್ಟಿಲುಗಳ ಮೇಲೆ ಕುಳಿತ ಕೆವಿನ್ ಕಟಾಂಜನಕ್ಕೆ ಕುತ್ತಿಗೆ ಒರಗಿಸುತ್ತಾರೆ. ಕೆಲ ಕ್ಷಣಗಳಲ್ಲಿ ಅವರ ದೇಹದಿಂದ ಬೇರ್ಪಡುವ ರುಂಡವು ಕಟಾಂಜನದ ಮೇಲಿನಿಂದ ಕೆಳಗೆ ಜಾರುತ್ತದೆ. ದೇಹ ಮಾತ್ರ ಇದ್ದಲ್ಲಿಯೇ ಇರುತ್ತದೆ!

ಇಂಗ್ಲೆಂಡ್‌ ಕ್ರಿಕೆಟಿಗ ಕೆವಿನ್ ಪೀಟರ್ಸನ್

ಚಂದು ಪಂಡಿತ್ ಕ್ಲಾಸ್ ನೆನಪಿಸಿಕೊಂಡ ಮಯಂಕ್

‘19 ವರ್ಷದೊಳಗಿನ ಭಾರತ ತಂಡದಲ್ಲಿದ್ದೆ. ಆಗ ಚಂದ್ರಕಾಂತ್ ಪಂಡಿತ್ ಕೋಚ್ ಆಗಿದ್ದರು. ನಾವು ದಕ್ಷಿಣ ಆಫ್ರಿಕಕ್ಕೆ ತೆರಳಿದ್ದೆವು. ನನಗೆ ಚೆಂಡುಗಳ ಮೂಟೆಯನ್ನು ನಿರ್ವಹಿಸುವ ಜವಾಬ್ದಾರಿ ಕೊಟ್ಟಿದ್ದರು. ಪಂಡಿತ್ ತುಂಬಾ ಶಿಸ್ತು ಮತ್ತು ಕಠೋರ ವ್ಯಕ್ತಿಯಾಗಿದ್ದರು. ತಾಲೀಮಿಗೆ ತೆರಳುವ ಮೊದಲ ದಿನ ಹೋಟೆಲ್‌ನಿಂದ ಕ್ರೀಡಾಂಗಣಕ್ಕೆ ತಾಲೀಮು ಮಾಡಲು ಬಂದಾಗ ಚೆಂಡಿನ ಮೂಟೆ ತರುವುದನ್ನು ಮರೆತುಬಿಟ್ಟಿದ್ದೆ. ಅದನ್ನು ಕೋಚ್‌ಗೆ ಹೇಳಿದೆ. ನೀನೊಬ್ಬನೇ ಹೋಟೆಲ್‌ಗೆ ಹೋಗಿ ತೆಗೆದುಕೊಂಡು ಬಾ. ತಡ ಮಾಡುವ ಹಂಗಿಲ್ಲ. ಓಡು ಎಂದರು. ಗೊತ್ತಿರದ ದೇಶ, ಊರು. ಹಾಗೂ ಹೀಗೂ ಟ್ಯಾಕ್ಸಿ ಮಾಡಿಕೊಂಡು ಹೋಟೆಲ್‌ಗೆ ಹೋಗಿ ಚೆಂಡಿನ ಮೂಟೆ ಹೊತ್ತುಕೊಂಡು ಬಂದೆ. ಅವತ್ತು ತಿಳಿಯಿತು ಜೀವನದಲ್ಲಿ ಯಾವುದನ್ನೂ ಮರೆಯಬಾರದು ಎಂಬ ಸತ್ಯ’ ಎಂದು ತಾವು ಕಲಿತ ಶಿಸ್ತಿನ ಪಾಠದ ಗುಟ್ಟಿನ ಬಗ್ಗೆ ಮಯಂಕ್ ಅಗರವಾಲ್ ಬಿಚ್ಚಿಟ್ಟ ಗುಟ್ಟು ಇದು. ಕಠಿಣ ವ್ಯಕ್ತಿಗಳ ಮಾರ್ಗದರ್ಶನ ಸಿಕ್ಕರೆ ನಮಗೇ ಒಳ್ಳೆಯದು ಎಂಬುದನ್ನು ಹೇಳಿದರು. ಈ ಅವಧಿಯಲ್ಲಿ ಅವರು ಬಹಳಷ್ಟು ಪುಸ್ತಕಗಳನ್ನೂ ಓದಿದ್ದಾರಂತೆ. ತಮ್ಮ ಪತ್ನಿ ಅಶಿತಾಗೂ ಬ್ಯಾಟಿಂಗ್ ಮಾಡುವುದನ್ನು ಕಲಿಸುತ್ತಿದ್ದಾರಂತೆ!

ಮಯಂಕ್ ಅಗರವಾಲ್ ಮತ್ತು ಅಶಿತಾ ಸೂದ್

ಸಚಿನ್‌ ಮುಂದೆ ಯುವಿ ಬೋಲ್ಡ್

ಬ್ಯಾಟ್‌ನಿಂದ ಚೆಂಡನ್ನು ಪುಟಿಸಬೇಕು. ಆದರೆ ಚೆಂಡು ನೆಲಕ್ಕೆ ಬೀಳುವಂತಿಲ್ಲ ಎಂದು ಯುವರಾಜ್ ಸಿಂಗ್ ಒಂದು ಚಾಲೆಂಜ್ ಆರಂಭಿಸಿದ್ದರು. ಅವರು ಸಚಿನ್‌ ಮೊದಲ ಸವಾಲು ಎಸೆದರು. ಆದರೆ, ಸಚಿನ್ ಅದಕ್ಕೆ ಸಖತ್ ತಿರುಗೇಟು ನೀಡಿದರು. ಕಣ್ಣಿಗೆ ಕಪ್ಪುಬಟ್ಟೆ ಕಟ್ಟಿಕೊಂಡು ‘ಮಾಸ್ಟರ್‌ ಬ್ಲಾಸ್ಟರ್‌’ ಯುವಿ ಹೇಳಿದಂತೆ ಚೆಂಡು ಪುಟಿಸಿದರು. ಎಲ್ಲರೂ ಬೆರಗಾದರು. ಆದರೆ, ಸಚಿನ್ ತಮ್ಮ ಕಣ್ಣಿಗೆ ಕಟ್ಟಿದ ಬಟ್ಟೆಯು ಪಾರದರ್ಶಕವಾಗಿರುವ ಗುಟ್ಟು ಬಿಟ್ಟುಕೊಟ್ಟಾಗ ಎಲ್ಲರೂ ಕ್ಲೀನ್‌ಬೌಲ್ಡ್‌ ಆಗಿದ್ದರು!

ಭಜ್ಜಿಗೆ ಅನಿಲ್ ಕುಂಬ್ಳೆ ಉತ್ತರ

ಯುವಿ ಚಾಲೆಂಜ್ ಕೈ ಬದಲಾಗುತ್ತ ಹರಭಜನ್ ಸಿಂಗ್ ಅವರಿಗೆ ತಲುಪಿತು. ಅವರು ಸ್ಪಿನ್ ದಿಗ್ಗಜ ಅನಿಲ್‌ ಕುಂಬ್ಳೆಗೆ ದಾಟಿಸಿದರು. ಅನಿಲ್ ಒಂದು ವಿಡಿಯೊ ಹಾಕಿದರು.‘ಭಜ್ಜಿ ನಿನ್ನ ಸವಾಲು ಸ್ವೀಕರಿಸಿದ್ದೇನೆ. ಆದರೆ ಸದ್ಯಕ್ಕೆ ಬ್ಯಾಟ್ ಮತ್ತು ಚೆಂಡು ಸಿಗುತ್ತಿಲ್ಲ. ಆದ್ದರಿಂದ ಟೆನಿಸ್‌ ಬಾಲ್‌ ಅನ್ನೇ ನನ್ನ ಕೈಯಲ್ಲಿ ಪುಟಿಸುತ್ತಿದ್ದೇನೆ. ನಾನು ಈ ಮೂಲಕ ವಿವಿಎಸ್ ಲಕ್ಷ್ಮಣ್, ವೀರೇಂದ್ರ ಸೆಹ್ವಾಗ್ ಮತ್ತು ನಮ್ಮ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದ ನಾಯಕ ಕೆ.ಎಲ್. ರಾಹುಲ್‌ಗೆ ಈ ಚಾಲೆಂಜ್‌ ವರ್ಗಾಯಿಸುತ್ತೇನೆ’ ಎಂದಿರುವುದು ಮೆಚ್ಚುಗೆ ಗಳಿಸಿದೆ.

ಧೋನಿ ಅಮ್ಮನ ಪ್ರೀತಿ

ಮಹೇಂದ್ರಸಿಂಗ್ ಧೋನಿಯ ನಿವೃತ್ತಿಯ ಕುರಿತು ದಿನಕ್ಕೊಬ್ಬರು ಒಂದೊಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಅವರ ಬಗ್ಗೆ ಟೀಕೆಯನ್ನೂ ಮಾಡುತ್ತಿದ್ದಾರೆ. ಆದರೆ ಧೋನಿ ಎಂದಿನಂತೆ ತಣ್ಣಗಿದ್ದಾರೆ. ತಮ್ಮ ಮಗಳು ಮತ್ತು ನೆಚ್ಚಿನ ಶ್ವಾನಗಳೊಂದಿಗೆ ರಾಂಚಿಯ ಹೊರವಲಯದ ಫಾರ್ಮ್‌ಹೌಸ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ. ಈಚೆಗೆ ಅವರು ಬಿಳಿ ಗಡ್ಡ ಮತ್ತು ದೊಗಳೆ ಟೀಶರ್ಟ್‌ನಲ್ಲಿ ಇರುವ ಚಿತ್ರವೊಂದು ಚರ್ಚೆಗೆ ಗ್ರಾಸವಾಯಿತು. ಧೋನಿಗೆ ವಯಸ್ಸಾಯಿತಾ ಎಂಬ ಚರ್ಚೆ ಅದು. ಆದಕ್ಕೂ ಅವರು ಉತ್ತರ ಕೊಡಲಿಲ್ಲ. ಆದರೆ ಅವರ ತಾಯಿ ದೇವಕಿ ಧೋನಿ, ‘ನನ್ನ ಮಗನಿಗೆ ಅಷ್ಟೇನೂ ವಯಸ್ಸಾಗಿಲ್ಲ. ತುಂಬ ಚೆನ್ನಾಗಿದ್ದಾನೆ’ ಎಂದರು. ಅಮ್ಮನ ಮುಂದೆ ಮಕ್ಕಳು ದೊಡ್ಡವರಾಗುವುದಿಲ್ಲ ಎಂಬ ಹಳೆಯ ಮಾತು ಧೋನಿ ವಿಷಯದಲ್ಲಿಯೂ ನಿಜವಾಯಿತು.

ಶ್ರೇಯಸ್ ಮತ್ತು ನಾಯಿಯ ಕ್ಯಾಚ್

ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಈಗ ಮನೆಯಲ್ಲಿಯೂ ತಮ್ಮ ಪ್ರಾಕ್ಟಿಸ್ ನಿಲ್ಲಿಸಿಲ್ಲ. ತಮ್ಮ ಮುದ್ದಿನ ಶ್ವಾನದೊಂದಿಗೆ ಭರ್ಜರಿ ಬ್ಯಾಟಿಂಗ್ ಅಭ್ಯಾಸ ಅವರದ್ದು. ಅಲ್ಲದೇ ಅವರು ನಾಯಿಗೂ ಚೆಂಡು ಕ್ಯಾಚ್ ಮಾಡುವುದನ್ನು ಕಲಿಸಿದ್ದಾರೆ!

ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್

ಯಜುವೇಂದ್ರ ಚಾಹಲ್ ‌

ತಮ್ಮ ಹುಡುಗಾಟದಿಂದ ಟೀಕೆಗೊಳಗಾದರೂ ಸ್ಪಿನ್ನರ್ ಚಾಹಲ್ ತಮ್ಮ ವರಸೆ ಬದಲಿಸಿಲ್ಲ. ತಮ್ಮ ನೆಚ್ಚಿನ ಚೆಸ್ ಆಡುವುದರಲ್ಲಿಯೂ ಹಿಂದೆ ಬಿದ್ದಿಲ್ಲ. ಈಚೆಗೆ ಚೆಸ್ ದಿಗ್ಗಜರೊಂದಿಗೆ ಆನ್‌ಲೈನ್ ಚೆಸ್ ಆಡಿ ದೇಣಿಗೆ ಸಂಗ್ರಹಿಸಿ ಸಂತ್ರಸ್ತರ ನಿಧಿಗೆ ನೀಡಿದ್ದರು.

ಡಿಕೆಯ ರಜನಿ ಸ್ಟೈಲ್

ಸೂಪರ್‌ಸ್ಟಾರ್ ರಜನಿಕಾಂತ್ ಅವರು ತಂಪುಕನ್ನಡಕ ಧರಿಸುವ ಶೈಲಿ ಚಿತ್ರರಸಿಕರಿಗೆ ಚಿರಪರಿಚಿತ. ಅದನ್ನು ಅನುಕರಿಸುವ ಪ್ರಯತ್ನ ಬಹಳಷ್ಟು ಜನ ಮಾಡಿದ್ದಾರೆ. ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಕೂಡ ಇಂಥಹದೊಂದು ಪ್ರಯತ್ನ ಮಾಡಿದ್ದಾರೆ. ಬಹುತೇಕ ಯಶಸ್ವಿಯೂ ಆಗಿದ್ದಾರೆ.

* ಚಿತ್ರಗಳು–ಮಾಹಿತಿ: ಟ್ವಿಟರ್, ಇನ್ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ಟಿಕ್‌ಟಾಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT