ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ವಿರುದ್ಧ ಸರಣಿ ವೇಳೆ ಪ್ರೇಕ್ಷಕರಿಗೆ ಅವಕಾಶ: ವಾರ್ನರ್‌ ವಿಶ್ವಾಸ

ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾಕ್ಕೆ ಪ್ರವಾಸ
Last Updated 20 ಸೆಪ್ಟೆಂಬರ್ 2020, 8:26 IST
ಅಕ್ಷರ ಗಾತ್ರ

ದುಬೈ : ಈ ವರ್ಷದ ಕೊನೆಯಲ್ಲಿ ಭಾರತ ತಂಡದ ಬಹುನಿರೀಕ್ಷಿತ ಆಸ್ಟ್ರೇಲಿಯಾ ಪ್ರವಾಸದ ವೇಳೆ, ಕ್ರೀಡಾಂಗಣಕ್ಕೆ ಶೇ 25ರಷ್ಟಾದರೂ ಪ್ರೇಕ್ಷಕರಿಗೆ ಪ್ರವೇಶ ನೀಡಬಹುದೆಂಬ ವಿಶ್ವಾಸ ತಮ್ಮದು ಎಂದು ಆರಂಭ ಆಟಗಾರ ಡೇವಿಡ್‌ ವಾರ್ನರ್‌ ಹೇಳಿದ್ದಾರೆ.

‘ಎರಡು ಪ್ರಮುಖ ಎದುರಾಳಿ ತಂಡಗಳ ನಡುವಣ ಸರಣಿಯನ್ನು ಕಾತರದಿಂದ ಎದುರು ನೋಡುತ್ತಿದ್ದೇನೆ. ಕೆಲವು ಫುಟ್‌ಬಾಲ್‌ ಪಂದ್ಯಗಳ ರೀತಿ ಇಲ್ಲೂ ಕನಿಷ್ಠ ಶೇ 25ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಬಹುದೆಂಬ ವಿಶ್ವಾಸ ನನ್ನದು. ಆ ರೀತಿ ಅವಕಾಶ ಕೊಟ್ಟರೆ ಅತ್ಯಂತ ಖುಷಿಯಾಗುತ್ತದೆ’ ಎಂದು ಆಸ್ಟ್ರೇಲಿಯಾದ ಆಕ್ರಮಣಕಾರಿ ಎಡಗೈ ಆಟಗಾರ ಆನ್‌ಲೈನ್‌ ಮಾಧ್ಯಮ ಸಂವಾದದಲ್ಲಿ ಭಾನುವಾರ ತಿಳಿಸಿದ್ದಾರೆ.‌

ನಗರದ ಹೆಗ್ಗುರುತಿನ ಕ್ರೀಡಾ ಚಟುಟವಟಿಕೆಯಾದ– ಬಾಕ್ಸಿಂಗ್‌ ಡೇ ಟೆಸ್ಟ್‌ ಮತ್ತು ಆಸ್ಟ್ರೇಲಿಯಾ ಓಪನ್‌ಗೆ ಪ್ರೇಕ್ಷಕರಿಗೆ ಅವಕಾಶ ನೀಡುವ ಸಂಬಂಧ ಕ್ರಿಕೆಟ್‌ ಆಸ್ಟ್ರೇಲಿಯಾ ಮತ್ತು ಟೆನಿಸ್‌ ಆಸ್ಟ್ರೇಲಿಯಾ ಜೊತೆ ತಮ್ಮ ಸರ್ಕಾರ ಮಾತುಕತೆ ನಡೆಸಿರುವುದಾಗಿ ವಿಕ್ಟೋರಿಯಾ ಸ್ಟೇಟ್‌ನ ಪ್ರಧಾನಿ ಡೇನಿಯಲ್‌ ಆ್ಯಂಡ್ರೂಸ್‌ ಈ ವಾರದ ಆರಂಭದಲ್ಲಿ ತಿಳಿಸಿದ್ದರು.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ನ 13ನೇ ಆವೃತ್ತಿಯಲ್ಲಿ ಆಡಲು ವಾರ್ನರ್‌ ಯುಎಇಗೆ ಬಂದಿದ್ದಾರೆ. ಅವರು ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಕಪ್ತಾನರಾಗಿದ್ದಾರೆ.

ಐಪಿಎಲ್‌ನಲ್ಲಿ ಪ್ರಸಕ್ತ ಎದುರಾಗಿರುವ ಸವಾಲಿನ ಬಗ್ಗೆ ಮಾತನಾಡಿದ ವಾರ್ನರ್‌, ‘ಬಯೊ ಸೆಕ್ಯೂರ್‌ ಬಬಲ್‌ ವ್ಯವಸ್ಥೆ ಮತ್ತು ಖಾಲಿ ಕ್ರೀಡಾಂಗಣದಲ್ಲಿ ಆಡುವುದು ವಿಭಿನ್ನ ರೀತಿಯ ಪರಿಸ್ಥಿತಿ, ಜೊತೆಗೆ ಕಷ್ಟದ ಕೆಲಸ ಕೂಡ’ ಎಂದಿದ್ದಾರೆ.

ಕೋವಿಡ್‌ –19 ಸಾಂಕ್ರಾಮಿಕದ ಕಾರಣ ಆಟಗಾರರು ಮತ್ತು ನೆರವು ಸಿಬ್ಬಂದಿ ಆರೋಗ್ಯ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸಬೇಕಾಗಿದೆ. ಐದು ದಿನಗಳಿಗೊಮ್ಮೆ ಸೋಂಕು ಪರೀಕ್ಷೆಗೂ ಒಳಪಡಬೇಕಾಗುತ್ತದೆ.

‘ಇಷ್ಟೊಂದು ಅವಧಿಗೆ ಕುಟುಂಬ ಸದಸ್ಯರಿಂದ ದೂರದಲ್ಲಿರುವುದು ಕೆಲವರಿಗೆ ಕಷ್ಟ. ಆದರೆ ಪಂದ್ಯಗಳು ಆರಂಭವಾದ ನಂತರ ಆಟಗಾರರ ಧ್ಯಾನ ಆಟದ ಕಡೆಗೇ ಇರುತ್ತದೆ. ಬಿಸಿಸಿಐ ಮತ್ತು ಆತಿಥೇಯರು ಐಪಿಎಲ್‌ ಹಮ್ಮಿಕೊಳ್ಳುವ ಮೂಲಕ ಒಳ್ಳೆಯ ಕೆಲಸ ಮಾಡಿದ್ದಾರೆ’ ಎಂದು ವಾರ್ನರ್ ಹೇಳಿದ್ದಾರೆ.

‘ಎಲ್ಲ ಆಟಗಾರರು ಚುರುಕಾಗಿರಬೇಕಾಗುತ್ತದೆ. ಹೊಸ ಸವಾಲಿಗೆ ಹೊಂದಿಕೊಳ್ಳಲು ಮಾನಸಿಕವಾಗಿ ತಯಾರಾಗಬೇಕಾಗುತ್ತದೆ’ ಎಂದಿದ್ದಾರೆ ಅವರು. ಐಪಿಎಲ್‌ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಅತ್ಯಧಿಕ ರನ್‌ ಹೊಡೆದವರಲ್ಲಿ 33 ವರ್ಷ ವಯಸ್ಸಿನ ವಾರ್ನರ್ ಸಹ ಒಬ್ಬರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT