ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಎದುರಿನ ಪಿಂಕ್ ಬಾಲ್ ಟೆಸ್ಟ್: ಡ್ರಾ ಪಂದ್ಯದಲ್ಲಿ ಬೆಳಗಿದ ಭಾರತ

ಮಿಂಚಿದ ಬೌಲರ್‌ಗಳು
Last Updated 3 ಅಕ್ಟೋಬರ್ 2021, 13:23 IST
ಅಕ್ಷರ ಗಾತ್ರ

ಗೋಲ್ಡ್‌ಕೋಸ್ಟ್‌: ಭಾರತ ಹಾಗೂ ಆಸ್ಟ್ರೇಲಿಯಾ ಮಹಿಳೆಯರ ನಡುವಣ ಪಿಂಕ್‌ಬಾಲ್‌ ಟೆಸ್ಟ್ ನಿರೀಕ್ಷೆಯಂತೆ ಡ್ರಾನಲ್ಲಿ ಅಂತ್ಯವಾಯಿತು. ಆದರೆ ಪ್ರತಿಕೂಲ ಹವಾಮಾನ ಕಾಡಿದ ಪಂದ್ಯದುದ್ದಕ್ಕೂ ಭಾರತ ಪ್ರಾಬಲ್ಯ ಮೆರೆದದ್ದು ಸಾಬೀತಾಯಿತು.

ಶನಿವಾರ ಮೊದಲ ಇನಿಂಗ್ಸ್‌ನಲ್ಲಿ 143 ರನ್‌ಗೆ ಮೂರು ವಿಕೆಟ್‌ಗ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ಆಟಗಾರ್ತಿಯರು ನಾಲ್ಕನೇ ಮತ್ತು ಪಂದ್ಯದ ಕೊನೆಯ ದಿನವಾದ ಭಾನುವಾರ ಆತ್ಮವಿಶ್ವಾಸದಿಂದಲೇ ಬ್ಯಾಟಿಂಗ್ ಆರಂಭಿಸಿದರು. ಎಲಿಸ್ ಪೆರಿ (ಔಟಾಗದೆ 68) ಹಾಗೂ ಆ್ಯಶ್ಲಿ ಗಾರ್ಡನರ್‌ (51) ಅವರಿಂದ 89 ರನ್‌ಗಳ ಜೊತೆಯಾಟ ಮೂಡಿಬಂತು. ಬಳಿಕ ಭಾರತದ ವೇಗಿಗಳು ಮಿಂಚಿದರು.

ದೀಪ್ತಿ ಶರ್ಮಾ (36ಕ್ಕೆ 2) ಹಾಗೂ ಮೇಘನಾ ಸಿಂಗ್‌ (54ಕ್ಕೆ 2) ಆಸ್ಟ್ರೇಲಿಯಾ ಬ್ಯಾಟರ್‌ಗಳನ್ನು ಕಾಡಿದರು. ಮೇಘನಾ ಅವರ ಔಟ್‌ಸ್ವಿಂಗರ್ ಎಸೆತಗಳು ಅದ್ಭುತವಾಗಿದ್ದವು.

208 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿದ್ದ ಆತಿಥೇಯ ತಂಡ 241 ರನ್ ಆಗುವಷ್ಟರಲ್ಲಿ ಒಂಬತ್ತು ವಿಕೆಟ್‌ಗಳನ್ನು ಕೈಚೆಲ್ಲಿತು. ಈ ಹಂತದಲ್ಲಿ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಇನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವ ಅಚ್ಚರಿಯ ನಿರ್ಧಾರ ತಳೆದರು.

ಮೊದಲ ಇನಿಂಗ್ಸ್‌ನಲ್ಲಿ 377 ರನ್ ಗಳಿಸಿದ್ದ ಭಾರತ, ಎರಡನೇ ಇನಿಂಗ್ಸ್‌ನಲ್ಲಿ 35 ಓವರ್‌ಗಳನ್ನು ಆಡಿ 3 ವಿಕೆಟ್‌ 135 ರನ್‌ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಶಫಾಲಿ ವರ್ಮಾ 91 ಎಸೆತಗಳಲ್ಲಿ 52 ರನ್ ಗಳಿಸಿದರೆ, ಪೂನಂ 62 ಎಸೆತಗಳಲ್ಲಿ ಔಟಾಗದೆ 41 ರನ್ ಕಲೆಹಾಕಿದರು.

ಎರಡನೇ ಇನಿಂಗ್ಸ್‌ನಲ್ಲಿ ಚಹಾ ವಿರಾಮದ ವೇಳೆಗೆ ಭಾರತ 106ಕ್ಕೆ ಎರಡು ವಿಕೆಟ್ ಕಳೆದುಕೊಂಡಿತ್ತು. ಮಂದಾನ (31, 48 ಎಸೆತ) ಅವರು ಆ್ಯಶ್ಲಿ ಗಾರ್ಡನರ್‌ ಹಿಡಿತಕ್ಕೆ ಪಡೆದ ಸೊಗಸಾದ ಕ್ಯಾಚ್‌ಗೆ ವಿಕೆಟ್ ಒಪ್ಪಿಸಿದರು. ಯಷ್ಟಿಕಾ ಭಾಟಿಯಾ ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬ್ಯಾಟಿಂಗ್‌ಗೆ ಬಂದರೂ ಮೂರು ರನ್ ಗಳಿಸುವಲ್ಲಿ ಮಾತ್ರ ಸಾಧ್ಯವಾಯಿತು.

ಆಸ್ಟ್ರೇಲಿಯಾಗೆ ಗೆಲುವು ಸಾಧಿಸಲು ಕೇವಲ 32 ಓವರ್‌ಗಳಲ್ಲಿ ಭಾರತ 272 ರನ್‌ ಗಳಿಸುವ ಸವಾಲೊಡ್ಡಿತು.

ಅಲಿಸಾ ಹೀಲಿ ಮತ್ತು ಬೇಥ್‌ ಮೂನಿಯನ್ನು ಬೇಗ ಕಳೆದುಕೊಂಡ ಆಸ್ಟ್ರೇಲಿಯಾಕ್ಕೆ ಗುರಿ ತಲುಪುವುದು ಕಷ್ಟಸಾಧ್ಯವಾಗಿತ್ತು. ಆಸ್ಟ್ರೇಲಿಯಾ 15 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 36 ರನ್ ಗಳಿಸಿದ ವೇಳೆ ಉಭಯ ತಂಡಗಳು ಡ್ರಾಕ್ಕೆ ಸಮ್ಮತಿಸಿದವು.

ಬಹು ಮಾದರಿಯ ಸರಣಿಯ ನಿಯಮಗಳ ಪ್ರಕಾರ, ಎರಡೂ ತಂಡಗಳು ತಲಾ ಎರಡು ಅಂಕಗಳಿಗೆ ತೃಪ್ತಿಪಟ್ಟವು. ಪಂದ್ಯದ ಮೊದಲ ಎರಡು ದಿನಗಳಲ್ಲಿ ಪ್ರತಿಕೂಲ ಹವಾಮಾನದ ಕಾರಣ 80ಕ್ಕೂ ಹೆಚ್ಚು ಓವರ್‌ಗಳನ್ನು ಆಡಿಸಲಾಗಿರಲಿಲ್ಲ.

ಭಾರತದ ಸ್ಮೃತಿ ಮಂದಾನ ಶತಕ ದಾಖಲಿಸಿದ್ದು ಪಂದ್ಯದ ಅವಿಸ್ಮರಣೀಯ ಕ್ಷಣಗಳಲ್ಲಿ ಒಂದು. ಆಸ್ಟ್ರೇಲಿಯಾದ ವೇಗಿಗಳಿಗಿಂತ ಮಿಥಾಲಿ ರಾಜ್ ಬಳಗದವರು ಹೆಚ್ಚು ಪರಿಣಾಮಕಾರಿ ಎನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT