ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೀನ್ ಜೋನ್ಸ್‌ ಏಕದಿನ ಪಂದ್ಯಗಳ ಸ್ಪೆಷಲಿಸ್ಟ್‌!

’ಟೈ‘ ಟೆಸ್ಟ್‌ನಲ್ಲಿ ದ್ವಿಶತಕ ಹೊಡೆದಿದ್ದ ಆಸ್ಟ್ರೇಲಿಯಾ ಆಟಗಾರ
Last Updated 24 ಸೆಪ್ಟೆಂಬರ್ 2020, 12:47 IST
ಅಕ್ಷರ ಗಾತ್ರ

ಹೃದಯಸ್ಥಂಭನದಿಂದ ಗುರುವಾರ ಮುಂಬೈನಲ್ಲಿ ನಿಧನರಾದ ಆಸ್ಟ್ರೇಲಿಯಾದ ಕ್ರಿಕೆಟ್‌ ಆಟಗಾರ ಡೀನ್‌ ಜೋನ್ಸ್‌ (59) ಅವರು ಏಕದಿನ ಕ್ರಿಕೆಟ್‌ನ ಪರಿಣತ ಆಟಗಾರರಾಗಿ ಹೆಸರು ಮಾಡಿದವರು. ಆಸ್ಟ್ರೇಲಿಯಾ ತಂಡ 1980ರ ದಶಕದಲ್ಲಿ ಪುನರುಜ್ಜೀವನ ಕಾಣುತ್ತಿರುವಾಗ ಡೀನ್‌ ಜೋನ್ಸ್‌ ಮಹತ್ವದ ಪಾತ್ರ ವಹಿಸಿದ್ದರು.‌

ಆ್ಯಲನ್‌ ಬಾರ್ಡರ್‌ ನಾಯಕತ್ವದಲ್ಲಿ ಏಕದಿನ ಕ್ರಿಕೆಟ್‌ನ ಪ್ರಬಲ ತಂಡವಾಗಿ ಆಸ್ಟ್ರೇಲಿಯಾ ರೂಪುಗೊಳ್ಳುವಲ್ಲಿ ಡೇವಿಡ್‌ ಬೂನ್‌, ಆ್ಯಲನ್‌ ಬಾರ್ಡರ್‌, ಸ್ಟೀವ್‌ ವಾ ಅವರ ಜೊತೆ ಡೀನ್‌ ಜೋನ್ಸ್‌ ಕಾಣಿಕೆ ಕೂಡ ಮಹತ್ವಪೂರ್ಣವಾದದ್ದು. ಮಧ್ಯಮ ಕ್ರಮಾಂಕದಲ್ಲಿ ತಂಡದ ಆಧಾರಸ್ತಂಭವಾದರು. ಭಾರತದಲ್ಲಿ ನಡೆದಿದ್ದ 1987ರಲ್ಲಿ ರಿಲಯನ್ಸ್‌ ವಿಶ್ವಕಪ್‌ ಗೆದ್ದ ತಂಡದಲ್ಲಿ ಜೋನ್ಸ್‌ ಆಡಿದ್ದರು.

1984 ರಿಂದ 1994ರವರೆಗಿನ ಸುಮಾರು ಹತ್ತು ವರ್ಷಗಳ ಅವಧಿಯಲ್ಲಿ ಅವರು 164 ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರು. ಇದರಲ್ಲಿ44.61 ಸರಾಸರಿಯಲ್ಲಿ 6,068 ರನ್‌ ಗಳಿಸಿದ್ದರು. ಏಳು ಶತಕ, 46 ಅರ್ಧಶತಕಗಳು ಇದರಲ್ಲಿ ಒಳಗೊಂಡಿದ್ದವು. ಆದರೆ ಟೆಸ್ಟ್‌ ಪಂದ್ಯಗಳಲ್ಲೂ ಅವರ ಸಾಧನೆ ಕಡಿಮೆಯೇನೂ ಆಗಿರಲಿಲ್ಲ. 52 ಪಂದ್ಯಗಳಿಂದ 46.55 ಸರಾಸರಿಯಲ್ಲಿ 3631 ರನ್ ಗಳಿಸಿದ್ದರು. ಇದರಲ್ಲಿ 11 ಶತಕಗಳೂ ಸೇರಿದ್ದವು. ಎರಡೂ ಮಾದರಿಗೆ ಒಗ್ಗುವ ಆಟಗಾರ ಎಂದು ಸಾಬೀತು ಮಾಡಿದರು.

ಬೆನ್ಸನ್‌ ಅಂಡ್‌ ಹೆಜಸ್‌ ಕಪ್‌ ವಿಶ್ವಸರಣಿಯಲ್ಲಿ ಪಾಕಿಸ್ತಾನ ವಿರುದ್ಧ ಏಕದಿನ ಪದಾರ್ಪಣೆ ಪಂದ್ಯದಲ್ಲಿ ಅಜೇಯ 40 ರನ್‌ ಗಳಿಸಿದ್ದರು. ನಂತರ ತಂಡದಲ್ಲಿ ಅವರ ಸ್ಥಾನ ಭದ್ರವಾಯಿತು. ವೇಗದ ಬೌಲರ್‌ಗಳನ್ನು ಮುಂದೆ ಬಂದು ಎದುರಿಸುತ್ತಿದ್ದ ಅವರು ವಿಕೆಟ್‌ಗಳ ಮಧ್ಯೆ ಚುರುಕಿನ ಓಟದಿಂದ ಗಮನ ಸೆಳೆಯುತ್ತಿದ್ದರು. ಚುರುಕಿನ ಫಿಲ್ಡಿಂಗ್‌ ಅವರನ್ನು ಈ ಮಾದರಿಯ ಉಪಯುಕ್ತ ಆಟಗಾರ ಎನಿಸಲು ಕಾರಣವಾಯಿತು. ಜೋನ್ಸ್ ನಂತರದ ದಿನಗಳಲ್ಲಿ ಏಕದಿನ ಮಾದರಿಯಲ್ಲಿ ಹೆಚ್ಚು ಗುರುತಿಸಿಕೊಂಡವರು ಮೈಕೆಲ್‌ ಬೆವೆನ್‌.

ಭಾರತದ ವಿರುದ್ಧ ಮದರಾಸಿನಲ್ಲಿ (ಈಗಿನ ಚೆನ್ನೈ) 1986ರ ಸೆಪ್ಟೆಂಬರ್‌ನಲ್ಲಿ ‘ಟೈ’ ಆದ ಪಂದ್ಯದಲ್ಲಿ ಡೀನ್‌ ಜೋನ್ಸ್‌ ಅವರ ಹೋರಾಟದ ಆಟ ಮರೆಯುವಂತಿಲ್ಲ. ಚೆನ್ನೈನ ಅಸಾಧ್ಯ ಸೆಕೆಯಲ್ಲಿ ಅವರು ಮೂರನೇ ಕ್ರಮಾಂಕದಲ್ಲಿ ಕೆಚ್ಚೆದೆಯಿಂದ ಆಡಿ 210 ರನ್‌ ಗಳಿಸಿದ್ದರು. ನಿರ್ಜಲೀಕರಣ ಸಮಸ್ಯೆಯಿಂದ ಅವರಿಗೆ ದಿನದಾಟದ ನಂತರ ಅವರಿಗೆ ಡ್ರಿಪ್ಸ್‌ ನೀಡಬೇಕಾಯಿತು. ಆಸ್ಟ್ರೇಲಿಯಾದ ಮೊದಲ ಇನಿಂಗ್ಸ್‌ನಲ್ಲಿ ಅವರ ದ್ವಿಶತಕದ ಜೊತೆಗೆ ಡೇವಿಡ್‌ ಬೂನ್‌ (122) ಮತ್ತು ನಾಯಕ ಆ್ಯಲನ್‌ ಬಾರ್ಡರ್‌ (106) ಕೂಡ ಶತಕಗಳನ್ನು ಬಾರಿಸಿದ್ದರು.

ಎಲ್ಲ ಮಾದರಿಯ ಕ್ರಿಕೆಟ್‌ನಿಂದ 1997ರಲ್ಲಿ ನಿವೃತ್ತರಾದ ನಂತರ ಜೋನ್ಸ್‌ ತರಬೇತುದಾರರೂ ಆಗಿದ್ದರು.1997ರಲ್ಲಿ ಅಫ್ಗಾನಿಸ್ತಾನಕ್ರಿಕೆಟ್ತಂಡಕ್ಕೆ ಕೆಲಕಾಲ ಕೋಚ್‌ ಆಗಿದ್ದರು. ವೀಕ್ಷಕ ವಿವರಣೆಗಾರನಾಗಿಯೂ ‘ಇನಿಂಗ್ಸ್’ ಆರಂಭಿಸಿದ್ದರು. ಆಸ್ಟ್ರೇಲಿಯಾ ಬಲಾಢ್ಯ ತಂಡವಾಗಿ ರೂಪುಗೊಳ್ಳುವಲ್ಲಿ ಜೋನ್ಸ್‌ ಕೊಡುಗೆ ಗಣನೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT