ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ: ರಣಜಿ ಟ್ರೋಫಿ– ನಾಕೌಟ್ ‘ಗುಮ್ಮ’ನ ಭಯ ದಾಟುವುದೇ ಕರ್ನಾಟಕ?
ಆಳ–ಅಗಲ: ರಣಜಿ ಟ್ರೋಫಿ– ನಾಕೌಟ್ ‘ಗುಮ್ಮ’ನ ಭಯ ದಾಟುವುದೇ ಕರ್ನಾಟಕ?
ಕರ್ನಾಟಕ ರಾಜ್ಯ ಕ್ರಿಕೆಟ್ ತಂಡವು ರಣಜಿ ಟ್ರೋಫಿಯನ್ನು ಗೆದ್ದು ಒಂದು ದಶಕವಾಗಿದೆ. ಎಂಟು ಬಾರಿಯ ಚಾಂಪಿಯನ್ ತಂಡಕ್ಕೆ ಒಂಬತ್ತನೇ ಪ್ರಶಸ್ತಿ ಜಯಿಸುವ ಅವಕಾಶ ಈಗ ಮತ್ತೆ ಬಂದಿದೆ.
Published 22 ಫೆಬ್ರುವರಿ 2024, 19:22 IST
Last Updated 22 ಫೆಬ್ರುವರಿ 2024, 19:22 IST
ಅಕ್ಷರ ಗಾತ್ರ

ಕರ್ನಾಟಕ ರಾಜ್ಯ ಕ್ರಿಕೆಟ್ ತಂಡವು ರಣಜಿ ಟ್ರೋಫಿಯನ್ನು ಗೆದ್ದು ಒಂದು ದಶಕವಾಗಿದೆ. ಎಂಟು ಬಾರಿಯ ಚಾಂಪಿಯನ್ ತಂಡಕ್ಕೆ ಒಂಬತ್ತನೇ ಪ್ರಶಸ್ತಿ ಜಯಿಸುವ ಅವಕಾಶ ಈಗ ಮತ್ತೆ ಬಂದಿದೆ.

ಆದರೆ ಕಳೆದ ಹತ್ತು ವರ್ಷಗಳಲ್ಲಿ ಪ್ರಮುಖ ಘಟ್ಟಗಳಲ್ಲಿಯೇ ಎಡವುತ್ತ ಬಂದಿರುವ ತಂಡವು ಈ ಸಲವಾದರೂ ‘ನಾಕೌಟ್ ಗುಮ್ಮ’ನ ಭಯದಿಂದ ಹೊರಬರುವುದೇ ಎಂಬ ಕುತೂಹಲ ಗರಿಗೆದರಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ನಾಲ್ಕು ಬಾರಿ ಸೆಮಿಫೈನಲ್ ಮತ್ತು ಎರಡು ಬಾರಿ ಎಂಟರ ಘಟ್ಟದಲ್ಲಿ ಕರ್ನಾಟಕ ತಂಡವು ಎಡವಿದೆ. ಅದರಲ್ಲೂ 2014–15ರಲ್ಲಿ ಚಾಂಪಿಯನ್ ಆದ ಮರುವರ್ಷವೇ ಲೀಗ್ ಹಂತದಲ್ಲಿಯೇ ಹೊರಬಿದ್ದಿತ್ತು. ಆಗ ಅನುಭವಿ ಆಟಗಾರರು ತಂಡದಲ್ಲಿದ್ದರೂ ವೈಫಲ್ಯ ಎದುರಾಗಿತ್ತು.

ಆದರೆ ಈ ಬಾರಿ ಹೊಸಬರೇ ಹೆಚ್ಚಿನ ಸಂಖ್ಯೆಯಲ್ಲಿರುವ ಆಟಗಾರರ ದಂಡು ಕಟ್ಟಿಕೊಂಡು ಪ್ರಶಸ್ತಿ ಗೆಲ್ಲುವ ಸವಾಲು ನಾಯಕ ಮಯಂಕ್ ಅಗರವಾಲ್ ಮತ್ತು ಕೋಚ್ ಪಿ.ವಿ. ಶಶಿಕಾಂತ್ ಅವರ ಮುಂದಿದೆ.  ಶುಕ್ರವಾರದಿಂದ ನಾಗ್ಪುರದಲ್ಲಿ ನಡೆಯಲಿರುವ ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕ ತಂಡವು ವಿದರ್ಭ ತಂಡವನ್ನು ಎದುರಿಸಲಿದೆ. ಈ ಬಾರಿ ರಾಜ್ಯ ತಂಡಕ್ಕೆ ನಾಕೌಟ್ ಹಾದಿ ಸುಗಮವೇನೂ ಆಗಿರಲಿಲ್ಲ. ಸಿ ಗುಂಪಿನಿಂದ ಎಂಟರ ಘಟ್ಟಕ್ಕೆ ಪ್ರವೇಶಿಸುವ ಮುನ್ನ  ಗೆಲುವು, ಸೋಲು, ಡ್ರಾ ಮತ್ತು ಆಘಾತಕಾರಿ ಘಟನೆಗಳನ್ನು ದಾಟಿ ಬಂದಿದೆ. ಆದರೆ ಈಗ ಮುಂದಿರುವ ಕಠಿಣ ಸವಾಲುಗಳನ್ನು ದಾಟುವುದು ಅಷ್ಟೇನೂ ಸುಲಭವಲ್ಲ. ಉತ್ತಮ ಮತ್ತು ದುರ್ಬಲ ಅಂಶಗಳು ಈ ಪ್ರಯಾಣದಲ್ಲಿವೆ. ಆದ್ದರಿಂದ ಬಹಳ ಎಚ್ಚರಿಕೆಯಿಂದ ಆಡುವ ಅನಿವಾರ್ಯ ಮಯಂಕ್ ಬಳಗದ ಮುಂದಿದೆ.

ವೇಗದ ತಾಕತ್ತು

ಕರ್ನಾಟಕದ ಮಟ್ಟಿಗೆ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಸ್ಥಿರ ಪ್ರದರ್ಶನ ನೀಡುತ್ತಿರುವ ಏಕೈಕ ವಿಭಾಗವೆಂದರೆ ವೇಗದ ಬೌಲರ್‌ಗಳದ್ದು. ವಿದ್ವತ್ ಕಾವೇರಪ್ಪ, ವೈಶಾಖ ವಿಜಯಕುಮಾರ್ ಮತ್ತು ವಿ. ಕೌಶಿಕ್ ಅವರು ಸತತವಾಗಿ ಪ್ರತಿಭೆ ಮೆರೆಯುತ್ತಿದ್ದಾರೆ.

ಯಾವುದೇ ಪಿಚ್‌ ಇರಲಿ, ತಮ್ಮ ಕೈಚಳಕ ತೋರಿದ್ದಾರೆ. ಈ ಬಾರಿಯೂ  ಈ ವೇಗಿತ್ರಯರು ಕರ್ನಾಟಕದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅದರಲ್ಲಿ ವಿದ್ವತ್ ಕಾವೇರಪ್ಪ ಈ ಋತುವಿನ ಮಧ್ಯ ಭಾರತ ಎ ತಂಡದಲ್ಲಿಯೂ ಆಡಿ ಮರಳಿದ್ದಾರೆ. ಕೌಶಿಕ್ ತಮ್ಮ ಹದವಾದ ಸ್ಪಿನ್ ಮತ್ತು ಕಟರ್‌ಗಳಿಂದ ಎದುರಾಳಿಗಳಿಗೆ ನಡುಕ ಮೂಡಿಸಿದ್ದಾರೆ.

ಕರ್ನಾಟಕದ ಪರವಾಗಿ ಅತಿ ಹೆಚ್ಚು ವಿಕೆಟ್ ಗಳಿಸಿರುವ ವೈಶಾಖ  ಅವರು ಬ್ಯಾಟಿಂಗ್‌ನಲ್ಲಿಯೂ ಮಿಂಚುತ್ತಿದ್ದಾರೆ. ನಾಕೌಟ್ ಹಂತದಲ್ಲಿಯೂ ಈ ಮೂವರನ್ನು ಎದುರಿಸಲು ಎದುರಾಳಿ ತಂಡಗಳು ವಿಶೇಷ ತಂತ್ರಗಾರಿಕೆ ರೂಪಿಸುವುದು ಬಹುತೇಕ ಖಚಿತ.

ಬ್ಯಾಟಿಂಗ್ ಅನಿಶ್ಚಿತತೆ

ಈ ಋತುವಿನಲ್ಲಿ ಮೂರು ಶತಕ ಬಾರಿಸಿ ತಂಡಕ್ಕೆ ಆಸರೆಯಾಗಿದ್ದ ದೇವದತ್ತ ಪಡಿಕ್ಕಲ್ ಅವರು ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅವರು ರಾಷ್ಟ್ರೀಯ ತಂಡದಲ್ಲಿದ್ದಾರೆ.

ಆರಂಭಿಕ ಬ್ಯಾಟರ್ ಆರ್. ಸಮರ್ಥ್ ಅವರು ತಮ್ಮ ನೈಜ ಸಾಮರ್ಥ್ಯವನ್ನು ತೋರುತ್ತಿಲ್ಲ. ಇದು ತಂಡಕ್ಕೆ ಚಿಂತೆಯ ವಿಷಯವಾಗಿದೆ. ಇದುವರೆಗೆ ಅವರಿಂದ ಒಂದೂ ಶತಕ ಮೂಡಿಬಂದಿಲ್ಲ. ಮಯಂಕ್ ಅಗರವಾಲ್ ಅವರು ಇದುವರೆಗೆ 398 ರನ್‌ ಗಳಿಸಿದ್ದಾರೆ. ಆದರೆ ಅವರೊಂದಿಗೆ ಉತ್ತಮ ಆರಂಭ ನೀಡುವಲ್ಲಿ ಸಮರ್ಥ್ ಯಶಸ್ವಿಯಾಗಿಲ್ಲ.

ನಿಕಿನ್ ಜೋಸ್ ಕೂಡ ಮೈಸೂರು ಪಂದ್ಯದಲ್ಲಿ ಶತಕ ಹೊಡೆದಿದ್ದು ಬಿಟ್ಟರೆ ಮತ್ತೆ ಮಿಂಚಿಲ್ಲ. ಇದರಿಂದಾಗಿ ಮಧ್ಯಮ ಕ್ರಮಾಂಕದ ಸಂಪೂರ್ಣ ಜವಾಬ್ದಾರಿ ಅನುಭವಿ ಮನೀಷ್ ಪಾಂಡೆ ಮೇಲೆ ಬಿದ್ದಿದೆ.  ಸೂರತ್ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಸೋಲಿನ ದವಡೆಯಿಂದ ತಪ್ಪಿಸಿದ್ದ ಮನೀಷ್ ತಮ್ಮಲ್ಲಿ ಇನ್ನೂ ಆಟ ಬಾಕಿ ಇದೆ ಎಂಬುದನ್ನು ಸಾಬೀತು ಮಾಡಿದ್ದರು.  ಎರಡು ಶತಕ ಕೂಡ ದಾಖಲಿಸಿದ್ದಾರೆ. ವೈಶಾಖ, ಹೊಸ ಹುಡುಗ ಹಾರ್ದಿಕ್ ರಾಜ್ ಮತ್ತು ವಿಕೆಟ್‌ ಕೀಪರ್ ಶರತ್ ಶ್ರೀನಿವಾಸ್ ಅವರು ಹುಬ್ಬಳ್ಳಿಯಲ್ಲಿ ಚಂಡೀಗಢ ವಿರುದ್ಧ ಮಿಂಚಿದ್ದರು. ಅವರು ತಮ್ಮ ಲಯವನ್ನು ಕ್ವಾಟರ್‌ ಫೈನಲ್‌ನಲ್ಲಿಯೂ ಮುಂದುವರಿಸಿದರೆ ತಂಡಕ್ಕೆ
ಲಾಭ.

ಸ್ಪಿನ್ ವಿಭಾಗದ ಅನುಭವ ಕೊರತೆ

ಈ ಬಾರಿಯ ತಂಡದಲ್ಲಿ ದುರ್ಬಲವಾಗಿರುವುದು ಸ್ಪಿನ್ ವಿಭಾಗ. ಅದಕ್ಕೆ ಕಾರಣ ಅನುಭವವಿಲ್ಲದ ಬೌಲರ್‌ಗಳು  ಇರುವುದು. ಹೋದ ಋತುವಿನಲ್ಲಿ ಆಡಿದ್ದ ಲೆಗ್‌ಸ್ಪಿನ್ನರ್‌ ಶ್ರೇಯಸ್ ಗೋಪಾಲ್ ಅವರು ಈ ವರ್ಷ ಕೇರಳ ತಂಡಕ್ಕೆ ವಲಸೆ ಹೋಗಿದ್ದಾರೆ.  ಆಫ್‌ಸ್ಪಿನ್ನರ್ ಕೃಷ್ಣಪ್ಪ ಗೌತಮ್ ಅವರನ್ನು ಈ ಬಾರಿ ಆಯ್ಕೆಗೆ ಪರಿಗಣಿಸಿಲ್ಲ. ಈ ಕೊರತೆಯು ತಂಡವನ್ನು ಕಾಡದಂತೆ ನೋಡಿಕೊಳ್ಳುವ ಹೊಣೆ ಹೊಸ ಹುಡುಗರ ಮೇಲೆ ಇದೆ.

ರೋಹಿತ್ ಕುಮಾರ್, ಶಶಿಕುಮಾರ್ ಮತ್ತು ಹಾರ್ದಿಕ್ ರಾಜ್ ಅವರು ಕೆಲವು ಪಂದ್ಯಗಳಲ್ಲಿ ಭರವಸೆ ಮೂಡಿಸಿದ್ದಾರೆ. ಆದರೆ ನಾಕೌಟ್ ಹಂತದ ಸ್ಪರ್ಧೆ ಮತ್ತು ಒತ್ತಡಗಳೇ ಬೇರೆ.  ಆ ಸವಾಲನ್ನು ಗೆದ್ದು ತಾವು ರಾಜ್ಯ ತಂಡದ ಭವಿಷ್ಯದ ತಾರೆಗಳು ಎಂಬುದನ್ನು ತೋರ್ಪಡಿಸುವ ಅವಕಾಶ ಕೂಡ ಈ ಯುವ ಆಟಗಾರರ ಮುಂದಿದೆ. ತಂಡವು ಕೊನೆಯ ಬಾರಿ ರಣಜಿ ಟ್ರೋಫಿ ಜಯಿಸಿದಾಗ ತಂಡದಲ್ಲಿದ್ದವರು ಮಯಂಕ್. ಆಗ ಬ್ಯಾಟರ್ ಆಗಿ ಮಿಂಚಿದ್ದರು. ಈಗ ನಾಯಕರಾಗಿದ್ದಾರೆ.  ಯರಪಳ್ಳಿ ಪ್ರಸನ್ನ, ಬ್ರಿಜೇಶ್ ಪಟೇಲ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಸುನಿಲ್ ಜೋಶಿ, ಆರ್. ವಿನಯಕುಮಾರ್ ಅವರ ಸಾಲಿಗೆ ಸೇರುವ ಅವಕಾಶ ಮಯಂಕ್ ಮುಂದಿದೆ.

‘ತಂಡದ ಹೋರಾಟ ಮನೋಭಾವವೇ ಶಕ್ತಿ’

ಈ ಬಾರಿ ನಮ್ಮದು ಏರಿಳಿತಗಳ ಪಯಣವಾಗಿದೆ. ಬೇರೆ ಬೇರೆ ತಾಣಗಳಲ್ಲಿ ಆಡಿದ್ದೇವೆ. ಅಚ್ಚರಿ ಮತ್ತು ಆಘಾತಗಳನ್ನೂ ಕಂಡಿದ್ದೇವೆ. ಮಯಂಕ್ ಅಗರವಾಲ್ ಅವರು ಆಕಸ್ಮಿಕವಾಗಿ ಅಸ್ವಸ್ಥರಾಗಿದ್ದ ಘಟನೆಯು  ಆಟಗಾರರಲ್ಲಿ ಆಘಾತ ಮೂಡಿಸಿತ್ತು. ಅದನ್ನು ಮೀರಿ ನಿಂತು ತಂಡವು ಈ ಹಂತಕ್ಕೆ ಬಂದಿರುವುದು ಸಮಾಧಾನ ತಂದಿದೆ. ತಂಡದ ಹೋರಾಟದ ಮನೋಭಾವವೇ ಸಾಮರ್ಥ್ಯವಾಗಿದೆ.

ಮಯಂಕ್ ಅಗರವಾಲ್, ಮನೀಷ್ ಪಾಂಡೆ ಅವರು ತಮ್ಮ ಅನುಭವಕ್ಕೆ ತಕ್ಕಂತೆ ಉತ್ತಮವಾಗಿ ಆಡುತ್ತಿದ್ದಾರೆ. ತಂಡಕ್ಕೆ ಅಗತ್ಯವಾದ ಸಂದರ್ಭದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಹೊಸದಾಗಿ ತಂಡಕ್ಕೆ ಬಂದಿರುವ ಹಾರ್ದಿಕ್ ರಾಜ್ ತಮ್ಮ ಆಲ್‌ರೌಂಡ್ ಆಟದಿಂದ ಭರವಸೆ ಮೂಡಿಸಿದ್ದಾರೆ. ವೇಗಿ ವೈಶಾಖ ವಿಜಯಕುಮಾರ್ ಬೌಲಿಂಗ್ ಜೊತೆಗೆ ಬ್ಯಾಟಿಂಗ್‌ನಲ್ಲಿಯೂ ಮಿಂಚುತ್ತಿದ್ದಾರೆ.  ಹೊಸ ಮತ್ತು ಹಳೆಯ ಆಟಗಾರರಲ್ಲಿ ಉತ್ತಮ ಹೊಂದಾಣಿಕೆ ಇದೆ. ಇದರಿಂದಾಗಿ ಈ ಬಾರಿ ಫೈನಲ್‌ಗೆ ಹೋಗುವ ವಿಶ್ವಾಸವಿದೆ.

ಪಿ.ವಿ. ಶಶಿಕಾಂತ್, ಕೋಚ್, ಕರ್ನಾಟಕ ತಂಡ

Karnataka ranji cricket team selection committee chairman Raghuram Bhat with team coach P V Shashikanth during the nets practice at Chinnaswamy Stadium in Bengaluru on Monday. Photo Srikanta Sharma R.

Karnataka ranji cricket team selection committee chairman Raghuram Bhat with team coach P V Shashikanth during the nets practice at Chinnaswamy Stadium in Bengaluru on Monday. Photo Srikanta Sharma R.

ಸೌರಾಷ್ಟ್ರ ಸವಾಲು ತಪ್ಪಿಸಿಕೊಂಡರೇ?

ಹುಬ್ಬಳ್ಳಿಯಲ್ಲಿ ನಡೆದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಚಂಡೀಗಢ ಎದುರು ಗೆಲ್ಲುವ ಅವಕಾಶ ಕರ್ನಾಟಕಕ್ಕೆ ಇತ್ತು. ಆದರೂ ವಿಭಿನ್ನ ತಂತ್ರಗಾರಿಕೆಯನ್ನು ಅನುಸರಿಸಿದ್ದರಿಂದ ಪಂದ್ಯ ಡ್ರಾದತ್ತ ವಾಲಿತ್ತು.

ಇದರಿಂದಾಗಿ ಸಿ ಗುಂಪಿನಲ್ಲಿ ಅಗ್ರಸ್ಥಾನ ಕರ್ನಾಟಕದ ಕೈತಪ್ಪಿತ್ತು. ಒಂದೊಮ್ಮೆ ಮೊದಲ ಸ್ಥಾನ ಪಡೆದಿದ್ದರೆ, ಎಂಟರ ಘಟ್ಟದಲ್ಲಿ ಸೌರಾಷ್ಟ್ರವನ್ನು ಎದುರಿಸಬೇಕಿತ್ತು. ಆದರೆ ಕಳೆದ ಆರೇಳು ವರ್ಷಗಳಲ್ಲಿ ಎರಡು ಬಾರಿ ಸೌರಾಷ್ಟ್ರದ ಎದುರು ನಾಕೌಟ್‌ನಲ್ಲಿ ಕರ್ನಾಟಕ ತಂಡವು ಸೋತಿತ್ತು.  ಇದೀಗ ಆ ‘ಕಂಟಕ’ದಿಂದ ಕರ್ನಾಟಕ ಪಾರಾಗಿದೆ. ಆದರೆ ವಿದರ್ಭ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಅಕ್ಷಯ್ ವಾಡಕರ್, ಉಮೇಶ್ ಯಾದವ್ ಅವರಂತಹ ಉತ್ತಮ ಆಟಗಾರರು  ಕಠಿಣ ಸವಾಲೊಡ್ಡಬಲ್ಲರು.

**********

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT