ಮಂಗಳವಾರ, ಜುಲೈ 5, 2022
21 °C

ಸೈಯದ್ ಮುಷ್ತಾಕ್ ಅಲಿ ಟಿ20 ಫೈನಲ್: ಕರ್ನಾಟಕ–ತಮಿಳುನಾಡು ಹಣಾಹಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟ್ರೋಫಿಯನ್ನು ಮೂರನೇ ಸಲ ಜಯಿಸುವ ಛಲದೊಂದಿಗೆ ಕರ್ನಾಟಕ ಮತ್ತು ತಮಿಳುನಾಡು ತಂಡಗಳು ಸೋಮವಾರ ಕಣಕ್ಕಿಳಿಯಲಿವೆ.

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್‌ನಲ್ಲಿ ದಕ್ಷಿಣ ಭಾರತದ ಎರಡೂ ತಂಡಗಳ ನಡುವೆ ರೋಚಕ ಹಣಾಹಣಿ ನಡೆಯುವ ನಿರೀಕ್ಷೆ ಗರಿಗೆದರಿದೆ. ಟೂರ್ನಿಯ ಇತಿಹಾಸದಲ್ಲಿ ಉಭಯ ತಂಡಗಳು ತಲಾ ಎರಡು ಬಾರಿ ಪ್ರಶಸ್ತಿ ಜಯಿಸಿವೆ. 2019–20ರ ಫೈನಲ್‌ನಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಿದ್ದವು.  ಆ ರೋಚಕ ಪಂದ್ಯದಲ್ಲಿ ಕರ್ನಾಟಕ ಮೇಲುಗೈ ಸಾಧಿಸಿತ್ತು. ಹೋದ ಸಲ ಕರ್ನಾಟಕ ಫೈನಲ್ ಪ್ರವೇಶಿಸಲು ವಿಫಲವಾಗಿತ್ತು. ತಮಿಳುನಾಡು ಫೈನಲ್‌ನಲ್ಲಿ ಬರೋಡಾ ವಿರುದ್ಧ ಜಯಿಸಿತ್ತು.

ಇದೀಗ ಸತತ ಮೂರನೇ ಬಾರಿ ಮತ್ತು ಒಟ್ಟಾರೆ ನಾಲ್ಕನೇ ಸಲ ಫೈನಲ್‌ ತಲುಪಿದ ಸಾಧನೆಯನ್ನು ತಮಿಳುನಾಡು ಮಾಡಿದೆ. ಅನುಭವಿ ಬೌಲರ್‌ಗಳ ಕೊರತೆ ಇರುವ ಕರ್ನಾಟಕ ತಂಡವು ಬ್ಯಾಟಿಂಗ್ ವಿಭಾಗದ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ. ನಾಯಕ ಮನೀಷ್ ಪಾಂಡೆ ತಮ್ಮ ಚುರುಕಿನ ಫೀಲ್ಡಿಂಗ್, ಮಿಂಚಿನ ಬ್ಯಾಟಿಂಗ್ ಮತ್ತು ಚಾಣಾಕ್ಷ ತಂತ್ರಗಳ ಮೂಲಕ ತಂಡವು ಪ್ರೀ ಕ್ವಾರ್ಟರ್ ಮತ್ತು ಕ್ವಾರ್ಟರ್‌ಫೈನಲ್‌ಗಳಲ್ಲಿ ಜಯಿಸಲು ಕಾರಣರಾಗಿದ್ದರು.

ರೋಹನ್ ಕದಂ, ಅಭಿನವ್ ಮನೋಹರ್, ಕರುಣ್ ನಾಯರ್, ಅನಿರುದ್ಧ ಜೋಶಿ ಅವರು ಉತ್ತಮ ಲಯದಲ್ಲಿರುವುದು ಬ್ಯಾಟಿಂಗ್‌ನಲ್ಲಿ ಹೆಚ್ಚು ಚಿಂತೆ ಇಲ್ಲ. ಆದರೆ ಹೊಸಪ್ರತಿಭೆಗಳಾದ ವಿದ್ಯಾಧರ್ ಪಾಟೀಲ, ವಿಜಯಕುಮಾರ್ ವೈಶಾಖ,ಎಂ.ಬಿ. ದರ್ಶನ್ ಅವರಿಗೆ ತಮಿಳುನಾಡು ಬ್ಯಾಟಿಂಗ್‌ ಬಲವನ್ನು ಕಟ್ಟಿಹಾಕುವ ಸವಾಲಿದೆ. ಶಾರೂಕ್ ಖಾನ್, ನಾಯಕ ವಿಜಯಶಂಕರ್, ಎಸ್. ಜಗದೀಶನ್ ಅವರು ಬ್ಯಾಟಿಂಗ್‌ ವಿಭಾಗದ ಪ್ರಮುಖರಾಗಿದ್ದಾರೆ.

ತಮಿಳುನಾಡು ಬೌಲಿಂಗ್ ವಿಭಾಗವು ಉತ್ತಮವಾಗಿದೆ. ಸೆಮಿಫೈನಲ್‌ನಲ್ಲಿ ಐದು ವಿಕೆಟ್ ಗೊಂಚಲು ಗಳಿಸಿದ ಪಿ. ಸರವಣಕುಮಾರ್ ಮತ್ತು ಸಂದೀಪ್ ವರಿಯರ್ ಉತ್ತಮ ಲಯದಲ್ಲಿದ್ದಾರೆ. ಗಾಯದಿಂದಾಗಿ ಟಿ. ನಟರಾಜನ್ ಕಳೆದೆರಡು ಪಂದ್ಯಗಳಲ್ಲಿ ಆಡಿಲ್ಲ. ಅವರು ಚೇತರಿಸಿಕೊಂಡು ಫೈನಲ್‌ನಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. 

ತಮಿಳುನಾಡು ತಂಡವು 2017ರ ನಂತರ ಕರ್ನಾಟಕದ ಎದುರು ಗೆದ್ದಿಲ್ಲ. ಮನೀಷ್ ಬಳಗವು ಈ ದಾಖಲೆಯನ್ನು ಮುಂದುವರಿಸಿಕೊಂಡು ಹೋಗುವ ಛಲದಲ್ಲಿದೆ.

ತಂಡಗಳು:

ಕರ್ನಾಟಕ: ಮನೀಷ್ ಪಾಂಡೆ (ನಾಯಕ), ರೋಹನ್ ಕದಂ, ಅಭಿನವ್ ಮನೋಹರ್, ಕರುಣ್ ನಾಯರ್, ಅನಿರುದ್ಧ ಜೋಶಿ, ಬಿ.ಆರ್. ಶರತ್, ಜೆ. ಸುಚಿತ್, ವಿಜಯಕುಮಾರ್ ವೈಶಾಖ, ಎಂ.ಬಿ. ದರ್ಶನ್, ಕೆ.ಸಿ. ಕಾರ್ಯಪ್ಪ, ವಿದ್ಯಾಧರ್ ಪಾಟೀಲ, ಆರ್. ಸಮರ್ಥ್, ಪ್ರವೀಣ ದುಬೆ, ಆದಿತ್ಯ ಸೋಮಣ್ಣ, ವಿ. ಕೌಶಿಕ್, ಪ್ರತೀಕ್ ಜೈನ್, ನಿಹಾಲ್ ಉಲ್ಲಾಳ, ರಿತೇಶ್ ಭಟ್ಕಳ, ಕೆ.ವಿ. ಸಿದ್ಧಾರ್ಥ್

ತಮಿಳುನಾಡು: ವಿಜಯಶಂಕರ್ (ನಾಯಕ), ಹರಿನಿಶಾಂತ್, ಎನ್. ಜಗದೀಶನ್ (ವಿಕೆಟ್‌ಕೀಪರ್), ಸಂಜಯ್ ಯಾದವ್, ಶಾರೂಖ್ ಖಾನ್, ಎಂ. ಮೊಹಮ್ಮದ್, ಮುರುಗನ್ ಅಶ್ವಿನ್, ರವಿಶ್ರೀನಿವಾಸನ್ ಸಾಯಿಕಿಶೋರ್, ಪಿ. ಸರವಣಕುಮಾರ್, ಸಂದೀಪ್ ವರಿಯರ್, ಜೆ. ಕೌಶಿಕ್, ಜಗದೀಶನ್ ಕೌಶಿಕ್, ಗಂಗಾಶ್ರೀಧರ್ ರಾಜು, ಆದಿತ್ಯ ಗಣೇಶ್, ಆರ್. ಸಿಲಂಬರಸನ್, ಆರ್. ವಿವೇಕ್, ಮಣಿಮಾರನ್ ಸಿದ್ಧಾರ್ಥ್, ತಂಗವೇಲು ನಟರಾಜನ್.

ಪಂದ್ಯ ಆರಂಭ: ಮಧ್ಯಾಹ್ನ 12

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ಪಟ್ಟಿ

ಪ್ರಶಸ್ತಿ ಸಾಧನೆ

ತಂಡ;ವರ್ಷ;

ಕರ್ನಾಟಕ; 2018–19

ಕರ್ನಾಟಕ; 2019–20

ತಮಿಳುನಾಡು; 2006–07

ತಮಿಳುನಾಡು; 2020–21

 ––

ಬಲಾಬಲ

ಪಂದ್ಯಗಳು; 10

ಕರ್ನಾಟಕ ಜಯ 6

ತಮಿಳುನಾಡು ಜಯ; 3

ಟೈ; 1

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು