ಸೋಮವಾರ, ಆಗಸ್ಟ್ 3, 2020
23 °C

ಡೆಲ್ಲಿ ಕ್ಯಾಪಿಟಲ್ಸ್‌ಗೆ ಹ್ಯಾಟ್ರಿಕ್‌ ಜಯದ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ಸತತ ಎರಡು ಗೆಲುವು ಸಾಧಿಸಿ ಭರವಸೆಯ ಅಲೆಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಭಾನುವಾರದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ಎದುರು ಸೆಣಸಲಿದೆ. ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಬೆಂಗಳೂರಿನಲ್ಲಿ ಮಣಿಸಿದ ಕ್ಯಾಪಿಟಲ್ಸ್‌ ಶುಕ್ರವಾರ ನಡೆದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಅದರ ತವರಿನಲ್ಲೇ ಸೋಲಿಸಿತ್ತು.

ಶಿಖರ್ ಧವನ್‌ ಲಯಕ್ಕೆ ಮರಳಿರುವುದು ತಂಡದಲ್ಲಿ ಭರವಸೆ ಮೂಡಿಸಿದೆ. ನೈಟ್ ರೈಡರ್ಸ್‌ ಎದುರಿನ ಪಂದ್ಯದಲ್ಲಿ ಶಿಖರ್‌ ಅಜೇಯ 97 ರನ್‌ ಗಳಿಸಿ ತಂಡಕ್ಕೆ ಏಳು ವಿಕೆಟ್‌ಗಳ ಜಯ ದೊರಕಿಸಿಕೊಟ್ಟಿದ್ದರು. ಈ ಜಯದೊಂದಿಗೆ ತಂಡ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿತ್ತು. ರಿಷಭ್ ಪಂತ್ ಕೂಡ ಅಮೋಘ ಬ್ಯಾಟಿಂಗ್ ಮೂಲಕ ಮಿಂಚಿದ್ದು 31 ಎಸೆತಗಳಲ್ಲಿ 46 ರನ್ ಗಳಿಸಿದ್ದರು. ಶಿಖರ್‌ ಜೊತೆ ಅವರು 105 ರನ್‌ಗಳ ಜೊತೆಯಾಟವಾಡಿದ್ದರು.

ನಾಯಕ ಶ್ರೇಯಸ್ ಅಯ್ಯರ್‌ ಮತ್ತು ಪೃಥ್ವಿ ಶಾ ಕೂಡ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬುತ್ತಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಕಗಿಸೊ ರಬಾಡ, ಕ್ರಿಸ್ ಮಾರಿಸ್‌ ಹಾಗೂ ಇಶಾಂತ್ ಶರ್ಮಾ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ.

ಸತತ ಎರಡು ಪಂದ್ಯಗಳನ್ನು ಸೋತು ಇಲ್ಲಿಗೆ ಬಂದಿರುವ ಸನ್‌ರೈಸರ್ಸ್‌ ಜಯದ ಲಯಕ್ಕೆ ಮರಳುವ ಒತ್ತಡದಲ್ಲಿದೆ. ದೆಹಲಿಯಲ್ಲಿ ನಡೆದಿದ್ದ ಮೊದಲ ಸುತ್ತಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಗೆದ್ದಿರುವುದರಿಂದ ಸನ್‌ರೈಸರ್ಸ್ ಭಾನುವಾರ ಗೆಲ್ಲುವ ಭರವಸೆಯಲ್ಲಿದೆ.

ಜಾನಿ ಬೇಸ್ಟೊ ಮತ್ತು ಡೇವಿಡ್ ವಾರ್ನರ್ ಉತ್ತಮ ಫಾರ್ಮ್‌ನಲ್ಲಿರುವುದು ಸನ್‌ರೈಸರ್ಸ್ ತಂಡದ ನಿರೀಕ್ಷೆಗಳು ಗರಿಗೆದರುವಂತೆ ಮಾಡಿದೆ. ಆದರೆ ಮಧ್ಯಮ ಕ್ರಮಾಂಕದ ವಿಜಯಶಂಕರ್‌, ಮನೀಷ್ ಪಾಂಡೆ, ದೀಪಕ್ ಹೂಡಾ ಮತ್ತು ಯೂಸುಫ್ ಪಠಾಣ್‌ ಮಿಂಚಬೇಕಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು