ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಯೋಧರಿಗೆ ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಕೃತಜ್ಞತೆ

Last Updated 18 ಸೆಪ್ಟೆಂಬರ್ 2020, 7:50 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಪಿಡುಗಿನ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವರಿಗೆ ಐಪಿಎಲ್‌ ಫ್ರಾಂಚೈಸ್‌ ಡೆಲ್ಲಿ ಕ್ಯಾಪಿಟಲ್ಸ್‌ ಕೃತಜ್ಞತೆ ಸಲ್ಲಿಸಲು ನಿರ್ಧರಿಸಿದೆ. ಐಪಿಎಲ್‌ ಟೂರ್ನಿಯಾದ್ಯಂತ ‘ಕೋವಿಡ್‌ ಯೋಧರಿಗೆ ಧನ್ಯವಾದಗಳು‘ ಎಂಬ ಬರಹ ಇರುವ ಜೆರ್ಸಿಯನ್ನು ಧರಿಸಿ ತಂಡದ ಆಟಗಾರರು ಕಣಕ್ಕಿಳಿಯಲಿದ್ದಾರೆ. ಕೋವಿಡ್‌ ವಿರುದ್ಧದ ಹೋರಾಟಗಾರರಿಗೆ ‘ಇದೊಂದು ಕೃತಜ್ಞತೆ ಸಲ್ಲಿಸುವ ಸಣ್ಣ ಕಾರ್ಯ‘ ಎಂದು ಡೆಲ್ಲಿ ಕ್ಯಾಪಿಟಲ್ಸ್‌ ಹೇಳಿದೆ.

ಡೆಲ್ಲಿ ತಂಡದ ವೇಗದ ಬೌಲರ್‌ ಇಶಾಂತ್ ಶರ್ಮಾ, ಸ್ಪಿನ್ನರ್ ಅಮಿತ್ ಮಿಶ್ರಾ ಮತ್ತು ಸಹಾಯಕ ಕೋಚ್ ಮೊಹಮ್ಮದ್ ಕೈಫ್ ಅವರು ವೈದ್ಯರು ಮತ್ತು ಪೊಲೀಸ್ ಅಧಿಕಾರಿಗಳು ಸೇರಿದಂತೆ ಕೆಲವು ಮುಂಚೂಣಿ ಕೋವಿಡ್‌ ಯೋಧರೊಂದಿಗೆ ವರ್ಚುವಲ್ ಸಭೆಯ ಮೂಲಕ ಸಂವಾದ ನಡೆಸಿದರು. ‘ಸಲಾಮ್ ದಿಲ್ಲಿ‘ ಅಭಿಯಾನದಡಿ ಈ ಯೋಧರಿಗೆ ತಂಡದ ಜೆರ್ಸಿಗಳನ್ನೂ ಕಳುಹಿಸಿಕೊಟ್ಟಿದ್ದಾರೆ.

‘ಮಾನವೀಯ ಸೇವೆ ಸಲ್ಲಿಸುತ್ತಿರುವ ಎಲ್ಲ ಸಫಾಯಿ ಕರ್ಮಚಾರಿಗಳು, ವೈದ್ಯರು, ಭದ್ರತಾ ಪಡೆ, ರಕ್ತದಾನಿಗಳು, ಸಾಮಾಜಿಕ ಕಾರ್ಯಕರ್ತರು, ವಾಹನ ಚಾಲಕರು ಹಾಗೂ ಅವರ ಕುಟುಂಬಗಳಿಗೆ ನಮ್ಮ ಸಣ್ಣಮಟ್ಟದ ಕೃತಜ್ಞತೆಗಳು‘ ಎಂಬ ಇಶಾಂತ್‌ ಹೇಳಿಕೆಯನ್ನು ಡೆಲ್ಲಿ ಕ್ಯಾಪಿಟಲ್ಸ್‌ ಉಲ್ಲೇಖಿಸಿದೆ.

‘ಕೋವಿಡ್‌ ಯೋಧರನ್ನು ಅಭಿನಂದಿಸಲು ಪದಗಳೇ ಸಾಲದು. ಅವರಿಗೆ ನಮ್ಮ ದೊಡ್ಡ ನಮಸ್ಕಾರ. ಇಡೀ ಜಗತ್ತು ಕೋವಿಡ್‌ ಎದುರು ಹೋರಾಡುತ್ತಿರುವ ಈ ಸಂದರ್ಭದಲ್ಲಿ ಅವರ ಪ್ರಯತ್ನ ಎಂದೆಂದಿಗೂ ಪ್ರೇರಣಾದಾಯಕ‘ ಎಂದು ಅಮಿತ್‌ ಮಿಶ್ರಾ ಹೇಳಿದ್ದಾರೆ.

‘ಜನರ ಜೀವರಕ್ಷಣೆಗಾಗಿ ಕೋವಿಡ್‌ ಯೋಧರು ನಿಜವಾಗಿಯೂ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಅವರಿಗೆ ಬಹಳಷ್ಟು ಧನ್ಯವಾದಗಳು‘ ಎಂದು ಮೊಹಮ್ಮದ್‌ ಕೈಫ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT