ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್ ನಾಯಕತ್ವದ ಚೊಚ್ಚಲ ಪಂದ್ಯ; ಕಿಂಗ್ಸ್‌ ಕನ್ನಡಿಗರಿಗೆ ಡೆಲ್ಲಿ ಸವಾಲು

ಶ್ರೇಯಸ್‌ ಬಳಗಕ್ಕೆ ಜಯದ ತವಕ
Last Updated 19 ಸೆಪ್ಟೆಂಬರ್ 2020, 19:17 IST
ಅಕ್ಷರ ಗಾತ್ರ
ADVERTISEMENT
""

ದುಬೈ: ಕರ್ನಾಟಕದ ಕ್ರಿಕೆಟ್‌ಪ್ರೇಮಿಗಳಿಗೆ ಭಾನುವಾರ ಭರ್ಜರಿ ರಸದೌತಣ ಸವಿಯುವ ಅವಕಾಶ ಇದೆ. ಕನ್ನಡಿಗ ಕೆ.ಎಲ್. ರಾಹುಲ್ ನಾಯಕತ್ವದ ಬಳಗವು ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.

ಈ ಟೂರ್ನಿಯಲ್ಲಿ ಪಂಜಾಬ್ ಮತ್ತು ಡೆಲ್ಲಿ ತಂಡಗಳಿಗೆ ಇದು ಮೊದಲ ಪಂದ್ಯ. ಹಾಗೇ ನಾಯಕನಾಗಿ ರಾಹುಲ್‌ಗೂ ಚೊಚ್ಚಲ ಪಂದ್ಯ.ಈ ತಂಡದ ಗೆಲುವಿನಲ್ಲಿ ಕರ್ನಾಟಕದ ಮುಯಂಕ್ ಅಗರವಾಲ್, ಕರುಣ್ ನಾಯರ್, ಕೃಷ್ಣಪ್ಪ ಗೌತಮ್ ಮತ್ತು ಜೆ. ಸುಚಿತ್ ಅವರ ಆಟವೇ ಪ್ರಮುಖವಾಗಲಿದೆ.

ಸ್ಪೋಟಕ ಬ್ಯಾಟ್ಸ್‌ಮನ್, ವೆಸ್ಟ್‌ ಇಂಡೀಸ್‌ನ ಅನುಭವಿ ಆಟಗಾರ ಕ್ರಿಸ್‌ ಗೇಲ್, ಆಸ್ಟ್ರೇಲಿಯಾ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್, ಅನುಭವಿ ಬೌಲರ್ ಮೊಹಮ್ಮದ್ ಶಮಿ ಅವರೊಂದಿಗೆ ಡೆಲ್ಲಿ ವಿರುದ್ಧ ಜಯದ ಅಭಿಯಾನ ಆರಂಭಿಸಲು ರಾಹುಲ್ ತುದಿಗಾಲಿನಲ್ಲಿ ನಿಂತಿದ್ದಾರೆ. ಅವರ ಬಳಗಕ್ಕೆ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಮಾರ್ಗದರ್ಶನದ ಬಲವೂ ಇದೆ.

ಪಂಜಾಬ್ ತಂಡವು 2014ರಲ್ಲಿ ರನ್ನರ್ಸ್ ಅಪ್ ಆಗಿತ್ತು. ಈಗ ಪ್ರಶಸ್ತಿ ಜಯಿಸುವ ಹೊಣೆ ರಾಹುಲ್ ಮೇಲಿದೆ. ಹೋದ ವರ್ಷದ ಐಪಿಎಲ್‌ನಲ್ಲಿ ಕಿಂಗ್ಸ್‌ ತಂಡದ ಗೆಲುವುಗಳಲ್ಲಿ ರಾಹುಲ್ ಪ್ರಮುಖ ಪಾತ್ರ ವಹಿಸಿದ್ದರು. ಅವರು ಇನ್ನು 23 ರನ್‌ ಗಳಿಸಿದರೆ ಐಪಿಎಲ್‌ನಲ್ಲಿ ಎರಡು ಸಾವಿರ ರನ್‌ ಗಡಿ ದಾಟಿದವರ ಕ್ಲಬ್‌ಗೆ ರಾಹುಲ್ ಸೇರ್ಪಡೆಯಾಗುತ್ತಾರೆ. ಗೌತಮ್‌ ಮತ್ತು ಸುಚಿತ್ ಅವರು ಇದೇ ಮೊದಲ ಬಾರಿಗೆ ಪಂಜಾಬ್ ತಂಡದಲ್ಲಿ ಆಡುತ್ತಿದ್ದಾರೆ.

ಆದರೆ ಈ ಸಲ ಡೆಲ್ಲಿ ತಂಡವೂ ಹೊಸ ರೂಪದೊಂದಿಗೆ ಕಣಕ್ಕಿಳಿಯುತ್ತಿದೆ. ತಂಡದಲ್ಲಿ ಎಡಗೈ ಆರಂಭಿಕ ಆಟಗಾರ ಶಿಖರ್ ಧವನ್ ಇದ್ದಾರೆ. ಅಲ್ಲದೇ ಭರವಸೆಯ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಕೂಡ ಈ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

ಮುಂಬೈ ಪ್ರತಿಭೆ ಪೃಥ್ವಿ ಶಾ, ದೆಹಲಿ ಹುಡುಗ ರಿಷಭ್ ಪಂತ್ ಅವರಿಗೆ ತಮ್ಮ ಬ್ಯಾಟಿಂಗ್ ಲಯ ಕಂಡುಕೊಳ್ಳಲು ಇಲ್ಲಿ ಅವಕಾಶಗಳು ಸಿಗುವುದು ಖಚಿತ.

ಅಲ್ಲದೇ ಹೋದ ಸಲ ಪಂಜಾಬ್ ತಂಡದ ನಾಯಕರಾಗಿದ್ದ ಆಫ್‌ಸ್ಪಿನ್ನರ್ ಆರ್. ಆಶ್ವಿನ್ ಈಗ ಡೆಲ್ಲಿ ತಂಡದಲ್ಲಿದ್ದಾರೆ. ಅನುಭವಿ ಲೆಗ್‌ಸ್ಪಿನ್ನರ್ ಅಮಿತ್ ಮಿಶ್ರಾ ಅವರೊಂದಿಗೆ ಸ್ಪಿನ್ ವಿಭಾಗದ ಹೊಣೆ ನಿಭಾಯಿಸಲಿದ್ದಾರೆ. ಎಡಗೈ ಆಲ್‌ರೌಂಡರ್ ಅಕ್ಷರ್ ಪಟೇಲ್, ಅನುಭವಿ ವೇಗಿ ಇಶಾಂತ್ ಶರ್ಮಾ ತಂಡದ ಬೌಲಿಂಗ್ ಬಲ ಹೆಚ್ಚಿಸಬಲ್ಲ ಸಮರ್ಥರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT