ಬುಧವಾರ, ಜನವರಿ 27, 2021
21 °C
ತ್ರಿಪುರ ತಂಡಕ್ಕೆ ಸೋಲು

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿ: ದೇವದತ್ತ 99 ರನ್; ಕರ್ನಾಟಕ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆರಂಭಿಕ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್ ಶತಕಕ್ಕೆ ಕೇವಲ ಒಂದು ರನ್ ಕಡಿಮೆಯಾಯಿತು. ಆದರೆ ಕರ್ನಾಟಕ ತಂಡದ ಜಯಕ್ಕೆ ಅವರ ಆಟವೇ ಕಾರಣವಾಯಿತು.

ಆದರೆ, ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ ಮೂರನೇ ಪಂದ್ಯದಲ್ಲಿ ಕರುಣ್ ನಾಯರ್ ಬಳಗವು 10 ರನ್‌ಗಳಿಂದ ತ್ರಿಪುರ ಎದುರು ಜಯಿಸಿತು.  ಎಲೀಟ್ ಎ ಗುಂಪಿನ ಎರಡನೇ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಸೋತಿದ್ದ ಆತಿಥೇಯ ತಂಡವು ಮತ್ತೆ ಜಯದ ಹಾದಿಗೆ ಮರಳಿತು.

ಟಾಸ್ ಗೆದ್ದ ತ್ರಿಪುರ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕರ್ನಾಟಕ ತಂಡವು ದೇವದತ್ತ (ಔಟಾಗದೆ 99; 67ಎಸೆತ, 9ಬೌಂಡರಿ, 4ಸಿಕ್ಸರ್) ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 167 ರನ್ ಗಳಿಸಿತು. ಅದಕ್ಕುತ್ತರವಾಗಿ ಮಣಿಶಂಕರ್ ಮುರಾಸಿಂಗ್ ನಾಯಕತ್ವದ ತ್ರಿಪುರ ತಂಡಕ್ಕೆ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 157 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ದೇವದತ್ತ ಮಿಂಚು: ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಹೋದ ವರ್ಷ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡಿದ್ದ ದೇವದತ್ತ ಮಿಂಚಿದ್ದರು. ಗುರುವಾರದ ಪಂದ್ಯದಲ್ಲಿ ರೋಹನ್ ಕದಂ (31, 23ಎ) ಅವರೊಂದಿಗೆ ಇನಿಂಗ್ಸ್‌  ಆರಂಭಿಸಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 62 ರನ್ ಸೇರಿಸಿದರು. ತ್ರಿಪುರ ಬೌಲರ್‌ಗಳ ಎಸೆತಗಳನ್ನು ಲೀಲಾಜಾಲವಾಗಿ ಆಡಿದರು.

ಆದರೆ ಒಂಬತ್ತನೇ ಓವರ್‌ನಲ್ಲಿ ರೋಹನ್ ಔಟಾದ ನಂತರ ಬಂದ ಬ್ಯಾಟ್ಸ್‌ಮನ್‌ಗಳು ದೊಡ್ಡ ಮೊತ್ತ ಗಳಿಸಲಿಲ್ಲ. ನಾಯಕ ಕರುಣ್ ನಾಯರ್ ಕೇವಲ ಐದು ರನ್ ಗಳಿಸಿದರು. ಕೆ.ಎಲ್. ಶ್ರೀಜಿತ್ (11), ಅನಿರುದ್ಧ ಜೋಶಿ (12) ಅವರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಕೃಷ್ಣಪ್ಪ ಗೌತಮ್ ಕೂಡ ಐದು ರನ್ ಗಳಿಸಿ ನಿರ್ಗಮಿಸಿದರು.

ಒಂದು ಬದಿಯಲ್ಲಿ ವಿಕೆಟ್‌ಗಳು ಪತನವಾಗುತ್ತಿದ್ದರೂ, ದೇವದತ್ತ ಮಾತ್ರ ದಿಟ್ಟತನದಿಂದ ಬ್ಯಾಟಿಂಗ್ ಮಾಡಿದರು. ತಂಡವು ಗೌರವಾರ್ಹ ಮೊತ್ತ ಗಳಿಸಲು ಕಾರಣರಾದರು.

ಗುರಿ ಬೆನ್ನಟ್ಟಿದ ತ್ರಿಪುರ ತಂಡಕ್ಕೆ ಅಭಿಮನ್ಯು ಮಿಥುನ್ ಮೊದಲ ಓವರ್‌ನಲ್ಲಿಯೇ  ಆಘಾತ ಕೊಟ್ಟರು. ಆರ್ಕ್‌ಪ್ರಭ ಸಿನ್ಹಾ ವಿಕೆಟ್ ಗಳಿಸಿದರು. ಮಧ್ಯಮವೇಗಿ  ಆರ್. ಕೌಶಿಕ್ ಮತ್ತು ಸ್ಪಿನ್ನರ್ ಕೆ. ಗೌತಮ್ ಅವರು ಕ್ರಮವಾಗಿ ಉದಿಯನ್ ಬೋಸ್ ಮತ್ತು ವಿಶಾಲ್  ಘೋಷ್ ವಿಕೆಟ್ ಗಳಿಸಿದರು. ಪ್ರವೀಣ್ ದುಬೆ ಕೂಡ ತಮ್ಮ ಕೈಚಳಕ ತೋರಿದರು. ಅವರು ಮಿಲಿಂದ್ ಕುಮಾರ್ (20 ರನ್) ವಿಕೆಟ್ ಕಬಳಿಸಿದರು.

ಈ ಹಂತದಲ್ಲಿ ಜೊತೆಗೂಡಿದ ರಜತ್ ಡೇ (ಔಟಾಗದೆ 44) ಮತ್ತು ನಾಯಕ ಮಣಿಶಂಕರ್ (ಔಟಾಗದೆ 61; 33ಎ) ವಿಕೆಟ್ ಪತನ ತಡೆದರು. ಅಲ್ಲದೇ ತಂಡವನ್ನು ಗೆಲುವಿನ ಸನಿಹಕ್ಕೆ ತೆಗೆದುಕೊಂಡು ಹೋದರು. ಆದರೆ, ಬೌಲರ್‌ಗಳ ಚಾಣಾಕ್ಷತೆ ಬೌಲಿಂಗ್‌ನಿಂದಾಗಿ ತ್ರಿಪುರದ ಜೋಡಿಯು ಗುರಿ ಮುಟ್ಟಲಿಲ್ಲ.

ಸಂಕ್ಷಿಪ್ತ ಸ್ಕೋರ್
ಕರ್ನಾಟಕ:
20 ಓವರ್‌ಗಳಲ್ಲಿ 5ಕ್ಕೆ167 (ರೋಹನ್ ಕದಂ 31, ದೇವದತ್ತ ಪಡಿಕ್ಕಲ್ ಔಟಾಗದೆ 99, ರಾಣಾ ದತ್ತಾ 41ಕ್ಕೆ2)
ತ್ರಿಪುರ: 20 ಓವರ್‌ಗಳಲ್ಲಿ 4ಕ್ಕೆ157 (ಮಿಲಿಂದ್ ಕುಮಾರ್ 20, ರಜತ್ ಡೇ ಔಟಾಗದೆ 44, ಮಣಿಶಂಕರ್ ಮುರಾಸಿಂಗ್ ವಠಾಗದೆ 61)
ಫಲಿತಾಂಶ: ಕರ್ನಾಟಕ ತಂಡಕ್ಕೆ 10 ರನ್‌ಗಳ ಜಯ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು