ನವದೆಹಲಿ: ಬಾಧಿಸುತ್ತಿರುವ ಎಡ ಮೊಣಕಾಲಿನ ನೋವಿಗೆ ಸಂಬಂಧಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಮುಂಬೈನಲ್ಲಿ ತಜ್ಞ ಕ್ರೀಡಾ ವೈದ್ಯರಿಂದ (ಸ್ಪೋರ್ಟ್ಸ್ ಆರ್ಥೊಪೆಡಿಕ್ಸ್) ಸಲಹೆ ಪಡೆದುಕೊಳ್ಳಲಿದ್ದಾರೆ ಎಂದು ಫ್ರಾಂಚೈಸಿಯ ಸಿಇಒ ಕಾಶಿ ವಿಶ್ವನಾಥನ್ ಬುಧವಾರ ಇಲ್ಲಿ ತಿಳಿಸಿದ್ದಾರೆ.
ವಿಕೆಟ್ ಕೀಪಿಂಗ್ ಮಾಡುವಾಗ ಅಂಥ ಸಮಸ್ಯೆ ಕಾಣದಿದ್ದರೂ, ಧೋನಿ ಅವರು ಐಪಿಎಲ್ ಋತುವಿನುದ್ದಕ್ಕೂ ಎಡಮೊಣಕಾಲಿಗೆ ಪಟ್ಟಿಕಟ್ಟಿಕೊಂಡು ಆಡಿದ್ದರು. ಎಂಟನೇ ಕ್ರಮಾಂಕದಲ್ಲಿ ಆಡಲು ಬರುತ್ತಿದ್ದ ಅವರು ರನ್ ಗಳಿಸುವಾಗ ಎಂದಿನ ವೇಗದಲ್ಲಿ ಓಡುತ್ತಿರಲಿಲ್ಲ.
‘ಧೋನಿ ಅವರು ಮೊಣಕಾಲಿನ ನೋವಿಗಾಗಿ ತಜ್ಞರ ಸಲಹೆ ಪಡೆಯಲು ಮುಂದಾಗಿರುವುದು ನಿಜ. ಅವರ ಸಲಹೆಯಂತೆ ಮುಂದಿನ ನಿರ್ಧಾರ ಕೈಗೊಳ್ಳುವರು’ ಎಂದರು.
‘ಧೋನಿ ಮುಂದಿನ ಋತುವಿನಲ್ಲಿ ಆಡದೇ ಇರುವ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆಯೇ? ಆ ಮೂಲಕ ಮಿನಿ ಹರಾಜಿನಲ್ಲಿ ₹15 ಕೋಟಿ ಖರೀದಿಗೆ ಮುಕ್ತವಾಗಿರಲಿದೆಯೇ’ ಎಂಬ ಪ್ರಶ್ನೆಗೆ, ಸಿಇಒ ಅವರು, ‘ನಾವು ಆ ನಿಟ್ಟಿನಲ್ಲಿ ಯೋಚಿಸಿಯೇ ಇಲ್ಲ. ಆ ಹಂತಕ್ಕೆ ಇನ್ನೂ ತಲುಪಿಲ್ಲ’ ಎಂದರು.