ಕರುಣ್‌ ಪರ ಹರಭಜನ್‌ ಸಿಂಗ್ ಬ್ಯಾಟಿಂಗ್‌

7
ಆಯ್ಕೆಗೆ ಅನುಸರಿಸುವ ಮಾನದಂಡವೇನು?: ಹಿರಿಯ ಆಟಗಾರ ಪ್ರಶ್ನೆ

ಕರುಣ್‌ ಪರ ಹರಭಜನ್‌ ಸಿಂಗ್ ಬ್ಯಾಟಿಂಗ್‌

Published:
Updated:
Deccan Herald

ನವದೆಹಲಿ: ‘ಭಾರತ ಸೀನಿಯರ್‌ ತಂಡವನ್ನು ಆಯ್ಕೆ ಮಾಡುವಾಗ ಎಂ.ಎಸ್‌.ಕೆ.ಪ್ರಸಾದ್‌ ನೇತೃತ್ವದ ಆಯ್ಕೆ ಸಮಿತಿ ಯಾವ ಬಗೆಯ ಮಾನದಂಡಗಳನ್ನು ಅನುಸರಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದೇ ಕಷ್ಟ’ ಎಂದು ಹಿರಿಯ ಸ್ಪಿನ್ನರ್‌ ಹರಭಜನ್‌ ಸಿಂಗ್‌ ತಿಳಿಸಿದ್ದಾರೆ.

ಕರ್ನಾಟಕದ ಕರುಣ್‌ ನಾಯರ್‌ ಅವರನ್ನು ಇಂಗ್ಲೆಂಡ್‌ ಮತ್ತು ಅಫ್ಗಾನಿಸ್ತಾನ ಎದುರಿನ ಟೆಸ್ಟ್‌ ಸರಣಿಗಳಿಗೆ ಆಯ್ಕೆ ಮಾಡಲಾಗಿತ್ತು. ಆರು ಟೆಸ್ಟ್‌ಗಳ ಪೈಕಿ ಒಂದರಲ್ಲೂ ಅವರಿಗೆ ಆಡುವ ಬಳಗದಲ್ಲಿ ಸ್ಥಾನ ನೀಡಿರಲಿಲ್ಲ. ಹೀಗಿದ್ದೂ ಅವರನ್ನು ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿಗೆ ಪ್ರಕಟಿಸಲಾಗಿರುವ ತಂಡದಿಂದ ಕೈಬಿಡಲಾಗಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಹರಭಜನ್‌ ‘ಆಯ್ಕೆ ಸಮಿತಿಯ ನಿರ್ಣಯಗಳು ನನಗೆ ರಹಸ್ಯದಂತೆ ಗೋಚರಿಸುತ್ತವೆ. ಅವುಗಳನ್ನು ಭೇದಿಸಿ ಸತ್ಯ ಹೊರಗೆಡಹುವ ಕೆಲಸ ಆಗಬೇಕು. ಆಟಗಾರನೊಬ್ಬನನ್ನು ಆಯ್ಕೆ ಮಾಡಿದ ಮೇಲೆ ಒಂದು ಪಂದ್ಯದಲ್ಲಾದರೂ ಅವಕಾಶ ನೀಡಬೇಕು. ಆರು ಪಂದ್ಯಗಳಲ್ಲೂ ‘ಬೆಂಚ್‌’ ಕಾಯಿಸಿದರೆ ಹೇಗೆ’ ಎಂದು ಪ್ರಶ್ನಿಸಿದ್ದಾರೆ.

‘ಆಯ್ಕೆ ಸಮಿತಿ ಪಾರದರ್ಶಕವಾಗಿ ಕೆಲಸ ಮಾಡುತ್ತಿಲ್ಲ. ಒಬ್ಬರ ಕಣ್ಣಿಗೆ ಸುಣ್ಣ ಮತ್ತೊಬ್ಬರ ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡುತ್ತಿದೆ. ಆಟಗಾರನೊಬ್ಬ ಸತತ ವೈಫಲ್ಯ ಕಂಡರೂ ಆತನಿಗೆ ಹೆಚ್ಚೆಚ್ಚು ಅವಕಾಶ ನೀಡಲಾಗುತ್ತದೆ. ಮತ್ತೊಬ್ಬನಿಗೆ ಅವಕಾಶವನ್ನೇ ಕೊಡುವುದಿಲ್ಲ. ಇದು ಯಾವ ನ್ಯಾಯ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ವಿಂಡೀಸ್‌ ವಿರುದ್ಧದ ಸರಣಿಯಲ್ಲಿ ಹನುಮ ವಿಹಾರಿ ವೈಫಲ್ಯ ಕಂಡರೆ ಮತ್ತೆ ಕರುಣ್‌ ಅವರನ್ನು ಆಯ್ಕೆ ಮಾಡುತ್ತಾರೆ. ಹೀಗೆ ಪದೇ ಪದೇ ಬದಲಾವಣೆ ಮಾಡುವುದರಿಂದ ತಂಡದ ಸಾಮರ್ಥ್ಯ ಕುಗ್ಗುತ್ತದೆ. ಆಟಗಾರರ ಆತ್ಮವಿಶ್ವಾಸಕ್ಕೂ ಧಕ್ಕೆಯಾಗುತ್ತದೆ’ ಎಂದು ನುಡಿದಿದ್ದಾರೆ.

‘ಆಯ್ಕೆ ಸಮಿತಿ ಮುಂಬರುವ ಆಸ್ಟ್ರೇಲಿಯಾ ಪ್ರವಾಸದ ವೇಳೆಗೆ ಲೋಪಗಳನ್ನು ಸರಿಪಡಿಸಿಕೊಳ್ಳಬೇಕು. ವೈಯಕ್ತಿಕ ಹಿತಾಸಕ್ತಿ ಬದಿಗೊತ್ತಬೇಕು. ತಂಡದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !