ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರದ್ದಾದ ರಣಜಿ ಟೂರ್ನಿ: ಕೈಸೇರದ ಪರಿಹಾರ ಧನ

ರಾಜ್ಯ ಕ್ರಿಕೆಟ್ ಸಂಸ್ಥೆಗಳಿಂದ ಲಭಿಸಿದ ಆಟಗಾರರ ಮಾಹಿತಿ: ಬಿಸಿಸಿಐ ಖಜಾಂಜಿ ಅರುಣ್
Last Updated 24 ಮೇ 2021, 15:24 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19ರಿಂದಾಗಿ ಕಳೆದ ಬಾರಿ ರದ್ದಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪರಿಹಾರ ಮೊತ್ತ ಇನ್ನೂ ಆಟಗಾರರ ಕೈಸೇರಲಿಲ್ಲ. ಟೂರ್ನಿಯಲ್ಲಿ ಆಡಬೇಕಾಗಿದ್ದವರ ಮಾಹಿತಿಯನ್ನು ರಾಜ್ಯ ಸಂಸ್ಥೆಗಳು ಸಲ್ಲಿಸದ ಕಾರಣ ಹಣ ಬಿಡುಗಡೆ ಮಾಡಲು ಆಗಲಿಲ್ಲ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ.

ಇತರ ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಪಾಲ್ಗೊಂಡ ಆಟಗಾರರಿಗೆ ಕೆಲವು ಸಿಗಬೇಕಾಗಿರುವ ಸಂಭಾವನೆಯ ಮೊತ್ತ ಕೆಲವು ವರ್ಷಗಳಿಂದ ಬಿಡುಗಡೆಯಾಗಲಿಲ್ಲ.ಈ ವರ್ಷದ ವಿಜಯ್ ಹಜಾರೆ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೆ ಸಂಬಂಧಿಸಿದ ಮೊತ್ತವನ್ನು ಮಾತ್ರ ಬಿಡುಗಡೆ ಮಾಡಲಾಗಿದೆ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಲ್ ತಿಳಿಸಿದ್ದಾರೆ.

ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರನ್ನರ್ ಅಪ್ ಆದ ಭಾರತ ತಂಡಕ್ಕೆ ಬಿಸಿಸಿಐನಿಂದ ಹಣ ವರ್ಗಾವಣೆ ಆಗಲಿಲ್ಲ ಎಂದು ಇತ್ತೀಚೆಗೆ ಇಂಗ್ಲೆಂಡ್‌ನ ‘ಟೆಲಿಗ್ರಾಫ್‌’ ವರದಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ವಾರದ ಒಳಗೆ ಹಣ ನೀಡುವುದಾಗಿ ಬಿಸಿಸಿಐ ತಿಳಿಸಿತ್ತು. ಇದರ ಬೆನ್ನಲ್ಲೇ ಪುರುಷರ ಮತ್ತು ಮಹಿಳೆಯರ ವಿವಿಧ ಟೂರ್ನಿಗಳಿಗೆ ಸಂಬಂಧಿಸಿದ ಮೊತ್ತ ಬಾಕಿ ಇದೆ ಎಂಬುದು ಬಹಿರಂಗವಾಗಿದೆ.

‘ಎಷ್ಟು ಟೂರ್ನಿಗಳಲ್ಲಿ ಯಾರೆಲ್ಲ ಆಡಿದ್ದಾರೆ, ಕಾಯ್ದಿರಿಸಿದ ಆಟಗಾರರ ಪಟ್ಟಿಯಲ್ಲಿ ಇದ್ದವರು ಯಾರು ಎಂಬಿತ್ಯಾದಿ ಮಾಹಿತಿಯನ್ನು ರಾಜ್ಯ ಸಂಸ್ಥೆಗಳು ನೀಡಬೇಕು. ಆದರೆ ಈ ವರೆಗೆ ಇಂಥ ಯಾವ ವಿವರವೂ ಬಂದಿಲ್ಲ’ ಎಂದು ಧುಮಾಲ್ ವಿವರಿಸಿದ್ದಾರೆ.

₹ 20 ಲಕ್ಷದಿಂದ ₹ 10 ಕೋಟಿ ವರೆಗೆ ಗಳಿಸಿರುವ ಆಟಗಾರರು ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿದ್ದರು. ಆದರೆ ಐಪಿಎಲ್‌ ತಂಡಗಳಲ್ಲಿ ಇಲ್ಲದ ಸುಮಾರು 700 ಆಟಗಾರರು ದೇಶಿ ಟೂರ್ನಿಗಳಿಂದ ಸಿಗುವ ಸಂಭಾವನೆಯನ್ನೇ ನಂಬಿಕೊಂಡು ಇರುತ್ತಾರೆ. ಪೂರ್ತಿ ದೇಶಿ ಋತುವಿನಲ್ಲಿ ಆಡಿದರೆ ಅವರಿಗೆ ₹ 10 ಲಕ್ಷದಿಂದ ₹ 20 ಲಕ್ಷದ ವರೆಗೆ ಸಿಗುತ್ತದೆ. ಈ ಪೈಕಿ ಗರಿಷ್ಠ ಸಂಭಾವನೆ ಗಳಿಸುವುದು ರಣಜಿ ಟ್ರೋಫಿಯಿಂದ. ಪಂದ್ಯವೊಂದಕ್ಕೆ ಗರಿಷ್ಠ ₹ 1.40 ಲಕ್ಷದ ವರೆಗೂ ಸಿಗುತ್ತದೆ.

‘ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪರಿಹಾರ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಖಜಾಂಚಿ ಸರಿಯಾಗಿಯೇ ಹೇಳಿದ್ದಾರೆ. ಯಾರಿಗೆಲ್ಲ ಮೊತ್ತ ಸಂದಾಯ ಆಗಬೇಕು ಎಂದು ಯಾರು ಬಲ್ಲ. ಈ ಹಿನ್ನೆಲೆಯಲ್ಲಿ ಸಮರ್ಪಕವಾದ ಮಾಹಿತಿ ಬೇಕಾಗುತ್ತದೆ’ ಎಂದು ಮಾಜಿ ಆಟಗಾರರೊಬ್ಬರು ಹೇಳಿದರು.

ಪ್ರಸಾರ ಹಕ್ಕುಗಳ ಮಾರಾಟದಿಂದ ಬಂದ ಹಣದ ಒಂದು ಭಾಗವನ್ನು ಬಿಸಿಸಿಐ ಆಟಗಾರರಿಗಾಗಿ ತೆಗೆದಿರಿಸುತ್ತದೆ. ವಾರ್ಷಿಕ ಲೆಕ್ಕಪತ್ರಗಳ ಪರಿಶೀಲನೆ ಆದ ನಂತರ ಪ್ರತಿವರ್ಷ ಸೆಪ್ಟೆಂಬರ್‌ಬರ್‌ನಲ್ಲಿ ಹಣ ಬಿಡುಗಡೆ ಮಾಡಲಾಗುತ್ತದೆ. ಆಡಳಿತ ಸಮಿತಿ (ಸಿಒಎ) ಕಾರ್ಯಾಚರಣೆ ಆರಂಭವಾದ 2016–17ರಿಂದ ದೇಶಿ ಆಟಗಾರರಿಗೆ ಸಂದಾಯ ಆಗಬೇಕಿರುವ ಮೊತ್ತ ಬಾಕಿ ಇದೆ ಎಂದು ಧುಮಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT