ಬೆಂಗಳೂರು: ಐಪಿಎಲ್ ಆರಂಭವಾದಾಗಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟ್ರೋಫಿ ಎತ್ತಿಹಿಡಿಯಲಿ ಎಂದು ಹಂಬಲಿಸುತ್ತಿದ್ದ, ‘ಈ ಸಲ ಕಪ್ ನಮ್ಮದೇ’ ಎಂದು ಹುರಿದುಂಬಿಸುತ್ತಲೇ ಇದ್ದ ಆರ್ಸಿಬಿ ಅಭಿಮಾನಿಗಳ ಕನಸು ನನಸಾಗಲು ಬರೋಬ್ಬರಿ 18 ವರ್ಷಗಳು ಬೇಕಾದವು. ದೂರದ ಅಹಮದಾಬಾದ್ನಲ್ಲಿ ಆರ್ಸಿಬಿ ಐಪಿಎಲ್ ಫೈನಲ್ ಪಂದ್ಯವನ್ನು ಗೆಲ್ಲುತ್ತಿದ್ದಂತೆ ಇತ್ತ ಬೆಂಗಳೂರಿನಲ್ಲಿ ಅಭಿಮಾನಿಗಳ ಸಂಭ್ರಮದ ಕಟ್ಟೆಯೊಡೆಯಿತು. ನಗರದ ಬೀದಿ–ಬೀದಿಗಳಲ್ಲೂ ‘ಆರ್ಸಿಬಿ, ಆರ್ಸಿಬಿ’ ಘೋಷಣೆ ತುಂಬಿತು.

‘ಈ ಸಲ ಕಪ್ ನಮ್ದೇ’ ಎಂದು ಗೊತ್ತಾದ ಮರುಕ್ಷಣವೇ ಬೀದಿಗಿಳಿದ ಆರ್ಸಿಬಿ ಅಭಿಮಾನಿಗಳ ಸಂಭ್ರಮಕ್ಕೆ ಎಲ್ಲೆಯೇ ಇರಲಿಲ್ಲ. ಮಕ್ಕಳು, ಯುವಕರು, ಗೃಹಿಣಿಯರು, ಮಧ್ಯವಯಸ್ಕರು, ಇಳಿ ವಯಸ್ಸಿನ ಅಭಿಮಾನಿಗಳೂ ಮನೆಯಿಂದ ಹೊರಗೆ ಬಂದು ಆರ್ಸಿಬಿ ವಿಜಯೋತ್ಸವದಲ್ಲಿ ಭಾಗಿಯಾದರು. ಪಂದ್ಯ ವೀಕ್ಷಣೆಗಾಗಿ ಮನೆ ಸೇರಿದ್ದ, ಕ್ಲಬ್–ರೆಸ್ಟೋಂರೆಂಟ್ಗಳಲ್ಲಿ ಜಮಾಯಿಸಿದ್ದ ಲಕ್ಷಾಂತರ ಅಭಿಮಾನಿಗಳು ಒಮ್ಮೆಗೇ ರಸ್ತೆಗೆ ಇಳಿದಿದ್ದರಿಂದ ನಗರದ ಹಲವಡೆ ಮಧ್ಯರಾತ್ರಿಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು.

ಅಬಾಲವೃದ್ಧರಾಗಿ ಎಲ್ಲರೂ ರಸ್ತೆಗಿಳಿದು, ‘ಆರ್ಸಿಬಿ, ಆರ್ಸಿಬಿ, ಆರ್ಸಿಬಿ’ ಎಂದು ಕೂಗತೊಡಗಿದಿರು. ಈ ಕ್ಷಣಕ್ಕಾಗಿಯೇ ಕೂಡಿಟ್ಟುಕೊಂಡಿದ್ದರಂಬಂತೆ ಪಟಾಕಿಗಳನ್ನು ಹೊರತೆಗೆದು, ಸಿಡಿಸತೊಡಗಿದರು. ಕಿವಿಗಡಚಿಕ್ಕುವ ಪಟಾಕಿ ಸದ್ದಿನ ನಡುವೆಯೂ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿತ್ತು. ಅಲ್ಲಿ ಸಿಡಿಯುತ್ತಿದ್ದದ್ದು ಪಟಾಕಿ ಮಾತ್ರವಲ್ಲ, ಬದಲಿಗೆ 18 ವರ್ಷಗಳಿಂದ ಅದುಮಿಟ್ಟುಕೊಂಡಿದ್ದ ನಿರಾಸೆ.

ಒಬ್ಬರು ರಸ್ತೆಗಳಿಯುತ್ತಿದ್ದಂತೆಯೇ, ಅವರ ಹಿಂದೆ ಮತ್ತೊಬ್ಬರೆಂಬಂತೆ ಜನ ರಸ್ತೆಗೆ ಇಳಿಯುತ್ತಲೇ ಹೋದರು. ರಾತ್ರಿ ಹನ್ನೆರಡರ ವೇಳೆಗೆ ನಗರದ ಬಹುತೇಕ ಮುಖ್ಯರಸ್ತೆಗಳು, ವೃತ್ತಗಳು ಸಂಭ್ರಮಾಚರಣೆಯ ತಾಣಗಳಾಗಿ ಬದಲಾಗಿ ಹೋದವು. ಇನ್ನು ರಸ್ತೆಗೆ ಇಳಿಯದವರು ಬಾಲ್ಕನಿಗಳಲ್ಲಿ, ಮನೆ ಬಾಗಿಲಿನಲ್ಲಿ ನಿಂತು ವಿಜಯೋತ್ಸವಕ್ಕೆ ಜತೆಯಾದರು.

ತಡರಾತ್ರಿಯೂ ತೆರೆದಿದ್ದ ಬೇಕರಿಗಳಲ್ಲಿ ಸಿಹಿ ಖರೀದಿಸಿ, ರಸ್ತೆಯಲ್ಲಿ ಹಂಚಿದರು. ರಸ್ತೆಯಲ್ಲಿ ಹೋಗುತ್ತಿದ್ದ ವಾಹನಗಳನ್ನು ತಡೆದು, ಸಿಹಿ ಮತ್ತು ಸಂಭ್ರಮ ಹಂಚಿಕೊಂಡರು. ಇನ್ನೂ ಕೆಲವರು ಬೈಕು, ಕಾರುಗಳನ್ನು ಏರಿ ಮೆರವಣಿಗೆ ಹೊರಟರು. ರಸ್ತೆಯಲ್ಲಿ ಅಲ್ಲಲ್ಲಿ ನಿಂತಿದ್ದವರೂ ಮೆರವಣಿಗೆಗೆ ಜತೆಯಾದರು. ಇನ್ನೂ ಹಲವರು ರಸ್ತೆಗಳಲ್ಲಿ ಗುಂಪು ಸೇರಿ, ಕುಣಿದು ಕುಪ್ಪಳಿಸಿದರು. 18 ವರ್ಷಗಳ ಕಾಯುವಿಕೆ ಮರೆಯುವಷ್ಟು ಕುಣಿದರು, ಕೂಗಿದರು.

ಎದುರಿಗಿರವವರು, ಪಕ್ಕದಲ್ಲಿರುವವರು, ಹಿಂದಿರುವವರು, ಮುಂದಿರುವವರು ಎಲ್ಲರೂ ನಮ್ಮವರೆ ಎಂಬಂತೆ ಕೈಬೀಸಿ ವಿಜಯದ ಸಂಕೇತ ತೋರಿದರು. ಎದುರಾದವರಿಗೆ ‘ಹೈ ಫೈವ್’ ಹೊಡೆದರು. ರಸ್ತೆಗೆ ಇಳಿದಿದ್ದವರ ಮಧ್ಯೆ ಬೇಧದ ಯಾವ ಒಡಕೂ ಕಾಣಲಿಲ್ಲ. ಅಲ್ಲಿದ್ದದ್ದು ಆರ್ಸಿಬಿ ಅಭಿಮಾನ, ಸಂಭ್ರಮ, ವಿಜಯೋತ್ಸವ ಮತ್ತು ಅಬ್ಬರ ಮಾತ್ರ.

ಆರ್ಸಿಬಿ ಅಭಿಮಾನಿಗಳ ಸಂಭ್ರಮದ ಅಬ್ಬರ ಅದಾಗಲೇ ನಿದ್ರೆಗೆ ಜಾರಿದ್ದವರನ್ನೂ ಬಡಿದೆಬ್ಬಿಸಿತು. ಮನೆ–ಮನೆಗಳ ದೀಪಗಳು ಬೆಳಗಿದವು. ಸಮಯ ಕಳೆಯುತ್ತಾ ಹೋದಂತೆ ಸಂಭ್ರಮಾಚರಣೆ ಹೆಚ್ಚುತ್ತಲೇ ಹೋಯಿತು. ಪೊಲೀಸರೂ ಅಡ್ಡಿಪಡಿಸದೆ, ಸಂಭ್ರಮಾಚರಣೆಯ ಭಾಗವಾದರು. ರಾತ್ರಿ ಕಳೆದಂತೂ ಸಂಭ್ರಮ ಹೆಚ್ಚುತ್ತಲೇ ಹೋಯಿತು. ಮತ್ತೆ ನಿದ್ರೆಗೆ ಜಾರುವವರೆಗೂ ‘ಆರ್ಸಿಬಿ, ಆರ್ಸಿಬಿ, ಆರ್ಸಿಬಿ’ ಎಂಬುದಹ ಕಿವಿಗೆ ಅಪ್ಪಳಿಸುತ್ತಲೇ ಇತ್ತು.

ಐಪಿಎಲ್ ಫೈನಲ್ ಜಾತ್ರೆ...

ಹದಿನೆಂಟನೇ ಆವೃತ್ತಿಯ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವಣ ಫೈನಲ್ ಪಂದ್ಯ ಅಹಮದಾಬಾದ್ನಲ್ಲಿ ನಡೆದರೂ ಬೆಂಗಳೂರಿನ ರಸ್ತೆ, ಮೈದಾನ, ಪಬ್, ಮಾಲ್, ಬಾರ್ ಅಂಡ್ ರೆಸ್ಟೋರೆಂಟ್ಗಳು ಅಕ್ಷರಶಃ ಕ್ರಿಕೆಟ್ ವೀಕ್ಷಣಾ ಮಂದಿರಗಳಾಗಿ ಬದಲಾಗಿದ್ದವು.

ಐಪಿಎಲ್ ಆರಂಭವಾದಾಗಿನಿಂದ ಮೂರು ಬಾರಿ ಫೈನಲ್ ಪ್ರವೇಶಿಸಿದ್ದರೂ ಆರ್ಸಿಬಿ ಒಮ್ಮೆಯೂ ಟ್ರೋಫಿ ಗೆದ್ದಿರಲಿಲ್ಲ. ಆದರೂ ಆರ್ಸಿಬಿ ಅಭಿಮಾನಿಗಳಿಗೆ ತಂಡದ ಮೇಲಿನ ಅಭಿಮಾನ ಕಡಿಮೆ ಆಗಿರಲಿಲ್ಲ. ಬದಲಿಗೆ ಪ್ರತಿ ಬಾರಿ ಪಂದ್ಯ ಆರಂಭವಾದಾಗಲೂ, ‘ಈ ಸಲ ಕಪ್ ನಮ್ದೇ’ ಎಂದು ಬೆಂಬಲಿಸಿ ಕ್ರೀಡಾಂಗಣಕ್ಕೆ ದಾಂಗುಡಿ ಇಡುತ್ತಿದ್ದರು. ಈ ಸಾಲಿನಲ್ಲಿ ಆರ್ಸಿಬಿ ಆಡಿದ ಪ್ರತಿ ಪಂದ್ಯದಲ್ಲೂ ಇದೇ ಹುಮ್ಮಸ್ಸಿನೊಂದಿಗೆ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದರು.

ಅಹಮದಾಬಾದ್ನಲ್ಲಿ ಫೈನಲ್ ಪಂದ್ಯ ನಡೆಯುತ್ತಿರುವ ಕಾರಣ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರುವ ಅವಕಾಶ ಬೆಂಗಳೂರಿಗರಿಗೆ ಮತ್ತು ಆರ್ಸಿಬಿ ಅಭಿಮಾನಿಗಳ ಕೈತಪ್ಪಿತ್ತು. ಆದರೂ, ಇಡೀ ಬೆಂಗಳೂರಿನಲ್ಲಿ ಕ್ರಿಕೆಟ್ ಹಬ್ಬ ಆಚರಿಸುವ ಉತ್ಸಾಹ ಅಭಿಮಾನಿಗಳಲ್ಲಿ ಕುಂದಿರಲಿಲ್ಲ.

ಸಂಜೆ 7.30ಕ್ಕೆ ಪಂದ್ಯ ಆರಂಭವಾಯಿತಾದರೂ, ಬೆಳಿಗ್ಗೆಯಿಂದಲೇ ಪಂದ್ಯ ವೀಕ್ಷಣೆಗೆ ಎಲ್ಲ ರೀತಿಯ ಸಿದ್ಧತೆ ನಡೆದಿತ್ತು. ಈ ಪಂದ್ಯವನ್ನು ಆರ್ಸಿಬಿ ಗೆಲ್ಲಲಿ, ಈ ಸಲವಾದರೂ ಕಪ್ ನಮ್ಮದಾಗಲಿ ಎಂದು ಅಭಿಮಾನಿಗಳು ಹಲವೆಡೆ ಪ್ರಾರ್ಥಿಸಿದರು.

ನಗರದ ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ಸ್ವಾಮಿ ದೇವಾಲಯದ ಬಳಿ ಪ್ರತಿ ಶನಿವಾರ ವಿಶೇಷ ಪೂಜೆಗೆ ಸಾವಿರಾರು ಜನ ಸೇರುತ್ತಾರೆ. ಮಂಗಳವಾರ ಅಲ್ಲಿ ಸೇರಿದ್ದ ನೂರಾರು ಜನರು, ಆರ್ಸಿಬಿ ಹೆಸರಿನಲ್ಲಿ ಅರ್ಚನೆ ಮಾಡಿಸಿದರು. ವಿಶೇಷ ಹೋಮದಲ್ಲಿ ಭಾಗಿಯಾದರು. ಆಟೊಗಳಲ್ಲಿ ಆರ್ಸಿಬಿಯ ಧ್ವಜ ಕಟ್ಟಿಕೊಂಡು ಚಾಲಕರು ಮೆರವಣಿಗೆ ನಡೆಸಿದರು. ಆಟೊ ಚಾಲಕರು, ಡೆಲಿವರಿ ಬಾಯ್ಗಳು ಸೇರಿದಂತೆ ಜನಸಾಮಾನ್ಯರು ಕೂಡ ಅರ್ಸಿಬಿಯ ಜರ್ಸಿ ಧರಿಸಿ ಬೆಂಬಲ ಸೂಚಿಸಿದರು.

ನಗರದ ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗದಲ್ಲಿ ಆರ್ಸಿಬಿ ಅಭಿಮಾನಿಗಳು ‘ಆರ್ಸಿಬಿ..ಆರ್ಸಿಬಿ..’, ‘ಕೊಹ್ಲಿ..ಕೊಹ್ಲಿ..’ ಎಂದು ಕೂಗುತ್ತಿದ್ದ ದೃಶ್ಯಗಳು ಕಂಡುಬಂದವು. ಕ್ರೀಡಾಂಗಣದ ಹೊರಭಾಗದಲ್ಲಿ ಆರ್ಸಿಬಿಯ ಟೀ ಶರ್ಟ್, ಧ್ವಜಗಳನ್ನು ಅಭಿಮಾನಿಗಳು ಖರೀದಿಸಿದರು.

ಸಂಜೆಯ ವೇಳೆಗೆ ಜನರು ಮನೆಗಳತ್ತ ತರಾತುರಿಯಲ್ಲಿ ಹೆಜ್ಜೆಹಾಕಿದರು. ಐಟಿ ಕಂಪನಿ ಉದ್ಯೋಗಿಗಳಲ್ಲಿ ಹಲವರು ‘ಆರ್ಸಿಬಿ ಪಂದ್ಯ ವೀಕ್ಷಣೆ’ಯ ಕಾರಣ ಕೊಟ್ಟು, ರಜೆ ಪಡೆದಿದ್ದರು. ಪಂದ್ಯ ಆರಂಭವಾಗುವ ವೇಳೆಗೆ ನಗರದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಿತ್ತು. ಮೆಟ್ರೊ ರೈಲಿನಲ್ಲೂ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗಿತ್ತು. ವಸತಿ ಪ್ರದೇಶಗಳಲ್ಲಿ ಜನರು ಮನೆ ಸೇರಿದ್ದರಿಂದ ರಸ್ತೆಗಳು ನಿರ್ಜನವಾಗಿದ್ದವು.

ನಗರದ ಪಬ್ಗಳು, ಮಾಲ್ಗಳು, ರೆಸ್ಟೋರೆಂಟ್ಗಳು, ಕ್ಲಬ್ಗಳು ಕಿಕ್ಕಿರಿದು ತುಂಬಿದ್ದವು. ದೊಡ್ಡ ಪರದೆಗಳಲ್ಲಿ ಪಂದ್ಯ ವೀಕ್ಷಣೆಗೆ ಅವಕಾಶ ಮಾಡಿದ್ದರಿಂದ ವಹಿವಾಟು ಜೋರಾಗಿತ್ತು. ಚರ್ಚ್ಸ್ಟ್ರೀಟ್ನಲ್ಲಿನ ಬಹುತೇಕ ರೆಸ್ಟೋರೆಂಟ್ಗಳು ತುಂಬಿದ್ದವು. ಒಂದು ದಿನ ಮೊದಲೇ ಕ್ಲಬ್ ಮತ್ತು ಪಬ್ಗಳ ಪಾಸ್ಗಳು ಬಿಕರಿಯಾಗಿದ್ದವು. ಹೀಗಾಗಿ ದೊಡ್ಡ ಎಲ್ಇಡಿ ಪರದೆ ಹಾಕಿದ್ದ ರೆಸ್ಟೋರೆಂಟ್ಗಳ ಎದುರು ಆರ್ಸಿಬಿ ಅಭಿಮಾನಿಗಳು ರಸ್ತೆಯಲ್ಲೇ ನಿಂತು ಪಂದ್ಯ ವೀಕ್ಷಿಸಿದರು.

ಆರ್ಸಿಬಿ ಬ್ಯಾಟ್ಸ್ಮನ್ಗಳು ರನ್ಗಳಿಸಿದಾಗ, ಚೆಂಡನ್ನು ಬೌಂಡರಿಗೆ ಅಟ್ಟಿದಾಗ ಅಭಿಮಾನಗಳ ಹರ್ಷೋದ್ಗಾರ ಮುಗಿಲುಮುಟ್ಟಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆದಾಗ ಸೇರುತ್ತಿದ್ದಕ್ಕಿಂತ ಹೆಚ್ಚಿನ ಸದ್ದುಗದ್ದಲ ಚರ್ಚ್ಸ್ಟ್ರೀಟ್ ಮತ್ತು ಎಂ.ಜಿ. ರಸ್ತೆಯಲ್ಲಿತ್ತು.

ಕ್ರೀಡಾಂಗಣದಲ್ಲಿ ನೇರ ಪ್ರಸಾರ

ವಿಜಯನಗರದಲ್ಲಿರುವ ಬಿಜಿಎಸ್ ಕ್ರೀಡಾಂಗಣದಲ್ಲಿ ಪಂದ್ಯದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕ್ರೀಡಾಂಗಣದ ಗ್ಯಾಲರಿಯಲ್ಲಿ ಸುಮಾರು 3,000 ಜನರು ಕೂರಲು ವ್ಯವಸ್ಥೆ ಇದೆ. ಕ್ರೀಡಾಂಗಣದ ಹಲವೆಡೆ ದೊಡ್ಡ ಎಲ್ಇಡಿ ಪರದೆಗಳನ್ನು ಅಳವಡಿಸಿ, ವೀಕ್ಷಣೆಗೆ ಅವಕಾಶ ಮಾಡಲಾಗಿತ್ತು. ಇನ್ನೂ ಹೆಚ್ಚಿನ ಜನ ವೀಕ್ಷಿಸಲಿ ಎಂದು ಮೈದಾನದಲ್ಲಿ 5,000ಕ್ಕೂ ಹೆಚ್ಚು ಕುರ್ಚಿಗಳನ್ನು ಹಾಕಲಾಗಿತ್ತು. ಮಧ್ಯಾಹ್ನದ ವೇಳೆಗೇ ಸಾವಿರಾರು ಜನರು ಕ್ರೀಡಾಂಗಣಕ್ಕೆ ಬಂದು ಕೂತಿದ್ದರು.

‘ಎಲ್ಲರಿಗೂ ಉಚಿತ ಪ್ರವೇಶ. ಮೊದಲು ಬಂದವರಿಗೆ ಟಿಕೆಟ್ ನೀಡಲಾಗುತ್ತದೆ. ಎಲ್ಲರೂ ಪಂದ್ಯ ವೀಕ್ಷಿಸಲಿ ಎಂಬುದು ನಮ್ಮ ಉದ್ದೇಶ’ ಎಂದು ಶಾಸಕ ಪ್ರಿಯಕೃಷ್ಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದರು. ಪಂದ್ಯ ವೀಕ್ಷಣೆಗೆ ಸಾವಿರಾರು ಜನ ಬಂದಿದ್ದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಪಂದ್ಯದ ಪ್ರತಿ ರೋಚಕ ಕ್ಷಣಗಳಲ್ಲೂ ಆರ್ಸಿಬಿ ಅಭಿಮಾನಿಗಳ ಹರ್ಷೋದ್ಗಾರ ಮಾರ್ದನಿಸುತ್ತಿತ್ತು.

ನೇರ ಪ್ರಸಾರ ಎಲ್ಲೆಲ್ಲಿ...: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ನ ಫೈನಲ್ ಪಂದ್ಯ ವೀಕ್ಷಿಸಲು ಜೆ.ಪಿ. ನಗರದ ದಿ ಸ್ಟಡ್ಸ್ ಸ್ಪೊರ್ಟ್ಸ್ ಬಾರ್, ವೈಟ್ಫೀಲ್ಡ್ನ ಸ್ಕೈ ಗಾರ್ಡನ್ ರೂಫ್ಟಾಪ್ ಬಾರ್, ಹಳೆ ವಿಮಾನ ನಿಲ್ದಾಣ ರಸ್ತೆಯ ಬಿಗ್ ಪಿಚ್ಚರ್, ಕೋರಮಂಗಲದ ಡೇವ್ ಆ್ಯಂಡ್ ಬಸ್ಟರ್ಸ್, ಎಂ.ಜಿ. ರಸ್ತೆ, ಚರ್ಚ್ ಸ್ಟ್ರೀಟ್, ಬ್ರಿಗೇಡ್ ರಸ್ತೆಯ ಪಬ್ಗಳಲ್ಲಿ ದೊಡ್ಡ ಪರದೆಯ ವ್ಯವಸ್ಥೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.