ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕದಿನ ತಂಡದ ನಾಯಕತ್ವ ರೋಹಿತ್‌ಗೆ: ಕೊಹ್ಲಿ ಪರ ನಿಲ್ಲುವಂತೆ ಗಂಗೂಲಿಗೆ ತಜ್ಞರ ಸಲಹೆ

Last Updated 9 ಡಿಸೆಂಬರ್ 2021, 12:27 IST
ಅಕ್ಷರ ಗಾತ್ರ

ನವದೆಹಲಿ: ಚುಟುಕು ಕ್ರಿಕೆಟ್ ಮಾದರಿಯಲ್ಲಿ ಭಾರತ ತಂಡದ ನಾಯಕತ್ವವನ್ನು ತೊರೆದಿರುವ ವಿರಾಟ್ ಕೊಹ್ಲಿ ಅವರನ್ನು ಇದೀಗ ಏಕದಿನ ತಂಡದ ನಾಯಕತ್ವದಿಂದಲೂ ಕೆಳಗಿಳಿಸಲಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಎರಡೂ ಮಾದರಿಯಲ್ಲಿ ತಂಡದ ಜವಾಬ್ದಾರಿಯನ್ನು ಅನುಭವಿ ರೋಹಿತ್ ಶರ್ಮಾಗೆ ವಹಿಸಿದೆ.

ಯಾವುದೇ ಪ್ರಕಟಣೆ ಇಲ್ಲದೆ, ಏಕದಿನ ತಂಡದ ನಾಯಕತ್ವ ಬದಲಾವಣೆ ನಿರ್ಧಾರವನ್ನು ಬಿಸಿಸಿಐ ಘೋಷಿಸಿದೆ. ಸಂಪೂರ್ಣಪ್ರಕ್ರಿಯೆಯನ್ನು ಹತ್ತಿರದಿಂದ ಗಮನಿಸಿರುವ ಅಧಿಕಾರಿಯೊಬ್ಬರು, ಈ ಪರಿಸ್ಥಿತಿ ನಿಭಾಯಿಸುವಲ್ಲಿ ಗಂಗೂಲಿ ಮುಖ್ಯ ಪಾತ್ರ ವಹಿಸಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

'ನಾಯಕತ್ವದಲ್ಲಿ ಬದಲಾವಣೆಯಾಗಿದೆ ಸರಿ. ಇದೀಗ ರೋಹಿತ್ ಸಮಯ ಬಂದಿದೆ. ಅವರು ತಂಡಕ್ಕೆ ತಾಜಾತನ ತುಂಬಬೇಕಿದೆ. ವಿರಾಟ್ ಕೂಡ ಇದನ್ನು ಒಪ್ಪಿಕೊಳ್ಳಬೇಕಿದೆ. ಆದರೆ, ಈ ವಿಚಾರವನ್ನು ಬಿಸಿಸಿಐ, ಅದರಲ್ಲೂ ಮುಖ್ಯವಾಗಿ ಗಂಗೂಲಿ (ಮಂಡಳಿ ಅಧ್ಯಕ್ಷ) ಪ್ರಕಟಿಸಿದ ವಿಧಾನವು ಕಳವಳಕಾರಿಯಾದದ್ದು' ಎಂದು ಹೇಳಿದ್ದಾರೆ.

ಮುಂದುವರಿದು,'ಸದ್ಯ ವಿರಾಟ್‌ಗೆ ಬಿಸಿಸಿಐನ ಬೆಂಬಲ ಅಗತ್ಯವಾಗಿದೆ. ಈ ಬೆಳವಣಿಗೆಯಿಂದ ಆಗಿರುವ ಮುಜುಗರ, ಸಿಟ್ಟು ಮತ್ತುಹತಾಶೆಯಿಂದ ಅವರು ಹೊರಬರಬೇಕಿದೆ. ಕೆಲವು ವರ್ಷಗಳ ಹಿಂದೆ ಬಿಸಿಸಿಐ ತಮ್ಮ (ಗಂಗೂಲಿ) ಬೆಂಬಲಕ್ಕೆ ನಿಂತಿದ್ದ ಹಾಗೆಯೇ, ಈಗ ಗಂಗೂಲಿ (ಬಿಸಿಸಿಐ ಅಧ್ಯಕ್ಷ) ತಮ್ಮ ಆಟಗಾರನೊಂದಿಗೆ ನಿಲ್ಲುವರೇ?' ಎಂದು ಪ್ರಶ್ನಿಸಿದ್ದಾರೆ.

ನಿಗದಿತ ಓವರ್‌ಗಳ (ಏಕದಿನ, ಟಿ20) ಮತ್ತು ಟೆಸ್ಟ್ ಮಾದರಿಯ ತಂಡಕ್ಕೆ ಪ್ರತ್ಯೇಕ ನಾಯಕರನ್ನು ನೇಮಕ ಮಾಡುವ ಬಗ್ಗೆ ಮಂಡಳಿಯಲ್ಲಿ ಕೆಲವು ದಿನಗಳಿಂದ ಚರ್ಚೆಗಳು ನಡೆಯುತ್ತಿದ್ದವು.

ಆಸ್ಟ್ರೇಲಿಯಾದ ಗ್ರೇಗ್ ಚಾಪೆಲ್‌ ಅವರು ಭಾರತ ತಂಡದ ಕೋಚ್ ಅಗಿದ್ದ ಸಂದರ್ಭದಲ್ಲಿ (2005ರಲ್ಲಿ) ಗಂಗೂಲಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಆ ವೇಳೆಬಿಸಿಸಿಐ ಗಂಗೂಲಿ ಬೆನ್ನಿಗೆ ನಿಂತಿತ್ತು. 2006ರಲ್ಲಿ ತಂಡಕ್ಕೆ ಮರಳಿದ್ದ ಗಂಗೂಲಿ, ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಗಂಗೂಲಿ ಅವರು ಕೊಹ್ಲಿಯ ಸ್ಥಿತಿಯನ್ನು ನಾಜೂಕಾಗಿ ನಿಭಾಯಿಸಲಿದ್ದಾರೆ ಎಂಬ ವಿಶ್ವಾಸ ಕ್ರಿಕೆಟ್ ವಲಯದಲ್ಲಿದೆ.

ನಾಯಕತ್ವ ಬದಲಾವಣೆ ಸಂಬಂಧಮಾತು ಮುಂದುವರಿಸಿರುವ ಅಧಿಕಾರಿ,'ಕಾರ್ಯದರ್ಶಿ ಜಯ್‌ ಶಾ ಸೇರಿದಂತೆ ಇತರ ಕೆಲವರುಮಂಡಳಿಯ ಆಡಳಿತದ ಅನುಭವ ಹೊಂದಿದ್ದಾರೆ. ಆದರೆ, ಗಂಗೂಲಿ ಭಾರತ ತಂಡದ ನಾಯಕನಾಗಿ ಮತ್ತು116 ಟೆಸ್ಟ್ ಪಂದ್ಯ ಆಡಿರುವ ಹಿರಿಯ ಆಟಗಾರನಾಗಿ ಕ್ರಿಕೆಟ್‌ನಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಆ ಅನುಭವವನ್ನು ಅವರು ಬಳಸಿಕೊಳ್ಳುವರೇ ಮತ್ತು ಕೊಹ್ಲಿ ತಮ್ಮ ಸ್ಥಾನವನ್ನು ಖಾತ್ರಿಪಡಿಸಿಕೊಳ್ಳಲು ಅದು ನೆರವಾಗಲಿದೆಯೇ?' ಎಂದು ಕೇಳಿದ್ದಾರೆ.

ದುಬೈನಲ್ಲಿ ಈಚೆಗೆ ಮುಕ್ತಾಯವಾದ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ ಗುಂಪು ಹಂತದಲ್ಲೇ ನಿರ್ಗಮಿಸಿತ್ತು. ಅದಾದ ಬಳಿಕ ವಿರಾಟ್ ಚುಟುಕು ಕ್ರಿಕೆಟ್‌ ತಂಡದ ನಾಯಕತ್ವ ತ್ಯಜಿಸಿದ್ದರು.

2013 ರಿಂದ 2021ರ ವರೆಗೆ ಭಾರತ ತಂಡವನ್ನು 95 ಏಕದಿನ ಪಂದ್ಯಗಳಲ್ಲಿ ಮುನ್ನಡೆಸಿರುವ ಕೊಹ್ಲಿ, 65 ಗೆಲುವು ತಂದುಕೊಟ್ಟಿದ್ದಾರೆ. 27 ಸೋಲು ಎದುರಾಗಿದೆ. 1 ಪಂದ್ಯ ಟೈ ಆಗಿದ್ದು, ಉಳಿದೆರಡು ಪಂದ್ಯಗಳಲ್ಲಿ ಫಲಿತಾಂಶ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT