ಸೋಮವಾರ, ಏಪ್ರಿಲ್ 6, 2020
19 °C

ಕೊರೊನಾ ವೈರಸ್ ವಿರುದ್ಧ ರಾಹುಲ್ ದ್ರಾವಿಡ್ ರೀತಿ ಹೋರಾಡಬೇಕು!

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಹಾಗೂ ದಿ ವಾಲ್‌ ಖ್ಯಾತಿಯ ರಾಹುಲ್‌ ದ್ರಾವಿಡ್, ತಂಡ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲ ನೆರವಿನ ಹಸ್ತ ಚಾಚಿದವರು. ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿಯೂ ಮಿಂಚಿದ ಕೆಲವೇ ಕೆಲವು ಕ್ರಿಕೆಟಿಗರಲ್ಲಿ ರಾಹುಲ್ ಕೂಡ ಒಬ್ಬರು.

ಒಂದೆಡೆ ವಿಕೆಟ್‌ ಬೀಳುತ್ತಿದ್ದರೂ, ಕ್ರೀಸ್‌ಗೆ ಅಂಟಿಕೊಂಡಂತೆ ಆಡುತ್ತಿದ್ದ ರಾಹುಲ್‌, ಕೊನೇವರೆಗೂ ಛಲ ಬಿಡದೆ ಹೋರಾಡುತ್ತಿದ್ದರು. ಅಗತ್ಯವಿದ್ದಾಗ ಕೀಪಿಂಗ್‌ ಗ್ಲೌಸ್‌ ತೊಡುತ್ತಿದ್ದ, ಕೀಪರ್‌ ಕೈಯಿಂದ ತಪ್ಪಿಸಿಕೊಂಡು ಬರುವ ಎಸೆತಳನ್ನು ಸ್ಲಿಪ್‌ನಲ್ಲಿ ನಿಂತು ಬಿಗಿಯಾಗಿ ಹಿಡಿಯುತ್ತಿದ್ದ, ನಾಯಕನಾಗಿ ತಂಡವನ್ನು ಮುನ್ನಡೆಸಿದ್ದ ಅವರು, 19 ವರ್ಷದೊಳಗಿನವರ ತಂಡದ ಕೋಚ್‌ ಆಗಿ ಭಾರತಕ್ಕೆ ವಿಶ್ವಕಪ್‌ ಗೆದ್ದು ಕೊಟ್ಟಿದ್ದರು.

ಹೀಗೆ ತಂಡದ ಅಗತ್ಯಕ್ಕೆ ತಕ್ಕಂತೆ ಎಲ್ಲ ವಿಭಾಗದಲ್ಲಿಯೂ ತೊಡಗಿಸಿಕೊಂಡಿರುವ ದ್ರಾವಿಡ್‌ ರೀತಿಯಲ್ಲಿ ಕೊರೊನಾ ವೈರಸ್‌ ವಿರುದ್ಧ ಹೋರಾಟ ನಡೆಸಬೇಕು ಎನ್ನುವ ಪೋಸ್ಟ್‌ವೊಂದು ಟ್ವೀಟರ್‌ನಲ್ಲಿ ವೈರಲ್ ಆಗಿದೆ.

ಸಾಗರ್ ಎನ್ನುವವರು ತಮ್ಮ ಟ್ವಿಟರ್‌ ಖಾತೆಯಲ್ಲಿ, ‘ಕೊರೊನಾವೈರಸ್‌ ವಿರುದ್ಧ ಹೋರಾಡುವುದು ಹೇಗೆ: ರಾಹುಲ್‌ ದ್ರಾವಿಡ್‌ರಿಂದ ಪಾಠ’ ಎಂದು ಬರೆದುಕೊಂಡು ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಆ ಚಿತ್ರಗಳು ಸದ್ಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ದ್ರಾವಿಡ್‌ ಭಾರತ ಕ್ರಿಕೆಟ್‌ಗಾಗಿ ನಿರ್ವಹಿಸಿದ ಇಂತಹ ಹಲವು ಪಾತ್ರಗಳು ಹಾಗೂ ಸಂದರ್ಭಗಳನ್ನು ಪರಿಚಯಿಸುತ್ತವೆ.

ಆರಂಭಿಕನಾಗಿ ಕಣಕ್ಕಿಳಿದ ದ್ರಾವಿಡ್‌ ಔಟಾಗಲೇ ಇಲ್ಲ!
ಭಾರತ ತಂಡವು 4 ಪಂದ್ಯಗಳ ಟೆಸ್ಟ್‌ ಸರಣಿ ಆಡಲು 2011ರಲ್ಲಿ ಇಂಗ್ಲೆಂಡ್‌ ಪ್ರವಾಸ ಕೈಗೊಂಡಿತ್ತು. ಮೊದಲ ಮೂರು ಪಂದ್ಯಗಳನ್ನು ಸೋತಿದ್ದ ಎಂಎಸ್‌ ಧೋನಿ ಪಡೆ, ನಾಲ್ಕನೇ ಪಂದ್ಯವನ್ನಾದರೂ ಗೆದ್ದು ಗೌರವ ಉಳಿಸಿಕೊಳ್ಳುವ ಯೋಜನೆಯೊಂದಿಗೆ ಕಣಕ್ಕಿಳಿದಿತ್ತು.

ಟಾಸ್ ಗೆದ್ದ ಇಂಗ್ಲೆಂಡ್‌, ಮೊದಲ ಇನಿಂಗ್ಸ್‌ನಲ್ಲಿ ಕೇವಲ 6 ವಿಕೆಟ್ ಕಳೆದುಕೊಂಡು 591 ರನ್ ಗಳಿಸಿ ಇನಿಂಗ್ಸ್‌ ಡಿಕ್ಲೇರ್ ಘೋಷಿಸಿತ್ತು. ಈ ಮೊತ್ತದೆದುರು ಇನಿಂಗ್ಸ್‌ ಆರಂಭಿಸಿದ ಭಾರತಕ್ಕೆ ಆರಂಭಿಕ ಆಘಾತ ಕಾದಿತ್ತು. ದ್ರಾವಿಡ್‌ ಜೊತೆಗೆ ಇನಿಂಗ್ಸ್‌ ಆರಂಭಿಸಿದ ವಿರೇಂದ್ರ ಸೆಹ್ವಾಗ್‌ ಕೇವಲ 8 ರನ್‌ ಗಳಿಸಿ ಔಟಾದರು.

ಬಳಿಕ ಬಂದ ವಿವಿಎಸ್‌ ಲಕ್ಷ್ಮಣ್‌ 2 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ನಂತರ ಸಚಿನ್‌ ತೆಂಡೂಲ್ಕರ್‌ (23), ಆಮೇಲೆ ಸುರೇಶ್‌ ರೈನಾ (0). ಹೀಗೆ ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್‌ ಸೇರಿಕೊಳ್ಳುತ್ತಿದ್ದರು. ಆಗ ಗಟ್ಟಿಯಾಗಿ ನಿಂತ ದ್ರಾವಿಡ್‌, ಉಳೆದೆಲ್ಲ ಬ್ಯಾಟ್ಸ್‌ಮನ್‌ಗಳು ಔಟಾದರೂ ಅಜೇಯರಾಗಿ ಉಳಿದರು.


ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬೋರ್ಡ್ಸ್ ಪ್ರೇಸಿಡೆಂಟ್ಸ್ XI ಮತ್ತು ಸೌತ್ ಆಫ್ರೀಕ ಎ ತಂಡದ ಮೂರನೇ ದಿನದ ಅಭ್ಯಾಸ ಪಂದ್ಯದ ವೇಳೆ ರಾಹುಲ್ ಡ್ರಾವಿಡ್ –ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ್ (2018)

ಬೆಂಕಿಯುಂಡೆಗಳಂತೆ ಪುಟಿದು ಬರುತ್ತಿದ್ದ ಬರೋಬ್ಬರಿ 266 ಎಸೆತಗಳನ್ನು ಎದುರಿಸಿದ ರಾಹುಲ್‌, ಔಟಾಗದೆ 146ರನ್‌ ಗಳಿಸಿದರು. ಅವರ ಆಟದಿಂದಾಗಿ ತಂಡ 300ರ ಗಡಿ ಮುಟ್ಟಿತು. ಆದಾಗ್ಯೂ, 291ರನ್‌ ಮುನ್ನಡೆ ಪಡೆದ ಇಂಗ್ಲೆಂಡ್‌ ಭಾರತಕ್ಕೆ ಫಾಲೋಅನ್‌ ಹೇರಿತು.

ಧೋನಿ ಪಡೆ ಎರಡನೇ ಇನಿಂಗ್ಸ್‌ನಲ್ಲಿ 283 ರನ್‌ ಗಳಿಗೆ ಆಲೌಟ್‌ ಆಗುವುದರೊಂದಿಗೆ 8 ರನ್‌ಗಳ ಸೋಲೊಪ್ಪಿಕೊಂಡಿತು.

ದ್ರಾವಿಡ್‌–ಲಕ್ಷ್ಮಣ್‌ ಇನಿಂಗ್ಸ್‌ ಬಗ್ಗೆ ಮೋದಿ ಮಾತು
ಇದೇ ವರ್ಷ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರೊಂದಿಗೆ ‘ಪರೀಕ್ಷಾ ಪೆ ಚರ್ಚಾ’ ಸಂವಾದ ನಡೆಸಿದ್ದರು. ಈ ವೇಳೆ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಲು, ರಾಹುಲ್ ದ್ರಾವಿಡ್‌ ಹಾಗೂ ವಿವಿಎಸ್‌ ಲಕ್ಷ್ಮಣ್‌ ಆಡಿದ್ದ ಟೆಸ್ಟ್‌ ಕ್ರಿಕೆಟ್‌ ಪಂದ್ಯವೊಂದರ ಇನಿಂಗ್ಸ್‌ ಅನ್ನು ಉದಾಹರಣೆಯಾಗಿ ನೀಡಿದ್ದರು.

ಪಂದ್ಯದ ಗತಿ ಬದಲಿಸಿದ್ದ ಇನಿಂಗ್ಸ್‌ ಅದು
‌‌‌‌2001ರಲ್ಲಿ ನಡೆದ ಬಾರ್ಡರ್‌–ಗವಾಸ್ಕರ್‌ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಹತ್ತು ವಿಕೆಟ್‌ ಗೆಲುವು ಸಾಧಿಸಿತ್ತು. ಕೋಲ್ಕತ್ತದಲ್ಲಿ ನಡೆದ ಎರಡನೇ ಪಂದ್ಯವನ್ನೂ ಗೆದ್ದು ಸರಣಿ ವಶಪಡಿಸಿಕೊಳ್ಳುವ ಉತ್ಸಾಹದಲ್ಲಿ ಸ್ಟೀವ್‌ ವಾ ಪಡೆ ಕಣಕ್ಕಿಳಿದಿದತ್ತು.

ಟಾಸ್‌ ಗೆದ್ದಿದ್ದ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 445 ರನ್‌ ಕಲೆಹಾಕಿತ್ತು. ಈ ಮೊತ್ತದೆದುರು ಕಳಪೆ ಬ್ಯಾಟಿಂಗ್ ಮಾಡಿದ್ದ ಸೌರವ್‌ ಗಂಗೂಲಿ ಪಡೆ ಕೇವಲ 171 ರನ್‌ ಗಳಿಗೆ ಆಲೌಟ್‌ ಆಗಿ, 274 ರನ್‌ ಹಿನ್ನಡೆ ಅನುಭವಿಸಿತ್ತು. ಹೀಗಾಗಿ ಆಸಿಸ್‌ ಭಾರತಕ್ಕೆ ಫಾಲೋಅನ್‌ ಹೇರಿತ್ತು.

ಪ್ರವಾಸಿ ಪಡೆಯ ಬಾಕಿ ಚುಕ್ತಾ ಮಾಡಲು ಇನಿಂಗ್ಸ್‌ ಆರಂಭಿಸಿದ ಭಾರತಕ್ಕೆ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ದೊಡ್ಡ ಇನಿಂಗ್ಸ್‌ ಆಡಿರಲಿಲ್ಲ. ಶಿವ ಸುಂದರ್‌ ದಾಸ್‌ (39) ಮತ್ತು ಎಸ್‌. ರಮೇಶ್‌ (30) ಬೇಗನೆ ನಿರ್ಗಮಿಸಿದರು. ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ವಿವಿಎಸ್‌ ಲಕ್ಷ್ಮಣ್‌ಗೆ, ಸಚಿನ್‌ ತೆಂಡೂಲ್ಕರ್ (10) ಅವರಿಂದಲೂ ಉತ್ತಮ ಬೆಂಬಲ ಸಿಗಲಿಲ್ಲ. ಬಳಿಕ ಬಂದ ಗಂಗೂಲಿ (49) ರನ್‌ ಗಳಿಸಿ ಔಟ್‌ ಆದರು.


ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದೇಶಿ ಕ್ರಿಕೆಟ್‌ ಪಂದ್ಯವೊಂದನ್ನು ವೀಕ್ಷಿಸುತ್ತಿರುವ ರಾಹುಲ್ ಡ್ರಾವಿಡ್ (2019)

231 ರನ್‌ ಆಗುವಷ್ಟರಲ್ಲಿ ಪ್ರಮುಖ ಬ್ಯಾಟ್ಸ್‌ಮನ್‌ಗಳು ವಿಕೆಟ್‌ ಒಪ್ಪಿಸಿದ್ದರಿಂದ ಭಾರತಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಎಣಿಸಲಾಗಿತ್ತು. ಆದರೆ, ನಂತರ ಬಂದ ಕನ್ನಡಿಗ ರಾಹುಲ್‌ ದ್ರಾವಿಡ್‌ ಪಂದ್ಯದ ಚಿತ್ರಣ ಬದಲಿಸುವಂತೆ ಆಡಿದರು. ಲಕ್ಷ್ಮಣ್‌ ಜೊತೆ ಸೇರಿದ ಅವರು ಐದನೇ ವಿಕೆಟ್‌ಗೆ 376 ರನ್ ಸೇರಿಸಿದರು.

452 ಎಸೆತಗಳನ್ನು ಎದುರಿಸಿದ ಲಕ್ಷ್ಮಣ್‌, 44 ಬೌಂಡರಿ ಸಹಿತ 281 ರನ್‌ ಗಳಿಸಿದರೆ, 353 ಎಸೆತಗಳನ್ನು ಆಡಿದ ದ್ರಾವಿಡ್‌ 180 ರನ್‌ ಕಲೆಹಾಕಿದರು. ಅಂತಿಮವಾಗಿ ಸೌರವ್‌ ಪಡೆ ಎರಡನೇ ಇನಿಂಗ್ಸ್‌ನಲ್ಲಿ 7 ವಿಕೆಟ್‌ ಕಳೆದುಕೊಂಡು 657 ರನ್ ಗಳಿಸಿ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು.

384 ರನ್‌ ಗುರಿಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ಆಸಿಸ್‌ ಪಡೆಯನ್ನು ಹರ್ಭಜನ್‌ ಸಿಂಗ್‌ ಕಾಡಿದರು. 73 ರನ್‌ ನೀಡಿ ಪ್ರಮುಖ ಆರು ವಿಕೆಟ್‌ ಕಬಳಿಸಿ ಮಿಂಚಿದರು. ಹೀಗಾಗಿ ಸ್ಟೀವ್‌ ವಾ ಬಳಗ ಕೇವಲ 212 ರನ್‌ ಗಳಿಗೆ ಆಲೌಟ್‌ ಆಗಿತ್ತು.

ಇದರೊಂದಿಗೆ ಭಾರತ 171 ರನ್‌ ಗೆಲುವು ಸಾಧಿಸಿ ಸರಣಿ ಸಮಬಲ ಮಾಡಿಕೊಂಡಿತ್ತು. ಬಳಿಕ ಚೆನ್ನೈನಲ್ಲಿ ನಡೆದ ಮೂರನೇ ಪಂದ್ಯವನ್ನು ಗೆದ್ದ ಟೀಂ ಇಂಡಿಯಾ ಸರಣಿ ತನ್ನದಾಗಿಸಿಕೊಂಡಿತ್ತು.

ಭಾರತ ತಂಡದ ಪರ ಟೆಸ್ಟ್‌, ಏಕದಿನ ಹಾಗೂ ಟಿ20 ಸೇರಿ ಒಟ್ಟು 509 ಪಂದ್ಯಗಳನ್ನು ಆಡಿರುವ ರಾಹುಲ್‌, 24,208‬ ರನ್‌ ಗಳಿಸಿದ್ದಾರೆ. ಐಪಿಎಲ್‌ನಲ್ಲಿ ಆಡಿರುವ 89 ಪಂದ್ಯಗಳ 82 ಇನಿಂಗ್ಸ್‌ಗಳಿಂದ 2174 ರನ್‌ ಪೇರಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು