ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಂಬಾಬ್ವೆ ವಿರುದ್ಧ 3ನೇ ಪಂದ್ಯ ಇಂದು:ಜೈಸ್ವಾಲ್‌ ಬ್ಯಾಟಿಂಗ್‌ ಕ್ರಮಾಂಕದ ಕಡೆ ಗಮನ

Published 9 ಜುಲೈ 2024, 23:30 IST
Last Updated 9 ಜುಲೈ 2024, 23:30 IST
ಅಕ್ಷರ ಗಾತ್ರ

ಹರಾರೆ: ಭಾರತ ತಂಡ ಈಗ ಆರಂಭ ಆಟಗಾರರ ಸಂಯೋಜನೆಗೆ ಸಂಬಂಧಿಸಿ ದ್ವಂದ್ವದಲ್ಲಿದೆ. ಜಿಂಬಾಬ್ವೆ ವಿರುದ್ಧ ಮೂರನೇ ಟಿ20 ಪಂದ್ಯ ಬುಧವಾರ ನಡೆಯಲಿದ್ದು, ನಿರರ್ಗಳವಾಗಿ ಆಡುವ ಯಶಸ್ವಿ ಜೈಸ್ವಾಲ್ ಅವರನ್ನು ಆರಂಭ ಆಟಗಾರರಾಗಿ ಕಣಕ್ಕಿಳಿಸಬೇಕೇ, ಆಕ್ರಮಣಕಾರಿಯಾಗಿ ಆಡುವ ಅಭಿಷೇಕ್‌ ಶರ್ಮಾ ಅವರಿಗೇ ಈ ಹೊಣೆ ನೀಡಬೇಕೇ ಎಂಬ ನಿರ್ಧಾರ ಕೈಗೊಳ್ಳಬೇಕಾಗಿದೆ.

ಟಿ20 ವಿಶ್ವಕಪ್ ವಿಜೇತ ತಂಡದ ಜೊತೆಗಿದ್ದ ಜೈಸ್ವಾಲ್, ಸಂಜು ಸ್ಯಾಮ್ಸನ್ ಮತ್ತು ಶಿವಂ ದುಬೆ ಅವರು  ಜಿಂಬಾಬ್ವೆ ಪ್ರವಾಸದಲ್ಲಿರುವ ತಂಡವನ್ನು ಕೂಡಿಕೊಂಡಿದ್ದು ತಂಡ ಇನ್ನಷ್ಟು ಪ್ರಬಲವಾಗಿದೆ. ಎರಡನೇ ಪಂದ್ಯವನ್ನು 100 ರನ್‌ಗಳ ದೊಡ್ಡ ಅಂತರದಿಂದ ಗೆದ್ದ ನಂತರ ವಿಶ್ವಾಸವೂ ಇಮ್ಮಡಿಯಾಗಿದ್ದು, ಈಗ ಸರಣಿ ಗೆಲುವಿನ ಕಡೆ ತಂಡ ಗಮನಹರಿಸಿದೆ.

ಆದರೆ ನಾಯಕ ಶುಭಮನ್ ಗಿಲ್ ಅವರ ಜೊತೆ ಇನಿಂಗ್ಸ್ ಆರಂಭ ಮಾಡುವ ಆಟಗಾರ ಯಾರೆಂಬ ಕುತೂಹಲವಿದೆ. ಎಡಗೈ ಆಟಗಾರ ಅಭಿಷೇಕ್ ಶರ್ಮಾ ತಮ್ಮ ಎರಡನೇ ಪಂದ್ಯದಲ್ಲೇ ಕೇವಲ 46 ಎಸೆತಗಳಲ್ಲಿ ಶತಕ ಸಿಡಿಸಿದ್ದು ಗಮನ ಸೆಳೆದಿದ್ದಾರೆ. ಆದರೆ ಜೈಸ್ವಾಲ್‌ ಅವರು 17 ಟಿ20 ಪಂದ್ಯಗಳಲ್ಲಿ 161ರ ಉತ್ತಮ ಸ್ಟ್ರೈಕ್‌ ರೇಟ್‌ ಹೊಂದಿದ್ದಾರೆ. ನಾಲ್ಕು ಅರ್ಧ ಶತಕಗಳೂ ಅವರ ಹೆಸರಿನಲ್ಲಿವೆ. ಇತ್ತೀಚಿನ ವಿಶ್ವಕಪ್‌ನಲ್ಲಿ ಅವರು ತಂಡದಲ್ಲಿದ್ದರೂ ಆಡುವ ಅವಕಾಶ ಪಡೆದಿರಲಿಲ್ಲ.

ಮೈಲಿಗಲ್ಲಿನ ಇನಿಂಗ್ಸ್ ಆಡಿದ ನಂತರದಲ್ಲೇ ಅಂಥ ಬ್ಯಾಟರ್‌ ಅವಕಾಶ ಕಳೆದುಕೊಳ್ಳುವುದು ವಿರಳವಾದರೂ, ಭಾರತದ ಕ್ರಿಕೆಟ್‌ನಲ್ಲಿ ಅಂಥ ನಿದರ್ಶನಗಳು ಇಲ್ಲದ್ದಿಲ್ಲ. ಮನೋಜ್‌ ತಿವಾರಿ 2011ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಏಕದಿನ ಪಂದ್ಯದಲ್ಲಿ ಶತಕ ಗಳಿಸಿದರೂ ಬೇಗ  ಸ್ಥಾನ ಕಳೆದುಕೊಂಡಿದ್ದರು. ಕರುಣ್ ನಾಯರ್ 2016ರಲ್ಲಿ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ನಲ್ಲಿ ತ್ರಿಶತಕ ಗಳಿಸಿದರೂ, ಅವಕಾಶ ಕಳೆದುಕೊಂಡಿದ್ದು ಉದಾಹರಣೆಗಳಷ್ಟೇ.

ಆದರೆ ಗಿಲ್‌ ಅವರು 14 ವರ್ಷದೊಳಗಿನವರ ಕ್ರಿಕೆಟ್‌ ದಿನಗಳಿಂದ ತಮ್ಮ ಆಪ್ತ ಸ್ನೇಹಿತನಾಗಿರುವ ಶರ್ಮಾ ಅವರನ್ನು ಕೈಬಿಡುವ ಸಾಧ್ಯತೆ ಕಡಿಮೆ. ಗಿಲ್‌ ಅವರಿಂದ ಪಡೆದ ಬ್ಯಾಟಿನಲ್ಲೇ ಶರ್ಮಾ ಶತಕ ಹೊಡೆದಿದ್ದರು.

ಹೀಗಾಗಿ ಇಬ್ಬರ ಎಡಚರಲ್ಲಿ ಒಬ್ಬರು ಮೂರನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆಯಿದೆ. ಋತುರಾಜ ಗಾಯಕವಾಡ ಅವರು ಮೂರನೇ ಕ್ರಮಾಂಕದ ಬದಲು ನಾಲ್ಕನೇ ಕ್ರಮಾಂಕಕ್ಕೆ ಇಳಿಯಬಹುದು. ಹೀಗಾದಲ್ಲಿ, ರಾಜಸ್ಥಾನ ರಾಯಲ್ಸ್‌ ಪರ ಮೂರನೇ ಕ್ರಮಾಂಕದಲ್ಲಿ ಆಡುವ ಸ್ಯಾಮ್ಸನ್‌ ಐದನೇ ಕ್ರಮಾಂಕದಲ್ಲಿ ಆಡಬೇಕಾಗುತ್ತದೆ.

ಮೊದಲೆರಡು ಪಂದ್ಯಗಳಿಗೆ ಮಾತ್ರ ಆಯ್ಕೆಯಾಗಿದ್ದ ಸಾಯಿ ಸುದರ್ಶನ್‌ ಬದಲು ಜೈಸ್ವಾಲ್ ತಂಡದೊಳಕ್ಕೆ ಬರುವುದು ಖಚಿತ. ಧ್ರುವ್‌ ಜುರೇಲ್‌ ಸ್ಥಾನದಲ್ಲಿ ಸ್ಯಾಮ್ಸನ್ ಅವಕಾಶ ಪಡೆಯಬಹುದು. ರಿಯಾನ್ ಪರಾಗ್ ಅವರನ್ನು ಕೈಬಿಟ್ಟು ಶಿವಂ ದುಬೆ ಅವರಿಗೆ ಅವಕಾಶ ಸಿಗುವ ಸಾಧ್ಯತೆಯಿದೆ. ದುಬೆ ವಿಶ್ವಕಪ್ ತಂಡದಲ್ಲಿ ಆಡಿದ್ದರು.

ಜಿಂಬಾಬ್ವೆ ತಂಡಕ್ಕೆ ಬ್ಯಾಟಿಂಗ್‌ ಸಮಸ್ಯೆ ಕಾಡುತ್ತಿದೆ. ಮೊದಲ ಪಂದ್ಯದಲ್ಲಿ 115 ರನ್ ಕುಸಿದಿದ್ದರೆ, ಎರಡನೇ ಪಂದ್ಯದಲ್ಲಿ 235 ರನ್ ಬೆನ್ನಟ್ಟುವ ಹಾದಿಯಲ್ಲಿ 134 ರನ್‌ಗಳಿಗೆ ಉರುಳಿತ್ತು. ಹರಾರೆ ಸ್ಪೋರ್ಟ್ಸ್‌ ಕ್ಲಬ್‌ ಪಿಚ್‌ನಲ್ಲಿ ಸ್ಪಿನ್ನರ್‌ಗಳೂ ಕೈಚಳಕ ತೋರಿದ್ದು, ರವಿ ಬಿಷ್ಣೋಯಿ ಇದುವರೆಗೆ 8 ಓವರುಗಳಲ್ಲಿ 24 ರನ್ನಿಗೆ 6 ವಿಕೆಟ್‌ ಪಡೆದಿದ್ದಾರೆ.

ಮೊದಲ ಪಂದ್ಯದಲ್ಲಿ 13 ರನ್‌ಗಳ ಆಘಾತಕಾರಿ ಸೋಲು ಯುವ ಆಟಗಾರರ ತಂಡಕ್ಕೆ ಎಚ್ಚರಿಕೆಯ ಗಂಟೆಯಾಗಿ ಕೆಲಸ ಮಾಡಿತ್ತು. ಗಿಲ್‌ ಅವರು ಮೊದಲೆರಡು ಪಂದ್ಯಗಳಲ್ಲಿ ಯಶಸ್ಸು ಕಂಡಿಲ್ಲ. ಅವರಿಗೆ ಲಯಕ್ಕೆ ಮರಳಲು ಇದು ಒಳ್ಳೆಯ ಅವಕಾಶ.

ಪಂದ್ಯ ಆರಂಭ: ಸಂಜೆ 4.30 (ಭಾರತೀಯ ಕಾಲಮಾನ)

ನೇರ ಪ್ರಸಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT