ಭಾನುವಾರ, ಫೆಬ್ರವರಿ 23, 2020
19 °C
ಯುರೋಪಿಯನ್‌ ಚಾಂಪಿಯನ್ಸ್ ಲೀಗ್

ಸೆಲ್ಫಿಗಾಗಿ ಮೈದಾನಕ್ಕೆ ನುಗ್ಗಿ ರೊನಾಲ್ಡೊ ಕೆಂಗಣ್ಣಿಗೆ ಗುರಿಯಾದ ಅಭಿಮಾನಿ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಲೆವೆರ್‌ಕುಸೆನ್‌ (ಜರ್ಮನಿ): ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಸಲುವಾಗಿ ಮೈದಾನಕ್ಕೆ ನುಗ್ಗಿದ ಅಭಿಮಾನಿಯೊಬ್ಬ ಸ್ಟಾರ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಕೆಂಗಣ್ಣಿಗೆ ಗುರಿಯಾದ ಪ್ರಸಂಗ ಯುರೋಪಿಯನ್‌ ಚಾಂಪಿಯನ್ಸ್‌ ಲೀಗ್‌ನ (ಯುಸಿಎಲ್‌) ಯುವೆಂಟಸ್–ಬೆಯರ್‌ ಪಂದ್ಯದಲ್ಲಿ ನಡೆಯಿತು.

ಇಲ್ಲಿನ ಬೇ ಅರೇನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯವು ಮುಕ್ತಾಯದ ಬಳಿಕ ಯುವೆಂಟಸ್ ತಂಡದ ರೊನಾಲ್ಡೊ ಸಹ ಆಟಗಾರರನ್ನು ಅಭಿನಂದಿಸುತ್ತಿದ್ದರು. ಈ ವೇಳೆ ರಕ್ಷಣಾ ಸಿಬ್ಬಂದಿ ಕಣ್ತಪ್ಪಿಸಿ ಅಂಗಳಕ್ಕೆ ನುಗ್ಗಿದ ಅಭಿಮಾನಿ, ರೊನಾಲ್ಡೊ ಅವರತ್ತ ಧಾವಿಸಿದರು. ಬಳಿಕ ರೊನಾಲ್ಡೊ ಕುತ್ತಿಗೆಯ ಹತ್ತಿರ (ಭುಜದ ಮೇಲೆ) ಕೈ ಇಟ್ಟು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಪ್ರಯತ್ನಿಸಿದ್ದರು. ಅಷ್ಟರಲ್ಲಿ ಹಿಂದಿನಿಂದ ಬಂದ ಸಿಬ್ಬಂದಿ, ಅಭಿಮಾನಿಯನ್ನು ಎಳೆದೊಯ್ಯಲು ಪ್ರಯತ್ನಿಸಿದರು.

ಇದನ್ನೂ ಓದಿ: ಯುವೆಂಟಸ್ ತಂಡ ಸೇರಿದ ಕ್ರಿಸ್ಟಿಯಾನೊ ರೊನಾಲ್ಡೊ

ಆತ (ಅಭಿಮಾನಿ) ರೊನಾಲ್ಡೊ ಅವರನ್ನು ಬಿಗಿಯಾಗಿ ಹಿಡಿದಿದ್ದರಿಂದ, ರಕ್ಷಣಾ ಸಿಬ್ಬಂದಿ ಎಳೆದ ರಭಸಕ್ಕೆ ರೊನಾಲ್ಡೊ ಕೂಡ ಮುಂದಕ್ಕೆ ಮುಗ್ಗರಿಸಿದರು. ಕ್ಷಣಮಾತ್ರದಲ್ಲಿ ನಡೆದ ಈ ಘಟನೆಯಿಂದ ಕಕ್ಕಾಬಿಕ್ಕಿಯಾದ ರೊನಾಲ್ಡೊ ಅಭಿಮಾನಿಯತ್ತ ಕೆಂಗಣ್ಣ ಬೀರಿದರು. ಈ ವಿಡಿಯೊ ಇದೀಗ ವೈರಲ್‌ ಆಗಿದೆ.

ಈ ಘಟನೆಗೂ ಮೊದಲು ಅಂಗಳಕ್ಕೆ ನುಗ್ಗಿದ್ದ ಇಬ್ಬರು ಅಭಿಮಾನಿಗಳನ್ನು ಆತ್ಮೀಯವಾಗಿ ಅಪ್ಪಿಕೊಂಡು ಕಳುಹಿಸಿದ್ದರು.

ಪಂದ್ಯದಲ್ಲಿ ರೊನಾಲ್ಡೊ ಹಾಗೂ ಗೊಂಜಾಲೆ ಹಿಗುವಾಯ್ನ್‌ ತಲಾ ಒಂದೊಂದು ಗೋಲು ಬಾರಿಸಿದರು. ಹೀಗಾಗಿ ಯುವೆಂಟಸ್ ತಂಡ ಬೆಯರ್‌ ವಿರುದ್ಧ 2–0 ಅಂತರದಲ್ಲಿ ಗೆಲುವು ಸಾಧಿಸಿತು. ಯುಸಿಎಲ್‌ನ ಡಿ ಗುಂಪಿನಲ್ಲಿರುವ ಯುವೆಂಟಸ್ ಆಡಿರುವ ಆರೂ ಪಂದ್ಯಗಳಲ್ಲಿ ಗೆದ್ದು ಅಗ್ರಸ್ಥಾನದಲ್ಲಿದೆ.

ಇದನ್ನೂ ಓದಿ: ಯುಸಿಎಲ್‌ನಲ್ಲಿ ಗೋಲು ಗಳಿಸಿದ ಅತಿ ಕಿರಿಯ ಆಟಗಾರ ಎನಿಸಿದ ಫಾಟಿ: ಬಾರ್ಸಿಲೋನಾಗೆ ಜಯ

ಯುಸಿಎಲ್‌ನಲ್ಲಿ ಒಟ್ಟು 32 ತಂಡಗಳು ಎಂಟು ಗುಂಪುಗಳಲ್ಲಿ ಸೆಣಸುತ್ತಿವೆ. ಪ್ರತಿ ಗುಂಪಿನ ಮೊದಲೆರಡು ಸ್ಥಾನದಲ್ಲಿರುವ ತಂಡಗಳು ಹದಿನಾರರ ಘಟ್ಟಕ್ಕೆ ತಲುಪುತ್ತವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು