ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹೃದಯಿ ಗೆಳೆಯ ಜೋನ್ಸ್‌: ವಿಕ್ರಂ ರಾಜು ನೆನಪು

ಭಾರತ–ಆಸ್ಟ್ರೇಲಿಯಾ ಟೈ ಟೆಸ್ಟ್
Last Updated 24 ಸೆಪ್ಟೆಂಬರ್ 2020, 19:36 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ‘ಕ್ರೀಡಾಂಗಣದಲ್ಲಿ ನಾನು ಸಿಕ್ಕಾಗಲೆಲ್ಲ ಓಡಿ ಬಂದು ತಬ್ಬಿಕೊಂಡು ಅಭಿನಂದಿಸುತ್ತಿದ್ದ ಸಹೃದಯಿ ಗೆಳೆಯ. ಆತನ ಸಾವಿನ ಸುದ್ದಿ ನಂಬಲಾಗುತ್ತಿಲ್ಲ. ಆಘಾತಕಾರಿ..’

ಈ ಮಾತುಗಳನ್ನು ಹೇಳುವಾಗ ಹಿರಿಯ ಅಂಪೈರ್ ವಿಕ್ರಂ ರಾಜು ತುಸು ಭಾವುಕರಾದರು. 1986ರಲ್ಲಿ ಚೆನ್ನೈನ ಐತಿಹಾಸಿಕ ಟೈ ಟೆಸ್ಟ್‌ನಲ್ಲಿ ಬೆಂಗಳೂರಿನ ವಿಕ್ರಂ ರಾಜು ಅವರು ಅಂಪೈರಿಂಗ್ ಮಾಡಿದ್ದರು. ಅವರ ನೀಡಿದ ತೀರ್ಪು ಚರ್ಚೆಗೆ ಕಾರಣವಾಗಿತ್ತು. ಆ ಪಂದ್ಯದಲ್ಲಿ ದ್ವಿಶತಕ ಹೊಡೆದಿದ್ದ ಜೋನ್ಸ್‌ ಮಾತ್ರ ಅಂದಿನಿಂದ ವಿಕ್ರಂ ಅವರೊಂದಿಗೆ ಆತ್ಮೀಯ ಗೆಳೆಯನೇ ಆಗಿದ್ದರು.

‘ಟೈ ಟೆಸ್ಟ್‌ನಲ್ಲಿ ಆತನ ಬ್ಯಾಟಿಂಗ್‌ ಸದಾಕಾಲ ನೆನಪಿನಲ್ಲಿ ಉಳಿಯು ವಂತದ್ದು. ಚೆನ್ನೈನ ಬಿಸಿಲಿಗೆ ಸಂಪೂರ್ಣ ಬಸವಳಿದಿದ್ದ ಡೀನ್, ನಿರ್ಜಲೀಕರ ಣದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆದು ಬಂದು ಬ್ಯಾಟಿಂಗ್ ಮಾಡಿದ್ದರು. ಆ ಕಾಲದಲ್ಲಿ ಚುರುಕಿನ ರನ್‌ ಗಳಿಕೆಗೆ ಹೆಸರಾದ ಬ್ಯಾಟ್ಸ್‌ಮನ್ ಅವರು’ ಎಂದು ವಿಕ್ರಂ ‘ಪ್ರಜಾವಾಣಿ’ ಯೊಂದಿಗೆ ನೆನಪು ಹಂಚಿಕೊಂಡರು.

‘ಟೈ ಟೆಸ್ಟ್‌ ಒಂದು ಅದ್ಭುತವಾದ ಪಂದ್ಯ. ನಿಮ್ಮ ತೀರ್ಪು ಕೂಡ ಸರಿಯಿತ್ತು. ರವಿಶಾಸ್ತ್ರೀ ಆ ರೀತಿಯ ಹೇಳಿಕೆ ನೀಡ ಬಾರದಿತ್ತು. ಅವರು ಆ ದಿನ ಒಂದು ರನ್‌ ತೆಗೆದುಕೊಳ್ಳುವ ಬದಲು ಎರಡು ರನ್‌ ತೆಗೆದುಕೊಳ್ಳಬೇಕಿತ್ತು. ಆಗ ಮಣಿಂದರ್ ಸಿಂಗ್‌ ಕ್ರೀಸ್‌ನಲ್ಲಿರುತ್ತಿರಲಿಲ್ಲ. ರವಿಯೇ ಆಡಬಹುದಿತ್ತು ಎಂದು ಜೋನ್ಸ್‌ ಯಾವಾಗಲೂ ಹೇಳುತ್ತಿದ್ದರು. ಅಷ್ಟು ದೊಡ್ಡ ಆಟಗಾರನಾದರೂ ಅಹಂಭಾವ ಇರಲಿಲ್ಲ. ಮೂವತ್ತು ವರ್ಷಗಳು ಕಳೆದರೂ ಅವರ ನಿಲುವು ಬದಲಾಗಲಿಲ್ಲ’ ಎಂದು ಹೇಳುತ್ತಾರೆ.

‘ಕರ್ನಾಟಕ ‍ಪ್ರೀಮಿಯರ್ ಲೀಗ್‌ ಪಂದ್ಯಗಳಿಗೆ ಕಾಮೆಂಟರಿ ಮಾಡಲು ಬರುತ್ತಿದ್ದರು. ನಾನು ರೆಫರಿಯಾಗಿ ಹೋಗುತ್ತಿದ್ದೆ. ತಬ್ಬಿಕೊಂಡು ಅಭಿನಂದಿಸುತ್ತಿದ್ದರುಡೀನ್ ಜೋನ್ಸ್‌ ಅವರು ಕೆಪಿಎಲ್ ಟೂರ್ನಿಯಲ್ಲಿ ಬ್ರೆಟ್‌ ಲೀ, ಬ್ರಾಡ್ ಹಾಗ್ ಅವರೊಂದಿಗೆ ವೀಕ್ಷಕ ವಿವರಣೆ ನೀಡುತ್ತಿದ್ದರು. ಬೆಂಗಳೂರಿನಲ್ಲಿ ಆಟೋಗಳಲ್ಲಿ ಓಡಾಡುತ್ತ, ಚಿನ್ನಸ್ವಾಮಿ ಅಂಗಳದಲ್ಲಿ ನಿಂತುಕೊಂಡು ‘ಥ್ಯಾಂಕ್ಸ್‌ ಟು ಕ್ರಿಕೆಟ್. ಬಿಕಾಸ್‌ ಆಫ್‌ ಕ್ರಿಕೆಟ್ ಬೆಂಗಳೂರು ಈಸ್ ಮೈ ಸೆಕೆಂಡ್ ಹೋಮ್’ ಎನ್ನುತ್ತಿದ್ದರು ಜೋನ್ಸ್. ಇನ್ನು ಅವರ ಮಾತುಗಳು ನೆನಪುಗಳಷ್ಟೇ.

ಚಾಂಪಿಯನ್ ಕಾಮೆಂಟೇಟರ್ ಜೋನ್ಸ್
ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿಯಲ್ಲಿ ಡೀನ್ ಜೋನ್ಸ್‌ ನೀಡುತ್ತಿದ್ದ ವೀಕ್ಷಕ ವಿವರಣೆಯು ಹಲವರ ಮನಗೆದ್ದಿತ್ತು. ಕೊರೊನಾ ಕಾರಣದಿಂದಾಗಿ ಈ ಬಾರಿ ಅವರು ಯುಎಇಯಲ್ಲಿ ನಡೆಯುತ್ತಿರುವ ಐಪಿಎಲ್‌ಗೆ ಹೋಗಿರಲಿಲ್ಲ. ಆದರೆ ಮುಂಬೈನಲ್ಲಿರುವ ಸ್ಟುಡಿಯೋದಿಂದಲೇ ಕಾಮೆಂಟ್ರಿ ಕೊಡುತ್ತಿದ್ದರು. ಬುಧವಾರ ರಾತ್ರಿಯ ಪಂದ್ಯದ ನಂತರ ಅವರು ರೋಹಿತ್ ಶರ್ಮಾ ಬ್ಯಾಟಿಂಗ್ ಕುರಿತು ವಿಶ್ಲೇಷಣೆ ಮಾಡಿದ್ದರು.

‘ವೀಕ್ಷಕ ವಿವರಣೆಯಲ್ಲಿ ಅವರು ಚಾಂಪಿಯನ್ ಆಗಿದ್ದರು. ಅವರ ಇರುವಿಕೆಯೇ ನಮ್ಮ ತಂಡದಲ್ಲಿ ಹುರುಪು ತುಂಬುತ್ತಿತ್ತು. ಅಷ್ಟೊಂದು ಲವಲವಿಕೆಯಿಂದ ಎಲ್ಲರನ್ನೂ ನಗಿಸುತ್ತ, ಹುರಿದುಂಬಿಸುತ್ತ ಓಡಾಡುತ್ತಿದ್ದರು. ಅವರ ಕಾಮೆಂಟರಿ, ವಿಷಯ ಮತ್ತು ಭಾಷಾ ಪ್ರೌಢಿಮೆ ಅಮೋಘವಾಗಿತ್ತು’ ಎಂದು ಸ್ಟಾರ್ ಸ್ಪೋರ್ಟ್ಸ್ ತಂಡವು ನೆನಪಿಸಿಕೊಂಡಿದೆ.

ಕ್ರಿಕೆಟಿಗ ಡೀನ್ ಜೋನ್ಸ್‌ ನಿಧನ
ಮುಂಬೈ (ಪಿಟಿಐ): ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೀನ್ ಮರ್ವಿನ್ ಜೋನ್ಸ್‌ (59) ಗುರುವಾರ ತೀವ್ರ ಹೃದಯಾಘಾತದಿಂದ ನಿಧನರಾದರು.

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ವೀಕ್ಷಕ ವಿವರಣೆಕಾರರಾಗಿದ್ದ ಅವರು ಈಚೆಗೆ ಮುಂಬೈಗೆ ಬಂದಿದ್ದರು. ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಅವರು ಕಾಮೆಂಟಿರಿ ಮಾಡುತ್ತಿದ್ದರು. ಅವರಿಗೆ ಪತ್ನಿ ಮತ್ತು ಇಬ್ಬರು ಹೆಣ್ಣಮಕ್ಕಳು ಇದ್ದಾರೆ. ಡೀನ್ ಜೋನ್ಸ್‌ 52 ಟೆಸ್ಟ್ ಮತ್ತು 164 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. 1987ರಲ್ಲಿ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದಲ್ಲಿಯೂ ಅವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT