ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವೇಗದ ಬೌಲಿಂಗ್ ಪರಂಪರೆಯ ಕೊಂಡಿ ಡೇವಿಡ್: ಕ್ರಿಕೆಟ್ ವಲಯದಲ್ಲಿ ಮೂಡಿದ ಆಘಾತ

Published 20 ಜೂನ್ 2024, 23:30 IST
Last Updated 20 ಜೂನ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಕ್ರಿಕೆಟ್ ಇತಿಹಾಸದ ವೇಗದ ಬೌಲರ್‌ಗಳ ಪರಂಪರೆಯಲ್ಲಿ ಪ್ರಮುಖ ಹೆಸರು ಡೇವಿಡ್  ಜೂಡ್  ಜಾನ್ಸನ್ ಅವರದ್ದು.  

1993ರಿಂದ ಒಂದು ದಶಕದ ಕಾಲ ದೇಶಿ ಕ್ರಿಕೆಟ್‌ನಲ್ಲಿ ದೂಳೆಬ್ಬಿಸಿದ್ದ ಶರವೇಗಿ ಡೇವಿಡ್. ಆ ಕಾಲಘಟ್ಟದಲ್ಲಿ ವೇಗದ ತಾರೆ ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್ ಮತ್ತು ದೊಡ್ಡಗಣೇಶ್ ಅವರೊಂದಿಗೆ ಕರ್ನಾಟಕದ ವೇಗದ ಬೌಲಿಂಗ್ ವಿಭಾಗವನ್ನು ಬಲಾಢ್ಯಗೊಳಿಸಿದ್ದವರು ಡೇವಿಡ್. ಇವರೆಲ್ಲರೂ ಒಂದೇ ಕಾಲಘಟ್ಟದಲ್ಲಿ ಮಿಂಚಿದ್ದು, ಕರ್ನಾಟಕದಲ್ಲಿ ವೇಗದ ಬೌಲಿಂಗ್‌ ಬೆಳವಣಿಗೆಗೆ ಗಟ್ಟಿ ಬುನಾದಿಯಾಯಿತು. 

ಅರಸಿಕೆರೆಯಲ್ಲಿ ಜನಿಸಿ ಭಾರತ ಕ್ರಿಕೆಟ್‌ ತಂಡದಲ್ಲಿ ಆಡುವ ಮಟ್ಟಕ್ಕೆ ಬೆಳೆದಿದ್ದು ಡೇವಿಡ್‌ ಅವರದ್ದು ಸಣ್ಣ ಸಾಧನೆಯೇನಲ್ಲ. ಅವರಿಗೆ ಬಾಲ್ಯದಿಂದಲೂ ಬೌಲಿಂಗ್ ಮೇಲೆಯೇ ಹೆಚ್ಚು ಪ್ರೀತಿ. ಬ್ಯಾಟರ್‌ಗಳ ವಿರುದ್ಧ ಸದಾ ಪ್ರಾಬಲ್ಯ ಮೆರೆಯಲು ತುಡಿಯುತ್ತಿದ್ದರು. ಬಲಗೈ ಮಧ್ಯಮವೇಗಿಯಾಗಿದ್ದ ಡೇವಿಡ್ ತಮ್ಮ 17ನೇ ವಯಸ್ಸಿನಲ್ಲಿ ಹೊನಲು ಬೆಳಕಿನ ಟೆನಿಸ್ ಕ್ರಿಕೆಟ್ ಪಂದ್ಯದಲ್ಲಿ 8 ವಿಕೆಟ್ ಗಳಿಸಿದ್ದರು.  

ಇದನ್ನು ಗಮನಿಸಿದ ಅವರ ಸ್ನೇಹಿತರೊಬ್ಬರು ಸ್ವಸ್ತಿಕ್ ಯೂನಿಯನ್ ಕ್ರಿಕೆಟ್‌ ಕ್ಲಬ್‌ನಲ್ಲಿ ಆಡಲು ಆಹ್ವಾನಿಸಿದರು. ಆರಂಭದಲ್ಲಿ ಡೇವಿಡ್ ಒಪ್ಪಿರಲಿಲ್ಲ. ಕೆಲಕಾಲದ ನಂತರ ಕ್ಲಬ್ ಸೇರಿಕೊಂಡರು. ಅಲ್ಲಿಂದ ಹಿಂದಿರುಗಿ ನೋಡಲಿಲ್ಲ.  ಶಫಿ ದಾರಾಶಾ ಟೂರ್ನಿಯಲ್ಲಿ ಅವರು ಆಗಿನ ಉದಯೋನ್ಮುಖ ತಾರೆಗಳಾದ ರಾಹುಲ್ ದ್ರಾವಿಡ್, ಸುಜಿತ್ ಸೋಮಸುಂದರ್ ಮತ್ತು ವೆಂಕಟೇಶ್ ಪ್ರಸಾದ್ ಅವರಿದ್ದ ತಂಡದ ಎದುರು ಮಿಂಚಿದರು. ಎಂಟು ವಿಕೆಟ್ ಕಬಳಿಸಿದರು. ನಂತರ ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದರು. ಅಲ್ಲಿಯೂ ಮಿಂಚಿದ ಅವರು ಭಾರತ ಎ ತಂಡದಲ್ಲಿಯೂ ಆಡಿದರು. 

ಆ ಸಂದರ್ಭದಲ್ಲಿ ಸುಮಾರು 150 ಕಿಲೋಮೀಟರ್‌ಗಿಂತಲೂ ಹೆಚ್ಚು ವೇಗದ ಎಸೆತಗಳನ್ನು ಪ್ರಯೋಗಿಸುತ್ತಿದ್ದ ಡೇವಿಡ್ ಭುಜಬಲವನ್ನು ನೋಡಿ ಕಣ್ಣಗಲಿಸಿದವರು ಹಲವರು.  ಅವರು ‘ದಿಟ್ಟೆದೆಯ ಬೌಲರ್‌’ ಎಂದೇ ಪ್ರಸಿದ್ಧಿಯಾದವರು.  

1995–96ರ ರಣಜಿ ಟ್ರೋಫಿ ಟೂರ್ನಿಯಲ್ಲಿ ಕೇರಳ ವಿರುದ್ಧದ ಪಂದ್ಯದಲ್ಲಿ 152ಕ್ಕೆ10 ವಿಕೆಟ್ ಗಳಿಸಿದರು.  ಅದರೊಂದಿಗೆ ಭಾರತ ತಂಡದ ಆಯ್ಕೆಗಾರರ ಗಮನ ಸೆಳೆದರು.  

ಅದೇ ವರ್ಷ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ನಲ್ಲಿ ಡೇವಿಡ್ ಪದಾರ್ಪಣೆ ಮಾಡಿದ್ದರು. ಆ ಪಂದ್ಯದಲ್ಲಿ ಜೋಶಿ, ಅನಿಲ್ ಕುಂಬ್ಳೆ ಮತ್ತು ವೆಂಕಟೇಶ್ ಪ್ರಸಾದ್ ಕೂಡ ಇದ್ದರು. ಆಸ್ಟ್ರೇಲಿಯಾದ ಮೈಕೆಲ್ ಸ್ಲೆಟರ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದ್ದ ಜಾನ್ಸನ್  ಟೆಸ್ಟ್ ಕ್ರಿಕೆಟ್‌ನಲ್ಲಿ ವಿಕೆಟ್ ಖಾತೆ ತೆರೆದಿದ್ದರು.  ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ನಲ್ಲಿಯೂ ಎರಡು ವಿಕೆಟ್ (ಹರ್ಷಲ್‌ ಗಿಬ್ಸ್‌ ಹಾಗೂ ಮೆಕ್‌ಮಿಲನ್) ಗಳಿಸಿದ್ದರು. ಆದರೆ ಅವರ ಅಂತರರಾಷ್ಟ್ರೀಯ ಕ್ರಿಕೆಟ್ ಪಯಣ ಎರಡು ಟೆಸ್ಟ್‌ಗಳಿಗೆ ಮಾತ್ರ ಸೀಮಿತವಾಯಿತು. ಅವರಿಗಿದ್ದ ಪ್ರತಿಭೆ ಹಾಗೂ ಸಾಮರ್ಥ್ಯಕ್ಕೆ ಇನ್ನೂ ಎತ್ತರಕ್ಕೆ ಬೆಳೆಯಬೇಕಿತ್ತು ಎಂದು ಅವರ ಸಮಕಾಲೀನ ಆಟಗಾರರು ಹೇಳುತ್ತಾರೆ. 

‘ನಾನು ಮತ್ತು ಡೇವಿಡ್ ಜೂನಿಯರ್ ಕ್ರಿಕೆಟ್‌ನಿಂದ ಜೊತೆಗೆ ಆಡಿದವರು. ಕರ್ನಾಟಕ ತಂಡಕ್ಕೆ ನಾನು ನಾಯಕತ್ವ ವಹಿಸಿದಾಗ ಅವರೂ ತಂಡದಲ್ಲಿದ್ದರು. ಯಾವುದೇ ಪಂದ್ಯದ ಯಾವುದೇ ಹಂತದಲ್ಲಿ ಅವರಿಗೆ ಚೆಂಡು ಕೊಟ್ಟರೂ ನಿರಾಶೆ ಮಾಡುತ್ತಿರಲಿಲ್ಲ. ತಂಡಕ್ಕೆ  ಉತ್ತಮ ಫಲ ನೀಡುತ್ತಿದ್ದರು. ನಿಜವಾದ ಹೋರಾಟಗಾರ. ಅವರ ಬೌಲಿಂಗ್ ಆ್ಯಕ್ಷನ್ ಚೆನ್ನಾಗಿತ್ತು. ಅವರ ನಿಧನದ ಸುದ್ದಿ ಕೇಳಿ ಬಹಳ ಆಘಾತವಾಗಿದೆ. ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ದೇವರು ನೀಡಲಿ’ ಎಂದು ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ ಸ್ಮರಿಸಿದರು. 

ಡೇವಿಡ್ 39 ಪ್ರಥಮ ದರ್ಜೆ ಪಂದ್ಯಗಳಿಂದ 125 ವಿಕೆಟ್ ಗಳಿಸಿದರು. ಕೆಲವು ಪಂದ್ಯಗಳಲ್ಲಿಯೂ ಬ್ಯಾಟಿಂಗ್‌ನಲ್ಲಿಯೂ ಮಿಂಚಿದ್ದರು. ಒಂದು ಶತಕ ಸಹಿತ 437 ರನ್‌ಗಳು ಅವರ ಖಾತೆಯಲ್ಲಿವೆ.    

ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಜಾನ್ಸನ್ ಅವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಪ್ರತಿಭಾಶೋಧ ಸಂಶೋಧನೆ ಹಾಗೂ ಅಭಿವೃದ್ಧಿ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದರು. ದಕ್ಷಿಣ ವಲಯ 16 ವರ್ಷದೊಳಗಿನವರ ತಂಡದ ಕೋಚ್ ಹಾಗೂ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ)ಲ್ಲಿ ತರಬೇತುದಾರರಾಗಿ ಕೆಲಸ ಮಾಡಿದ್ದರು. 

ವೃತ್ತಿಜೀವನದ ಪ್ರತಿಯೊಂದು ಹಂತದಲ್ಲಿಯೂ ಹೋರಾಟ ಮತ್ತು ಛಲದ ಹಾದಿ ಅನುಸರಿಸಿದವರು. ಕಷ್ಟಗಳನ್ನು ದಿಟ್ಟತನದಿಂದ ಎದುರಿಸುತ್ತಲೇ ಬಂದವರು. ಆದರೆ  ಇಂದು ಮಾತ್ರ ಸೋತು ಹೋರಾಟ ನಿಲ್ಲಿಸಿದರು.  

ಡೇವಿಡ್ ಜಾನ್ಸನ್ 
ಡೇವಿಡ್ ಜಾನ್ಸನ್ 
ಡೇವಿಡ್ ಜಾನ್ಸನ್ 
ಡೇವಿಡ್ ಜಾನ್ಸನ್ 
ಡೇವಿಡ್ ಮತ್ತು ನಾನು ತುಂಬ ಉತ್ತಮ ಸ್ನೇಹಿತರಾಗಿದ್ದೆವು. ಅವರೊಂದಿಗೆ ಬೌಲಿಂಗ್‌ ಮಾಡಿದ ದಿನಗಳನ್ನು ಮರೆಯಲು ಸಾಧ್ಯವಿಲ್ಲ. ವೈಯಕ್ತಿಕವಾಗಿಯೂ ನಾವು ಉತ್ತಮ ಸ್ನೇಹಿತರಾಗಿದ್ದೆವು. ಎರಡು ವರ್ಷಗಳ ಹಿಂದೆ ನಾವು ರುವಾಂಡಾ ದೇಶಕ್ಕೆ ಕ್ರಿಕೆಟ್ ಪ್ರವಾಸ ಮಾಡಿದ್ದೆವು. ಅವರು ಬೆಂಗಳೂರಿನಲ್ಲಿ ಅಕಾಡೆಮಿ ಆರಂಭಿಸಿದ್ದರು. ಅವರ ಸಾವಿನಿಂದ ಅಪಾರ ದುಃಖವಾಗಿದೆ.
–ದೊಡ್ಡಗಣೇಶ್, ಮಾಜಿ ಕ್ರಿಕೆಟಿಗ
ಆ ಸಮಯದಲ್ಲಿ ಬ್ಯಾಟರ್‌ಗಳು ಡೇವಿಡ್ ಎಸೆತಗಳನ್ನು ಎದುರಿಸಲು  ಭಯಪಡುತ್ತಿದ್ದರು. ಅವರು ಪ್ರಯೋಗಿಸುತ್ತಿದ್ದ ಎಸೆತಗಳ ವೇಗ ಹಾಗಿತ್ತು. ರನ್‌ ಅಪ್ ಮತ್ತು ಆರ್ಮ್‌ ಸ್ಪೀಡ್ ಬಹಳ ಚುರುಕಾಗಿದ್ದವು. ಅವರ ರೌಂಡ್ ಆರ್ಮ್ ಆ್ಯಕ್ಷನ್‌ನಲ್ಲಿ ರಿವರ್ಸ್‌ ಸ್ವಿಂಗ್‌ಗಳೂ ಪರಿಣಾಮಕಾರಿಯಾಗಿದ್ದವು. 
– ವೆಂಕಟೇಶ್ ಪ್ರಸಾದ್, ಮಾಜಿ ಕ್ರಿಕೆಟಿಗ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT