ಬುಧವಾರ, ಆಗಸ್ಟ್ 4, 2021
23 °C

ವಿಂಡೀಸ್‌ ಕ್ರಿಕೆಟ್‌ ದಿಗ್ಗಜ ಎವರ್ಟನ್‌ ನಿಧನ

ಎಪಿ Updated:

ಅಕ್ಷರ ಗಾತ್ರ : | |

Prajavani

ಬ್ರಿಡ್ಜ್‌ಟೌನ್‌: ವೆಸ್ಟ್‌ ಇಂಡೀಸ್‌ನ ದಿಗ್ಗಜ ಕ್ರಿಕೆಟಿಗ ಎವರ್ಟನ್‌ ವೀಕ್ಸ್‌ (95) ಅವರು ನಿಧನರಾಗಿದ್ದಾರೆ.

ಈ ವಿಷಯವನ್ನು ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿಯು ಬುಧವಾರ ಬಹಿರಂಗಪಡಿಸಿದೆ.

ಎವರ್ಟನ್‌, ಫ್ರಾಂಕ್‌ ವಾರೆಲ್‌ ಮತ್ತು ಕ್ಲೈಡ್‌ ವಾಲ್ಕಾಟ್‌ ಅವರು ಸಮಕಾಲೀನ ಕ್ರಿಕೆಟಿಗರಾಗಿದ್ದಾರೆ. ಇವರೆಲ್ಲಾ 1948ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

‘ಐಸಿಸಿ ಹಾಲ್‌ ಆಫ್‌ ಫೇಮ್’‌ ಗೌರವಕ್ಕೆ ಭಾಜನರಾಗಿದ್ದ ಎವರ್ಟನ್ ಅವರು ಈ ಸಮಿತಿಯ ಸದಸ್ಯರೂ ಆಗಿದ್ದರು. ಕೋಚ್‌, ವಿಶ್ಲೇಷಕ, ತಂಡದ ಮ್ಯಾನೇಜರ್‌, ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ (ಐಸಿಸಿ) ಪಂದ್ಯದ ರೆಫರಿಯಾಗಿಯೂ ಕೆಲಸ ಮಾಡಿದ್ದರು.

ಕೆನ್ಸಿಂಗ್‌ಟನ್‌ ಓವಲ್‌ನಲ್ಲಿ ನಡೆದಿದ್ದ ಇಂಗ್ಲೆಂಡ್‌ ಎದುರಿನ ಟೆಸ್ಟ್‌ ಪಂದ್ಯವು ಎವರ್ಟನ್‌ ಪಾಲಿಗೆ ಮೊದಲನೆಯದ್ದು. ಆಗ ಅವರಿಗೆ 22 ವರ್ಷ ವಯಸ್ಸು. 

1925 ಫೆಬ್ರುವರಿ 26ರಂದು ಬಾರ್ಬಡೀಸ್‌ನಲ್ಲಿ ಜನಿಸಿದ್ದ ಎವರ್ಟನ್,‌ 1948ರಿಂದ 1958ರ ಅವಧಿಯಲ್ಲಿ ಒಟ್ಟು 48 ಟೆಸ್ಟ್‌ ಪಂದ್ಯಗಳನ್ನು ಆಡಿದ್ದರು. 58.61ರ ಸರಾಸರಿಯಲ್ಲಿ 4,455ರನ್‌ ಕಲೆಹಾಕಿದ್ದರು. 

ಟೆಸ್ಟ್‌ನಲ್ಲಿ ಸತತ ಐದು ಶತಕಗಳನ್ನು ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. 1948ರಲ್ಲಿ ಅವರಿಂದ ಈ ಸಾಧನೆ ಮೂಡಿ ಬಂದಿತ್ತು. ಜಮೈಕಾದಲ್ಲಿ ನಡೆದಿದ್ದ ಇಂಗ್ಲೆಂಡ್‌ ಎದುರಿನ ಪಂದ್ಯದಲ್ಲಿ 141ರನ್‌ ಬಾರಿಸಿದ್ದ ಅವರು ಭಾರತದಲ್ಲಿ ನಡೆದಿದ್ದ ಟೆಸ್ಟ್‌ ಸರಣಿಯಲ್ಲೂ ಮೋಡಿ ಮಾಡಿದ್ದರು. 

1948ರ ನವೆಂಬರ್‌ನಲ್ಲಿ ದೆಹಲಿಯಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ 128, ಬಾಂಬೆಯಲ್ಲಿ ನಿಗದಿಯಾಗಿದ್ದ ಎರಡನೇ ಟೆಸ್ಟ್‌ನಲ್ಲಿ 194, ಹಾಗೂ ಕಲ್ಕತ್ತದಲ್ಲಿ ಆಯೋಜನೆಯಾಗಿದ್ದ ಮೂರನೇ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 162 ಹಾಗೂ 101ರನ್‌ಗಳನ್ನು‌ ದಾಖಲಿಸಿದ್ದರು. ಮದ್ರಾಸ್‌ನಲ್ಲಿ ನಡೆದಿದ್ದ ನಾಲ್ಕನೇ ಟೆಸ್ಟ್‌ನಲ್ಲಿ 90ರನ್‌ ಗಳಿಸಿ ರನ್‌ಔಟ್‌ ಆಗಿದ್ದರು. 

ಟೆಸ್ಟ್‌ನಲ್ಲಿ ಅತಿವೇಗವಾಗಿ 1,000 ರನ್‌ ಪೂರೈಸಿದ ಸಾಧನೆಯನ್ನೂ ಎವರ್ಟನ್‌ ಮಾಡಿದ್ದರು. ಇದಕ್ಕಾಗಿ 12 ಇನಿಂಗ್ಸ್‌ ತೆಗೆದುಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು