ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್ ಟೂರ್ನಿಯ‌ ಸಿದ್ಧತೆ ಪರಿಶೀಲನೆ: ದುಬೈ ತಲುಪಿದ ಗಂಗೂಲಿ

Last Updated 9 ಸೆಪ್ಟೆಂಬರ್ 2020, 15:05 IST
ಅಕ್ಷರ ಗಾತ್ರ

ದುಬೈ: ಜೀವಸುರಕ್ಷಾ ವಾತಾವರಣದಲ್ಲಿ ನಡೆಯಲಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಟೂರ್ನಿಯ ಸಿದ್ಧತೆಗಳ ಮೇಲ್ವಿಚಾರಣೆಗಾಗಿ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್‌ ಗಂಗೂಲಿ ಅವರು ಬುಧವಾರ ದುಬೈ ತಲುಪಿದರು.

ಕೋವಿಡ್‌–19 ಸೋಂಕು ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯನ್ನು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ಗೆ (ಯುಎಇ) ಸ್ಥಳಾಂತರಿಸಲಾಗಿದೆ. ಸೆಪ್ಟೆಂಬರ್‌ 19ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡವು ರನ್ನರ್ಸ್ ಅಪ್‌ ಚೆನ್ನೈ ಸೂಪರ್‌ ಕಿಂಗ್ಸ್‌ಅನ್ನು ಎದುರಿಸಲಿದೆ.

‘ಐಪಿಎಲ್‌ ಕಾರಣಕ್ಕಾಗಿ ಆರು ತಿಂಗಳ ಬಳಿಕ ಇದು ಮೊದಲ ವಿಮಾನ ಪ್ರಯಾಣ. ಬದುಕು ಬದಲಾಗಿದೆ‘ ಎಂದು ಗಂಗೂಲಿ ಅವರು ದುಬೈಗೆ ತೆರಳುವ ಮೊದಲು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. ಕೋವಿಡ್‌ ತಡೆ ಮಾರ್ಗಸೂಚಿಗಳ ಪ್ರಕಾರ, ಮುಖಗವಸು ಹಾಗೂ ಫೇಸ್‌ಶೀಲ್ಡ್‌ ಧರಿಸಿರುವ ತಮ್ಮ ಚಿತ್ರವನ್ನೂ ಹಾಕಿದ್ದಾರೆ.

ನಿಯಮಗಳ ಪ್ರಕಾರ ಗಂಗೂಲಿ ಅವರು ಆರು ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಬೇಕು. ಸಪ್ಟೆಂಬರ್‌ 23ರವರೆಗೆ ಅವರು ಯುಎಇಯಲ್ಲಿ ಇರುವ ನಿರೀಕ್ಷೆಯಿದೆ.

ಈ ವರ್ಷದ ಅಕ್ಟೋಬರ್‌–ನವೆಂಬರ್‌ನಲ್ಲಿ ನಿಗದಿಯಾಗಿದ್ದ ಟ್ವೆಂಟಿ–20 ವಿಶ್ವಕಪ್‌ ಮುಂದೂಡಿಕೆಯಾತ್ತು. ಇದರಿಂದಾಗಿ ಐಪಿಎಲ್‌ ಟೂರ್ನಿಯನ್ನು ಆಯೋಜಿಸಲು ಬಿಸಿಸಿಐಗೆ ಹಾದಿ ಸುಗಮವಾಗಿತ್ತು. ಐಪಿಎಲ್‌ ಆಡಳಿತ ಮಂಡಳಿ ಮುಖ್ಯಸ್ಥ ಬ್ರಿಜೇಶ್‌ ಪಟೇಲ್‌ ಅವರು ಈಗಾಗಲೇ ದುಬೈನಲ್ಲಿದ್ದಾರೆ.

ಟೂರ್ನಿ ಆಯೋಜನೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರೂ, ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಆಟಗಾರರು ಹಾಗೂ ಸಿಬ್ಬಂದಿಯಲ್ಲಿ ಕೋವಿಡ್‌ ಸೋಂಕು ಪತ್ತೆಯಾಗಿತ್ತು.

ಲೀಗ್‌ನ ಆರಂಭದ ಪಂದ್ಯಗಳಿಗೆ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಿಲ್ಲ. ಆದರೆ ನಂತರದ ಹಂತಗಳಲ್ಲಿ ಕೋವಿಡ್‌ ಹರಡುವಿಕೆಯ ಸ್ಥಿತಿಗತಿಯನ್ನು ಪರಿಶೀಲಿಸಿ ಪ್ರೇಕ್ಷಕರಿಗೆ ಅನುಮತಿ ನೀಡಬಹುದು. ದುಬೈ, ಶಾರ್ಜಾ ಹಾಗೂ ಅಬುಧಾಬಿಗಳಲ್ಲಿ ಪಂದ್ಯಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT