ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನನ್ನು ಫಿಕ್ಸರ್ ಎಂದ ಗೌತಮ್‌ ಗಂಭೀರ್‌: ಶ್ರೀಶಾಂತ್ ಆರೋಪ

Published 7 ಡಿಸೆಂಬರ್ 2023, 12:57 IST
Last Updated 7 ಡಿಸೆಂಬರ್ 2023, 12:57 IST
ಅಕ್ಷರ ಗಾತ್ರ

ಸೂರತ್: ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ಅವರು 'ಲೆಜೆಂಡ್ಸ್‌ ಲೀಗ್‌' ಕ್ರಿಕೆಟ್‌ ಪಂದ್ಯದ ವೇಳೆ ತಮ್ಮನ್ನು 'ಫಿಕ್ಸರ್‌' ಎಂದು ಕರೆದಿದ್ದಾರೆ ಎಂದು ವೇಗದ ಬೌಲರ್ ಎಸ್.ಶ್ರೀಶಾಂತ್‌ ಗುರುವಾರ ಆರೋಪಿಸಿದ್ದಾರೆ.

ಭಾರತ ತಂಡವು 2007ರಲ್ಲಿ ಚೊಚ್ಚಲ ಟಿ20 ವಿಶ್ವಕಪ್‌ ಹಾಗೂ 2011ರಲ್ಲಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಗೆದ್ದ ತಂಡದಲ್ಲಿ ಜೊತೆಯಾಗಿ ಆಡಿದ್ದ ಗಂಭೀರ್‌ ಮತ್ತು ಶ್ರೀಶಾಂತ್‌, ಸದ್ಯ ನಡೆಯುತ್ತಿರುವ 'ಲೆಜೆಂಡ್ಸ್‌ ಲೀಗ್‌' ಟೂರ್ನಿಯಲ್ಲಿ ಕ್ರಮವಾಗಿ ಇಂಡಿಯಾ ಕ್ಯಾಪಿಟಲ್ಸ್ ಮತ್ತು ಗುಜರಾತ್‌ ಜೈಂಟ್ಸ್ ತಂಡಗಳಲ್ಲಿ ಆಡುತ್ತಿದ್ದಾರೆ.

ಕ್ಯಾಪಿಟಲ್ಸ್ ಮತ್ತು ಜೈಂಟ್ಸ್ ತಂಡಗಳು ಬುಧವಾರ ನಡೆದ ಎಲಿಮನೇಟರ್‌ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಪಂದ್ಯದ ವೇಳೆ ಉಭಯ ಆಟಗಾರರ ನಡುವೆ ಮಾತಿನ ಚಕಮಕಿ ನಡೆದಿದೆ. ಅಂಪೈರ್‌ಗಳು ಮಧ್ಯಪ್ರವೇಶಿಸಿ, ವಾತಾವರಣ ತಿಳಿಗೊಳಿಸಿದರು.

ಈ ಕುರಿತು ಪಂದ್ಯದ ಬಳಿಕ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಲೈವ್‌ ಬಂದು ಮಾತನಾಡಿರುವ ಶ್ರೀಶಾಂತ್‌, 'ಗಂಭೀರ್‌ ಕ್ರೀಸ್‌ ಮಧ್ಯದಲ್ಲಿ ನಿಂತು ನೇರ ಪ್ರಸಾರದ ವೇಳೆಯೇ ನನ್ನನ್ನು ಫಿಕ್ಸರ್‌, ಫಿಕ್ಸರ್‌ ಎಂದು ಕರೆಯುತ್ತಿದ್ದರು' ಎಂದು ದೂರಿದ್ದಾರೆ.

'ವ್ಯಂಗ್ಯವಾಗಿ ನಗುತ್ತಲೇ 'ಏನು ಹೇಳುತ್ತಿರುವೆ' ಎಂದು ಕೇಳಿದೆ. ಅಂಪೈರ್‌ಗಳು ಮಧ್ಯಪ್ರವೇಶಿಸಿ ಸಮಾಧಾನ ಪಡಿಸಲು ಪ್ರಯತ್ನಿಸಿದರೂ, ಗಂಭೀರ್‌ ಮಾತ್ರ ತಮ್ಮದೇ ಧಾಟಿಯಲ್ಲೇ ಮಾತು ಮುಂದುವರಿಸಿದರು' ಎಂದಿದ್ದಾರೆ.

'ನಾನು ಯಾವುದೇ ಆಕ್ಷೇಪಾರ್ಹ ಪದ ಬಳಕೆ ಮಾಡಲಿಲ್ಲ. ದಯವಿಟ್ಟು ಸತ್ಯವನ್ನು ಬೆಂಬಲಿಸಿ. ಗಂಭೀರ್‌ ಇದೇ ರೀತಿ ಹಲವರೊಂದಿಗೆ ನಡೆದುಕೊಂಡಿದ್ದಾರೆ. ಅವರು ಏಕೆ ಆ ರೀತಿ ಮಾಡಿದರು ಎಂಬುದೇ ಗೊತ್ತಾಗುತ್ತಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮುಂದುವರಿದು, 'ಇದೀಗ ಅವರ ಬೆಂಬಲಿಗರು 'ಗಂಭೀರ್‌ ಸಿಕ್ಸರ್‌, ಸಿಕ್ಸರ್‌' ಎಂದರು ಎನ್ನುತ್ತಿದ್ದಾರೆ. ಗಂಭೀರ್‌ ಹೇಳಿದ್ದು ಫಿಕ್ಸರ್‌, ಫಿಕ್ಸರ್ ಎಂತಲೇ. ಇದು ಮಾತನಾಡುವ ರೀತಿಯಲ್ಲ. ನಾನು ಈ ವಿಚಾರವನ್ನು ಬಿಟ್ಟು ಮುಂದೆ ಹೋಗಲು ನೋಡುತ್ತಿದ್ದೇನೆ. ಆದರೆ, ಅವರ ಬೆಂಬಲಿಗರು ಗಂಭೀರ್‌ ಅವರನ್ನು ರಕ್ಷಿಸಲು ನೋಡುತ್ತಿದ್ದಾರೆ. ಜನರು ತೇಪೆ ಹಾಕುವ ಕೆಲಸ ಮಾಡಬಾರದು' ಎಂದು ಕೋರಿದ್ದಾರೆ.

ಶ್ರೀಶಾಂತ್ ಲೈವ್‌ ಮುಗಿದ ಕೆಲ ಸಮಯದ ಬಳಿಕ ಗಂಭೀರ್‌ ಅವರು ತಾವು ಟೀಂ ಇಂಡಿಯಾ ಜರ್ಸಿಯಲ್ಲಿ ನಗುತ್ತಾ ನಿಂತಿರುವ ಚಿತ್ರವೊಂದನ್ನು ಎಕ್ಸ್‌ (ಟ್ವಿಟರ್‌) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದೊಂದಿಗೆ, 'ಜಗತ್ತು ಗಮನಿಸುತ್ತಿರುವಾಗ ನಗುತ್ತಿರಿ' ಎಂದು ಬರೆದುಕೊಂಡಿದ್ದಾರೆ.

ಗಂಭೀರ್‌ಗೆ ಇದು ಹೊಸದಲ್ಲ
ಗೌತಮ್‌ ಗಂಭೀರ್, ಕ್ರೀಡಾಂಗಣದಲ್ಲಿ ಆಟಗಾರರೊಂದಿಗೆ ವಾಗ್ವಾದ ನಡೆಸಿದ್ದು ಇದೇ ಮೊದಲೇನಲ್ಲ. ಭಾರತ ಕ್ರಿಕೆಟ್‌ ತಂಡದ 'ರನ್‌ ಮಷಿನ್‌' ಖ್ಯಾತಿಯ ವಿರಾಟ್‌ ಕೊಹ್ಲಿ ಅವರೊಂದಿಗೆ ಐಪಿಎಲ್‌ ಪಂದ್ಯಗಳ ಸಂದರ್ಭದಲ್ಲಿ ಹಾಗೂ ವಿವಿಧ ತಂಡಗಳ ಆಟಗಾರರೊಂದಿಗೆ ಸಾಕಷ್ಟು ಬಾರಿ ಮಾತಿನ ಚಕಮಕಿ ನಡೆಸಿದ್ದಾರೆ.

ಸದ್ಯ ಅವರು ಐಪಿಎಲ್‌ನಲ್ಲಿ ಆಡುವ ಲಖನೌ ಸೂಪರ್‌ ಜೈಂಟ್ಸ್‌ ತಂಡದ ಮೆಂಟರ್‌ ಆಗಿದ್ದಾರೆ.

ಬ್ಯಾನ್‌ ಆಗಿದ್ದ ಶ್ರೀಶಾಂತ್‌
ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಶಿಸ್ತು ಸಮಿತಿಯು, 2013ರ ಐಪಿಎಲ್‌ ಟೂರ್ನಿ ವೇಳೆ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಶ್ರೀಶಾಂತ್‌ ಅವರಿಗೆ ಆಜೀವ ನಿಷೇಧ ಹೇರಿತ್ತು. ಸುಪ್ರೀಂ ಕೋರ್ಟ್‌ ಈ ನಿಷೇಧವನ್ನು 2019ರಲ್ಲಿ 7 ವರ್ಷಕ್ಕೆ ಇಳಿಸಿತ್ತು. ಶಿಕ್ಷೆಯ ಅವಧಿ 2020ರ ಸೆಪ್ಟೆಂಬರ್‌ನಲ್ಲಿ ಮುಕ್ತಾಯವಾಗಿದೆ.

ಕ್ಯಾಪಿಟಲ್ಸ್‌ಗೆ ಜಯ
ಸೂರತ್‌ನಲ್ಲಿ ಬುಧವಾರ ನಡೆದ ಕ್ವಾಲಿಫೈಯರ್‌–1 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಡಿಯಾ ಕ್ಯಾಪಿಟಲ್ಸ್‌ ತಂಡ, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 223 ರನ್ ಗಳಿಸಿತ್ತು. ಗಂಭೀರ್‌ ಕೇವಲ 30 ಎಸೆತಗಳಲ್ಲಿ 51 ರನ್ ಗಳಿಸಿ ಮಿಂಚಿದರು. ಗುರಿ ಬೆನ್ನಟ್ಟಿದ ಗುಜರಾತ್ ಜೈಂಟ್ಸ್‌, 7 ವಿಕೆಟ್‌ಗೆ 211 ರನ್‌ ಗಳಿಸಲಷ್ಟೇ ಶಕ್ತವಾಗಿ 12 ರನ್‌ ಅಂತರದ ಸೋಲೊಪ್ಪಿಕೊಂಡಿತ್ತು.

ಕ್ಯಾಪಿಟಲ್ಸ್‌ಗೆ ಇಂದು ನಡೆಯುವ ಎರಡನೇ ಕ್ವಾಲಿಫೈಯರ್ಸ್‌ ಪಂದ್ಯದಲ್ಲಿ ಮಣಿಪಾಲ್‌ ಟೈಗರ್ಸ್‌ ಪೈಪೋಟಿ ನೀಡಲಿದೆ. ಗೆದ್ದ ತಂಡ ಅರ್ಬನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಡಿಸೆಂಬರ್‌ 9ರಂದು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT