ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುವರ್ಣ ನೆನಪುಗಳ’ ಮಾತು ಮಧುರ

Published 27 ಮಾರ್ಚ್ 2024, 23:47 IST
Last Updated 27 ಮಾರ್ಚ್ 2024, 23:47 IST
ಅಕ್ಷರ ಗಾತ್ರ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಮಾಧ್ಯಮ ಲಾಂಜ್‌ನಲ್ಲಿ ಬುಧವಾರ ಸಂಜೆ ಚಿನ್ನದ ನೆನಪುಗಳ ಹೊಳೆ ಹರಿಯಿತು.‌

1974ರಲ್ಲಿ ಇದೇ ದಿನ (ಮಾರ್ಚ್ 27) ಜೈಪುರದ ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ರಾಜಸ್ಥಾನ ತಂಡವನ್ನು ಮಣಿಸಿ ಕರ್ನಾಟಕಕ್ಕೆ ಮೊಟ್ಟಮೊದಲ ರಣಜಿ ಟ್ರೋಫಿ ಜಯಿಸಿದ ತಂಡದ ಆಟಗಾರರು  ಇಲ್ಲಿ ಸೇರಿದ್ದರು. ಸುವರ್ಣ ಸಂಭ್ರಮದ ಕಾರ್ಯಕ್ರಮವನ್ನು
ನಗೆಹಬ್ಬವನ್ನಾಗಿ ಪರಿವರ್ತಿಸಿದರು.

ಭಾಳ ಮುಸ್ಸಂಜೆಯಲ್ಲಿರುವ ‘ಚಾಂಪಿಯನ್‌’ ಆಟಗಾರರು ನವತರುಣ ರನ್ನೂ ನಾಚಿಸುವಂತಹ ಹುಮ್ಮಸ್ಸು ತೋರಿದರು. ಕಪ್ಪು–ಬಿಳುಪಿನ ಚಿತ್ರಗಳ ಕಾಲಘಟ್ಟದ ನೆನಪುಗಳಿಂದ  ‘ಸುವರ್ಣ ಸಂಭ್ರಮ’ದ ಸಂಜೆಯನ್ನು
ಬಹುವರ್ಣವಾಗಿಸಿದರು.

ಚಾಂಪಿಯನ್ ತಂಡದ ನಾಯಕ ಹಾಗೂ ದಿಗ್ಗಜ ಸ್ಪಿನ್ನರ್ ಎರ್ರಪಳ್ಳಿ ಪ್ರಸನ್ನ, ಲೆಗ್‌ಸ್ಪಿನ್ ದಂತಕಥೆ ಬಿ.ಎಸ್‌.ಚಂದ್ರಶೇಖರ್, ಬ್ಯಾಟಿಂಗ್ ಮಾಸ್ಟರ್‌ ಜಿ.ಆರ್. ವಿಶ್ವನಾಥ್, ಆಲ್‌ರೌಂಡರ್ ಬ್ರಿಜೇಶ್ ಪಟೇಲ್, ವಿಶ್ವಕಪ್ ವಿಜೇತ ಭಾರತ ತಂಡದ ವಿಕೆಟ್‌ಕೀಪರ್ ಸೈಯದ್ ಕಿರ್ಮಾನಿ, ಎ.ವಿ. ಜಯಪ್ರಕಾಶ್, ಸಂಜಯ್ ದೇಸಾಯಿ, ಸುಧಾಕರ್ ರಾವ್, ಬಿ. ರಘುನಾಥ್, ಸಿದ್ದರಾಮ, ಅರುಣಕುಮಾರ್ ಹಾಗೂ ಎಸ್. ವಿಜಯಪ್ರಕಾಶ್ ಅಲ್ಲಿದ್ದರು.

ಜೈಪುರದಲ್ಲಿ ಹಾಲು ಎಂದುಕೊಂಡು ಕುಡಿದ ‘ಭಾಂಗ್‌’ ನಶೆಯ ನಗೆಯ ಹೊನಲು, ಬಿ.ಎಸ್‌. ಚಂದ್ರಶೇಖರ್ ಅವರ ಇಡ್ಲಿ ಪ್ರೀತಿ, ರೈಲು ಪ್ರಯಾಣದ ಗಮ್ಮತ್ತು ಮತ್ತು ಅತ್ಯಂತ ಕಡಿಮೆ ಸಂಭಾವನೆ ಪಡೆದ ನೆನಪುಗಳು ಅಲೆಅಲೆಯಾಗಿ ಪ್ರೇಕ್ಷಕರ ಮನದಂಗಳಕ್ಕೆ ತಾಕಿದವು.

‘ರಣಜಿ ಟ್ರೋಫಿ ಜಯದ ನಂತರ ಬೆಂಗಳೂರು ಪ್ರಯಾಣದ ವ್ಯವಸ್ಥೆ ಯಾಗಿತ್ತು ಎಂದುಕೊಂಡಿದ್ದೆವು. ಆದರೆ ಜೈಪುರದಿಂದ ದೆಹಲಿಗೆ ಬಂದಿಳಿದಾಗಲೇ ಗೊತ್ತಾಗಿದ್ದು ಅಲ್ಲಿಂದ ಬೆಂಗಳೂರಿಗೆ ಟಿಕೆಟ್ ರಿಸರ್ವ್ ಮಾಡಿಸಲಿಲ್ಲ. ಪರಿಚಯದ ರೈಲ್ವೆ ಅಧಿಕಾರಿಯೊಬ್ಬರ ಸಹಾಯದಿಂದ ಚೆನ್ನೈ ಮೂಲಕ ಬೆಂಗಳೂರಿಗೆ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದೆವು’ ಎಂದು ಪ್ರಸನ್ನ ನೆನಪಿಸಿಕೊಂಡರು.

ಭಾಂಗ್ ಪೇಯದ ನಗೆಗಡಲು: ಜೈಪುರದಲ್ಲಿ ಭಾಂಗ್‌ ಪೇಯ  ಕುಡಿದ ಕತೆಯನ್ನು ಜಿ.ಆರ್. ವಿಶ್ವನಾಥ್ ವಿವರಿಸಿದರು.

ಆಗ ರಣಜಿ ಟ್ರೋಫಿ ಫೈನಲ್ ಪಂದ್ಯವು ಐದು ದಿನಗಳದ್ದಾಗಿರುತ್ತಿತ್ತು. ನಾಲ್ಕನೇ ದಿನವು ವಿಶ್ರಾಂತಿಯದ್ದಾಗಿರುತ್ತಿತ್ತು.  ಔತಣಕೂಟವೊಂದಕ್ಕೆ ಆಹ್ವಾನಿತ ರಾಗಿದ್ದ ಕರ್ನಾಟಕದ ಆಟಗಾರರಿಗೆ ಹಾಲು, ಡ್ರೈಫ್ರೂಟ್ಸ್‌ಗಳಿದ್ದ ಪೇಯವನ್ನು ನೀಡಲಾಗಿತ್ತು. ರುಚಿಯಾಗಿದ್ದ ಪೇಯವನ್ನು ಎಲ್ಲರೂ ಹಾಲು ಎಂದುಕೊಂಡೇ ಕುಡಿದಿದ್ದರು. ಆದರೆ ಅದರಲ್ಲಿ ಸಾಂಪ್ರದಾಯಿಕ ನಶೆಯ ಪದಾರ್ಥ ಭಾಂಗ್ ಮಿಶ್ರಣವಾಗಿದ್ದು ಕೆಲವು ಗಂಟೆಗಳ ನಂತರವೇ ಅವರಿಗೆಲ್ಲ ಗೋತ್ತಾಗಿತ್ತು.

‘ಆ ಪೇಯ ಕುಡಿಯುವಾಗ ಏನೂ ಅನಿಸಿರಲಿಲ್ಲ. ಆದರೆ ನಂತರ ಅದರ ಗುಂಗಿನಿಂದ ಹೊರಬರಲು ಎರಡು ದಿನಗಳೇ ಬೇಕಾದವು. ನಮ್ಮ ತಂಡದಲ್ಲಿ ಎಲ್ಲರೂ ನಿರಂತರವಾಗಿ ನಗುತ್ತಲೇ ಇದ್ದರು. ಹೋಟೆಲ್ ರೂಮಿನಲ್ಲಿ, ಮರುದಿನ ಆಡುವಾಗ ಮೈದಾನದಲ್ಲಿ ನಗುತ್ತಲೇ ಇದ್ದರು. ಆದರೆ ನಾನೊಬ್ಬನೇ ಗಂಭೀರವಾಗಿದ್ದೆ. ಏಕೆಂದರೆ ಫೈನಲ್ ಪಂದ್ಯದ ಎರಡೂ ಇನಿಂಗ್ಸ್‌
ಗಳಲ್ಲಿ  ನನಗೆ ಹೆಚ್ಚು ರನ್‌ ಗಳಿಸಲು ಆಗಿರಲಿಲ್ಲ. ಆದರೆ ನಾವು ಪ್ರಶಸ್ತಿ ಗೆದ್ದಿದ್ದು ಮಹತ್ವದ್ದು’ ಎಂದು ವಿಶ್ವನಾಥ್ ನೆನಪಿಸಿಕೊಂಡರು.

ಈ ಸಂದರ್ಭದಲ್ಲಿ ದನಿಗೂಡಿಸಿದ ಕಿರ್ಮಾನಿ, ‘ಚಂದ್ರಾ (ಬಿ.ಎಸ್. ಚಂದ್ರಶೇಖರ್) ತಮ್ಮ ಒಂದು ಕಾಲು ಗಾಳಿಯಲ್ಲಿ ತೇಲಾಡಿದ ಹಾಗೆ ಆಗುತ್ತಿದೆ ಎಂದಾಗ, ನಾನು ಮತ್ತು ಬ್ರಿಜೇಶ್ ಪರಸ್ಪರ ನೋಡಿಕೊಂಡು ನಗಲು ಆರಂಭಿಸಿದೆವು. ಅಲ್ಲಿಂದ ಆರಂಭವಾದ ನಗೆ ನಿಲ್ಲಲೇ ಇಲ್ಲ’ ಎಂದರು.

ಆಗ ತಂಡದಲ್ಲಿದ್ದ ಬಿ. ವಿಜಯಕೃಷ್ಣ, ವಿ.ಎಸ್. ವಿಜಯಕುಮಾರ್,  ಕೆ. ಲಕ್ಷ್ಮಣ್ ಹಾಗೂ ಮ್ಯಾನೇಜರ್‌ ಸಿ. ನಾಗರಾಜ್ ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಅವರೆಲ್ಲರನ್ನೂ ನೆನಪಿಸಿಕೊಂಡ ಕಿರ್ಮಾನಿ ಅವರು ಶ್ರದ್ಧಾಂಜಲಿ ಸಲ್ಲಿಸುವಂತೆ ಮಾಡಿದ ಮನವಿಗೆ ಸಭೆಯಲ್ಲಿದ್ದವರೆಲ್ಲರೂ ಸ್ಪಂದಿಸಿದರು. ಒಂದು ನಿಮಿಷದ ಮೌನಾಚರಣೆ ನಡೆಸಿ ಗೌರವ ಸಲ್ಲಿಸಲಾಯಿತು.

ದಿನಕ್ಕೆ ₹ 5 ಸಂಭಾವನೆ

ರಣಜಿ ಟ್ರೋಫಿ ಪಂದ್ಯಗಳಲ್ಲಿ ಆಡುವ ಅಟಗಾರರಿಗೆ ₹5 ದಿನಭತ್ಯೆ
ನೀಡಲಾಗುತ್ತಿತ್ತು.

‘ನಾನು ಆಗ ಕೆಎಸ್‌ಸಿಎ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ ಅವರನ್ನು ಭೇಟಿಯಾಗಿ ಈ ಭತ್ಯೆಯನ್ನು ಹೆಚ್ಚಿಸುವಂತೆ ಕೇಳಿಕೊಂಡಿದ್ದೆ. ಅದಕ್ಕೆ ಪ್ರತಿಕ್ರಿಯೆಯಾಗಿ ಅವರು ಸಹಮತಿಸಿರಲಿಲ್ಲ’ ಎಂದು ಪ್ರಸನ್ನ ಹೇಳಿದರು.

ಟ್ರೋಫಿ ಜಯಿಸಿ ಬಂದಾಗ ಕೆಎಸ್‌ಸಿಎ ₹ 500 ಮತ್ತು ರಾಜ್ಯ ಸರ್ಕಾರದಿಂದ
₹ 1000 ಪ್ರಶಸ್ತಿ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT