ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಫ್ಗಾನಿಸ್ತಾನ–ನ್ಯೂಜಿಲೆಂಡ್ ಪಂದ್ಯಕ್ಕೆ ಮಳೆ: ನೊಯ್ಡಾ ಕ್ರೀಡಾಂಗಣದ ಅವ್ಯವಸ್ಥೆ

Published : 10 ಸೆಪ್ಟೆಂಬರ್ 2024, 14:39 IST
Last Updated : 10 ಸೆಪ್ಟೆಂಬರ್ 2024, 14:39 IST
ಫಾಲೋ ಮಾಡಿ
Comments

ಗ್ರೇಟರ್‌ ನೊಯ್ಡಾ: ಅಫ್ಗಾನಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಣ ಏಕೈಕ ಟೆಸ್ಟ್ ಪಂದ್ಯ ನಡೆಯುತ್ತಿರುವ ಶಹೀದ್ ವಿಜಯ್ ಸಿಂಗ್ ಪಥಿಕ್ ಕ್ರೀಡಾ ಸಂಕೀರ್ಣದ ಮೈದಾನವು ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಅದಕ್ಕೆ ಕಾರಣ ಇಲ್ಲಿಯ ಅವ್ಯವಸ್ಥೆ.  ಇದರಿಂದಾಗಿ ಈ ಕ್ರೀಡಾಂಗಣದ ಆಡಳಿತ ನೋಡಿಕೊಳ್ಳುವ ಗ್ರೇಟರ್ ನೊಯ್ಡಾ ಪ್ರಾಧಿಕಾರವು ಮುಜುಗರಕ್ಕೆ ಒಳಗಾಗಿದೆ. 

ಪಂದ್ಯದ ಮೊದಲ ದಿನ ಸೋಮವಾರ ಮಳೆ ಸುರಿದು ಕ್ರೀಡಾಂಗಣ ಒದ್ದೆಯಾಗಿತ್ತು. ಆದರೆ ಅದನ್ನು ಒಣಗಿಸಿ ಪಂದ್ಯ ಆರಂಭಿಸಲು ಸೂಕ್ತ ವ್ಯವಸ್ಥೆಗಳು ಇಲ್ಲಿ ಇಲ್ಲ. ಅದರಿಂದಾಗಿ  ಸಾಧಾರಣ ಟಾರ್ಪಾಲಿನ್ ಮತ್ತು ವಿದ್ಯುತ್‌ಚಾಲಿತ ಫ್ಯಾನ್‌ಗಳನ್ನು ಬಳಸಲಾಯಿತು. ಅದರ ನಂತರ ಡೆಲ್ಲಿ ಡಿಸ್ಟ್ರಿಕ್ಟ್‌ ಕ್ರಿಕೆಟ್ ಸಂಸ್ಥೆಯಿಂದ ಪಿಚ್‌ ಕವರ್‌ಗಳು ಮತ್ತು ಉತ್ತರಪ್ರದೇಶ ಕ್ರಿಕೆಟ್ ಸಂಸ್ಥೆಯಿಂದ ಸೂಪರ್ ಸಾಪರ್ ಯಂತ್ರಗಳನ್ನು ಎರವಲು ಪಡೆಯಲಾಗಿದೆ.

ಆದರೆ ಮೈದಾನದಲ್ಲಿ ಮಳೆ ಬಂದಾಗ ನಡೆಸುವ ಕಾರ್ಯಾಚರಣೆಯ ಕುರಿತ ತರಬೇತಿಯೇ ಇಲ್ಲದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.  

ಸೋಮವಾರ ಸಂಜೆಯೂ ಸುಮಾರು ಒಂದು ಗಂಟೆ ರಭಸದ ಮಳೆ ಸುರಿದ ಕಾರಣ ಮಂಗಳವಾರವೂ ತೇವ ಹಾಗೆಯೇ ಉಳಿದಿತ್ತು. ಇದರಿಂದಾಗಿ ಎರಡನೇ ದಿನದಾಟವೂ ನಡೆಯಲಿಲ್ಲ. ಮೈದಾನದ ಮಿಡ್‌ ಆನ್ ಮತ್ತು ಮಿಡ್‌ ವಿಕೆಟ್‌ ಭಾಗಗಳಲ್ಲಿ ಹೆಚ್ಚು ತೇವ ಇದ್ದು ಜಾರುವ ಆತಂಕವಿದೆ. ಆಟಗಾರರ ಸುರಕ್ಷತೆ ಮುಖ್ಯವಾಗಿದ್ದು ಅಂಪೈರ್‌ಗಳು ಆಟಕ್ಕೆ ಅನುಮತಿ ನೀಡಲಿಲ್ಲ.

ಪಂದ್ಯದ ಆಯೋಜನೆಗಾಗಿ ಬಿಸಿಸಿಐ ಅಫ್ಗಾನಿಸ್ತಾನ ಕ್ರಿಕೆಟ್ ಸಂಸ್ಥೆಗೆ ಮೂರು ತಾಣಗಳ ಆಯ್ಕೆ ನೀಡಿತ್ತು. ಅದರಲ್ಲಿ ನೊಯ್ಡಾ, ಕಾನ್ಪುರ ಮತ್ತು ಬೆಂಗಳೂರಿನಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು. ಆದರೆ ಮೊದಲಿನಿಂದಲೂ ತನ್ನ  ‘ತವರಿನ ತಾಣ’ವಾಗಿರುವ ನೊಯ್ಡಾವನ್ನು ಅಫ್ಗಾನಿಸ್ತಾನ ಆಯ್ಕೆ ಮಾಡಿಕೊಂಡಿತು. 

‘2016ರಿಂದ ನೊಯ್ಡಾ ನಮ್ಮ ತವರು ತಾಣವಾಗಿದೆ. ಮೊದಲಿನಿಂದಲೂ ಇಲ್ಲಿ ಪಂದ್ಯಗಳನ್ನು ಆಡಿದ್ದೇವೆ. ಆದ್ದರಿಂದ ಇದನ್ನು ಆಯ್ಕೆ ಮಾಡಿಕೊಳ್ಳಲಾಯಿತು’ ಎಂದು ಎಸಿಬಿ ಅಂತರರಾಷ್ಟ್ರೀಯ ಕ್ರಿಕೆಟ್ ಮ್ಯಾನೇಜರ್ ಮಿನಾಜ್ ರಾಝ್ ಹೇಳಿದ್ದಾರೆ.

ಈ ಮುಂದೆ ಎಸಿಬಿಯು ಇಲ್ಲಿ 11 ಅಂತರರಾಷ್ಟ್ರೀಯ ಪಂದ್ಯಗಳನ್ನು ಇಲ್ಲಿ ಆಯೋಜಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT