ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೌನ ಮುರಿದ ಗುಜರಾತ್ ಕ್ರಿಕೆಟ್ ಮಂಡಳಿ: ಬಿಸಿಗಾಳಿಯಿಂದ ಅಭ್ಯಾಸ ನಡೆಸದ RCB

Published 22 ಮೇ 2024, 13:56 IST
Last Updated 22 ಮೇ 2024, 13:56 IST
ಅಕ್ಷರ ಗಾತ್ರ

ಅಹಮದಾಬಾದ್: ‘ಆರ್‌ಸಿಬಿಗೆ ಯಾವುದೇ ಭಯೋತ್ಪಾದಕರ ಬೆದರಿಕೆ ಬಂದಿಲ್ಲ. ಬದಲಿಗೆ ನಗರದಲ್ಲಿ ಬೀಸುತ್ತಿರುವ ಬಿಸಿ ಗಾಳಿಯಿಂದಾಗಿ ತಂಡ ಅಭ್ಯಾಸ ನಡೆಸಲಿಲ್ಲ’ ಎಂದು ಗುಜರಾತ್ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ಅನಿಲ್ ಪಟೇಲ್ ತಿಳಿಸಿರುವುದಾಗಿ ವರದಿಯಾಗಿದೆ.

ಐಪಿಎಲ್‌ 2024ರ 2ನೇ ಎಲಿಮಿನೇಷನ್ ಪಂದ್ಯದಲ್ಲಿ ಇಂದು ರಾಜಸ್ಥಾನ ರಾಯಲ್ಸ್‌ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೆಣಸುತ್ತಿವೆ. ಆದರೆ ಅಭ್ಯಾಸ ನಡೆಸದ ಆರ್‌ಸಿಬಿ ತಂಡದ ಕುರಿತು ಭಯೋತ್ಪಾದಕರ ಕರಿನೆರಳು ಹಾಗೂ ವಿರಾಟ್ ಕೊಹ್ಲಿಗೆ ಬೆದರಿಕೆ ಕುರಿತು ಸುದ್ದಿಯಾಗಿತ್ತು. ಈ ಸಂಬಂಧ ನಾಲ್ವರನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ಹೇಳಿದ್ದರು. 

ಇದೀಗ ಗುಜರಾತ್ ಕ್ರಿಕೆಟ್ ಮಂಡಳಿಯು ಅದನ್ನು ತಳ್ಳಿ ಹಾಕಿದ್ದು, ನಗರದಲ್ಲಿ ಬೀಸುತ್ತಿರುವ ಬಿಸಿ ಗಾಳಿಯೇ ಅಭ್ಯಾಸದಿಂದ ಆರ್‌ಸಿಬಿ ಹೊರಗುಳಿಯಲು ಕಾರಣ ಎಂದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

‘ತಂಡಕ್ಕೆ ಭಯೋತ್ಪಾದಕರ ಬೆದರಿಕೆ ಇಲ್ಲ. ರಾಜಸ್ಥಾನ ರಾಯಲ್ಸ್ ಮತ್ತು ಆರ್‌ಸಿಬಿಗೆ ಇಲ್ಲಿನ ಗುಜರಾತ್ ಕಾಲೇಜು ಮೈದಾನದಲ್ಲಿ ಅಭ್ಯಾಸಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆರ್‌ಸಿಬಿಗೆ ಮಧ್ಯಾಹ್ನ 2ರಿಂದ 5ರವರೆಗೆ ಸಮಯ ನಿಗದಿಪಡಿಸಲಾಗಿತ್ತು. ಸಂಜೆ 6.30ರವರೆಗೂ ಬೆಳಕು ಇರುವುದರಿಂದ ಅವರು 3ರಿಂದ 6ರವರೆಗೆ ಅಭ್ಯಾಸ ನಡೆಸುವುದಾಗಿ ಹೇಳಿದ್ದರು. ಆದರೆ ಬಿಸಿಗಾಳಿಯಿಂದಾಗಿ ಆಟಗಾರರು ಅಭ್ಯಾಸ ನಡೆಸಲು ಹಿಂದೇಟು ಹಾಕಿದರು. ಒಳಾಂಗಣದಲ್ಲಿ ಅವಕಾಶ ಕಲ್ಪಿಸುವ ಕುರಿತೂ ಅವರಿಗೆ ಸಲಹೆ ನೀಡಲಾಯಿತು. ಆದರೆ ಅವರು ಅದನ್ನು ನಿರಾಕರಿಸಿ ಅಭ್ಯಾಸದಿಂದ ದೂರ ಉಳಿದರು’ ಎಂದು ಅನಿಲ್ ಹೇಳಿದ್ದಾರೆ.

‘ಇದಕ್ಕಾಗಿ ಜಿಲ್ಲಾಧಿಕಾರಿ ಅವರಿಂದ ವಿಶೇಷ ಅನುಮತಿಯನ್ನೂ ಪಡೆಯಲಾಗಿತ್ತು. ಕಾಲೇಜು ಮೈದಾನವನ್ನು ಉಭಯ ತಂಡಗಳಿಗೆ ನೀಡಲು ಜಿಲ್ಲಾಧಿಕಾರಿಯೂ ಒಪ್ಪಿದ್ದರು. ಆದರೆ ಆರ್‌ಸಿಬಿ ಮಾತ್ರ ಅಭ್ಯಾಸದಿಂದ ದೂರ ಉಳಿಯಿತು’ ಎಂದು ಅನಿಲ್ ಹೇಳಿದ್ದಾರೆ ಎಂದು ವರದಿಯಾಗಿದೆ. ಇದು ಹಲವು ಗೊಂದಲಗಳಿಗೆ ಕಾರಣವಾಗಿದೆ ಎಂದು ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT