ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿ ಭದ್ರತೆಗೆ ಎದುರಾದ ಅಪಾಯ: ಅಭ್ಯಾಸದಿಂದ ದೂರ ಉಳಿದ RCB; ಭದ್ರತೆ ಹೆಚ್ಚಳ

Published 22 ಮೇ 2024, 10:39 IST
Last Updated 22 ಮೇ 2024, 10:39 IST
ಅಕ್ಷರ ಗಾತ್ರ

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಭದ್ರತೆ ಕುರಿತು ಆತಂಕ ಮನೆಮಾಡಿದ್ದು, ಬುಧವಾರ ನಡೆಯಬೇಕಿದ್ದ ತಂಡದ ಅಭ್ಯಾಸವನ್ನು ರದ್ದುಪಡಿಸಲಾಗಿದೆ ಎಂದು ಫ್ರಾಂಚೈಸಿ ಮೂಲಗಳು ತಿಳಿಸಿವೆ.

2024ರ ಈ ಋತುವಿನ ಐಪಿಎಲ್‌ನ ಎಲಿಮಿನೇಷನ್ ಸುತ್ತಿನಲ್ಲಿ ಆರ್‌ಸಿಬಿ ತಂಡವು ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ಇದಕ್ಕಾಗಿ ತಂಡವು ಅಹಮದಾಬಾದ್‌ನ ಗುಜರಾತ್‌ ಕಾಲೇಜು ಮೈದಾನದಲ್ಲಿ ಅಭ್ಯಾಸ ನಡೆಸಲು ಮುಂದಾಗಿತ್ತು. ಆದರೆ ಭದ್ರತೆಯ ಕಾರಣದಿಂದ ಅದನ್ನು ರದ್ದುಪಡಿಸಲಾಗಿದೆ ಎಂದು ಆನಂದ್‌ಬಜಾರ್ ಪತ್ರಿಕೆ ವರದಿ ಮಾಡಿದೆ.

ಈ ಘಟನೆಯಿಂದಾಗಿ ಪಂದ್ಯದ ಆರಂಭಕ್ಕೂ ಮೊದಲು ತಂಡಗಳು ವಾಡಿಕೆಯಂತೆ ನಡೆಸುವ ಸುದ್ದಿಗೋಷ್ಠಿಯನ್ನೂ ಆರ್‌ಸಿಬಿ ನಡೆಸಲಿಲ್ಲ. ಆದರೆ ಈ ಅಸಹಜ ಬೆಳವಣಿಗೆಯು ಹಲವರಲ್ಲಿ ಗೊಂದಲ ಮೂಡಿಸಿತು.

‘ಅಭ್ಯಾಸ ಹಾಗೂ ಸುದ್ದಿಗೋಷ್ಠಿ ರದ್ದು ಮಾಡಿದ್ದರ ಹಿಂದೆ ವಿರಾಟ್ ಕೊಹ್ಲಿ ಭದ್ರತೆಯೇ ಪ್ರಮುಖ ವಿಷಯವಾಗಿದೆ. ಘಟನೆಗೆ ಸಂಬಂಧಿಸಿದಂತೆ ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿರುವ ನಾಲ್ಕು ಜನರನ್ನು ಅಹಮದಾಬಾದ್‌ನಲ್ಲಿ ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬೆಳವಣಿಗೆ ಕುರಿತು ಆರ್‌ಸಿಬಿ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳಿಗೆ ತಮ್ಮ ಅಭ್ಯಾಸ ಹಾಗೂ ಸುದ್ದಿಗೋಷ್ಠಿಯನ್ನು ರದ್ದುಗೊಳಿಸುವಂತೆ ಪೊಲೀಸರು ಸೂಚಿಸಿದ್ದರು ಎಂದೆನ್ನಲಾಗಿದೆ. 

‘ಅಹಮದಾಬಾದ್‌ಗೆ ವಿರಾಟ್ ಕೊಹ್ಲಿ ಬಂದಿಳಿದ ನಂತರ ಅವರಿಗೆ ಈ ಬಂಧನದ ಮಾಹಿತಿ ಲಭ್ಯವಾಗಿದೆ. ಅವರು ನಮ್ಮ ದೇಶದ ಸಂಪತ್ತು. ಅವರಿಗೆ ಸೂಕ್ತ ಭದ್ರತೆ ಒದಗಿಸುವುದು ನಮ್ಮ ಪ್ರಮುಖ ಆದ್ಯತೆ. ಆರ್‌ಸಿಬಿ ಕೂಡಾ ಯಾವುದೇ ರೀತಿಯ ಅಪಾಯ ತೆಗೆದುಕೊಳ್ಳಲು ಸಿದ್ಧವಿಲ್ಲ. ಹೀಗಾಗಿ ತಂಡದ ಆಟಗಾರರು ಅಭ್ಯಾಸ ನಡೆಸದಿರಲು ನಿರ್ಧರಿಸಿದರು. ಈ ಬೆಳವಣಿಗೆ ಕುರಿತು ರಾಜಸ್ಥಾನ ರಾಯಲ್ಸ್ ತಂಡಕ್ಕೂ ಮಾಹಿತಿ ನೀಡಲಾಗಿದೆ. ಆದರೆ ಅಭ್ಯಾಸ ನಡೆಸಲು ತಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಮುಂದುವರಿದರು’ ಎಂದು ಪೊಲೀಸ್ ಅಧಿಕಾರಿ ವಿಜಯ್ ಸಿಂಗ್ ಜ್ವಾಲಾ ತಿಳಿಸಿದ್ದಾರೆ.

ಆರ್‌ಸಿಬಿ ತಂಡ ತಂಗಿರುವ ಹೊಟೇಲಿನ ಸುತ್ತ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಐಪಿಎಲ್‌ ಮಾನ್ಯತೆ ಹೊಂದಿರುವ ಸದಸ್ಯರಿಗೂ ಹೊಟೇಲ್ ಒಳಗೆ ಹೋಗಲು ಅನುಮತಿ ನೀಡಲಾಗುತ್ತಿಲ್ಲ. ಅಭ್ಯಾಸ ನಡೆಸಲು ಮೈದಾನಕ್ಕೆ ತೆರಳಲು ರಾಜಸ್ಥಾನ ರಾಯಲ್ಸ್ ತಂಡದ ಆಟಗಾರರ ಭದ್ರತೆಗಾಗಿ ‘ಗ್ರೀನ್ ಕಾರಿಡಾರ್‌’ ರಚಿಸಲಾಗಿದೆ. ಆರ್. ಅಶ್ವಿನ್, ಯಜುವೇಂದ್ರ ಚಾಹಲ್, ರಿಯಾನ್ ಪರಾಗ್ ಅವರು ಅಬ್ಯಾಸಕ್ಕೆ ತೆರಳದೇ, ಹೊಟೇಲಿನಲ್ಲೇ ಉಳಿಯಲು ನಿರ್ಧರಿಸಿದರು. ತಂಡದ ನಾಯಕ ಸಂಜು ಸ್ಯಾಮ್ಸನ್ ಅವರು ತಡವಾಗಿ ಮೈದಾನ ತಲುಪಿದರು ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಇಂದು (ಬುಧವಾರ) ಸಂಜೆ ನಡೆಯಲಿರುವ ಆರ್‌ಸಿಬಿ ಮತ್ತು ಆರ್‌ಆರ್ ನಡುವಿನ ಪಂದ್ಯಕ್ಕೆ ಬಿಗಿ ಭದ್ರತೆ ಒದಗಿಸುವ ಸಾಧ್ಯತೆ ಇದೆ ಎಂದೆನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT