ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL2024 RR vs GT: ಗುಜರಾತ್‌ಗೆ 3ನೇ ಗೆಲುವು, ರಾಜಸ್ಥಾನ ರಾಯಲ್ಸ್‌ಗೆ ಮೊದಲ ಸೋಲು

Published 10 ಏಪ್ರಿಲ್ 2024, 18:21 IST
Last Updated 10 ಏಪ್ರಿಲ್ 2024, 18:21 IST
ಅಕ್ಷರ ಗಾತ್ರ

ಜೈಪುರ: ಗುಜರಾತ್ ಟೈಟನ್ಸ್‌ ಬ್ಯಾಟರ್‌ಗಳು ತಮ್ಮ ಛಲದ ಆಟದ ಮೂಲಕ ರಾಜಸ್ಥಾನ ರಾಯಲ್ಸ್ ತಂಡದ ಗೆಲುವಿನ ಓಟಕ್ಕೆ ತಡೆಯೊಡ್ಡಿದರು. ಇದರಿಂದಾಗಿ ಸಂಜು ಸ್ಯಾಮ್ಸನ್ ಬಳಗವು ಈ ಟೂರ್ನಿಯಲ್ಲಿ ಮೊದಲ ಬಾರಿಗೆ ಸೋತಿತು.

ಸವಾಯಿ ಮಾನಸಿಂಗ್ ಕ್ರೀಡಾಂಗಣ ದಲ್ಲಿ ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ತಂಡವು 3 ವಿಕೆಟ್‌ಗಳಿಂದ ರೋಚಕ ಜಯ ಸಾಧಿಸಿತು. 

197 ರನ್‌ಗಳ  ಗೆಲುವಿನ ಗುರಿ ಬೆನ್ನಟ್ಟಿದ್ದ ಟೈಟನ್ಸ್ ತಂಡಕ್ಕೆ ಶುಭಮನ್ ಗಿಲ್ (72; 44ಎ, 4X6, 6X2) ಹಾಗೂ ಸಾಯಿ ಸುದರ್ಶನ್ (35 ರನ್) ಅವರು ಉತ್ತಮ ಅಡಿಪಾಯ ಹಾಕಿದರು. ಅದರ ಮೇಲೆ ರಾಹುಲ್ ತೆವಾಟಿಯಾ (22; 11ಎ) ಮತ್ತು ರಶೀದ್ ಖಾನ್  (ಔಟಾಗದೆ 24; 11ಎ) ಗೆಲುವಿನ ಸೌಧ ಕಟ್ಟಿದರು. ಶಾರೂಕ್ ಖಾನ್ (14; 8ಎ) ಕೂಡ ಮಹತ್ವದ ಕಾಣಿಕೆ ನೀಡಿದರು. ರಾಯಲ್ಸ್ ತಂಡದ ಕುಲದೀಪ್ ಸೇನ್ (41ಕ್ಕೆ3) ಮತ್ತು ಯಜುವೇಂದ್ರ ಚಾಹಲ್ (43ಕ್ಕೆ2) ಅವರ ಆಟಕ್ಕೆ ಜಯ ಒಲಿಯಲಿಲ್ಲ. 

ಪರಾಗ್–ಸಂಜು ಜೊತೆಯಾಟ:  ಟಾಸ್ ಗೆದ್ದ ಗುಜರಾತ್ ಟೈಟನ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ರಾಜಸ್ಥಾನ ತಂಡವು 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 196 ರನ್‌ಗಳ ಬೃಹತ್ ಮೊತ್ತ ಪೇರಿಸಿತು.  ಪವರ್‌ಪ್ಲೇ ಅವಧಿಯಲ್ಲಿ ರಾಜಸ್ಥಾನ ತಂಡವು 43 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತು. ಯಶಸ್ವಿ ಜೈಸ್ವಾಲ್ (24; 19ಎ) ಮತ್ತು ಜೋಸ್ ಬಟ್ಲರ್ ಔಟಾದರು.  

ಆದರೆ ಸಂಜು (ಔಟಾಗದೆ 68; 38ಎ, 4X7,6X2) ಮತ್ತು ರಿಯಾನ್ (76; 48ಎ, 4X3, 6X5) ಅವರಿಬ್ಬರ ಜೊತೆಯಾಟವು ತಂಡಕ್ಕೆ ಉತ್ತಮ ಮೊತ್ತ ಪೇರಿಸಲು ಕಾರಣವಾಯಿತು.  ಇವರಿಬ್ಬರ ಆಟದ ಭರಾಟೆಗೆ ಕೊನೆಯ 10 ಓವರ್‌ಗಳಲ್ಲಿ 123 ರನ್‌ಗಳು ಹರಿದುಬಂದವು.  ಈ  ಟೂರ್ನಿಯಲ್ಲಿ  ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಿರುವ ರಿಯಾನ್ ಮಿಂಚುತ್ತಿದ್ದಾರೆ. ಇದು ಅವರ ಮೂರನೇ ಅರ್ಧಶತಕವಾಗಿದೆ. ಸಂಜು  ಅವರೊಂದಿಗಿನ ಜೊತೆಯಾಟದಲ್ಲಿ ರಿಯಾನ್ 130 ರನ್ (78ಎಸೆತ) ಸೇರಿಸಿದರು. 

ಪರಾಗ್ ಅವರು (0 ಮತ್ತು 6) ಎರಡು ಜೀವದಾನ ಗಿಟ್ಟಿಸಿದರು. ಸ್ಪಿನ್ನರ್‌ ರಶೀದ್ ಖಾನ್ ಬೌಲಿಂಗ್‌ನಲ್ಲಿ ಫೀಲ್ಡರ್ ಮ್ಯಾಥ್ಯೂ ವೇಡ್ ಕೈಚೆಲ್ಲಿದ ಕ್ಯಾಚ್‌ಗಳು ತಂಡಕ್ಕೆ ದುಬಾರಿಯಾದವು. 22 ವರ್ಷದ ರಿಯಾನ್ ಇದರ ಸಂಪೂರ್ಣ ಲಾಭ ಪಡೆದರು. ಇನ್ನೊಂದೆಡೆ ಸಂಜು ಅವರು ಉಮೇಶ್ ಯಾದವ್ ಬೌಲಿಂಗ್‌ನಲ್ಲಿ ಎರಡು ಸತತ ಬೌಂಡರಿ ಬಾರಿಸಿ ತಮ್ಮ ಖಾತೆ ತೆರೆದರು. ಗುಜರಾತ್ ತಂಡದ ಫೀಲ್ಡರ್‌ಗಳ ಲೋಪಗಳ ಲಾಭ ಸಂಜುಗೂ ದಕ್ಕಿತು. ಮೋಹಿತ್ ಎಸೆತವನ್ನು ಬೌಂಡರಿಯತ್ತ ಹೊಡೆದ ಸಂಜು ಕ್ಯಾಚ್‌ ಪಡೆಯುವಲ್ಲಿ ರಾಹುಲ್ ತೆವಾಟಿಯಾ ವಿಫಲರಾದರು. 

ಸಂಕ್ಷಿಪ್ತ ಸ್ಕೋರು: ರಾಜಸ್ಥಾನ ರಾಯಲ್ಸ್: 20 ಓವರ್‌ಗಳಲ್ಲಿ 3 ವಿಕೆಟ್‌ಗೆ 196 (ಯಶಸ್ವಿ ಜೈಸ್ವಾಲ್ 24, ಸಂಜು ಸ್ಯಾಮ್ಸನ್ ಔಟಾಗದೆ 68, ರಿಯಾನ್ ಪರಾಗ್ 76, ಉಮೇಶ್ ಯಾದವ್ 47ಕ್ಕೆ1, ರಶೀದ್ ಖಾನ್ 18ಕ್ಕೆ1, ಮೋಹಿತ್ ಶರ್ಮಾ 51ಕ್ಕೆ1) 

ಗುಜರಾತ್ ಟೈಟನ್ಸ್: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 199 (ಸಾಯಿ ಸುದರ್ಶನ್ 35, ಶುಭಮನ್ ಗಿಲ್ 72, ರಾಹುಲ್ ತೆವಾಟಿಯಾ 22, ರಶೀದ್ ಖಾನ್ ಔಟಾಗದೆ 24, ಯಜುವೇಂದ್ರ ಚಹಲ್ 43ಕ್ಕೆ2, ಕುಲದೀಪ್ ಸೇನ್ 41ಕ್ಕೆ2) ಫಲಿತಾಂಶ: ಗುಜರಾತ್ ಟೈಟನ್ಸ್ ಗೆ 3 ವಿಕೆಟ್ ಜಯ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT