ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಗತಿಯ ಹಾದಿಯಲ್ಲಿ ಹಾಂಕಾಂಗ್‌ ಕ್ರಿಕೆಟ್‌

Last Updated 23 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಹಿಂದಿನ ವಾರ ದುಬೈನಲ್ಲಿ ನಡೆದ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯ ಭಾರತ ತಂಡದ ಎದುರಿನ ಪಂದ್ಯವದು. ಎದುರಾಳಿ ಹಾಂಕಾಂಗ್‌ ತಂಡ ಸುಲಭವಾಗಿ ಸೋಲು ಅನುಭವಿಸುತ್ತದೆ ಎಂದು ಸಾಕಷ್ಟು ಜನ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಕ್ರಿಕೆಟ್‌ನ ‘ಲಿಲ್ಲಿಪುಟ್‌’ ರಾಷ್ಟ್ರ ಹಾಂಕಾಗ್‌ ಪಟ್ಟು ಸಡಿಲಿಸಲಿಲ್ಲ. ಗೆಲ್ಲದಿದ್ದರೂ, ಕೊನೆಯ ತನಕ ಮಾಡಿದ ಹೋರಾಟ ಮೆಚ್ಚುಗೆಗೆ ಕಾರಣವಾಯಿತು.

ಆ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ನಿಜಾಕತ್‌ ಖಾನ್‌ ಮತ್ತು ಅನ್ಷುಮನ್‌ ರಥ್‌ ಅವರ ದಿಟ್ಟ ಬ್ಯಾಟಿಂಗ್‌ ನೋಡಿ ಭಾರತ ತಂಡಕ್ಕೆ ಸೋಲು ಎದುರಾಗಬಹುದು ಎನ್ನುವ ಆತಂಕ ಅಭಿಮಾನಿಗಳಲ್ಲಿತ್ತು. ಅಂತಿಮವಾಗಿ ಭಾರತ ಗೆಲುವು ಪಡೆದರೂ, ಹಾಂಕಾಂಗ್‌ ಸೋತು ಕ್ರಿಕೆಟ್‌ ಪ್ರೇಮಿಗಳ ಮನಸ್ಸು ಗೆದ್ದಿತು. ಏಕೆಂದರೆ, ಈ ತಂಡ 2008ರ ಏಷ್ಯಾಕಪ್‌ನಲ್ಲಿ ಭಾರತದ ಎದುರು 256 ರನ್‌ಗಳಿಂದ ಹೀನಾಯವಾಗಿ ಸೋತಿತ್ತು. ಆದ್ದರಿಂದ ಹಾಂಕಾಂಗ್‌ ಚುಟುಕು ಕ್ರಿಕೆಟ್‌ನಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತಕ್ಕೆ ಕಠಿಣ ಸವಾಲು ಒಡ್ಡುವುದಿಲ್ಲ ಎನ್ನುವುದೇ ಎಲ್ಲರ ಸಹಜ ನಿರೀಕ್ಷೆಯಾಗಿತ್ತು.

ಹಾಂಕಾಂಗ್‌ ಎಲ್ಲರ ಲೆಕ್ಕಾಚಾರ ಮತ್ತು ನಿರೀಕ್ಷೆ ಮೀರಿ ಬೆಳೆಯುತ್ತಿದೆ. ಅಚ್ಚರಿಯ ಗೆಲುವುಗಳ ಮೂಲಕ ಬಲಿಷ್ಠ ರಾಷ್ಟ್ರಗಳನ್ನು ಸೋಲಿಸುವ ಸಾಮರ್ಥ್ಯ ನಮಗೂ ಇದೆ ಎನ್ನುವ ಸಂದೇಶ ಸಾರಿದೆ. 2015ರಲ್ಲಿ ದುಬೈನಲ್ಲಿ ನಡೆದ ಐಸಿಸಿ ವಿಶ್ವ ಚಾಂಪಿಯನ್‌ಷಿಪ್‌ ಲೀಗ್‌ನಲ್ಲಿ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಎದುರು ಜಯ ಸಾಧಿಸಿತ್ತು. ಟಿ–20 ಟೂರ್ನಿಯಲ್ಲಿ ಬಾಂಗ್ಲಾದೇಶವನ್ನು ಮಣಿಸಿ ಅಚ್ಚರಿಯ ಫಲಿತಾಂಶಕ್ಕೆ ಕಾರಣವಾಗಿತ್ತು. ಏಕದಿನ ವಿಶ್ವಕಪ್‌ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಹಾಂಕಾಂಗ್‌ ತಂಡ ಐಸಿಸಿಯ ಪೂರ್ಣ ಸದಸ್ಯತ್ವ ಹೊಂದಿರುವ ಅಫ್ಗಾನಿಸ್ತಾನ ತಂಡವನ್ನೂ ಸೋಲಿಸಿತ್ತು.

ಹೆಚ್ಚು ಮನರಂಜನೆ ನೀಡುವ ಮತ್ತು ಮೂರು ಗಂಟೆಯಲ್ಲಿ ಮುಗಿದು ಹೋಗುವ ಟ್ವೆಂಟಿ–20 ಕ್ರಿಕೆಟ್‌ಗೆ ಹಾಂಕಾಂಗ್‌ ಒತ್ತು ನೀಡುತ್ತಿದೆ. ಆದ್ದರಿಂದ ಈ ದೇಶ ಎರಡು ವರ್ಷಗಳ ಹಿಂದೆ ‘ಹಾಂಕಾಂಗ್‌ ಟಿ–20 ಬ್ಲಿಟ್ಜ್‌’ ಟೂರ್ನಿ ಸಂಘಟಿಸಿತ್ತು. ವೆಸ್ಟ್‌ ಇಂಡೀಸ್‌ನ ಡ್ವೇನ್‌ ಸ್ಮಿತ್‌, ಪಾಕಿಸ್ತಾನದ ಸಯೀದ್‌ ಅಜ್ಮಲ್‌, ಇಂಗ್ಲೆಂಡ್‌ನ ಕ್ರಿಸ್‌ ಜೋರ್ಡಾನ್‌, ಶ್ರೀಲಂಕಾದ ಕುಮಾರ ಸಂಗಕ್ಕಾರ ಹೀಗೆ ಅನೇಕ ಹೆಸರಾಂತ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಪಂದ್ಯಗಳು ಇಂಗ್ಲೆಂಡ್, ಆಸ್ಟ್ರೇಲಿಯಾ, ವೆಸ್ಟ್‌ ಇಂಡೀಸ್‌ನಲ್ಲಿ ಮತ್ತು ಕೆಲ ಏಷ್ಯಾ ರಾಷ್ಟ್ರಗಳಲ್ಲಿ ಪ್ರಸಾರವಾಗಿದ್ದವು. ಕ್ರಿಕೆಟ್‌ ಲೋಕದಲ್ಲಿ ಅಂಬೆಗಾಲಿಡುತ್ತಿರುವ ಹಾಂಕಾಂಗ್‌ ತಂಡ ಯು.ಎ.ಇ., ಸ್ಕಾಟ್ಲೆಂಡ್‌, ಪಪುವಾ ನ್ಯೂಗಿನಿ, ಅಫ್ಗಾನಿಸ್ತಾನ ತಂಡಗಳನ್ನು ಮಣಿಸಿ ಭರವಸೆ ಮೂಡಿಸಿದೆ.

ಏಕದಿನ ವಿಶ್ವಕಪ್‌ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಹಾಂಕಾಂಗ್‌ ತಂಡ 1982ರಿಂದಲೇ ಪಾಲ್ಗೊಳ್ಳುತ್ತಿದೆ. ಇದುವರೆಗೆ ಎಂಟು ಸಲ ಆಡಿದೆ. ಆದರೆ, ಒಮ್ಮೆಯೂ ಮುಖ್ಯಸುತ್ತಿಗೆ ಅರ್ಹತೆ ಗಳಿಸಿಲ್ಲ. ಏಷ್ಯಾ ಫಾಸ್ಟ್‌ ಟ್ರ್ಯಾಕ್‌ ದೇಶಗಳ ಟೂರ್ನಿ, ಏಷ್ಯನ್‌ ಕ್ರೀಡಾಕೂಟ, ಎಸಿಸಿ ಟಿ.–20 ಕಪ್‌, ಎಸಿಸಿ ಪ್ರೀಮಿಯರ್‌ ಲೀಗ್‌, ಏಷ್ಯಾ ಕಪ್‌, ಏಷ್ಯಾ ಕ್ರಿಕೆಟ್‌ ಲೀಗ್‌ ಟೂರ್ನಿಗಳಲ್ಲಿ ಆಡಿದೆ. ಆದರೆ, ಯಾವ ಟೂರ್ನಿಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಟೆಸ್ಟ್ ಆಡುವ ರಾಷ್ಟ್ರಗಳ ಎದುರು ಪ್ರಬಲ ಪೈಪೋಟಿ ಒಡ್ಡಿ ತನ್ನ ಶಕ್ತಿ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಜಗತ್ತಿನಲ್ಲಿ 190ಕ್ಕೂ ಹೆಚ್ಚು ದೇಶಗಳಿದ್ದರೂ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ (ಐಸಿಸಿ) ಪೂರ್ಣ ಪ್ರಮಾಣದ ಮಾನ್ಯತೆ ಹೊಂದಿರುವುದು 12 ರಾಷ್ಟ್ರಗಳು ಮಾತ್ರ. ಆದ್ದರಿಂದ ಕ್ರಿಕೆಟ್‌ ನೋಡಗರಷ್ಟೇ ಆಡುವ ತಂಡಗಳು ಕೂಡ ಹೆಚ್ಚಾಗಬೇಕಿದೆ. ಈ ನಿಟ್ಟಿನಲ್ಲಿ ಹೊಸ ತಂಡಗಳ ಉತ್ತಮ ಪ್ರದರ್ಶನ ಭರವಸೆಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT