ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL: ಐದನೇ ಬಾರಿ ಐಪಿಎಲ್ ಕಿರೀಟ ಧರಿಸಿದ ಚೆನ್ನೈ, ರವೀಂದ್ರ ಬೌಂಡರಿಯೂ- ಧೋನಿ ಧ್ಯಾನವೂ

Published 30 ಮೇ 2023, 16:44 IST
Last Updated 30 ಮೇ 2023, 16:44 IST
ಅಕ್ಷರ ಗಾತ್ರ

ಅಹಮದಾಬಾದ್: ಸೋಮವಾರ ತಡರಾತ್ರಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದ ಕೊನೆಯ ಎರಡು ಎಸೆತಗಳು ನೆನಪಾದಾಗಲೆಲ್ಲ ಮಹೇಂದ್ರಸಿಂಗ್ ಧೋನಿಯವರ ಧ್ಯಾನಸ್ಥ ಭಂಗಿ ಮನಃಪಟಲದಲ್ಲಿ ಮೂಡುತ್ತದೆ.

ಆ ಕೊನೆ ಎರಡು ಎಸೆತಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗೆಲುವಿಗೆ 10 ರನ್‌ಗಳ ಅಗತ್ಯವಿತ್ತು. ಗುಜರಾತ್ ಟೈಟನ್ಸ್‌ ತಂಡಗಳ ಅಭಿಮಾನಿಗಳು ಮತ್ತು  ಆಟಗಾರರು ವಿಜಯೋತ್ಸವಕ್ಕೆ ಸಜ್ಜಾಗಿದ್ದರು. ಆದರೆ, ಹಳದಿ ಬಣ್ಣದ ಪೋಷಾಕು ತೊಟ್ಟು ಕುಳಿತಿದ್ದ ಸಾವಿರಾರು ಜನರಲ್ಲಿ ದುಗುಡುವಿತ್ತು. ಅದರಲ್ಲಿ  ಕೆಲವರು ಕೈಮುಗಿದು ಪ್ರಾರ್ಥನೆಯಲ್ಲಿ ತೊಡಗಿದ್ದರೆ, ಇನ್ನಷ್ಟು ಜನರ ಕಂಗಳಲ್ಲಿ ನೀರಾಡುತ್ತಿತ್ತು. ಅವರೆಲ್ಲರೂ ಚೆನ್ನೈ ಸೂಪರ್ ಕಿಂಗ್ಸ್‌ ಜಯಕ್ಕಾಗಿ ಪ್ರಾರ್ಥಿಸುತ್ತಿದ್ದರು. ಅವರ ನೆಚ್ಚಿನ ಥಾಲಾ ಧೋನಿ ಕೂಡ  ಡಗ್‌ಔಟ್‌ನಲ್ಲಿ ಕಣ್ಮುಚ್ಚಿ ಧ್ಯಾನಸ್ಥರಾಗಿ ಕುಳಿತುಬಿಟ್ಟಿದ್ದರು.

ಇತ್ತ ಮೋಹಿತ್ ಶರ್ಮಾ ಹಾಕಿದ ಎರಡು ಎಸೆತಗಳಲ್ಲಿ ಜಡೇಜ ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದರು. ಗೆದ್ದ ಸಂಭ್ರಮದಲ್ಲಿ ಡಗ್‌ಔಟ್‌ನಲ್ಲಿದ್ದ ಆಟಗಾರರೆಲ್ಲರೂ ಮೈದಾನಕ್ಕೆ ಧಾವಿಸಿದರು. ಜಡೇಜ ತಮ್ಮ ತಂಡದತ್ತ ಓಡಿದರು. ಇಷ್ಟೆಲ್ಲ ಆದರೂ ಧೋನಿ ಕಣ್ಣು ಬಿಟ್ಟಿರಲಿಲ್ಲ.  ನಂತರ ಸಹ ಆಟಗಾರರು ಧೋನಿಯ ಬಳಿ ಓಡಿ ಗೆಲುವಿನ ಕೇಕೆ ಹಾಕಿದರು. ಕಣ್ಣು ಬಿಟ್ಟು ಮುಗುಳ್ನಗುತ್ತ ಮೈದಾನಕ್ಕೆ ಹೋದ ಧೋನಿ ತಮ್ಮ ’ಆಪ್ತಮಿತ್ರ‘ ಜಡೇಜ ಅವರನ್ನು ಆಲಂಗಿಸಿ ಎತ್ತಿಕೊಂಡು ಸಂಭ್ರಮಿಸಿದರು. ಧೋನಿ ಕಣ್ಣಂಚಿನಲ್ಲಿಯೂ ಆನಂದಭಾಷ್ಪ ಇತ್ತು.

ಚೆನ್ನೈ ಇನಿಂಗ್ಸ್‌ನ 13ನೇ ಓವರ್‌ನಲ್ಲಿ ಅಂಬಟಿ ರಾಯುಡು ಔಟಾದಾಗ ಆರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಧೋನಿ ಮೊದಲ ಎಸೆತದಲ್ಲಿಯೇ ಡೇವಿಡ್‌ ಮಿಲ್ಲರ್‌ಗೆ ಸುಲಭ ಕ್ಯಾಚಿತ್ತು ಮರಳಿದ್ದರು. ಆಗಿನಿಂದಲೂ ಬೇಸರದಲ್ಲಿದ್ದರು. ಆದರೆ ಜಡೇಜ ಮತ್ತು ಶಿವಂ ದುಬೆ ತಂಡವನ್ನು ಗೆಲುವಿನ ದಡ ಸೇರಿಸಿದರು. ಮಧ್ಯರಾತ್ರಿ 1.36ಕ್ಕೆ  ಪಂದ್ಯ ಮುಕ್ತಾಯವಾಯಿತು. ಚೆನ್ನೈ ಅಭಿಮಾನಿಗಳು ಬೆಳಿಗ್ಗೆಯವರೆಗೂ ಸಂಭ್ರಮ ಆಚರಿಸಿದರು. ಇತ್ತ ನಾಯಕ ಧೋನಿ  ತಾವು ಸ್ವೀಕರಿಸಿದ ಟ್ರೋಫಿಯನ್ನು  ನಸುನಗೆಯೊಂದಿಗೆ ತಮ್ಮ ತಂಡದತ್ತ ತೆರಳಿ ಸಹ ಆಟಗಾರರ ಕೈಗಿತ್ತು ಬದಿಗೆ ಸರಿದು ನಿಂತರು.

ಭಾನುವಾರವೇ ನಡೆಯಬೇಕಿದ್ದ ಪಂದ್ಯವು ಮಳೆಯಿಂದಾಗಿ ಮೀಸಲು ದಿನವಾದ ಸೋಮವಾರಕ್ಕೆ ಮುಂದೂಡಿಕೆಯಾಗಿತ್ತು. ಟಾಸ್ ಗೆದ್ದ ಗುಜರಾತ್ ಟೈಟನ್ಸ್‌ ತಂಡವು ಸಾಯಿ ಸುದರ್ಶನ್  (96 ರನ್)ಅವರ ಅಬ್ಬರದ ಆಟದಿಂದಾಗಿ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 214 ರನ್ ಗಳಿಸಿತು. ಬೃಹತ್ ಗುರಿ ಬೆನ್ನಟ್ಟಿದ ಚೆನ್ನೈ ತಂಡದ ಇನಿಂಗ್ಸ್‌ನಲ್ಲಿ ಮೊದಲ ಓವರ್ ಸಂಪೂರ್ಣವಾಗುವ ಮುನ್ನವೇ ಮಳೆ ಸುರಿಯಿತು. ಇದರಿಂದಾಗಿ ಕ್ರೀಡಾಂಗಣದಲ್ಲಿ ನೀರು ಹರಿಯಿತು. ಮೈದಾನ ಒಣಗಿ ಪಂದ್ಯವನ್ನು ತಡರಾತ್ರಿ 12.10ಕ್ಕೆ ಆರಂಭಿಸಲಾಯಿತು. ಡಕ್ವರ್ಥ್‌ ಲೂಯಿಸ್ ನಿಯಮದನ್ವಯ ಚೆನ್ನೈ ತಂಡದ ಗೆಲುವಿಗೆ 15 ಓವರ್‌ಗಳಲ್ಲಿ 171 ರನ್‌ಗಳ ಪರಿಷ್ಕೃತ ಗುರಿಯನ್ನು ನಿಗದಿಪಡಿಸಲಾಯಿತು. ರೋಚಕ ಆಟದಲ್ಲಿ ಚೆನ್ನೈ ತಂಡವು 5 ವಿಕೆಟ್‌ಗಳಿಂದ (ಡಕ್ವರ್ಥ್ ಲೂಯಿಸ್‌ ನಿಯಮ) ಜಯಭೇರಿ ಬಾರಿಸಿತು. ಐದನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಮುಂದಿನ ಐಪಿಎಲ್‌ನಲ್ಲಿ ಆಡುವರೇ ಧೋನಿ?

ಅಹಮದಾಬಾದ್ (ಪಿಟಿಐ): ಮಹೇಂದ್ರಸಿಂಗ್ ಧೋನಿ ಅವರು ಈ ಬಾರಿಯ ಐಪಿಎಲ್ ನಂತರ ನಿವೃತ್ತಿ ಘೋಷಿಸುತ್ತಾರೆ ಎನ್ನಲಾಗಿತ್ತು. ಆದರೆ ತಮ್ಮ ದೈಹಿಕ ಸಾಮರ್ಥ್ಯವು ಉತ್ತಮವಾಗಿದ್ದರೆ ಮುಂದಿನ ಆವೃತ್ತಿಯ ಐಪಿಎಲ್‌ನಲ್ಲಿಯೂ ಕಣಕ್ಕಿಳಿಯುವ ವಿಶ್ವಾಸದಲ್ಲಿ ಧೋನಿ ಇದ್ದಾರೆ.

’ನಿವೃತ್ತಿ ಘೋಷಿಸಲು ಸದ್ಯ ಉತ್ತಮ ಸಮಯವಾಗಿದೆ. ಆದರೆ ಸಾವಿರಾರು ಜನರು ನನ್ನ  ಮೇಲೆ ಪ್ರೀತಿಯ ಮಳೆಗರೆದಿದ್ದಾರೆ. ಆ ಪ್ರೀತಿಯೊಂದಿಗೆ ವಿದಾಯ ಹೇಳಿ ನಡೆಯುವುದು ಸುಲಭ. ಆದರೆ ಮುಂದಿನ ಒಂಬತ್ತು ತಿಂಗಳು ಕಠಿಣ ಪರಿಶ್ರಮಪಟ್ಟು ಅಭ್ಯಾಸ ಮಾಡಿ ಮತ್ತೊಂದು ಐಪಿಎಲ್ ಆಡುವುದು ಕಠಿಣ‘ ಎಂದು ಪಂದ್ಯದ ನಂತರ ಮಾಧ್ಯಮದವರ ಮುಂದೆ ಧೋನಿ ಹೇಳಿದರು.

ಈ ಬಾರಿಯ ಐಪಿಎಲ್ ಧೋನಿಗೆ ಕೊನೆಯದ್ದು ಎಂದು ಬಿಂಬಿತವಾಗಿತ್ತು. ಆದ್ದರಿಂದ ಚೆನ್ನೈ ತಂಡವು ಪಂದ್ಯಗಳನ್ನು ಆಡಿದ ಎಲ್ಲ ಕ್ರೀಡಾಂಗಣಗಳಿಗೂ ಧೋನಿಯ ಅಭಿಮಾನಿಗಳ ದಂಡು ಧಾವಿಸಿತ್ತು. ಎಲ್ಲ ಊರಿನ ಕ್ರೀಡಾಂಗಣದ ಗ್ಯಾಲರಿಗಳು ಅರ್ಧಕ್ಕರ್ಧ ಹಳದಿಮಾಯವಾಗಿತ್ತು. ಫೈನಲ್ ಪಂದ್ಯದ ಬಗ್ಗೆ ಮಾತನಾಡಿದ ಅವರು ’ಪ್ರತಿಯೊಂದು ಟ್ರೋಫಿಯೂ ವಿಶೇಷ. ಐಪಿಎಲ್‌ನಲ್ಲಿ ಪ್ರತಿಯೊಂದು ಪಂದ್ಯವೂ ಸವಾಲಿನದ್ದು. ಅದಕ್ಕಾಗಿ ಸರ್ವರೀತಿಯಿಂದಲೂ ಸಿದ್ಧರಾಗಿರಬೇಕು. ಈ ಪಂದ್ಯದಲ್ಲಿ ನಮ್ಮ ಬೌಲರ್‌ಗಳು ಉತ್ತಮವಾಗಿ ಆಡಲಿಲ್ಲ. ಬ್ಯಾಟರ್‌ಗಳು ಗೆಲುವಿನ ಕಾಣಿಕೆ ನೀಡಿದರು‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT