ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕ್ರಿಕೆಟ್‌: ಸೋಲಿನ ಸರಪಳಿ ಕಳಚುವತ್ತ ಚಿತ್ತ

Published 1 ಜನವರಿ 2024, 16:14 IST
Last Updated 1 ಜನವರಿ 2024, 16:14 IST
ಅಕ್ಷರ ಗಾತ್ರ

ಮುಂಬೈ: ಮೊದಲ ಎರಡು ಪಂದ್ಯಗಳಲ್ಲಿ ಸೋತು ಸರಣಿಯನ್ನು ಕಳೆದುಕೊಂಡಿರುವ ಹರ್ಮನ್‌ಪ್ರೀತ್‌ ಕೌರ್‌ ಪಡೆ ಮಂಗಳವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಮೂರನೇ ಹಾಗೂ ಅಂತಿಮ ಪಂದ್ಯವನ್ನು ಗೆದ್ದು ಗೌರವ ಉಳಿಸಿಕೊಳ್ಳುವ ಪ್ರಯತ್ನದಲ್ಲಿದೆ.‌

ಭಾರತ ಈ ಪಂದ್ಯ ಗೆದ್ದರೆ, ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಸತತ ಒಂಬತ್ತು ಏಕದಿನ ಕ್ರಿಕೆಟ್‌ ಪಂದ್ಯಗಳ ಸೋಲಿನ ಸರಪಳಿಯನ್ನು ಕಡಿದಂತೆಯೂ ಆಗಲಿದೆ.

ಮೊದಲ ಪಂದ್ಯದಲ್ಲಿ ಆರು ವಿಕೆಟ್‌ಗಳಿಂದ ಸೋತಿದ್ದ ಆಥೇಯರು, ಎರಡನೇ ಪಂದ್ಯದಲ್ಲೂ ಉತ್ತಮ ಸ್ಥಿತಿಯಲ್ಲಿದ್ದರೂ ಅಂತಿಮವಾಗಿ ಮೂರು ರನ್‌ಗಳಿಂದ ಪರಾಭವಗೊಂಡಿದ್ದರು. ಈ ಪಂದ್ಯದಲ್ಲಿ ಭಾರತದ ಕಳಪೆ ಫೀಲ್ಡಿಂಗ್‌ಗೆ ಟೀಕೆಗಳು ವ್ಯಕ್ತವಾಗಿದ್ದವು. ಎರಡನೇ ಪಂದ್ಯದಲ್ಲಿ ಭಾರತದ ವನಿತೆಯರು ಅರ್ಧ ಡಜನ್ ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ದುಬಾರಿಯಾಗಿತ್ತು.

ಎರಡನೇ ಪಂದ್ಯದಲ್ಲಿ ಕಠಿಣ ಚೇಸ್‌ನಲ್ಲೂ ರಿಚಾ ಘೋಷ್ 113 ಎಸೆತಗಳಲ್ಲಿ 96 ರನ್‌ ಗಳಿಸಿ ಬ್ಯಾಟಿಂಗ್‌ ವಿಭಾಗದಲ್ಲಿ ಭರವಸೆ ಮೂಡಿಸಿದ್ದಾರೆ. ಮತ್ತೊಂದೆಡೆ ಜಿಮಿಮಾ ರಾಡ್ರಿಗಸ್ ಹಿಂದಿನ ಎರಡು ಪಂದ್ಯಗಳಲ್ಲಿ ಕ್ರಮವಾಗಿ 82 ಮತ್ತು 44 ರನ್‌ ಗಳಿಸಿ ಸ್ಥಿರ ಪ್ರದರ್ಶನ ನೀಡಿರುವುದು ಆಶಾದಾಯಕ ಬೆಳವಣಿಗೆ. ಆದರೆ, ಉಳಿದ ಬ್ಯಾಟರ್‌ಗಳಿಂದಲೂ ರನ್‌ ಬರಬೇಕಿದೆ. ವಿಶೇಷವಾಗಿ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ವಿಫಲರಾಗುತ್ತಿರುವುದು ಹಿನ್ನಡೆಯಾಗುತ್ತಿದೆ.

ಹರ್ಮನ್‌ಪ್ರೀತ್‌ ಅವರು ಮೊದಲೆರಡು ಪಂದ್ಯಗಳಲ್ಲಿ ಕ್ರಮವಾಗಿ 9 ಮತ್ತು 5 ರನ್‌ ಗಳಿಸಿದ್ದರು. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ ಪಂದ್ಯದಲ್ಲಿ ಭಾರತ ಜಯಗಳಿಸಿದ್ದರೂ ಹರ್ಮನ್‌ಪ್ರೀತ್‌ ವಿಫಲರಾಗಿದ್ದರು.

ಪಂದ್ಯ ಆರಂಭ: ಮಧ್ಯಾಹ್ನ 1.30

ನೇರಪ್ರಸಾರ: ಸ್ಪೋರ್ಟ್ಸ್‌ 18

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT