ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಲೀನ್‌ಸ್ವೀಪ್ ಮೇಲೆ ಹರ್ಮನ್ ಪಡೆ ಕಣ್ಣು

ಮಹಿಳಾ ಕ್ರಿಕೆಟ್: ಭಾರತ–ದಕ್ಷಿಣ ಆಫ್ರಿಕಾ ಹಣಾಹಣಿ ಇಂದು
Published 22 ಜೂನ್ 2024, 14:51 IST
Last Updated 22 ಜೂನ್ 2024, 14:51 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ ಮತ್ತು ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡಗಳು ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. 

ಏಕದಿನ ಕ್ರಿಕೆಟ್ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯ ಇದಾಗಿದೆ. ಭಾರತ ತಂಡವು 2–0ಯಿಂದ  ಮುನ್ನಡೆಯಲ್ಲಿದೆ.  ಇದೀಗ ಕ್ಲೀನ್‌ಸ್ವೀಪ್ ಮೇಲೆ ಕಣ್ಣಿಟ್ಟಿದೆ. 

ಸರಣಿಯ ಎರಡನೇ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಬಳಗವು ರೋಚಕ ಜಯ ಸಾಧಿಸಿತ್ತು. ಆ ಪಂದ್ಯದಲ್ಲಿ ಹರ್ಮನ್ ಮತ್ತು ಸ್ಮೃತಿ ಮಂದಾನ ಶತಕಗಳನ್ನು ಗಳಿಸಿದ್ದರು. ದಕ್ಷಿಣ ಆಫ್ರಿಕಾದ ನಾಯಕಿ ಲೌರಾ ವೋಲ್ವಾರ್ಟ್ ಮತ್ತು ಮೆರಿಜಾನ್ ಕಾಪ್‌ ಅವರೂ ಶತಕ ದಾಖಲಿಸಿದ್ದರು. ಭಾರತ ತಂಡವು ಒಡ್ಡಿದ 325 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಪ್ರವಾಸಿ ಪಡೆಯು 4 ರನ್‌ಗಳಿಂದ ಸೋತಿತ್ತು. ಇದೀಗ ಸಮಾಧಾನಕರ ಗೆಲುವು ಸಾಧಿಸುವ ಛಲದಲ್ಲಿದೆ. 

ಆ ಪಂದ್ಯದಲ್ಲಿ 600ಕ್ಕೂ ಹೆಚ್ಚು ರನ್‌ಗಳು ಹರಿದಿದ್ದವು. ಉಭಯ ತಂಡಗಳ ಬೌಲರ್‌ಗಳೂ ದುಬಾರಿಯಾಗಿದ್ದರು. ಅದರಲ್ಲೂ ದಕ್ಷಿಣ ಆಫ್ರಿಕಾದ ಬೌಲರ್‌ಗಳಿಗೆ ಸ್ಮೃತಿ ಮಂದಾನ ಅವರನ್ನು ಕಟ್ಟಿಹಾಕುವುದು ಕಠಿಣ ಸವಾಲಾಗಿದೆ. 

ಏಕೆಂದರೆ ಸ್ಮೃತಿ ಕಳೆದ ಎರಡೂ ಪಂದ್ಯಗಳಲ್ಲಿ ಶತಕ ಗಳಿಸಿದ್ದಾರೆ. ಅವರು ಸತತ ಎರಡು ಏಕದಿನ ಪಂದ್ಯಗಳಲ್ಲಿ ಶತಕ ಹೊಡೆದ ಭಾರತದ ಮೊದಲ ಆಟಗಾರ್ತಿಯಾಗಿದ್ದಾರೆ. ಅಲ್ಲದೇ ಅವರು ಮಿಥಾಲಿ ರಾಜ್ (7 ಶತಕ) ಅವರ ದಾಖಲೆಯನ್ನೂ ಸರಿಗಟ್ಟಿದರು. 

ಹರ್ಮನ್‌ ಪ್ರೀತ್ ಕೂಡ ಅಮೋಘ ಲಯದಲ್ಲಿದ್ದಾರೆ. ಆರಂಭಿಕ ಬ್ಯಾಟರ್ ಶೆಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್ ಅವರು ಲಯಕ್ಕೆ ಮರಳುವ ಅಗತ್ಯವಿದೆ. 

ಈ ಪಂದ್ಯದಲ್ಲಿ ಕೆಲವು ಆಟಗಾರ್ತಿಯರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಅಲ್ಲದೇ ಕನ್ನಡತಿ ಶ್ರೇಯಾಂಕಾ ಪಾಟೀಲ, ಸೈಕಾ ಇಶಾಕಿ ಮತ್ತು ಬ್ಯಾಟರ್ ಪ್ರಿಯಾ ಪೂನಿಯಾ ಅವರಿಗೆ ಅವಕಾಶ ಲಭಿಸುವ ಸಾಧ್ಯತೆ ಇದೆ. ಎರಡನೇ ಪಂದ್ಯದ ಕೊನೆಯ ಓವರ್‌ನಲ್ಲಿ ‘ಮ್ಯಾಜಿಕ್’ ಮಾಡಿದ್ದ ಪೂಜಾ ವಸ್ತ್ರಕರ್ ಹಾಗೂ ಉದಯೋನ್ಮುಖ ಬೌಲರ್  ಅರುಂಧತಿ ರೆಡ್ಡಿ ಅವರಿಗೆ ಈ ಪಂದ್ಯದಲ್ಲಿ ಆಡುವ ಅವಕಾಶ ಸಿಗಬಹುದು. 

ಮಳೆ ಸಾಧ್ಯತೆ: ಭಾನುವಾರ ಪಂದ್ಯದ ನಡೆಯುವ ವೇಳೆ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪಂದ್ಯ ಆರಂಭ: ರಾತ್ರಿ 1.30

ನೇರಪ್ರಸಾರ: ಸ್ಪೋರ್ಟ್ಸ್ 18, ಜಿಯೊ ಸಿನಿಮಾ ಆ್ಯಪ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT