ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆತ್ ಓವರ್‌ ನನ್ನ ಜವಾಬ್ದಾರಿಯಾಗಿತ್ತು: ಹರ್ಷಲ್

Last Updated 10 ಏಪ್ರಿಲ್ 2021, 17:41 IST
ಅಕ್ಷರ ಗಾತ್ರ

ಚೆನ್ನೈ: ‘ತಂಡದ ಅಂತಿಮ 11 ಆಟಗಾರರನ್ನು ಆಯ್ಕೆ ಮಾಡುವಾಗಲೇ ಡೆತ್ ಓವರ್ ಎಸೆಯುವ ಜವಾಬ್ದಾರಿ ನನ್ನದು ಎಂದು ತಿಳಿಸಲಾಗಿತ್ತು. ಈ ಯೋಜನೆ ಯಶಸ್ಸಿಗೆ ಕಾರಣವಾಯಿತು’ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಮಧ್ಯಮ ವೇಗಿ ಹರ್ಷಲ್ ಪಟೇಲ್ ಹೇಳಿದರು. ‌

ಶುಕ್ರವಾರ ನಡೆದ ಐಪಿಎಲ್ 14ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ರೋಚಕ ಜಯಕ್ಕೆ ಕಾರಣರಾದವರಲ್ಲಿ ಹರ್ಷಲ್ ಪಟೇಲ್ ಒಬ್ಬರು. ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಅವರ ಸ್ಫೋಟಕ ಬ್ಯಾಟಿಂಗ್‌ ಕೂಡ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಜೀವನಶ್ರೇಷ್ಠ 27ಕ್ಕೆ5 ವಿಕೆಟ್ ಉರುಳಿಸಿದ ಹರ್ಷಲ್ ಪಟೇಲ್ ಪಂದ್ಯದ ನಂತರ ಮಾತನಾಡಿ ‘ಕೊನೆಯಲ್ಲಿ ಎರಡು ಓವರ್‌ಗಳನ್ನು ನಾನು ಹಾಕಬೇಕು ಎಂದು ಮೊದಲೇ ತಿಳಿಸಲಾಗಿತ್ತು. ಯಾವ ಆಟಗಾರನಿಗೆ ಯಾವ ರೀತಿಯಲ್ಲಿ ಬೌಲಿಂಗ್ ಮಾಡಬೇಕು ಎಂದು ತಂತ್ರಗಳನ್ನು ಹೆಣೆದು ಸಿದ್ಧನಾಗಿರಲು ಈ ಯೋಜನೆ ನೆರವಾಯಿತು’ ಎಂದು ಹೇಳಿದರು.

ಇನಿಂಗ್ಸ್‌ನ 18 ಮತ್ತು 20ನೇ ಓವರ್‌ಗಳನ್ನು ಹಾಕಿದ ಹರ್ಷಲ್ ಪಟೇಲ್ ‘ಪೇಸ್‌ನಲ್ಲಿ ಬದಲಾವಣೆ ಮಾಡಿದ್ದು ಮತ್ತು ನಿಧಾನಗತಿಯ ಯಾರ್ಕರ್‌ಗಳನ್ನು ಹಾಕಿದ್ದು ನನ್ನ ಯಶಸ್ಸಿನ ಗುಟ್ಟು. ಇನಿಂಗ್ಸ್‌ನ ಒಂದು ಹಂತದಲ್ಲಿ ಚೆಂಡು ರಿವರ್ಸ್ ಸ್ವಿಂಗ್ ಆಗತೊಡಗಿತ್ತು. ಆದ್ದರಿಂದ ಯಾರ್ಕರ್‌ ಮತ್ತು ನಿಧಾನಗತಿಯ ಬೌಲಿಂಗ್ ಮಾಡಲು ಅನುಕೂಲವಾಯಿತು’ ಎಂದು ಹೇಳಿದರು.

‘ಹರ್ಷಲ್ ಪಟೇಲ್‌ ತಮಗೆ ವಹಿಸಿದ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಅವರು ತಂಡದ ಡೆತ್ ಬೌಲರ್ ಆಗಿಯೇ ಮುಂದುವರಿಯಲಿದ್ದಾರೆ’ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದರು.

ಆರನೇ ಬೌಲರ್‌ ಇರಬೇಕಾಗಿತ್ತು: ಲಿನ್‌

ಆರನೇ ಬೌಲರ್ ಇಲ್ಲದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು ಎಂದು ಮುಂಬೈ ಇಂಡಿಯನ್ಸ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಕ್ರಿಸ್ ಲಿನ್ ಅಭಿಪ್ರಾಯಪಟ್ಟರು.

ತಂಡದ ಪರವಾಗಿ 35 ಎಸೆತಗಳಲ್ಲಿ 49 ರನ್ ಗಳಿಸಿದ್ದ ಲಿನ್‌, ಭುಜದ ನೋವಿನಿಂದಾಗಿ ಹಾರ್ದಿಕ್ ಪಾಂಡ್ಯ ಅವರಿಗೆ ಬೌಲಿಂಗ್ ಜವಾಬ್ದಾರಿ ವಹಿಸಲಿಲ್ಲ ಎಂದರು.

ನಾಯಕ ರೋಹಿತ್ ಶರ್ಮಾ ಅವರ ರನ್‌ ಔಟ್‌ಗೆ ಸಂಬಂಧಿಸಿ ಮಾತನಾಡಿದ ಅವರು ‘ಆಟದಲ್ಲಿ ಇವೆಲ್ಲ ಸಾಮಾನ್ಯ. ಸ್ವಲ್ಪ ಗೊಂದಲಕ್ಕೆ ಒಳಗಾದ ಕಾರಣ ರೋಹಿತ್ ಅವರ ರನ್‌ ಔಟ್‌ಗೆ ನಾನು ಕಾರಣವಾಗಬೇಕಾಯಿತು’ ಎಂದರು.

ರೋಹಿತ್ ಅವರಿಂದ ಖಡ್ಗಮೃಗ ರಕ್ಷಣೆಯ ಸಂದೇಶ
ಆರ್‌ಸಿಬಿ ಎದುರಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಒಂಟಿ ಕೊಂಬಿನ ಖಡ್ಗಮೃಗದ ರಕ್ಷಣೆಯ ಸಂದೇಶ ಸಾರುವ ಶೂ ತೊಟ್ಟು ಆಡಿದರು. ಟೂರ್ನಿಯುದ್ದಕ್ಕೂ ಅವರು ಈ ಶೂಗಳನ್ನು ತೊಡಲಿದ್ದಾರೆ.

ಇಂಡಿಯನ್ ರೈನೊಸೆರಸ್ ಎಂದೇ ಕರೆಯಲಾಗುವ ಒಂಟಿ ಕೊಂಬಿನ ಖಡ್ಗಮೃಗ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು ಅಳಿವಿನ ಅಂಚಿನಲ್ಲಿವೆ. ಬೇಟೆ, ಆವಾಸ ಸ್ಥಾನದ ಕೊರತೆ, ಪೋಷಣೆ ಇಲ್ಲದೆ ಮತ್ತು ರೋಗಗಳಿಂದಾಗಿ ಸಾವು ಮುಂತಾದವು ಇದಕ್ಕೆ ಕಾರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT