ಭಾನುವಾರ, ಏಪ್ರಿಲ್ 2, 2023
24 °C

ವಿಜಯ್ ಹಜಾರೆ ಟ್ರೋಫಿ: ಪ್ರಶಸ್ತಿಗಾಗಿ ತಮಿಳುನಾಡು, ಹಿಮಾಚಲ ಪ್ರದೇಶ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೈಪುರ: ಐದು ಬಾರಿಯ ಚಾಂಪಿಯನ್ ತಮಿಳುನಾಡು ತಂಡವು ಭಾನುವಾರ ಹಿಮಾಚಲ ಪ್ರದೇಶ ಎದುರು ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿಯಲಿದೆ.

ಹಿಮಾಚಲ ಪ್ರದೇಶ ತಂಡವು ಇದೇ ಮೊದಲ ಬಾರಿ ಫೈನಲ್ ಪ್ರವೇಶಿಸಿದ್ದು, ಬಲಿಷ್ಠ ತಮಿಳುನಾಡಿಗೆ ದಿಟ್ಟ ಸವಾಲೊಡ್ಡುವ ಆತ್ಮವಿಶ್ವಾಸದಲ್ಲಿದೆ. ಈಚೆಗೆ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಚಾಂಪಿಯನ್ ಆಗಿರುವ ವಿಜಯಶಂಕರ್ ನಾಯಕತ್ವದ ತಮಿಳುನಾಡು ತಂಡವು ಋತುವಿನ ಎರಡನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಈ ಟೂರ್ನಿಯುದ್ದಕ್ಕೂ ತನ್ನ ಶಕ್ತಿ ಪ್ರದರ್ಶನವನ್ನು ತಮಿಳುನಾಡು ಮಾಡಿದೆ. 

ತಮಿಳುನಾಡು ತಂಡವು ಸೆಮಿಫೈನಲ್‌ನಲ್ಲಿ ಸೌರಾಷ್ಟ್ರದ ಎದುರು ಮುನ್ನೂರಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ಬೆನ್ನತ್ತಿ ರೋಚಕ ಜಯ ದಾಖಲಿಸಿತ್ತು. ಬಾಬಾ ಅಪರಾಜಿತ್ ಶತಕ ಬಾರಿಸಿದ್ದರು. ಬಾಬಾ ಇಂದ್ರಜೀತ್, ಶಾರೂಕ್ ಖಾನ್, ಎನ್. ಜಗದೀಶನ್ ಅವರು ಟೂರ್ನಿಯುದ್ದಕ್ಕೂ ಉತ್ತಮ ಲಯದಲ್ಲಿದ್ದಾರೆ. ನಾಯಕ ವಿಜಯಶಂಕರ್, ವಾಷಿಂಗ್ಟನ್ ಸುಂದರ್ ಕೂಡ ಆಲ್‌ರೌಂಡ್ ಆಟವಾಡಿದ್ದಾರೆ. 

ಇನ್ನೊಂದು ಸೆಮಿಫೈನಲ್‌ನಲ್ಲಿ ರಿಷಿ ಧವನ್ ನಾಯಕತ್ವದ ಹಿಮಾಚಲ ಪ್ರದೇಶವು ಸರ್ವಿಸಸ್ ವಿರುದ್ಧ ಜಯಿಸಿತ್ತು. ರಿಷಿ  ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದ್ದಾರೆ. ಪ್ರಶಾಂತ್ ಚೋಪ್ರಾ, ಶುಭಂ ಅರೋರಾ, ದಿಗ್ವಿಜಯ್ ರಂಗಿ ಮತ್ತು ಅಮಿತ್ ಕುಮಾರ್  ಅವರು ಭರವಸೆ ಮೂಡಿಸಿರುವ ಆಟಗಾರರು. 

ಸವಾಯ್ ಮಾನಸಿಂಗ್ ಕ್ರೀಡಾಂಗಣದ ಪಿಚ್‌ನಲ್ಲಿ ನಡೆಯುವ ಫೈನಲ್‌ನಲ್ಲಿ ಗೆದ್ದು ಇತಿಹಾಸ ಬರೆಯುವ ಛಲದಲ್ಲಿ ರಿಷಿ ಬಳಗವಿದೆ.

ಪಂದ್ಯ ಆರಂಭ: ಬೆಳಿಗ್ಗೆ 9
ನೇರಪ್ರಸಾರ: ಸ್ಟಾರ್ ನೆಟ್‌ವರ್ಕ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು