ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ಗೆ ಬಂದಿಳಿದ ವಿಂಡೀಸ್‌ ಕ್ರಿಕೆಟ್‌ ತಂಡಕ್ಕೆ ಬಿಗಿ ಭದ್ರತೆ

ಸ್ವದೇಶದಲ್ಲಿ ಕ್ರಿಕೆಟ್‌ ಆಡಲು ಹಾತೊರೆದಿರುವ ಪಾಕ್‌
Last Updated 9 ಡಿಸೆಂಬರ್ 2021, 10:12 IST
ಅಕ್ಷರ ಗಾತ್ರ

ರಾಚಿ: ಚುಟುಕು ಮತ್ತು ಏಕದಿನ ಕ್ರಿಕೆಟ್‌ ಪಂದ್ಯಗಳ ಸರಣಿಯನ್ನು ಆಡಲು ವೆಸ್ಟ್‌ ಇಂಡೀಸ್‌ ತಂಡ ಗುರುವಾರ ಪಾಕಿಸ್ತಾನಕ್ಕೆ ಬಂದಿಳಿಯಿತು. ಭದ್ರತೆಯ ಕಾರಣ ನೀಡಿ ನ್ಯೂಜಿಲೆಂಡ್‌ ತಂಡ ಎರಡು ತಿಂಗಳ ಹಿಂದೆ ಪಾಕ್‌ಗೆ ಬಂದಿದ್ದರೂ ಒಂದೂ ಪಂದ್ಯ ಆಡದೇ ತವರಿಗೆ ಮರಳಿತ್ತು. ಈ ಕಹಿಯನ್ನು ಅಳಿಸಿಹಾಕಲು ವೆಸ್ಟ್‌ ಇಂಡೀಸ್‌ ಪ್ರವಾಸ ನೆರವಾಗಲಿದೆ ಎಂದು ಸ್ಥಳೀಯ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೆರೀಬಿಯನ್ನರ ತಂಡ, ಪಾಕ್‌ ಪ್ರವಾಸದ ವೇಳೆ ಟಿ–20 ಮೂರು ಪಂದ್ಯಗಳ ಸರಣಿಯನ್ನು ಮತ್ತು ಅಷ್ಟೇ ಸಂಖ್ಯೆಯ ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ. ಕರಾಚಿಗೆ ಬಂದಿಳಿದ 26 ಆಟಗಾರರ ವೆಸ್ಟ್‌ ಇಂಡೀಸ್‌ ತಂಡವು ಭಾರಿ ಭದ್ರತೆಯ ನಡುವೆ ಟೀಮ್‌ ಹೋಟೆಲ್‌ ತಲುಪಿತು. ಮೊದಲ ಪಂದ್ಯ (ಟಿ–20) ಸೋಮವಾರ ನಡೆಯಲಿದ್ದು, ಎಲ್ಲ ಪಂದ್ಯಗಳು ಕರಾಚಿಯಲ್ಲೇ ನಡೆಯಲಿವೆ.

ಮೂರು ತಿಂಗಳ ಹಿಂದೆ ನ್ಯೂಜಿಲೆಂಡ್‌ ತಂಡ, 18 ವರ್ಷಗಳ ನಂತರ ಮೊದಲ ಬಾರಿ ಪಾಕಿಸ್ತಾನಕ್ಕೆ ಬಂದಿತ್ತು. ಆದರೆ ಮೊದಲ ಪಂದ್ಯ ಆರಂಭಕ್ಕೆ ಸ್ವಲ್ಪ ಮೊದಲು ಭದ್ರತೆಯ ಕಾರಣ ನೀಡಿ ದೇಶದಿಂದ ನಿರ್ಗಮಿಸಿತ್ತು.

ಬಿಗಿ ಭದ್ರತಾ ವ್ಯವಸ್ಥೆ ಏರ್ಪಾಡು ಮಾಡಿದ್ದರೂ ನ್ಯೂಜಿಲೆಂಡ್‌ ತಂಡ ಹಿಂದೆ ಸರಿದಿದ್ದ ಕಾರಣ ಪಾಕಿಸ್ತಾನ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.

2009ರಲ್ಲಿ ಶ್ರೀಲಂಕಾ ತಂಡದ ಆಟಗಾರರಿದ್ದ ಬಸ್‌ ಮೇಲೆ ಲಾಹೋರ್‌ನಲ್ಲಿ ಭಯೋತ್ಪಾದನಾ ದಾಳಿ ನಡೆದಿದ್ದ ನಂತರ ಯಾವುದೇ ವಿದೇಶಿ ತಂಡ ಇಲ್ಲಿ ಪೂರ್ಣ ಪ್ರಮಾಣದ ಸರಣಿ ಆಡಿಲ್ಲ. ಹೀಗಾಗಿ ಪಾಕಿಸ್ತಾನ ತನ್ನ ಹೆಚ್ಚಿನ ಪಂದ್ಯಗಳನ್ನು ಯುಎಇಯಲ್ಲಿ ಆಡಿತ್ತು.

ಪ್ರಮುಖರ ಗೈರು: ಆದರೆ ವೆಸ್ಟ್‌ ಇಂಡೀಸ್‌ ತಂಡ ಪೂರ್ಣ ಬಲದೊಡನೆ ಇಲ್ಲಿಗೆ ಬಂದಿಲ್ಲ. ವೈಯಕ್ತಿಕ ಕಾರಣ ನೀಡಿ ಎವಿನ್‌ ಲೂಯಿಸ್‌, ಶಿಮ್ರಾನ್‌ ಹೆಟ್ಮೆಯರ್‌, ಆಂಡ್ರೆ ರಸೆಲ್‌ ಮತ್ತು ಲೆಂಡ್ಲ್‌ ಸಿಮನ್ಸ್‌ ಪ್ರವಾಸದಿಂದ ಹಿಂದೆ ಸರಿದಿದ್ದಾರೆ. ಮಾಜಿ ನಾಯಕ ಜೇಸನ್‌ ಹೋಲ್ಡರ್‌ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಫ್ಯಾಬಿಯನ್‌ ಅಲೆನ್‌ ಮತ್ತು ಒಬೆದ್ ಮೆಕ್ಕಾಯ್‌ ಅವರು ಗಾಯಾಳಾಗಿದ್ದಾರೆ. ಸ್ನಾಯುರಜ್ಜು ನೋವಿನಿಂದ ಕೀರನ್‌ ಪೊಲಾರ್ಡ್‌ ಅವರು ಕಳೆದ ವಾರ ಆಡುವುದಿಲ್ಲ ಪಾಕ್‌ ವಿರುದ್ಧ ಸರಣಿಗೆ ಅಲಭ್ಯರಾಗಿರುವುದಾಗಿ ಹೇಳಿದ್ದರು.

ಮೂರು ಟಿ–20 ಪಂದ್ಯಗಳು ಕ್ರಮವಾಗಿ ಡಿಸೆಂಬರ್‌ 13, 14 ಮತ್ತು 16ರಂದು ನಡೆಯಲಿವೆ. ಏಕದಿನ ಪಂದ್ಯಗಳು ಡಿಸೆಂಬರ್‌ 18, 20 ಮತ್ತು 22ರಂದು ನಡೆಯಲಿವೆ.

ತಂಡಗಳು:

ಟಿ–20 ತಂಡ: ನಿಕೋಲಸ್‌ ಪೂರನ್‌ (ನಾಯಕ), ಶಾಯಿ ಹೋಪ್‌, ಡ್ಯಾರೆನ್‌ ಬ್ರಾವೊ, ರೋಸ್ಟನ್‌ ಚೇಸ್‌, ಶೆಲ್ಡನ್‌ ಕಾಟ್ರೆಲ್‌, ಡೊಮಿನಿಕ್‌ ಡ್ರೇಕ್ಸ್‌ ಅಕೀಲ್‌ ಹೊಸೆನ್‌, ಬ್ರಾಂಡನ್‌ ಕಿಂಗ್‌, ಕೈಲ್‌ ಮೇಯರ್ಸ್‌, ಗುಡಕೇಶ್ ಮೋತಿ, ರೊಮಾರಿಯೊ ಷೆಫರ್ಡ್‌, ಒಡೆಯನ್‌ ಸ್ಮಿತ್‌, ಓಶೇನ್‌ ಥಾಮಸ್‌, ಹೇಡನ್‌ ವಾಲ್ಶ್ ಜೂನಿಯರ್‌ ಮತ್ತು ರೋವ್‌ಮನ್‌ ಪೊವೆಲ್‌.

ಏಕದಿನ ತಂಡ: ಶಾಯಿ ಹೋಪ್‌ (ನಾಯಕ), ನಿಕೋಲಸ್‌ ಪೂರನ್‌, ಶಮ್ರಾ ಬ್ರೂಕ್ಸ್‌, ರೋಸ್ಟನ್‌ ಚೇಸ್‌, ಜಸ್ಟಿನ್‌ ಗ್ರೀವ್ಸ್‌, ಅಕೀಲ್‌ ಹೊಸೇನ್‌, ಅಲ್ಜಾರಿ ಜೋಸೆಫ್‌, ಗುಡಕೇಶ್ ಮೋತಿ, ಆ್ಯಂಡರ್ಸನ್‌ ಫಿಲಿಪ್‌, ರೋವ್‌ಮನ್‌ ರೀಫರ್‌, ರೊಮಾರಿಯೊ ಷೆಫರ್ಡ್‌, ಒಡೆಯನ್‌ ಸ್ಮಿತ್‌, ಹೇಡನ್‌ ವಾಲ್ಷ್‌ ಜೂ., ಡೇವನ್‌ ಥಾಮಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT