ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs SL | ಶ್ರೇಯಸ್, ರಿಷಭ್ ಮಿಂಚಿನಾಟ; ಶ್ರೀಲಂಕಾ ಮುಂದಿದೆ ಕಠಿಣ ಸವಾಲು

ಭಾರತದ ಗೆಲುವಿಗೆ ಬೇಕು 9 ವಿಕೆಟ್‌ಗಳು
Last Updated 13 ಮಾರ್ಚ್ 2022, 20:00 IST
ಅಕ್ಷರ ಗಾತ್ರ

ಬೆಂಗಳೂರು:ಮತ್ತೆ ಮಿಂಚಿದ ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್‌ ತಮ್ಮ ಅಬ್ಬರದ ಅರ್ಧಶತಕಗಳಿಂದ ಶ್ರೀಲಂಕಾ ತಂಡದ ಗಾಯದ ಮೇಲೆ ಬರೆ ಎಳೆದರು.

ಇಲ್ಲಿ ಶ್ರೀಲಂಕಾ ಎದುರು ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ ಭಾನುವಾರ ಮಧ್ಯಾಹ್ನವೇ 143 ರನ್‌ಗಳ ಮುನ್ನಡೆ ಗಳಿಸಿತು. ಎರಡನೇ ಇನಿಂಗ್ಸ್‌ನಲ್ಲಿ ರಿಷಭ್ ಪಂತ್ ಮತ್ತು ಶ್ರೇಯಸ್ ಮಿಂಚಿನ ಅರ್ಧಶತಕಗಳ ಬಲದಿಂದ 68.5 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 303 ರನ್‌ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಇದರೊಂದಿಗೆ ಲಂಕಾ ತಂಡದ ಗೆಲುವಿಗಾಗಿ 447 ರನ್‌ಗಳ ಗುರಿಯೊಡ್ಡಿತು. ಈ ಕಠಿಣ ಸವಾಲು ಬೆನ್ನತ್ತಿದ ಶ್ರೀಲಂಕಾ ತಂಡವು 7 ಓವರ್‌ಗಳಲ್ಲಿ 1 ವಿಕೆಟ್‌ಗೆ 28 ರನ್ ಗಳಿಸಿತು.

ಪಂದ್ಯದಲ್ಲಿ ಇನ್ನೂ ಎರಡು ದಿನ ಬಾಕಿಯಿದೆ. ಲಂಕಾ ತಂಡಕ್ಕೆ ಈ ಗುರಿಯನ್ನು ಸಾಧಿಸುವ ಅವಕಾಶವೂ ಇದೆ. ಆದರೆ ಭಾರತದ ಉತ್ತಮ ಬೌಲಿಂಗ್‌ ಪಡೆಯನ್ನು ಎದುರಿಸಿ ನಿಲ್ಲುವ ಸವಾಲು ಪ್ರವಾಸಿ ಬ್ಯಾಟಿಂಗ್ ಪಡೆಯ ಮುಂದಿದೆ.

ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಗೊಂಚಲು ಗಳಿಸಿ ಮಿಂಚಿರುವ ಬೂಮ್ರಾ ಎರಡನೇ ಇನಿಂಗ್ಸ್‌ನಲ್ಲಿಯೂ ಒಂದು ವಿಕೆಟ್ ಗಳಿಸಿದ್ದಾರೆ. ಅವರು ಮತ್ತು ಸ್ಪಿನ್ನರ್ ಅಶ್ವಿನ್ ಎಸೆತಗಳನ್ನು ಎದುರಿಸಲು ಬ್ಯಾಟರ್‌ಗಳು ಪರದಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.

ಮೊದಲ ದಿನವಾದ ಶನಿವಾರ ಸ್ಪಿನ್‌ ಬೌಲರ್‌ಗಳ ಸ್ವರ್ಗದಂತೆ ವರ್ತಿಸಿದ್ದ ಪಿಚ್‌ನಲ್ಲಿ ಎರಡನೇ ದಿನದಾಟದಲ್ಲಿ ಭಾರತದ ಬ್ಯಾಟರ್‌ಗಳೂ ಧೈರ್ಯದಿಂದ ಆಡಿದರು. ಲಂಕಾದ ಸ್ಪಿನ್ನರ್ ಪ್ರವೀಣ ಜಯವಿಕ್ರಮ ಕೂಡ ಚೆನ್ನಾಗಿ ಬೌಲಿಂಗ್ ಮಾಡಿದರು. ಕಾಲಿನ ಸ್ನಾಯುಸೆಳೆತದ ನೋವಿನಲ್ಲಿಯೂ ನಾಲ್ಕು ವಿಕೆಟ್ ಗಳಿಸಿದರು. ಆದರೆ, ಭಾರತವು ದೊಡ್ಡ ಮೊತ್ತ ಕಲೆಹಾಕುವುದನ್ನು ತಡೆಯಲು ಅವರಿಗೆ ಸಾಧ್ಯವಾಗಲಿಲ್ಲ.

ಆದರೆ ಭಾರತದ ಎರಡನೇ ಇನಿಂಗ್ಸ್‌ನಲ್ಲಿಯೂ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ದೊಡ್ಡ ಇನಿಂಗ್ಸ್‌ಗಳನ್ನು ಆಡುವಲ್ಲಿ ಮತ್ತೆ ವಿಫಲರಾದರು. ಮಯಂಕ್ ಅಗರವಾಲ್, ವಿರಾಟ್ ಕೊಹ್ಲಿ ನಿರೀಕ್ಷೆ ಹುಸಿಗೊಳಿಸಿದರು. ಅವರನ್ನು ಹುರಿದುಂಬಿಸಿದ್ದ ಪ್ರೇಕ್ಷಕರನ್ನು ನಿರಾಶೆಗೊಳಿಸಿದರು. ನಾಯಕ ರೋಹಿತ್ ಶರ್ಮಾ ಮತ್ತು ಹನುಮವಿಹಾರಿ ಇನಿಂಗ್ಸ್‌ ಕಟ್ಟಲು ತುಸು ಪ್ರಯತ್ನಿಸಿದರು.

ಆದರೆ, ಕ್ರಿಕೆಟ್‌ ಅಭಿಮಾನಿಗಳಿಗೆ ರಜಾದಿನದ ಮಜಾ ನೀಡಿದವರು ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಮಾತ್ರ. ಕೇವಲ 28 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ರಿಷಭ್ ಕ್ರೀಸ್‌ನಲ್ಲಿ ಇರುವವರೆಗೂ ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂಭ್ರಮ ಮುಗಿಲುಮುಟ್ಟಿತ್ತು. ಅವರ ನಿರ್ಭಯ ಆಟ ರಂಗೇರಿತು. ಭಾರತದ ನೆಲದಲ್ಲಿ ವೇಗದ ಅರ್ಧಶತಕ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದರು.

ಅವರು ಔಟಾದ ನಂತರ ಶ್ರೇಯಸ್ ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ಪ್ರತಿಭೆ ಮೆರೆದರು. ಮೊದಲ ಇನಿಂಗ್ಸ್‌ನಲ್ಲಿ 92 ರನ್‌ಗಳನ್ನು ಗಳಿಸಿದ್ದ ಶ್ರೇಯಸ್ ಎರಡನೇ ಇನಿಂಗ್ಸ್‌ನಲ್ಲಿಯೂ ಅರ್ಧಶತಕ ಬಾರಿಸಿದರು. ಪಿಂಕ್‌ ಬಾಲ್ ಟೆಸ್ಟ್‌ನ ಎರಡು ಇನಿಂಗ್ಸ್‌ಗಳಲ್ಲಿ ಅರ್ಧಶತಕ ಗಳಿಸಿದ ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆದರು.

27 ನಿಮಿಷಗಳ ಆಟ: ಮೊದಲ ದಿನದಾಟದ ಅಂತ್ಯಕ್ಕೆ ಲಂಕಾ ತಂಡವು 6 ವಿಕೆಟ್‌ಗಳಿಗೆ 86 ರನ್‌ ಗಳಿಸಿತ್ತು. ಆದರೆ ಭಾನುವಾರ ಮಧ್ಯಾಹ್ನದ ಬಿಸಿಲಿನಲ್ಲಿ ಶ್ರೀಲಂಕೆಯ ಉಳಿದ ಬ್ಯಾಟರ್‌ಗಳು ಹೆಚ್ಚು ಪ್ರತಿರೋಧ ತೋರಲಿಲ್ಲ. ಕೇವಲ 27 ನಿಮಿಷಗಳಲ್ಲಿ ಇನಿಂಗ್ಸ್‌ಗೆ ತೆರೆಬಿತ್ತು. ಈ ದಿನ ಪತನವಾದ ನಾಲ್ಕು ವಿಕೆಟ್‌ಗಳಲ್ಲಿ ಬೂಮ್ರಾ ಮತ್ತು ಅಶ್ವಿನ್ ತಲಾ ಎರಡು ಹಂಚಿಕೊಂಡರು. ಕೇವಲ 5.5 ಓವರ್‌ಗಳಲ್ಲಿ 23 ಓವರ್‌ಗಳನ್ನು ಸೇರಿಸುವಲ್ಲಿ ಮಾತ್ರ ಲಂಕಾದ ಬ್ಯಾಟರ್‌ಗಳು ಯಶಸ್ವಿಯಾದರು. ಇದರಿಂದಾಗಿ ಮೊದಲ ಇನಿಂಗ್ಸ್‌ನಲ್ಲಿ ಲಂಕಾ ತಂಡವು 35.5 ಓವರ್‌ಗಳಲ್ಲಿ 109 ರನ್‌ ಗಳಿಸಿತು.

ಮೈದಾನಕ್ಕೆ ನುಗ್ಗಿದ ಅಭಿಮಾನಿಗಳು!
ಭಾನುವಾರ ದಿನದಾಟದ ಕೊನೆಯಲ್ಲಿ ಮೈದಾನಕ್ಕೆ ನುಗ್ಗಿದ ನಾಲ್ವರು ಅಭಿಮಾನಿಗಳು ವಿರಾಟ್ ಕೊಹ್ಲಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದರು.

ಶ್ರೀಲಂಕಾ ತಂಡದ ಎರಡನೇ ಇನಿಂಗ್ಸ್‌ನ ಆರನೇ ಓವರ್‌ನಲ್ಲಿ ಈ ಘಟನೆ ನಡೆಯಿತು. ಲಂಕಾದ ಬ್ಯಾಟರ್ ಮೆಂಡಿಸ್‌ ಮಣಿಕಟ್ಟಿಗೆ ಚೆಂಡು ಬಡಿದು ನೋವನುಭವಿಸಿದರು. ಅವರಿಗೆ ಪ್ರಥಮ ಚಿಕಿತ್ಸೆ ನೀಡಲು ಫಿಸಿಯೊ ಪಿಚ್‌ ಬಳಿ ಬಂದಾಗ ಕೆಲ ನಿಮಿಷಗಳು ಅಟ ಸ್ಶಗಿತವಾಗಿತ್ತು. ಈ ಸಂದರ್ಭದಲ್ಲಿ ಭಾರತದ ಆಟಗಾರರು ಗುಂಪುಗೂಡಿ ಮಾತನಾಡುತ್ತಿದ್ದರು. ಆಗ ದಿಢೀರನೇ ಅಭಿಮಾನಿಯೊಬ್ಬ ಗ್ಯಾಲರಿ ದಾಟಿ ನುಗ್ಗಿದ. ಅವನೊಂದಿಗೆ ಮತ್ತೊಬ್ಬ ಮತ್ತು ಇನ್ನೊಂದು ಬದಿಯಿಂದ ಇಬ್ಬರು ನುಗ್ಗಿದರು. ಅವರಲ್ಲಿ ಒಬ್ಬ ಕೊಹ್ಲಿ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ. ಎಚ್ಚೆತ್ತ ಪೊಲೀಸರೂ ಮೈದಾನದೊಳಕ್ಕೆ ಧಾವಿಸಿದರು. ತಪ್ಪಿಸಿಕೊಳ್ಳಲು ಯತ್ನಿಸಿದ ಅಭಿಮಾನಿಗಳನ್ನು ವಶಕ್ಕೆ ಪಡೆದು ಹೊರಗೆ ಕರೆದೊಯ್ದರು. ನಂತರ ಆಟ ಮುಂದುವರಿಯಿತು.

ಬೂಮ್ರಾಗೆ ತವರಿನಲ್ಲಿ ಮೊದಲ ಐದರ ಗೊಂಚಲು
ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳ ಗೊಂಚಲು ಗಳಿಸಿದ ವೇಗಿ ಜಸ್‌ಪ್ರೀತ್ ಬೂಮ್ರಾ ಎರಡು ದಾಖಲೆ ಬರೆದರು.

ಭಾರತದ ನೆಲದಲ್ಲಿ ಅವರು ಇದೇ ಮೊದಲ ಸಲ ಐದು ವಿಕೆಟ್ ಪಡೆದ ಸಾಧನೆ ಮಾಡಿದರು. ಇನ್ನೊಂದು ಕಪಿಲ್ ದೇವ್ ಅವರ ದಾಖಲೆ ಸಮಗಟ್ಟಿದರು. 29ನೇ ಪಂದ್ಯ ಆಡುತ್ತಿರುವ ಬೂಮ್ರಾ 8ನೇ ಬಾರಿ ಐದು ವಿಕೆಟ್ ಸಾಧನೆ ಮಾಡಿದರು. ಇದರೊಂದಿಗೆ ಕಪಿಲ್ ಸಾಧನೆಯನ್ನು ಮೀರಿದರು.

ಅವರು ಇಲ್ಲಿಯವರೆಗೂ ಭಾರತದಲ್ಲಿ ಆಡಿದ ಟೆಸ್ಟ್‌ಗಳಲ್ಲಿ ಐದರ ಸಾಧನೆ ಮಾಡಿರಲಿಲ್ಲ. ವೆಸ್ಟ್ ಇಂಡೀಸ್, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ತಲಾ ಎರಡು ಬಾರಿ ಈ ಸಾಧನೆ ಮಾಡಿದ್ದರು. ಆಸ್ಟ್ರೇಲಿಯಾ ಮತ್ತು ಭಾರತದಲ್ಲಿ ಒಂದು ಬಾರಿ ಈ ಸಾಧನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT