ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ, ಇಂಗ್ಲೆಂಡ್ ಆಟಗಾರರ ಮೇಲೆ ಹೋಲ್ಡಿಂಗ್ ಅಸಮಾಧಾನ

ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್ಸ್‌ ಬೆಂಬಲಿಸಿ ಮಂಡಿಯೂರದಿರುವ ಬಗ್ಗೆ ಆಕ್ಷೇಪ
Last Updated 11 ಸೆಪ್ಟೆಂಬರ್ 2020, 12:08 IST
ಅಕ್ಷರ ಗಾತ್ರ

ಮ್ಯಾಂಚೆಸ್ಟರ್:ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ಆಟಗಾರರು ಈಚೆಗೆ ನಡೆದ ಟ್ವೆಂಟಿ–20 ಕ್ರಿಕೆಟ್ ಸರಣಿಯ ಸಂದರ್ಭದಲ್ಲಿ ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್ಸ್‌ ಅಭಿಯಾನಕ್ಕೆ ಮಂಡಿಯೂರಿ ಬೆಂಬಲ ಸೂಚಿಸಲಿಲ್ಲ ಎಂದು ವೆಸ್ಟ್‌ ಇಂಡೀಸ್ ದಿಗ್ಗಜ ಮೈಕೆಲ್ ಹೋಲ್ಡಿಂಗ್ ಕಿಡಿಕಾರಿದ್ದಾರೆ.

ಈಚೆಗೆ ಇಂಗ್ಲೆಂಡ್‌ನಲ್ಲಿ ವೆಸ್ಟ್‌ ಇಂಡೀಸ್ ವಿರುದ್ಧ ನಡೆದಿದ್ದ ಸರಣಿಯಲ್ಲಿ ಎರಡೂ ತಂಡಗಳ ಆಟಗಾರರು ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದರು. ತಮ್ಮ ಪೋಷಾಕಿನ ಮೇಲೆ ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್ಸ್ ಲೋಗೊ ಹಾಕಿಕೊಂಡಿದ್ದರು. ಆದರೆ ಅದರ ನಂತರ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ಎದುರು ನಡೆದ ಸರಣಿಗಳಲ್ಲಿ ಈ ರೀತಿಯ ಬೆಂಬಲ ಸೂಚಿಸಲಿಲ್ಲ.

‘ವೆಸ್ಟ್ ಇಂಡೀಸ್ ತಂಡದ ವಿರುದ್ಧ ಆಡುವಾಗ ಮಾತ್ರ ಇಂತಹ ಬೆಂಬಲ–ಗೌರವ ತೋರಿಸಬೇಕೆಂದು ಇದೆಯೇ? ಎಲ್ಲ ಹಂತಗಳಲ್ಲಿಯೂ ಬೆಂಬಲ ವ್ಯಕ್ತವಾಗಬೇಡೆವೇ? ಅಮೆರಿಕದಲ್ಲಿ ವರ್ಣ ತಾರತಮ್ಯ ಸಮಸ್ಯೆ ಹೆಚ್ಚು ಇದೆ. ವಿಶ್ವದ ಎಲ್ಲ ಕಡೆ,ಎಲ್ಲ ವರ್ಗದವರೂ ಅದರ ವಿರುದ್ಧ ದನಿಯೆತ್ತಿದರೆ ಅದು ನಿಯಂತ್ರಣಕ್ಕೆ ಬರಬಹುದು’ ಎಂದು ಸ್ಕೈ ಸ್ಪೋರ್ಟ್ಸ್‌ ಸಂದರ್ಶನದಲ್ಲಿ ಹೋಲ್ಡಿಂಗ್ ಹೇಳಿದ್ದಾರೆ.

‘ವರ್ಣಭೇದ ಎನ್ನುವುದು ಬಿಳಿಯರು ಮತ್ತು ಕಪ್ಪುಜನಾಂಗದ ನಡುವಿನ ಸಂಘರ್ಷವಲ್ಲ. ಪಾಕಿಸ್ತಾನ ಮತ್ತು ಇಂಗ್ಲೆಂಡ್‌ ನಡುವಣ ಸರಣಿಯಲ್ಲಿ ಈ ಅಭಿಯಾನ ಮುಂದುವರಿಯಬೇಕಿತ್ತು. ಈ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯೂ ನಿಗಾ ವಹಿಸಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಇದು ಮಾನವೀಯ ಗೌರವದ ವಿಷಯವಾಗಿದೆ. ಕೇವಲ ಎರಡು ಜನಾಂಗಗಳ ನಡುವಿನ ಹೋರಾಟವಲ್ಲ. ಸರ್ವರೂ ಸಮಾನರು ಎಂದು ಎಲ್ಲರೂ ಸೇರಿ ಘೋಷಿಸುವ ಮತ್ತು ಅದೇ ರೀತಿ ನಡೆದುಕೊಳ್ಳುವ ಕಾಲ ಇದು’ ಎಂದು ಹೇಳಿದರು.

ಇಂಗ್ಲೆಂಡ್ ವಿರುದ್ಧದ ಸರಣಿ ಆರಂಭಕ್ಕೆ ಮುನ್ನ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರನ್ ಫಿಂಚ್, ‘ನಾವು ಮಂಡಿಯೂರಿ ಪ್ರತಿಭಟನೆ ವ್ಯಕ್ತಪಡಿಸುವುದಿಲ್ಲ. ಏಕೆಂದರೆ, ಈ ಪಿಡುಗು ನಾಶವಾಗಬೇಕಾದರೆ ಜಾಗೃತಿ ಮುಖ್ಯ ಪ್ರತಿಭಟನೆ ಅಲ್ಲ’ ಎಂದಿದ್ದರು.

‘ಬಣ್ಣ, ಲಿಂಗ್, ಧರ್ಮ ಮತ್ತಿತರರ ಕಾರಣಗಳಿಗೆ ಯಾರನ್ನೂ ನಿರ್ಬಂಧಿಸದ ಕ್ರೀಡೆ ಕ್ರಿಕೆಟ್‌. ಅಂತಹ ಆಟದಲ್ಲಿ ನಾನು ಭಾಗಿಯಾಗಿರುವುದು ಸಂತಸದ ವಿಷಯ. ಇಲ್ಲಿ ಎಲ್ಲರೂ ಸಮಾನರು. ಅದೇ ಈ ಕ್ರೀಡೆಯ ಸೌಂದರ್ಯ’ ಎಂದೂ ಫಿಂಚ್ ಹೇಳಿದ್ದರು.

ಕೆಲವು ತಿಂಗಳುಗಳ ಹಿಂದೆ ಆಫ್ರೊ–ಅಮೆರಿಕನ ಜಾರ್ಜ್ ಫ್ಲಾಯ್ಡ್ ಅವರು ಅಮೆರಿಕದಲ್ಲಿ ಪೊಲೀಸ್ ದೌರ್ಜನ್ಯದಲ್ಲಿ ಮೃತಪಟ್ಟಿದ್ದರು. ಆಗ ಜನಾಂಗೀಯ ದ್ವೇಷದ ವಿರುದ್ಧ ಅಭಿಯಾನ ಶುರುವಾಗಿತ್ತು. ಕ್ರೀಡೆಯಲ್ಲಿಯೂ ವರ್ಣದ್ವೇಷದ ವಿರುದ್ಧ ಹೋರಾಟಗಳು ಆರಂಭವಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT