ಭಾನುವಾರ, ಜೂನ್ 26, 2022
21 °C

ವಿಡಿಯೊ: ಡೆಲ್ಲಿಯ ಪ್ರತಿ ವಿಕೆಟ್ ಬಿದ್ದಾಗಲೂ ಆರ್‌ಸಿಬಿ ಆಟಗಾರರ ಸಂಭ್ರಮ ಹೀಗಿತ್ತು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಒಂದೊಂದು ವಿಕೆಟ್ ಪತನವಾದಾಗಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಆಟಗಾರರ ಸಂಭ್ರಮ ಮುಗಿಲುಮುಟ್ಟಿತ್ತು!

ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆದ ಹಣಾಹಣಿಯನ್ನು ಆರ್‌ಸಿಬಿಯ ಎಲ್ಲ ಆಟಗಾರರೂ ಜತೆಯಾಗಿ ಕುಳಿತು ಹೋಟೆಲ್‌ನಲ್ಲಿ ದೊಡ್ಡಪರದೆಯ ಮೇಲೆ ವೀಕ್ಷಿಸಿದರು. ಆಟಗಾರರು ಡೆಲ್ಲಿ ವಿಕೆಟ್ ಪತನವನ್ನು ಹಾಗೂ ಮುಂಬೈ ಪಂದ್ಯದಲ್ಲಿ ಹಿಡಿತ ಸಾಧಿಸುತ್ತಿರುವುದನ್ನು ಸಂಭ್ರಮಿಸುತ್ತಿರುವ ವಿಡಿಯೊವನ್ನು ಆರ್‌ಸಿಬಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: 

ಟಾಸ್ ಗೆದ್ದ ಮುಂಬೈ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಾಗಲೇ ಆರ್‌ಸಿಬಿ ಆಟಗಾರರ ಮುಖದಲ್ಲಿ ನಗು ಮೂಡಿತ್ತು. ಯಾವಾಗ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಓವರ್‌ಗಳಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಳ್ಳಲಾರಂಭಿಸಿತೋ, ಆವಾಗ ಆರ್‌ಸಿಬಿ ಆಟಗಾರರ ಸಂಭ್ರಮ ಹೇಳತೀರದು. ಡೆಲ್ಲಿ ತಂಡದ ಮೂರನೇ ವಿಕೆಟ್ ಪತನವಾದಾಗಲಂತೂ ವಿರಾಟ್ ಕೊಹ್ಲಿ ಹುಚ್ಚೆದ್ದು ಕುಣಿಯುತ್ತಿರುವ ದೃಶ್ಯ ಕಂಡುಬಂತು. ಅವರಿಗೆ ಇತರ ಆಟಗಾರರೂ ಸಾಥ್ ನೀಡಿದರು.

ಡೆಲ್ಲಿ ಕ್ಯಾಪಿಟಲ್ಸ್ ಅಂತಿಮವಾಗಿ 20 ಓವರ್‌ಗಳಲ್ಲಿ 7 ವಿಕೆಟ್‌ಗಳಲ್ಲಿ 159 ರನ್‌ ಗಳಿಸಿತು.

160 ರನ್‌ಗಳ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಪರ ಆರಂಭಿಕ ಆಟಗಾರ ರೋಹಿತ್ ಶರ್ಮಾ ಬ್ಯಾಟಿಂಗ್‌ ಮಾಡಲು ಪರದಾಡುತ್ತಿರುವಾಗ ಕೊಹ್ಲಿ ಸೇರಿದಂತೆ ಆರ್‌ಸಿಬಿ ಆಟಗಾರರ ಮುಖದಲ್ಲಿ ಆತಂಕ ಕಾಣಿಸಿಕೊಂಡಿತ್ತು. ಆದರೆ, ಬಳಿಕ ಇಶಾನ್ ಕಿಶನ್ ಹಾಗೂ ಟಿಮ್ ಡೇವಿಡ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಂತೆಯೇ ಮತ್ತೆ ಸಂಭ್ರಮ ಮನೆಮಾಡಿತು. ರಮಣ್‌ದೀಪ್ ಸಿಂಗ್ ಅವರು ಗೆಲುವಿನ ಹೊಡೆತ ಬಾರಿಸುತ್ತಿದ್ದಂತೆಯೇ ಆರ್‌ಸಿಬಿ ಆಟಗಾರರ ಹಾಗೂ ಅಭಿಮಾನಿಗಳ ಸಂಭ್ರಮ ಮೇರೆ ಮೀರಿತು. ಪಂದ್ಯವನ್ನು ಮುಂಬೈ 5 ವಿಕೆಟ್‌ಗಳಿಂದ ಗೆದ್ದುಕೊಂಡಿತು.

ಲೀಗ್ ಹಂತದ ಪಾಯಿಂಟ್ ಪಟ್ಟಿಯಲ್ಲಿ ತನ್ನ ಎಲ್ಲ 14 ಪಂದ್ಯಗಳನ್ನು ಆಡಿದ್ದ ಆರ್‌ಸಿಬಿಯು 16 ಅಂಕ ಗಳಿಸಿತ್ತು. 14 ಪಾಯಿಂಟ್‌ಗಳೊಂದಿಗೆ ಡೆಲ್ಲಿ ತಂಡವು ಶನಿವಾರ ಮುಂಬೈ ಎದುರು ಜಯಿಸಿದ್ದರೆ, ಪಾಸಿಟಿವ್ ರನ್‌ರೇಟ್ ಕಾರಣ ಪ್ಲೇಆಫ್ ಪ್ರವೇಶಿಸುವ ಅವಕಾಶ ಇತ್ತು. ಅದರಿಂದಾಗಿ ಆರ್‌ಸಿಬಿ ಅವಕಾಶ ಕೈತಪ್ಪುತ್ತಿತ್ತು. ಅದರಿಂದಾಗಿಯೇ ಡೆಲ್ಲಿ–ಮುಂಬೈ ಪಂದ್ಯವು ಮಹತ್ವ ಪಡೆದಿತ್ತು. ಆರ್‌ಸಿಬಿ ತಂಡದ ಆಟಗಾರರು, ಫ್ರ್ಯಾಂಚೈಸಿ ಸಿಬ್ಬಂದಿ ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಎರಡು ದಿನಗಳಿಂದ ಮುಂಬೈ ಇಂಡಿಯನ್ಸ್‌ ಗೆಲುವಿಗಾಗಿ ಶುಭ ಹಾರೈಸಿದ್ದರು. ಮುಂಬೈ ಗೆಲುವಿಗೆ ಹಾರೈಸಿ ಆರ್‌ಸಿಬಿಯು ಸಾಮಾಜಿಕ ಮಾಧ್ಯಮಗಳಲ್ಲಿ ಲಾಂಛನದ ಬಣ್ಣವನ್ನೇ ಬದಲಿಸಿತ್ತು.

ಪ್ಲೇ ಆಫ್‌ ಅವಕಾಶ ಪಡೆದಿರುವ ಆರ್‌ಸಿಬಿ ಇದೇ 25ರಂದು ಲಖನೌ ವಿರುದ್ಧ ಆಡಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು